🦅 ಹಕ್ಕಿಯ ರೆಕ್ಕೆ [ಅಸಂಗತ ನಾಟಕ] 🦅
- ಶ್ರೀಪಾದ ಹೆಗಡೆ
- Aug 17, 2020
- 4 min read
[ 1977 ನೆ ಇಸ್ವಿಯಲ್ಲಿ ನಾನು ಬರೆದ ಅಪ್ರಕಟಿತ ನಾಟಕವಿದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೊನ್ನಾವರದ ನನ್ನ ಕುಟಿರದಲ್ಲಿ ಪೂರ್ವಾಶ್ರಮದ ಕಡತ ಹುಡುಕಿದಾಗ ಒಂದು ನೋಟ್ ಬುಕ್‍ನಲ್ಲಿ ಸಿಕ್ಕಿತು. ಇದೊಂದು ಅಸಂಗತ ನಾಟಕ ಪ್ರಭೇದಕ್ಕೆ ಸೇರಿದ್ದು. ಪ್ರಸ್ತುತ ನಾಟಕದಲ್ಲಿ ಎಡಬಲ ಸಿದ್ಧಾಂತಗಳ ರಾದ್ಧಾಂತದ ವಸ್ತು ಪ್ರಸ್ತಾಪಿತವಾದ ಹಿನ್ನೆಲೆಯಲ್ಲಿ ಅದು ಇಂದಿಗೂ ಪ್ರಸ್ತುತವೆಂದನಿಸಿತು. ಬಹುಷಃ ಓದಿದ ನಿಮಗೂ ಈ ನಾಟಕ ಅಸಂಗತವಾದರೂ ಅಪ್ರಸ್ತುತವಾಗದೆಂದು ನಮ್ರ ಭಾವನೆ ನನ್ನದು - ಲೇಖಕ ]
[ಎದುರು-ಬದರಿನಿಂದ ಇಬ್ಬರ ಪ್ರವೇಶ. ಇಬ್ಬರೂ ತಲೆಯನ್ನು ಮೇಲಕ್ಕೆತ್ತಿ ಬಾನಿನತ್ತ ದಿಟ್ಟಿಸುತ್ತ ರಂಗÀದ ಮಧ್ಯಕ್ಕೆ ಬಂದಾಗ ಪರಸ್ಪರ ಢಿಕ್ಕಿ ಹೊಡೆಯುತ್ತಾರೆ]
ಅ: ಏಯ್ ತಲಿ-ಗಿಲಿ ರೈಟ್ ಅದನು ನಿಮ್ಗ?
ಬ: ಏಯ್ ತಲಿ-ಗಿಲಿ ಲೆಫ್ಟ್ ಅದನು ನಿಮ್ಗ?
[ಸಣ್ಣ ಮೌನ]
[ ಇಬ್ಬರೂ ಪರಸ್ಪರರನ್ನು ದಿಟ್ಟಿಸಿ ನೋಡುವರು]
ಅ: ಅಲ್ಲಾ, ... ಅಲ್ಲಿ ಮುಗಲಾಗ ಆ ಹಕ್ಕಿ ಹಾರ್ತಾದಲ್ಲ, ಅದರ ರೆಕ್ಕೆ ನೋಡ್ತಾ ಹೊಂಟಿನಿ ನಾನು.
ಬ: ನಾನೂ ಅಷ್ಟೆ. ಅಲ್ಲಿ ಮುಗಲಾಗ ಆ ಹಕ್ಕಿ ಹಾರ್ತಾದಲ್ಲ, ಅದರ ರೆಕ್ಕೆ ನೋಡ್ತಾ ಹೊಂಟಿನಿ.
ಅ: ನಾನು ಮುಗಲ ನೋಡ್ತಾ ಬಂದ್ರ ನೀವೂ ಮುಗಲ ನೋಡ್ತಾ ಬರ್ಬೇಕೇನು?
ಬ: ನಾನು ಮುಗಲ ನೋಡ್ತಾ ಬಂದ್ರ ನೀವೂ ಮುಗಲ ನೋಡ್ತಾ ಬರ್ಬೇಕೇನು?
ಅ: ನಾನು ಮುಗಲ ನೋಡ್ತಾ ಹೊಂಟೀನಿ ಅಂದ್ಮ್ಯಾಲೆ ನೀವು ನೆಲ ನೋಡ್ಕೋತ ಬರಬಾರ್ದೆನು?
ಬ: ನಾನು ಮುಗಲ ನೋಡ್ತಾ ಹೊಂಟೀನಿ ಅಂದ್ಮ್ಯಾಲೆ ನೀವು ನೆಲ ನೋಡ್ಕೋತ ಬರಬಾರ್ದೆನು?
[ ಮತ್ತೊಮ್ಮೆ ಮೌನ]
ಅ: ಅಲ್ರಿಯಪ್ಪ ... ನನಗೊಂದು ಗುಮಾನಿ ಸುರು ಆಗದ.
ಬ: ಏನು?
ಅ: ನಾನು ಹೇಳಿದ್ದನ್ನೇ ನೀವು ಹೇಳಾಕ ಹತ್ತೀರಿ ಅಂತ.
ಬ: ಆದರೆ ನನಗೊಂದು ಗುಮಾನಿ ಸುರು ಆಗದ.
ಅ: ಏನ್ ಏನು?
ಬ: ನೀವು ಏನಂತಿರೋ ಅದಕ ಪರಕಾಗಿ ನಾ ಹೇಳ್ತೀನಿ ಅಂತ.
ಅ: ಅದ ಹೇಗ್ರಪ್ಪ ? ನಿಮ್ಮ ಮಾತು ಬಾಳ ಮಜಾ ಅದರಪ್ಪಾ.
ಬ: ಅಲ್ಲ... ನೀವಂದ ಮಾತ ನಾನಂದ್ರೂ ನಾನಂದ ಮಾತು ನಿಮ್ಮ ದೃಷ್ಟಿಲಿ ಪರಕ್ ಆಗೂದಿಲ್ಲ?
ಅ: ನೀವನ್ನೋದು ಖರೆ ಅದಿರಪ್ಪಾ. ನೀವು ರೈಟ್ ಅದಿರಿ.
ಬ: ಏನಂದ್ರಿ?
ಅ: ನೀವನ್ನೋದು ಖರೆ ಅದಿರಪ್ಪಾ ಅಂದೆ.
ಬ: ಅಲ್ಲಾ... ಮತ್ತೇನೊ ಅಂದಿರಲ್ಲ.
ಅ: ಹೌದು ... ಮತ್ತೇನೊ ಅಂದೆ... ಹೌದು ನೀವು ರೈಟ್ ಅದಿರಿ ಅಂದೆ.
ಬ: ಛೇ... ಛೇ.. ನಾನು ರೈಟ್ ಅಲ್ರಪ್ಪ.
ಅ: ನೀವು ರೈಟ್ ಅಲ್ಲ? ... ಅಲ್ಲ? ನೀವು ಬರೋಬರಿ ಇಲ್ಲ.
ಬ: ಬರೋಬರಿ ಇದಿನಿ ನಾನು. ಕಣ್ಣು ಕಾಣ್ಸುದಿಲ್ಲ ನಿಮ್ಗ?
ಅ: ಅಲ್ಲ... ಮತ್ತ ರೈಟ್ ಇಲ್ಲ ಅಂತ ಅಂದ್ರಲ್ಲ?
ಬ: ರೈಟಿಲ್ಲಾಂದ್ರ ... ರೈಟಿಲ್ಲಾಂದ್ರ ಬರೋಬರಿ ಇಲ್ಲಾಂತಲ್ಲ!
ಅ: ಮತ್ತೇನು ಹಂಗಾರ?
ಬ: ನಾನು ಲೆಪ್ಟ್ ಇದಿನಿ ಅಂತ.
ಅ: [ ಖೊಳ್ಳೆಂದು ನಗುವನು] ನೀವು ಬಾಳ ಮಜಾ ಅದಿರಪ್ಪ. ನೀವು ವಾದದಲ್ಲಿ ಭಯಂಕರ ರೈಟ್ ಅದಿರಪ್ಪ.
ಬ: ಏನಂದ್ರ ಮತ್ತ?
ಅ: ನೀವು ವಾದದಲ್ಲಿ ಬಾಳ ರೈಟ್ ಅದಿರಿ ಅಂತ.
ಬ: ಮತ್ತ ಹಾಗೆ ಹೇಳಾಕ ಹತ್ತಿರಲ್ಲ? ನಾನು ರೈಟ್ ಅಲ್ಲಾ ಅಂತ ಎಷ್ಟು ಸಲ ಅನ್ನಬೇಕು ನಿಮ್ಗ? ನಾನು ಲೆಫ್ಟ್ ಅದಿನಿ ನೆನಪಿಟ್ಕೊಳ್ಳಿ ಮತ್ತ.
ಅ: ನೆನಪ್ನಾಗ ಇಟ್ಕೊಳ್ಳಬೇಕು? ಸಾಧ್ಯ ಇಲ್ಲ ಬಿಡ್ರಿ ನಮ್ಗ.
ಬ: ಯಾಕ ಸಾಧ್ಯ ಇಲ್ಲಾಂತ ಕೇಳ್ತೀನಿ ನಾನು?
ಅ: ಸಾಧ್ಯ ಇಲ್ಲಾಂದ್ರ ಸಾಧ್ಯ ಇಲ್ಲಾ.
ಬ: ಸಾಧ್ಯ ಇಲ್ಲಾಂದ್ರ ಯಾಕ ಅಂತ?
ಅ: ಅದ ಕೇಳೊ ಅಧಿಕಾರ ನಿಮಗಿಲ್ಲಾ ಬಿಡ್ರಿ.
[ ಮುನಿಸು ತೋರುವನು ]
ಬ: ಅಲ್ಲ... ಸಂಣ ಸಂಣ ಮಾತಿಗೆಲ್ಲಾ ನೀವು ಬಾಳ ಸಿಟ್ಟು ಮಾಡ್ತಿರಲ್ರಿ. ಇದು ನನಗೇನು ಲೆಪ್ಟ್ ಕಾಣೋದಿಲ್ಲ ಬಿಡ್ರಿ.
ಅ: ಏನಂದಿರಿ?
ಬ: ನನಗೆ ಲೆಪ್ಟ್ ಕಾಣೂದಿಲ್ಲ ಅಂದೆ.
ಅ: ಅಲ್ಲ... ನೀವು ಹೀಂಗ ಪದಿ ಪದಿ ಲೆಪ್ಟ್ ಲೆಪ್ಟ್ ಅಂತಾ ಹೇಳಾಕ ಹತ್ತೀರಲ್ಲ್ರಿ? ಅಲ್ಲಾ ನೀವು ಯಾವ ಡಿಕ್ಷ್ನರಿ ಬಳಸ್ತೀರಿ.?
ಬ: ನಾನು ಯಾವುದೋ ಡಿಕ್ಷ್ನರಿ ಬಳಸ್ತೀನಿ. ಅದಕೇನಾಯ್ತು.?
ಅ. ಅಲ್ಲ... ನಿಮ್ಮ ಡಿಕ್ಷ್ನರಿಲಿ ರೈಟ್ ಅನ್ನೋ ಪದ ಅದನು?
ಬ: ಛೇ.. ಛೇ.. ನನ್ನ ಡಿಕ್ಷ್ನರಿಲಿ ಆ ವರ್ಡ ಇಲ್ಲ. ಬಿಡ್ರಿ ಬಾಳ ಉತ್ತಮ ಅದರಿ ನನ್ನ ಡಿಕ್ಷ್ನರಿ. ಅದರೊಳಗೆ ಆ ತುದಿಯಿಂದ ಈ ತುದಿ ಮಟ್ಟ ರೈಟ್ ಅನ್ನು ಶಬ್ದ ಇಲ್ರಿ.!
ಅ: ನಂದ ಡಿಕ್ಷ್ನರಿನೂ ಹಾಗೇರಿ. ಅದ ಭಯಂಕರ ಚಲೋ ಅದೆರಿ. ಅದರಾಗ ಆ ತುದಿಯಿಂದ ಈ ತುದಿಮಟ ಲೆಪ್ಟ್ ಅನ್ನು ಶಬ್ದ ಇಲ್ರಿ!!
[ಮತ್ತೆ ಮೌನ]
ಬ: ಇಲ್ಲ ಕೇಳ್ರಿ. ನಾನು ಒಂದು ಪ್ರಶ್ನೆ ಹಾಕ್ತಿನಿ.
ಅ: ಏನು?
ಬ: ಡಿಕ್ಷನರಿ ಅಂದ್ರೇನು?
ಅ: ಶಬ್ದಕೋಶ.
ಬ: ಶಬ್ದಕೋಶ ಅಂದ್ರ?
ಅ: ಶಬ್ದಕೋಶ ಅಂದ್ರೆ ಈ ಜಗತ್ತಿನ ಮ್ಯಾಗ ಈ ನೆಲದಿಂದ ಆ ಮುಗಿಲ ಮಟ್ಟ ಇರೋ ಶಬ್ದನೆಲ್ಲ ಒಟ್ಹಾಕಿ ಇಟ್ಟ ಪುಸ್ತಕ.
ಬ: ಒಪ್ತಿರಲ್ಲ?
ಅ: ಒಪ್ತೀನಿ ಬಿಡ್ರಿ.
ಬ: ಹಂಗಾರ ನಿಮ್ಮ ಡಿಕ್ಷ್ನರಿಲಿ ಲೆಪ್ಟ್ ಅಂಬೊ ಶಬ್ದ ಇಲ್ಲ ಅಂದಮ್ಯಾಲೆ ಅದ್ಹೆಂಗ್ ಡಿಕ್ಷನರಿ ಆಗ್ತದ್ರಿ?
ಅ: [ ಕೆಲ ಹೊತ್ತು ಮೌನ] ನಾನೂ ಒಂದು ಪ್ರಶ್ನೆ ಕೇಳ್ಲೇನ್ರಿ?
ಬ: ಕೇಳ್ರಿ.
ಅ: ಅಲ್ಲಾ ... ನಿಮ್ಮ ಡಿಕ್ಷನರಿಲಿ ರೈಟ್ ಅಂಬೊ ಶಬ್ದ ಇಲ್ಲಾ ಅಂದ್ಮ್ಯಾಲೆ ನಿಮ್ದು ಹ್ಯಾಂಗ್ ಡಿಕ್ಷನರಿ ಆಗ್ತದ್ರಿ?
ಬ: ಬಿಡ್ರಿ ... ನಮಗೂ ನಿಮಗೂ ಲೆಪ್ಟ್ ಆಗೋದಿಲ್ಲ.
ಅ: ಬಿಡ್ರಿ... ನಮಗೂ ನಿಮಗೂ ರೈಟ್ ಆಗೋದಿಲ್ಲ.
ಬ: ಲೆಪ್ಟ.
ಅ: ರೈಟ್.
ಬ: ಲೆಪ್ಟ.
ಅ: ರೈಟ್.
[ ಎಂದು ಹೇಳುತ್ತ ರಂಗದ ಮಧ್ಯದಿಂದ ಪರಸ್ಪರ ವಿರುದ್ಧ ದಿಕ್ಕು ಹಿಡಿದು ಸ್ವಲ್ಪ ದೂರ ಹೋಗಿ...]
ಬ: ಹಲೋ ಹಲೋ ಆಂ ಸ್ವಲ್ಪ ನಿಂದ್ರಿ.
ಅ: ಯಾಕ?
ಬ: ಅಲ್ಲಾ... ನೀವು ಭೆಟ್ಟಿಯಾಗೋ ಮುಂಚೆ ಏನೋ ನೋಡ್ತಾ ಹೊಂಟಿರಲ್ರಿ?
ಅ: ಹೌದು ಮುಗಲ ನೋಡ್ತಾ ಹೊಂಟಿದ್ನಿ.
ಬ: ನಾನೂ ಅಷ್ಟೇನಾ. ಮುಗಲ ನೋಡ್ತ ಹೊಂಟಿದ್ನಿ. ಅಲ್ಲಾ ಮುಗಲಾಗ ಏನ್ ಕಂಡ್ರಿ?
ಅ: ಒಂದು ಹಕ್ಕಿ ಕಂಡೆ.
ಬ: ನಾನೂ ಅಷ್ಟೇ. ಒಂದು ಹಕ್ಕಿ ಕಂಡೆ. ಮತ್ತೇನ್ ಕಂಡ್ರಿ?
ಅ: ಆ ಹಕ್ಕೀಗೆ ಒಂದೇ ಒಂದು ರೆಕ್ಕೆ ಇದ್ದುದ ಕಂಡೆ.
ಬ: ನಾನೂ ಅಷ್ಟೆನಾ. ಆ ಹಕ್ಕಿಗೆ ಒಂದೇ ಒಂದು ರೆಕ್ಕೆ ಇದ್ದುದ ಕಂಡೆ.
ಅ: ಆ ರೆಕ್ಕೆ ಹಕ್ಕಿಯ ಬಲ ಬದಿಗೆ ಇತ್ತು.
ಬ: ಆ ರೆಕ್ಕೆ ಹಕ್ಕಿಯ ಎಡ ಬದಿಗೆ ಇತ್ತು.
ಅ: ಛೇ ಛೇ ರೆಕ್ಕೆ ಬಲ ಬದಿಗಿತ್ತು.
ಬ: ಛೇ ಛೇ ರೆಕ್ಕೆ ಎಡ ಬದಿಗಿತ್ತು.
ಅ: ರೆಕ್ಕೆ ರೈಟ್ ಸೈಡ್ ಗೆ ಇತ್ತು
ಬ: ರೆಕ್ಕೆ ಲೆಪ್ಟ್ ಸೈಡ್ ಗೆ ಇತ್ತು.
ಅ: ನೀವು ಸುಳ್ಳು ಹೇಳ್ತಿರಿ ಬಿಡ್ರಿ
ಬ: ನೀವೂ ಅಷ್ಟೆನಾ ಬಿಡ್ರಿ.
ಅ: ಬ್ಯಾಡಾ... ಒಂದು ಕೆಲಸ ಮಾಡೂನು. ಹಕ್ಕಿ ನೋಡೋಣ ಬರ್ರಿ [ ಮೇಲಕ್ಕೆ ನೋಡುತ್ತ ] ಹಕ್ಕಿ ಎಲ್ಲದ.?
ಬ: ಹಕ್ಕಿ ಹಾರೋಗದ.
ಅ: ಬಾರೆಲೆ ಹಕ್ಕಿ
ಬ: ಬಣ್ಣದ ಹಕ್ಕಿ
ಅ: ಬಾರೆಲೆ ಹಕ್ಕಿ
ಬ: ಬಣ್ಣದ ಹಕ್ಕಿ
[ ಇಬ್ಬರೂ ಸಣ್ಣ ಮಕ್ಕಳಂತೆ ಎರಡು ಮೂರು ಸಲ ಸಾಭಿನಯವಾಗಿ ಹಾಡುವರು]
[ ಮೌನ ಆವರಿಸುವುದು]
ಅ: ಒಂದ ಮಾತ ಕೇಳ್ಲೇನ್ರಿ?
ಬ: ಹೂಂ ಕೇಳ್ರಿ.
ಅ: ಅಲ್ಲ ನೀವಿಷ್ಟೆಲ್ಲ ಲೆಪ್ಟ್, ಲೆಪ್ಟ್ ಅಂತ ಅಂತಿರಲ್ಲ. ನೀವು ಉಂಬೋದು ಯಾವ ಕೈಲಿ?
ಬ: [ಬಲಗೈಯನ್ನೆತ್ತಿ] ಈ ಕೈಲ್ರಿ.
ಅ: ಈ ಕೈ ಅಂದ್ರ ಯಾವ ಕೈ ?
ಬ: ಈ ಕೈ ಅಂದ್ರೆ ಈ ಕೈ.
ಅ: ಆ ಕೈ ಗೆ ಇಂಗ್ಲೀಷಿನಾಗ ಏನಂತಾರ ಗೊತ್ತದನು?
ಬ: ಏನಂತಾರ?
ಅ: ರೈಟ್ ಹ್ಯಾಂಡ್ ಅಂತಾರ.
ಬ: ಬಾಳ ಶಾಣ್ಯಾಂತ ಮಾತಾಡ್ತಿರಲ್ರಿ. ನಾನೂ ನಿಮ್ಗೊಂದು ಪ್ರಶ್ನೆ ಹಾಕ್ಲೇನು?
ಅ: ಹಾಕ್ರಿ.
ಬ: ನೀವು ಕುಂಡಿ ಯಾವ ಕೈಲಿ ತೊಳ್ಕೋತೀರಿ.
ಅ: ಈ ಕೈಲಿ. [ಎಡ ಗೈ ತೋರಿಸುತ್ತ]
ಬ: ಆ ಕೈಗೆ ಇಂಗ್ಲೀಷ್ನಲ್ಲಿ ಏನಂತಾರ ಗೊತ್ತದನು ನಿಮ್ಗೆ?
ಅ: ಏನಂತಾರ?
ಬ: ಲೆಪ್ಟ್ ಹ್ಯಾಂಡ್ ಅಂತಾರ.
ಅ: ಅದ್ಕ ಇರಬೇಕು? ರೈಟ್ ಹ್ಯಾಂಡ್ ಗೆ ಅಷ್ಟು ವೆಲ್ಯು ಬಂದದ. ಅದು ಊಟ ಮಾಡೊ ಕೈ. ನಿಮ್ದು ಲೆಪ್ಟ್ ಹ್ಯಾಂಡ್. ಅದ ಬರಿ ಕುಂಡಿ ತೊಳೆಯೊ ಕೈ ಬಿಡ್ರಿ.
ಬ: ಏಯ್... ನಾಲ್ಗೆ ಬಿಗಿ ಹಿಡಿದು ಮಾತಾಡ್ರಿ. ನೀವು ಹೇತ್ ಮ್ಯಾಲೆ ಎಡಗೈಲಿ ಕುಂಡಿ ತೊಳೆಯದ ಹಾಗೆ ಬಿಡ್ರಿ. ಏನಾಗ್ತದ? ಮಂದಿ ಸ್ವಲ್ಪಾನು ನಿಮ್ಮ ಹತ್ರಾನು ಸುಳಿಯೊದಿಲ್ಲ.
ಅ: ನೀವು ಎಷ್ಟೇ ಹೇಳ್ರಿ. ನನಗೊಂದು ಗಟ್ಟಿಯಾಗಿ ಅನಸದ.
ಬ: ಏನು?
ಅ: ಈ ದೇಶ ಮುಂದುವರಿಯ ಬೇಕಾದ್ರ ನಾವು ರೈಟ್ ಹಾದಿ ಹಿಡಿಬೇಕು.
ಬ: ನನಗೂ ಗಟ್ಟಿಯಾಗ ಅನಸದ.
ಅ: ಏನು?
ಬ: ಈ ದೇಶ ಪ್ರಗತಿಯಾಗ ಬೇಕಾದ್ರೆ ನಾವು ಲೆಪ್ಟ್ ಹಾದಿ ಹಿಡಿಬೇಕು ಅಂತ.
ಅ: [ಭಾಷಣದ ಧಾಟಿಯಲ್ಲಿ] ನಿಜವಾಗಿಯೂ ಈ ದೇಶ ಮುಂದುವರಿ ಬೇಕಾದ್ರೆ ನಾವೆಲ್ಲ ರೈಟಿಸಮ್ ಅನುಸರಿಸಬೇಕು.
ಬ: [ ‘ಅ’ ನ ಅನುಕರಿಸಿ] ನಿಜವಾಗಿಯೂ ಈ ದೇಶ ಅಭಿವೃದ್ಧಿ ಸಾಧಿಸಬೇಕಾದರೆ ನಾವೆಲ್ಲ ಲೆಪ್ಟಿಸಮ್ ಅನುಸರಿಸಬೇಕು.
ಅ: ರೈಟಿಸಮ್ ಜಿಂದಾಬಾದ!
ಬ: ಲೆಪ್ಟಿಸಮ್ ಜಿಂದಾಬಾದ!
ಅ: ಲೆಪ್ಟಿಸಮ್ ಮುರ್ದಾಬಾದ!
ಬ: ರೈಟಿಸಮ್ ಮುರ್ದಾಬಾದ!
[ ಇಬ್ಬರೂ ಪುನಃ ವಿರುದ್ಧ ದಿಶೆ ಹಿಡಿದು ಸಾಗುತ್ತಿರುವಾಗ ತಟ್ಟನೆ ಹಕ್ಕಿಯ ನೆರಳು ಗೋಚರವಾಗಿ]
ಅ: ಏಯ್... ನೋಡ್ರಿ... ನೋಡ್ರಿ ಹಕ್ಕಿ ಬಂತು!
ಬ: ಎಲ್ಲಿ? ಎಲ್ಲಿ?
ಅ: ನೋಡ್ರಿ ಮುಗಲಾಗ ಹಾರ್ತಾ ಅದ ಬಲರೆಕ್ಕೆ ಬೀಸ್ಕೋತಾ
ಬ: ಛೇ... ಛೇ... ಮುಗಲಾಗ ಹಾರ್ತಾ ಅದ ಎಡರೆಕ್ಕೆ ಬೀಸ್ಕೋತಾ
ಅ: ಏಯ್... ಏನ್ ಸುಳ್ಳ ಹೇಳಾಕ ಹತ್ತೀರಿ.
ಬ: ಏಯ್... ಏನ್ ಸುಳ್ಳ ಹೇಳಾಕ ಹತ್ತೀರಿ.
[ ಇಬ್ಬರೂ ತೋಳು ಏರಸಿ ಹೊಡೆದಾಟಕ್ಕೆ ಸಿದ್ಧರಾಗುವರು]
ಅ: ಬ್ಯಾಡ ನಾವು ಸುಮ್ನ ಜಗಳಾ ಮಾಡೋದು ಬ್ಯಾಡ.
ಬ: ಹಂಗಾರ ಏನ್ ಮಾಡುನು?
ಅ: ಒಂದ ವಿಚಾರ ಮನಸಾಗೆ ಬಂತು.
ಬ: ಏನಂತ?
ಅ: ನಾವೀಗ ಹಾರೋದ ಹಕ್ಕಿ ನೋಡಿವಲ್ಲ. ಅದು ನಾಳೆಗೆಲ್ಲಾದ್ರೂ ನಮ್ಮ ಕಣ್ಣಿಗೆ ಬಿದ್ರೆ ಮೂರ್ನೆ ಮಂದಿ ಯಾರಿಗಾದ್ರು ತೋರ್ಸೋನು. ಅವ್ರೇ ತೀರ್ಪು ಕೊಡ್ಲಿ.
ಬ: ನೀವಂದಿದ್ದು ಲೆಪ್ಟ್ ಅದರಿ.
ಅ: ಛೇ.. ಛೇ.. ನಾನಂದಿದ್ದು ರೈಟ್ ಅದರಿ. ಬಿಡ್ರಿ
ಬ: ಆದ್ರೂ ಒಂದು ವಿಚಾರ.
ಅ: ಏನು?
ಬ: ನೀವು ಆ ಹಕ್ಕಿ ಖರೆ ನೋಡಿರೇನು?
ಅ: ಖರೆ ನೋಡಿನಿ.
ಬ: ಅದು ಯಾವ ಹಕ್ಕಿ?
ಅ: ಅದು ಯಾವ ಹಕ್ಕಿ?
ಬ: ಅದರ ಬಣ್ಣ ಯಾವುದು?
ಅ: ಅದರ ಬಣ್ಣ ಯಾವುದು?
ಬ: ಅದು ಎಷ್ಟು ದೊಡದಿತ್ತು?
ಅ: ಅದು ಎಷ್ಟು ದೊಡದಿತ್ತು?
ಬ: ಅದು... ಬಿಡ್ರಿ. ನೀವು ಏನೂ ನೋಡಿಲ್ಲಂತಾತು.
ಅ: ನೀವೂ ಅಷ್ಟೆನ. ಏನೂ ನೋಡಿಲ್ಲಾಂತಾತು.
ಬ: ಅಲ್ಲ... ನೋಡ್ತಿದ್ದೆ. ಆದ್ರೆ ನೀವು ಮಧ್ಯ ಜಗಳ ಮಾಡಾಕ ಹತ್ತಿದ್ರಿ.
ಅ: ನಾನೂ ನೋಡ್ತಿದ್ದೆ. ಆದ್ರೆ ನೀವು ಮಧ್ಯ ಜಗಳ ಮಾಡಾಕ ಹತ್ತಿದ್ರಿ.
ಬ: ಹಿಂದಕ್ಕೊಬ್ಬ ಹಾಡಿದ್ನಂತ.
ಅ: ಏನಂತ?
ಬ: ಹಕ್ಕಿಯರೆಕ್ಕೆಯ ಕುರಿತ್ಹೊಡೆದಾಡಿ ; ಹಕ್ಕಿಯ ಮರೆತರೋ ನೋಡಿ.
[ ಅ ಮತ್ತು ಬ ಇಬ್ಬರೂ ಸೇರಿ ಆ ಹಾಡನ್ನು ಪುನಃ ಪುನಃ ಹಾಡುತ್ತ ಅಭಿನಯಿಸುತ್ತಾರೆ.]
[ ತಟ್ಟನೆ ನಿಲ್ಲಿಸಿ]
ಅ: ನಿಮ್ಮ ವಾಯ್ಸ ರೈಟ್ ಇಲ್ಲ ಬಿಡ್ರಿ
ಬ: ನಿಮ್ಮ ವಾಯ್ಸ ಲೆಫ್ಟ್ ಇಲ್ಲ ಬಿಡ್ರಿ.
ಅ: ನಮಗೆ-ನಿಮಗೆ ಸ್ವಲ್ಪಾನೂ ರೈಟ್ ಆಗೋದಿಲ್ಲ ಬಿಡ್ರಿ.
ಬ: ನಮಗೆ-ನಿಮಗೆ ಸ್ವಲ್ಪಾನೂ ಲೆಪ್ಟ್ ಆಗೋದಿಲ್ಲ ಬಿಡ್ರಿ.
ಅ : ರೈಟ್!
ಬ: ಲೆಪ್ಟ!
ಅ: ರೈಟ್!
ಬ: ಲೆಪ್ಟ್!
[ ಪರಸ್ಪರ ವಿರುದ್ಧ ದಿಶೆ ಹಿಡಿದು ಸಾಗುತ್ತಿದ್ದಂತೆ]
- ತೆರೆ -

-ಶ್ರೀಪಾದ ಹೆಗಡೆ ಸಾಲಕೊಡ
留言