top of page

ಹಸಿವು ಸಾಯುವುದಿಲ್ಲ- ಶ್ರೀಧರ ಶೇಟ್ ಶಿರಾಲಿ

Updated: Aug 1, 2020

ಪುಸ್ತಕ ಪರಿಚಯ-- ಮಂಜುನಾಥ ನಾಯ್ಕ ಯಲ್ವಡಿಕವೂರ


ಹಸಿವು ಸಾಯುವುದಿಲ್ಲ (ಕವನ ಸಂಕಲನ)

ಕವಿ : ಶ್ರೀಧರ ಶೇಟ್ ಶಿರಾಲಿ


ವೃತ್ತಿಯಿಂದ ಶಿಕ್ಷಕರಾಗಿರುವ ಕವಿ, ಸಾಹಿತಿ,ವ್ಯಂಗಚಿತ್ರಕಾರ,ಕಾರ್ಯಕ್ರಮ ನಿರೂಪಕ,ಸಂಘಟಕ  ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಶ್ರೀಧರ ಶೇಟ್ ಶಿರಾಲಿಯವರ ಚೊಚ್ಚಲ ಕವನ ಸಂಕಲನ ಹಸಿವು ಸಾಯುವುದಿಲ್ಲ. 2011ರಲ್ಲಿ ಪ್ರಕಟಗೊಂಡು ಲೋಕಾರ್ಪಣೆಗೊಂಡಿರುವ ಈ ಕವನ ಸಂಕಲನ ತನ್ನ ಹಸಿವಿನ ಕರಾಳತೆಯನ್ನು ಪ್ರಚುರಪಡಿಸಿದ ನಿಮಿತ್ತ ಭೂತಕ್ಕೂ ವರ್ತಮಾನಕ್ಕೂ ಭವಿತತ್ವಕ್ಕೂ  ಸಮಾನ ಸಂದೇಶವನ್ನು ಬಿತ್ತರಿಸಿ ಸದಾ ಪ್ರಸ್ತುತವಾಗುಳಿಯುವ ಎಲ್ಲಾ ಲಕ್ಷಣಗಳಿಂದ ಕೂಡಿದೆ.

ಹಸಿವು ಈ ಶಬ್ದವೇ ಭಯಾನಕ.ಇಡೀ ವಿಶ್ವವೇ ತಿರುಗುವುದು ಈ ಹಸಿವಿನ ಸುತ್ತ ಗಿರಕಿ ಹೊಡೆಯುತ್ತಲೇ.ಉದ್ಯೋಗ, ವ್ಯವಹಾರಗಳೆಲ್ಲ ಈ ಹಸಿವಿಗೆ ಮೂಲ ಧಾತುಗಳು. ಕೊರೋನಾದಂತ ಸಾಂಕ್ರಾಮಿಕ ಮಹಾಮಾರಿಯ ಈ ಪ್ರಸ್ತುತ ದಿನಮಾನವೂ ಹಸಿವಿನ ಹಲವು ಮುಖಗಳನ್ನು ಅನಾವರಣಗೊಳಿಸಿದೆ.ಹಸಿವು ಜಡತ್ವದಿಂದ ಕೂಡಿರದೇ ಸದಾ ಕ್ರಿಯಾಶೀಲವಾಗಿರುವ ಪುನರಪಿ ಜನನವಾಗಿರುವ ಸೃಷ್ಟಿಯ ಒಂದು ಕ್ರಿಯೆ. ಈ ಹಸಿವಿಗೆ ಸಾವು ಎಂಬುದೇ ಇಲ್ಲ.ಚಲನಶೀಲವಾದ ಪುನರಾವರ್ತಿತ ಈ ಕ್ರಿಯೆ ಹಲವು ಜೀವ ಸಂಕುಲಗಳನ್ನು ಸದಾ ಕಾಡುವ ಮೂಲಕ ತನ್ನ ಅಸ್ತಿತ್ವವನ್ನು ಜತನದಿಂದ ಕಾಪಾಡಿಕೊಂಡಿದೆ.


ಹಸಿವು ಎನ್ನುವುದು ಬರೀ ಉದರದ ತುಡಿತ ಎಂದು ಸಂಕ್ಷಿಪ್ತಗೊಳಿಸಲಾಗದು.ಅದು ಅನ್ನದ ಹಸಿವು, ಜ್ಞಾನದ ಹಸಿವು, ಅರಿಷಡ್ವೈರಿಗಳಾದ ಕಾಮ, ಕ್ರೋಧ, ಮೋಹ , ಮದ, ಮತ್ಸರ ,ಲೋಭಗಳ ಪರಿಣಾಮದಿಂದ ಉದ್ಭವಿಸಿದ ತೀವ್ರತರನಾದ ಭಾವಾವೇಶದ ಸ್ಪೋಟವೂ ಆಗಬಹುದು.ಹಣ ಆಸ್ತಿ, ಅಂತಸ್ತು, ಕೀರ್ತಿ, ಅಧಿಕಾರದ ಬೆನ್ನೇರಿದ ಹಸಿವೂ ಆಗಬಹುದು.ಹಾಗಾಗೇ ಈ ಹಸಿವು ಬಹುರೂಪಿ, ಬಹುವ್ಯಾಪಿ. ತನ್ನ ಅಸ್ತಿತ್ವವನ್ನು ತೋರ್ಪಡಿಸಲು ಇಡೀ ವಿಶ್ವವನ್ನೇ ಅಲುಗಾಡಿಸುವ ಅಗೋಚರ ಶಕ್ತಿಯುಳ್ಳದ್ದು.

ಕವಿ ಶ್ರೀಧರ ಶೇಟ್ ಅವರು ಈ ಹಸಿವಿನ ತೀವ್ರತೆಯನ್ನು ತಮ್ಮ ಕವನದಲ್ಲಿ ಪರಿಣಾಮಕಾರಿಯಾಗಿ ಬೆಸೆದಿದ್ದಾರೆ.


ಗಲ್ಲಿ ಓಣಿಯೆದೆಯ 

ಚರಂಡಿ ಧಮನಿಯೊಳಗೆ

ಹರಿವ ಕೊಳಚೆಯಲಿ

ಚಿಂದಿ, ಪ್ಲಾಸ್ಟಿಕ್, ಡಬ್ಬಿ ತುಣುಕಿನ

ಜೀವಗಳ ಬೇಟೆಯಾಡುವ 

ಕಣ್ಣುಗಳಲ್ಲಿ

ಹಸಿವು ಸಾಯುವುದಿಲ್ಲ


ಕಸದ ತೊಟ್ಟಿಯ

ತೇಗಿ ಉಳಿದಗುಳಿಗೆ

ಹೊಂಚು ಹಾಕುವ

ನಾಲಿಗೆಗಳಲ್ಲಿ

ಹಸಿವು ಸಾಯುವುದಿಲ್ಲ


ರಾತ್ರಿಗಂಜಿಯ ಕನಸಿನಲ್ಲಿ

ಹಗಲಿಡೀ ತೇಕುವ ತಿಕ್ಕುವ ಹೆಣಗುವ

ಪಾತಾಳಕ್ಕಿಳಿದ ಹೊಟ್ಟೆಯ

ನಿರಿಗೆಗಳಲ್ಲಿ 

ಕ್ಯೂ ನಿಲ್ಲುವ

ಬೆವರ ಹನಿಗಳಲ್ಲಿ

ಹಸಿವು ಸಾಯುವುದಿಲ್ಲ


ಬಾಳ ಕುಡಿಗಳ ತಕ್ಕಡಿಗಿಡುವ

ರುಮೇನಿಯದ ಕರುಳಗಳ

ಕೊರಗಿನುರಿಯಲ್ಲಿ

ಹಸಿವು ಸಾಯುವುದಿಲ್ಲ.


ಹೀಗೆ ತಾಜಾ ಸಾಲುಗಳಿಂದ ಕಂಗೊಳಿಸಿ ಹಸಿವಿನ ಕ್ರೂರ ರೂಪದ ಅನಾವರಣವನ್ನು ಸಶಕ್ತವಾಗಿ ಚಿತ್ರಿಸಿದ್ದಾರೆ.


ಒಂದು ಸುಂದರ ಬೀದಿಯೊಂದು ಕೋಮು ಸಂಘರ್ಷದ ಹವಿಸ್ಸಿಗೆ ಆಹುತಿಯಾದ ಪರಿಯನ್ನು ನನ್ನ ಬೀದಿಯ ಸಾವು ಎನ್ನುವ ಕವಿತೆಯಲ್ಲಿ  ಸೌಹಾರ್ದತೆ , ಸಂಬಂಧಗಳ ಬೆಸುಗೆಗಳಲ್ಲಿ ಬಿರುಕು ಮೂಡಿ ಊರೇ ಸುಡುಗಾಡಾಗುವ ಕ್ರೌರ್ಯವೇ ವಿಜ್ರಂಭಿಸುವ ಪರಿಯನ್ನ ಸಶಕ್ತ ಪ್ರತಿಮೆಗಳ ಮೂಲಕ ಕಟ್ಟಿದ್ದಾರೆ.


ಹದ್ದುಗಳ ಮೆರವಣಿಗೆಗೆ ಬೀದಿ ತುಂಬ

ರಕ್ತದ ರಂಗೋಲಿ,ರುಂಡ ಪುಷ್ಪಾಲಂಕೃತ

ಕರುಳ ಬಳ್ಳಿಯ ತೋರಣ

ಎದೆಯೊಳಗೆ ಪಿಶಾಚಿಗಳ

ಕಸಿಮಾಡಿಕೊಂಡವರ ತೀಕ್ಷ್ಣತೆಗೆ

ಐಸ್ ಕ್ಯಾಂಡಿಯಾದ ತುಂಬಿದೆದೆಗಳ ಆಕ್ರಂದನ


ಸಮೃದ್ಧ ಆಕೃತಿಯ ಸಂಬಂಧಗಳಲ್ಲಿ ಒಡಕು ಮೂಡಿಸಿ ವಿಕೃತಿ ಸೃಷ್ಟಿಸುವ ವಿಘ್ನಸಂತೋಷಿ ಮನೋಭಾವ ಎಲ್ಲಾ ಕಾಲದಲ್ಲೂ ಜಾಗ್ರತವಾಗಿದ್ದುದು ಇತಿಹಾಸದ ಪುಟಗಳಿಂದ ಪ್ರಚಲಿತದವರೆಗೂ ಕಾಣಬಹುದು.ಕರುಬುವಿಕೆ ಘೋರ ಸಂಗ್ರಾಮಕ್ಕೇ ಕಾರಣವಾದದ್ದಿದೆ.ಅಸಹನೆ ತಿರಸ್ಕಾರ ಕುಟಿಲತೆಗಳು ಅನ್ಯದ್ವೇಷಿಯಾಗಿ ಧಮನಗೈದು ತನ್ನ ನೆಲೆಯನ್ನೇ ದಹನಗೈದು ಕೊಡಲಿಯ ಕಾವಾಗಿ ಸ್ವಜನ ನಿರ್ನಾಮಕಾರಿಯಾದದ್ದೂ ಇದೆ. ಅನ್ಯರ ಹಳಿಯುವ ಆ ಮೂಲಕ ತನ್ನತನದ ಪ್ರತಿಷ್ಠಾಪನೆಯ ಪ್ರಯತ್ನಗಳು ಕೊರಳಿಗುರುಳಾಗುವ ಅರಿವಿದ್ದರೂ ಸಮಷ್ಟಿಯ ಹಿತಚಿಂತನೆಯ ಮುಂದೆ ಸ್ವಾರ್ಥವೇ ವಿಜೃಂಭಸಿದೆ. ಈ ಎಲ್ಲಾ ಅವಲಕ್ಷಣಗಳ ವಿಪರ್ಯಾಸಗಳ ಕೆದಕುವ ಮೂಲಕ ಕವಿ *ನಮ್ಮವರು* ಕವಿತೆಯಲ್ಲಿ ಸಮಾಜದ ಢಾಂಬಿಕತೆಯನ್ನು ಕಳಚಿಡುತ್ತಾರೆ.


ಅವರು ಉಟ್ಟಿದ್ದು ಅತಿಯೆನಿಸಿತು

ಇವರು ಹೆಗ್ಗಣವಾದರು

ಅವರು ಕಟ್ಟಿದ್ದು ಆಕಾಶ ಸೀಳುತ್ತದೆಂದು

ನಮ್ಮವರು ಭೂಕಂಪವಾದರು

ಅವರು ಬರೆದದ್ದು ಕ್ರಾಂತಿಗೆ

ನಾಂದಿಗೀತೆಯೆಂದುಕೊಂಡು

ಇವರು ಮಸಿಯಾದರು

ಅವರು ಹಿಮಾಲಯದ ನೆತ್ತಿಗೆ ಗೇಣಿರುವಾಗ

ಇವರು ಹಿಮಪಾತವಾದರು. ಅವರ ಕಂಠದಲ್ಲಿ ಕೋಗಿಲೆ ಚೈತ್ರವಾದುದಕ್ಕೆ

ನಮ್ಮವರ ತಮಟೆ ಒಡೆಯಿತು

ಇವರು ಕಾಗೆಗಳ ಸಂಘ ಕಟ್ಟಿದರು


ಶ್ರೀಧರ ಶೇಟ್ ಅವರ ಕವಿತೆಗಳ ಲ್ಲಿ ಅಲ್ಪಾಕೃತಿ ಸಮಷ್ಟಿಯ ದೃಷ್ಟಿಯಿದೆ. ಕವಿತೆಯ ಗೆಲುವಿಗೆ ಕೂಡ ಈ ಗುಣಗಳೇ ಪ್ರಾಧಾನ್ಯವೆನಿಸುತ್ತವೆ.ಕವಿ ಎಲ್ಲಿಯೂ ವಾಚಾಳಿ ಅನಿಸುವುದೇ ಇಲ್ಲ.ಸೂಚ್ಯ ಪ್ರಧಾನ ಕವಿತೆಗಳೇ ತುಂಬಿರುವುದರಿಂದ ಎಲ್ಲಿಯೂ ವಾಚ್ಯತೆ ಬರದಂತೆ ಜಾಗರೂಕತೆ ವಹಿಸಿದ್ದಾರೆ ಕವಿ. ಕವನ ಹೊರಹೊಮ್ಮಿಸುವ  ಧ್ವನಿಗಳೆಲ್ಲವೂ ಈ ನೆಲದ ಅಗತ್ಯತೆಗಳೇ ಆಗಿರುವುದರಿಂದ ಇವರು ಸಮಾಜಮುಖಿ ಕವಿ ಅಂತ ನಿಸ್ಸಂಶಯವಾಗಿ ಹೇಳಬಹುದು. ಮಣ್ಣ ಕರೆ ಬದುಕ ಕಟ್ಟುವ ಮಂದಿಗೆ ಪ್ರಕ್ಷುಬ್ಧ ಅಜ್ಜನ ಚಾದರ ಮತ್ತು ಅಕೇಶಿಯ ಈ ನೆಲೆಯಲ್ಲಿ ಗಮನಿಸಬೇಕಾದ ಕವಿತೆಗಳು.

ಛಂದೋಬದ್ಧ ಭಾವಗೀತೆಗಳು ಸೇರಿ 39 ಕವಿತೆಗಳಿರುವ ಈ ಸಂಕಲನ ತಾಜಾತಾಜಾ ಸಾಲುಗಳಿಂದ ಪ್ರತಿಮೆಗಳ ಹೂರಣದಿಂದ ಗೇಯತೆಯ ನಾದದಿಂದ ಹಾಗು ಧ್ವನಿಶಕ್ತಿಯ ಒಡಲಲ್ಲಡಗಿಸಿಕೊಂಡಿದ್ದರಿಂದ ಮೈತುಂಬ ಬಟ್ಟೆತೊಟ್ಟ ಸುಂದರಿಯಂತೆ  ಕಾವ್ಯಗುಣಗಳಿಂದ ಕಂಗೊಳಿಸುತ್ತದೆ.


- ಮಂಜುನಾಥ ನಾಯ್ಕ ಯಲ್ವಡಿಕವೂರ


ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿ ಕವುರಿನ ಮಂಜುನಾಥ ನಾಯ್ಕ ವೃತ್ತಿಯಲ್ಲಿ ಆರಕ್ಷಕರು .ಪ್ರವೃತ್ತಿಯಲ್ಲಿ ಸಾಹಿತ್ಯೋಪಾಸಕರು. ಅವರ ಕವಿತೆಗಳು ಹೊಸತನದ ಹಂಬಲದಿಂದ ತಂಬಿಕೊಂಡು,ಭಾವ ಸೂಕ್ಷ್ಮಗಳಿಂದ,ಲಯ ಲಾಲಿತ್ಯದಿಂದ ಓದುಗರ ಮನವನ್ನು ಮುಟ್ಟುವಲ್ಲಿ ಸಫಲವಾಗುತ್ವವೆ.ಮಂಜುನಾಥ ಅವರ ಕವಿತೆಗಳಿಗೆ ಹಲವು ಅರ್ಥಸಾಧ್ಯತೆಗಳ ಕವುರುಗಳಿವೆ.ಕವಿ,ಕತೆಗಾರ,ಮಾನವ್ಯದ ಪ್ರೀತಿಯ ಹರಿಕಾರ ಮಂಜುನಾಥ ನಮ್ಮ ನಡುವಿನ ಭರವಸೆಯ ಕವಿ ಇವರ ಅಂಜುಬುರುಕಿಯ ರಂಗವಲ್ಲಿ ಕವನ ಸಂಕಲನ ಸದ್ಯದಲ್ಲಿ ಪ್ರಕಟವಾಗಲಿದೆ
110 views0 comments
bottom of page