ಸ್ವಾಮಿನಿಷ್ಠೆ
- ಆಲೋಚನೆ
- Jun 13, 2021
- 1 min read
ನಮ್ಮ ಮನೆಯಲಿರುವುದೊಂದು
ಮುದ್ದು ಮೋತಿ ನಾಯಿ
ಹಗಲು ರಾತ್ರಿ ಎನ್ನದೆಯೇ
ಮನೆ ಕಾಯುವ ತಾಯಿ !
ಹೋಗಿ ಬರುವ ಜನರ ಕಂಡು
ಬಿಡದೆ ಕಾಡುತಿರುವುದು
ಎಳೆಯ ಮಕ್ಕಳನ್ನು ಕಂಡರೆ
ಆಟ ಆಡುತಿರುವುದು !
ತಿಂಡಿ ತೀರ್ಥ ಕೊಟ್ಟು ಅದಕೆ
ಮುದ್ದು ಮಾಡುವ ಪುಟ್ಟ
ಬೊಗಳು ನಾಯಿಯನ್ನು ತಡೆದು
ಬಾಲ ಎತ್ತಿದ ದಿಟ್ಟ !
ರಾತ್ರಿ ಉಂಡು ಮಲಗಿದಾಗ
ನಿದ್ರೆ ಅದಕ್ಕೆ ಜೋರು
ಕಳ್ಳ ಬಂದು ಒಡವೆ ಕದ್ದು
ಕತ್ತಲಲ್ಲೇ ಪಾರು !
ಬೆಳಿಗ್ಗೆ ಎದ್ದು ಒಡತಿ ನೊಂದು
ನಾಯಿಗಿತ್ತಳು ಶಾಪ
ಒಳಗೊಳಗೆ ಹೆದರಿಕೊಂಡು
ಮುದುಡಿ ಮಲಗಿತು ಪಾಪ !
ನಾಳೆಯೊಳಗೆ ಕಳ್ಳರನ್ನು
ಹಿಡಿದು ತರುವೆ ಎಂದಿತು
ಬೊಗಳುವುದನ್ನು ಬಿಟ್ಟುಅದು
ಹೊಂಚುಹಾಕಿ ಕುಳಿತಿತು !
ಕಳ್ಳ ಹೆಜ್ಜೆ ಇಡುತ ಒಬ್ಬ
ಒಳಗೆ ಬಂದು ಕದ್ದನು
ಕಾಲು ಕಚ್ಚಿ ಹಿಡಿದು ತಂದು
ಒಡತಿ ಎದುರು ಬಿಟ್ಟಿತು !
ಮನೆಯ ಒಡತಿ ಇದನು ಕಂಡು
ಹರುಷದಿಂದ ನುಡಿದಳು
ಉಂಡ ಮನೆಗೆ ಎರಡು ಬಗೆಯದ
ಸ್ವಾಮಿನಿಷ್ಠೆ ಎಂದಳು !
ಪಿ.ಆರ್.ನಾಯ್ಕ
ಸ.ಸಂ.ವ್ಯಕ್ತಿ ಹಳದೀಪುರ
Comments