ಹನ್ನೊಂದನೆಯ ದಿವಸ! [ನಗೆಬರಹ]

ಅಂದು ಬೆಳಿಗ್ಗೆ ಪೇಟೆಗೆ ಹೋದ ತಿಮ್ಮಣ್ಣ ಭಟ್ಟರಿಗೆ ಹೆಂಗಸೊಬ್ಬಳು ಹರಿವೆ ಸೊಪ್ಪು ಇಟ್ಟುಕೊಂಡು ಮಾರುತ್ತಿದ್ದುದು ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ಹರಿವೆ ಸೊಪ್ಪಿನ ಮೇಲೆ ಕಣ್ಣು ಹಾಯಿಸಿದರು. ಹದವಾಗಿ ಬೆಳೆದ ಕೆಂಪು ಹರಿವೆ ಸೊಪ್ಪು ! ಭಟ್ಟರ ಬಾಯಲ್ಲಿ ನೀರು ಕಾರಂಜಿಯಂತೆ ಪುಟಿಯಿತು.

ನಮ್ಮ ತಿಮ್ಮಣ್ಣ ಭಟ್ಟರಿಗೆ ಕೆಂಪು ಹರಿವೆ ಸೊಪ್ಪಿನ ಗೊಜ್ಜು ಎಂದರೆ ಆಯಿತು. ಕೇಸರಿಬಾತಿನ ಊಟವನ್ನು ಸಹ ಅವರು ಬಿಡಲು ಸಿದ್ಧರಾಗುತ್ತಾರೆ. ಕೆಂಪು ಹರಿವೆ ಸೊಪ್ಪಿನ ಗೊಜ್ಜು ಮಾಡಿದ ದಿವಸ ಭಟ್ಟರು ಊಟಕ್ಕೆ ಕುಳಿತರೆಂದರೆ ಹೆಂಡತಿಯೇ ಏಳುವದಕ್ಕೆ ನೆನೆಪು ಮಾಡಬೇಕು. ಗೊಜ್ಜು ಮಾಡಿದ ಪಾತ್ರೆಯ ತಳವ ಕಾಣುವವರೆಗೂ ಭಟ್ಟರ ಭೋಜನ ಅಡಿತಡೆಯಿಲ್ಲದೆ ಮಹಾಭಾರತದ ಯುದ್ಧಂತೆ ಸಾಗುತ್ತದೆ. ಅದಕ್ಕಾಗೇ ಅವರ ಹೆಂಡತಿ ಆಗೀಗ ಹೇಳುವದುಂಟು- ಹರಿವೆ ಸೊಪ್ಪಿನ ಗೊಜ್ಜು ಮಾಡಿದ ದಿವಸ ತಮ್ಮ ಮನೆಯವರಿಗೆ ಹೊಟ್ಟೆಯಲ್ಲಿ ಬಕಾಸುರ ಬಂದು ಕೂತಿರುತ್ತಾನಂತೆ.


ಇದರ ಜೊತೆಗೆ ಅದು ಕಾರ್ತಿಕ ಮಾಸ ಬೇರೆ ಪ್ರಾರಂಭವಾಗಿ ಮೂರ್ನಾಲ್ಕು ದಿವಸಗಳಾಗಿದ್ದವು. ಕಾರ್ತಿಕ ಮಾಸದಲ್ಲಿ ಹರಿವೆ ಸೊಪ್ಪಿನ ಪದಾರ್ಥ ಊಟ ಮಾಡಲೇಬೇಕೆಂಬುದು ನಮ್ಮ ಕಡೆಯಲ್ಲೊಂದು ಶಾಸ್ತ್ರ ಉಂಟು. ಶಾಸ್ತ್ರಾಯಚ ಸುಖಾಯಚ - ಶಾಸ್ತ್ರವೂ ಆಯಿತು, ಸುಖವೂ ಆಯಿತು. ಭಟ್ಟರ ನಾಲಿಗೆ ಚಾಪಲ್ಯ ತಡೆಯಲೇ ಇಲ್ಲ. ಬುಟ್ಟಿಯಲ್ಲಿದ್ದ ಒಂದು ಕಟ್ಟು ಸೊಪ್ಪು ಹಿಡಿದು ಎಳೆಯದಿದೆಯೋ, ಬೆಳೆದಿದೆಯೋ, ಎಂದು ಪರೀಕ್ಷೆ ಮಾಡಿದರು. ಹಾಗೆಯೇ ಆಕೆಯನ್ನು ಕೇಳಿದರು, “ಎಷ್ಟು ಕೊಡ್ಬೇಕೆ ಸೊಪ್ಪಿಗೆ?” ಹರಿವೆ ಸೊಪ್ಪು ಪೇಟೆಗೆ ಬರಲಿಕ್ಕೆ ಹೊಸತಾಗಿ ಪ್ರಾರಂಭವಾಗಿತ್ತು. “ರೂಪಾಯಿಗೆ ಎರಡುಕಟ್ಟು ಒಡೆಯಾ” ಆಕೆ ಸ್ಪಷ್ಟವಾಗಿಯೇ ನುಡಿದಳು.


ಭಟ್ಟರಿಗೆ ತುಟ್ಟಿಯಾಯಿತೆಂದು ಅನಿಸಿತು.. ಆದರೆ ಸೊಪ್ಪೇನೋ ಚೆನ್ನಾಗಿಯೇ ಇದೆ. ಬಿಡುವದಕ್ಕೂ ಮನಸ್ಸಾಗಲಿಲ್ಲ. ಹಾಗೆಯೇ “ ನಾನೊಂದು ಮಾತು ಕೇಳ್ಲಾ?” ಎಂದು ಹೇಳಿ ,” ನೋಡು ರೂಪಾಯಿಗೆ ಐದು ಕಟ್ಟು ಕೊಡು” ಎಂದರು. ಆಕೆ ಅದಕ್ಕೆ ಸಾಧ್ಯವಿಲ್ಲವೆಂದಾಗ ಭಟ್ಟರೇ ನಾಲ್ಕು ಕಟ್ಟಿಗೆ ಇಳಿಸೆಂದರು. ಅದಕ್ಕೆ ಆಕೆ ಒಪ್ಪದಾಗ ಕೊನೆಗೆ ಮೂರು ಕಟ್ಟಿಗೆ ರೂಪಾಯಿ ದರದಲ್ಲಿ ಖರೀದಿಯಾಯಿತು.


ಸೀದ ಮನೆಗೆ ಬಂದ ಭಟ್ಟರು ಹೆಂಡತಿಯನ್ನು ಕರೆದು ಮಧ್ಯಾಹ್ನದ ಊಟಕ್ಕೆ ಹರಿವೆ ಸೊಪ್ಪಿನ ಗೊಜ್ಜು ಮಾಡೆಂದು ತಾಕೀದು ಮಾಡಿದರು.


ಮನೆಯ ಗಡಿಯಾರ ಒಂಬತ್ತು ಬಾರಿಸಿತು. ಇನ್ನೂ ಹೇಗೂ ಊಟಕ್ಕೆ ಮೂರ್ನಾಲ್ಕು ತಾಸು ಬೇಕು. ಅಷ್ಟು ಹೊತ್ತಿನ ಒಳಗೆ ಗಣಪತಿ ಹೆಗಡೆಯ ಮನೆಯ ಕಡೆಗೆ ಹೋಗಿ ಬಂದರಾಯಿತು ಎಂದುಕೊಂಡು ಕಾಲಿಗೆ ಚಪ್ಪಲಿ ತೂರಿಸಿ ಮನೆಯಿಂದ ಹೊರಬಿದ್ದರು.


ಗಣಪತಿ ಹೆಗಡೆಯ ಮನೆ ಇದ್ದುದು ಭಟ್ಟರ ಮನೆಯಿಂದ ಒಂದು ಎರಡು ಫರ್ಲಾಂಗ್ ಅಂತರದಲ್ಲಿ. ಬಹಳ ದಿವಸಗಳ ಮೇಲೆ ತಮ್ಮ ಮನೆಗೆ ಭಟ್ಟರು ಬಂದುದನ್ನು ಕಂಡು ಗಣಪತಿ ಹೆಗಡೆಗೆ ಖುಷಿಯಯಿತು. ಹೆಂಡತಿಯನ್ನು ಕರೆದು ಸ್ಪೆಷಲ್ ಚಹಾ ಮಾಡಿಸಿ ಭಟ್ಟರಿಗೆ ಹೆಗಡೆ ಸತ್ಕಾರ ಮಾಡಿದ. ಚಹಾಕುಡಿದಾದ ಮೇಲೆ ತಾಂಬೂಲ ಸೇವನೆಯೂ ಆಯಿತು. ಊರಿನ ಸುದ್ದಿ , ಅದು-ಇದು ಎನ್ನುತ್ತ ಪಟಾಂಗ ಹೊಡೆದೂ ಆಯಿತು. ಅಷ್ಟೊತ್ತಿಗೆ ಹನ್ನೆರಡುವರೆ ಬಾರಿಸಿದಾಗ ಭಟ್ಟರಿಗೆ ತಮ್ಮ ಹೆಂಡತಿ ಒಲೆಯ ಮೇಲೆ ಬೇಯಿಸಲಿಕ್ಕೆ ಇಟ್ಟಿರಬಹುದಾದ ಹರಿವೆ ಸೊಪ್ಪಿನ ಗೊಜ್ಜಿನ ಸ್ಮರಣೆ ಬಂದಿರಬೆಕು. ತಟ್ಟನೆ ಎದ್ದು ನಿಂತ ಭಟ್ಟರು , “ ಗಪ್ಪತ್ತ ಹೆಗಡೆ, ನನ್ಗೆ ಮನೆಗೆ ಹೋಗ್ಲೇ ಬೇಕು.


ನಾನು ಊಟಕ್ಕೆ ಬತ್ತೆ ಹೇಳಿ ಮನೇಲಿ ಹೇಳಿಕಿ ಬಂದೆ. ನಾನು ಹೋಗ್ದೆ ಇದ್ರೆ ನಮ್ಮ ಮನೆದು ಊಟ ಮಾಡಗಿದ್ದೆಯಾ ಕಾಯ್ತಾ ಇರ್ತು” ಎಂದು ಹೇಳುತ್ತಾ ಭಟ್ಟರು ಹೊರಡುವದಕ್ಕೆ ಸಿದ್ಧರಾದರು.


ಏನೂ ಮಾಡಿದರೂ ಮನೆಗೆ ಹೋಗುವದು ಬೇಡವೇ ಬೇಡವೆಂದು ಗಣಪತಿ ಹೆಗ್ಡೆ ಭಟ್ಟರ ಪಯಣಕ್ಕೆ ಅಡ್ಡ ಹಾಕಿದ. ಅವನ ಹೆಂಡತಿಯೂ ಹೊರಗೆ ಬಂದು, “ ಅಯ್ಯೋ ಭಟ್ಟರೆ ಅಪರೂಪಕ್ಕೆ ಬಂದೀರಿ, ಮದ್ಯಾಹ್ನ ಊಟ ಮಾಡ್ದೆ ಹೋಪುಲೆ ಬತ್ತಿಲ್ಲೆ” ಎಂದು ರಾಗವಾಗಿ ನುಡಿದಾಗ ಭಟ್ಟರಿಗೆ ಏನು ಹೇಳುವದಕ್ಕೂ ತೋಚದೆ ಹೋಯಿತು. ಆದರೆ ಹೆಗಡೆಯ ಮನೆಯ ಅಡಿಗೆಯ ವಾಸನೆ ಮೂಗಿಗೆ ಬಡಿದಾಗಲೆಲ್ಲ, ಮನೆಯಲ್ಲಿ ತಮ್ಮ ಹೆಂಡತಿ ಮಾಡಿಟ್ಟಿರಬಹುದಾದ ಹರಿವೆ ಸೊಪ್ಪಿನ ಗೊಜ್ಜು ನೆನಪಾಗಿ ಭಟ್ಟರು ಅತ್ಯಂತ ವಿಹ್ವಲಗೊಂಡಂತವರಾಗುತ್ತಿದ್ದರು.


ಗಣಪತಿ ಹೆಗಡೆ ಬಚ್ಚಲು ಮನೆಗೆ ಹೋಗಿ ನೀರು ಬಿಸಿಯಾಗಿದೆಯೋ ಎಂದು ನೋಡಿ ಭಟ್ಟರಿಗೆ ಸ್ನಾನಕ್ಕೆ ಏಳುವಂತೆ ಹೇಳಿದ. ಸ್ನಾನಕ್ಕೆಂದು ಎರಡು ಜೊತೆ ಹೊಸ ಪಾಣಿ ಪಂಜೆಯನ್ನು ತಂದುಕೊಟ್ಟ. ಪಾಣಿಪಂಜೆಯನ್ನು ಕಂಡ ಭಟ್ಟರಿಗೆ ಏನು ಅನಿಸಿತೊ, ಹೆಗ್ಡೆಯನ್ನು ಕರೆದು ತಮಗೆ ಬರ್ಹಿ‍ದೇಶೆಗೆ ಹೋಗಬೆಕೆಂದು ಹೇಳಿದರು. ಹೆಗ್ಡೆ ಮನೆಯೊಳಕ್ಕೆ ಹೋಗಿ ಮೊನ್ನೆಯಷ್ಟೇ ಹೊಸತಾಗಿ ತಂದ ಹಿತ್ತಾಳೆ ತಂಬುಗೆಯಲ್ಲಿ ನೀರು ತಂದಿಟ್ಟ. ಭಟ್ಟರು ಅಂಗಿಯನ್ನು ಕಳಚಿಟ್ಟು ಒಂದು ಪಾಣಿ ಪಂಜೆಯನ್ನು ತಲೆಗೂ ಇನ್ನೊಂದನ್ನು ಸೊಂಟಕ್ಕೂ ಬಿಗಿದು ಬರ್ಹಿದೆಶೆಗೆಂದು ಹೊರಟರು.


ಗಣಪತ ಹೆಗ್ಡೆಯ ಮನೆಯ ಪಕ್ಕದಲ್ಲೇ ಒಂದು ರಸ್ತೆ ಇದೆ. ಭಟ್ಟರು ಬರ್ಹಿದೆಶೆಗೆಂದು ಹೇಳಿ ಹೊರಟವರು ರಸ್ತೆ ಹಿಡಿದು ಒಂದು ಫರ್ಲಾಂಗು ನಡೆದು ಬಂದರು. ಎದುರಿಗೆ ನಾಲ್ಕಾರು ಜನ ಬ್ರಾಹ್ಮಣರು ಗುಂಪುಕಟ್ಟಿಕೊಂಡು ಎಲ್ಲೋ ವೈದಿಕಕ್ಕೆ ಹೊರಟಿದ್ದರು. ಹತ್ತಿರ ಬಂದಾಗ ತಮ್ಮಣ್ಣ ಭಟ್ಟರ ಗುರುತು ಹಿಡಿದು, “ ಎಂತದು ಭಟ್ರೆ , ಎಲ್ಲೋ ಹೋಗಿದ್ದಾಂಗೆ ಕಾಣ್ತು” ಎಂದು ಕೇಳಿದರು. ಅದಕ್ಕೆ ತಮ್ಮಣ ಭಟ್ಟರು, “ ಇಲ್ಲೇ ಮೂಲೆಮನೆಗೆ ಹೋಗಿದ್ದೆ. ಗಣಪತ ಹೆಗ್ಡೆಯ ಹನ್ನೊಂದನೆ ದಿನ, ಈ ಚೆಂಬು, ವಸ್ತ್ರ ಎಲ್ಲ ದಾನ ಮಾಡಿದ್ದು ಕಾಣ್ತಿಲ್ಲಯಾ” ಎಂದಾಗ ಬ್ರಾಹ್ಮಣರ ಮನದಲ್ಲಿ ಆಸೆ ಮೂಡಿತು.


ಹೇಗೂ ತಾವು ಅದೇ ದಾರಿಯಲ್ಲಿ ಹೋಗುವದು, ಹಾಗೆಯೇ ಹೆಗಡೆಯ ಮನೆಯನ್ನು ಹೊಕ್ಕು ಹೋದರಾಯಿತು. ಹನ್ನೊಂದನೆ ದಿವಸಕ್ಕೆ ಹೇಗೂ ಆಮಂತ್ರಣದ ಅವಶ್ಯಕತೆಯೇನೂ ಇಲ್ಲ. ಹೋದರಾಯಿತು; ದಾನ ಕೊಡುತ್ತಾರೆ.; ತಂದರಾಯಿತು. ತಮ್ಮಲ್ಲೇ ಠರಾವು ಪಾಸು ಮಾಡಿಕೊಂಡು ಸವಾರಿ ಬೆಳೆಸಿದರು.


ಬ್ರಾಹ್ಮಣರ ಗುಂಪು ಗಣಪತ ಹೆಗಡೆಯ ಮನೆಯ ಗೇಟು ದಾಟಿ ಅಂಗಳಕ್ಕೆ ಬಂತು. ಆದರೆ ಮನೆಯಲ್ಲಿ ದಿವಸದ ಕಾರ್ಯಕ್ರಮದ ಗದ್ದವಾಗಲಿ, ಬ್ರಾಹ್ಮಣರ ಓಡಾಟವಾಗಲಿ ಕಾಣಲಾಗಲಿಲ್ಲ. ಬ್ರಾಹ್ಮಣರಿಗೆ ಪೇಚಿಗಿಟ್ಟಿತು. ಒಳಕ್ಕೆ ಹೋಗುವದೋ ಬಿಡುವದೋ ತಿಳಿಯದೆ ಅಂಗಳದಲ್ಲೆ ನಿಂತರು.


ತಿಮ್ಮಣ್ಣ ಭಟ್ಟರು ಬರ್ಹಿದೆಶೆಗೆ ಹೋದವರು ಇನ್ನೂ ಯಾಕೆ ಬಂದಿಲ್ಲವೆಂದು ತಿಳಿಯದೆ ಗಣಪತ ಹೆಗಡೆ ಹೊರಬಂದಾಗ ಅಂಗಳದಲ್ಲಿ ಬ್ರಾಹ್ಮಣರ ಗುಂಪೊಂದು ನಿಂತಿದ್ದು ಕಂಡಿತು. ಆದರೆ ಅವರಲ್ಲಿ ಯಾರ ಗುರುತೂ ಹತ್ತಲಿಲ್ಲ.


“ ಭಟ್ರೆ, ಒಳಗೆ ಬನ್ನಿ” ಎಂದು ಹೆಗಡೆ ಕರೆದಾಗ ಅವರಲ್ಲೊಬ್ಬರು ಕೇಳಿದರು,” ಇದು ಮೂಲೆಮನೆಯ ಗಣಪತಿ ಹೆಗಡೆ ಮನೆಯಲ್ದಾ?” ಅದಕ್ಕೆ ಹೆಗಡೆ ಹೌದು ಎಂದು ಹೇಳಿ ತಾನೇ ಗಣಪತ ಹೆಗಡೆ ಎಂದು ಸೇರಿಸಿದ. ಅದನ್ನು ಕೇಳಿದ ಬ್ರಾಹ್ಮಣರ ಮುಖ ಇಂಗು ತಿಂದ ಮಂಗನಂತಾಯಿತು. ಏನೋ ಹೇಳುವದಕ್ಕೆ ಹೆದರಿದವರಂತೆ ಅವರು ನಿಂತಿದ್ದನ್ನು ನೋಡಿ


ಹೆಗಡೆಯೇ ವಿಷಯವೇನೆಂದು ಕೇಳಿದ. ಆಗ ಅವರಲ್ಲೊಬ್ಬರು ಧೈರ್ಯಮಾಡಿ ತಿಮ್ಮಣ್ಣ ಭಟ್ಟರು ತಮಗೆ ದಾರಿಯಲ್ಲಿ ಸಿಕ್ಕಿದ್ದು, ಅವರು ಗಣಪತ ಹೆಗಡೆಯ ಹನ್ನೊಂದನೆಯ ದಿವಸಕ್ಕೆ ಹೋಗಿದ್ದಾಗಿ ಹೇಳಿದ್ದು ಹಾಗೂ ಹೊಸ ಚಂಬು ಮತ್ತು ಪಂಜೆ ತೋರಿಸಿದ್ದು ಹೀಗೆ ಎಲ್ಲವನ್ನೂ ಸಾದ್ಯಂತವಾಗಿ ವಿವರಿಸಿದರು. ಹಾಗಾಗಿ ತಮ್ಮಿಂದ ಏನೂ ತಪ್ಪಿಲ್ಲವೆಂದು ಹೇಳಿ ತಾವು ಅವರ ಮಾತು ಕೇಳಿ ಇಲ್ಲಿಗೆ


ಬಂದುದಕ್ಕೆ ತಮ್ಮನ್ನು ತಪ್ಪಾಗಿ ತಿಳಿಯಬಾರದೆಂದು ಕೇಳಿಕೊಂಡರು. ಹಾಗೆಯೇ ತಾವು ಬರುತ್ತೇವೆಂದು ಹೇಳಿ ಗಣಪತಿ ಹೆಗಡೆಗೆ, “ ಧೀರ್ಘಾಯುಷಿ ಭವ” ಎಂದು ಆಶಿರ್ವದಿಸಿದರು. ಹೆಗಡೆ ಏನೂ ಹೇಳು ತಿಳಿಯದೆ ಏನೂ ಮಾಡಲೂ ತೋಚದೇ ಬೆಪ್ಪನಂತೆ ನಿಂತಿದ್ದ.

ಹಿಂದಿನ ದಿನ ಒಯ್ದ ಎರಡು ಪಾಣಿ ಪಂಜೆ ಜೊತೆಗೆ ಹಿತ್ತಾಳಿ ಚೆಂಬು ಹಿಡಿದುಕೊಂಡು ತಿಮ್ಮಣ್ಣ ಭಟ್ಟರು ಗಣಪತಿ ಹೆಗಡೆಯ ಮನೆಯ ಬಾಗಿಲಲ್ಲಿ ಮರು ದಿವಸ ಬೆಳಿಗ್ಗೆ ಹಾಜರಾದರು.


ಭಟ್ಟರು ಬಂದಾಗ ಮನೆಯಲ್ಲೇ ಇದ್ದ ಹೆಗಡೆಯನ್ನು ಕಂಡ ತಿಮ್ಮಣ್ಣ ಭಟ್ಟರು “ಏನೋ, ಗಣಪತ ಹೆಗಡೆ, ಆರಾಮ ಇದ್ದಿಯನೋ?’ ಎಂದು ಹೇಳುತ್ತಾ ತಂದ ಸಾಮಾನುಗಳನ್ನು ಅವನ ಮುಂದಿಟ್ಟು ಕುಲುಕುಲು ನಕ್ಕಾಗ ಹೆಗಡೆಯೂ ಭಟ್ಟರೊಂದಿಗೆ ಜೋರಾಗಿ ನಗತೊಡಗಿದ. ಯಾಕೆಂದರೆ ತಿಮ್ಮಣ್ಣ ಭಟ್ಟರ ಹಾಸ್ಯ ಪ್ರವೃತ್ತಿಯ ವಿಷಯ ಗಣಪತ ಹೆಗಡೆಗೆ ಹೊಸ ಮಾತೇನೂ ಅಲ್ಲ. ಆದರೆ ನಿಮಗೆ ನಮ್ಮ ಹಾಸ್ಯ ಚಕ್ರವರ್ತಿ ತಿಮ್ಮಣ್ಣ ಭಟ್ಟರ ಬಗ್ಗೆ ಕುತೂಹಲ ಹುಟ್ಟುವದಕ್ಕೆ ಇದೊಂದು ಸ್ಯಾಂಪಲ್ಲಾಗಲಿ ಎಂಬುದು ನನ್ನ ಆಶಯ.


********0*******

- ಶ್ರೀಪಾದ ಹೆಗಡೆ, ಸಾಲಕೊಡ

[2008 ರಲ್ಲಿ ಬರೆದದ್ದು]

69 views0 comments