top of page

ಸ್ವಾತಿ ಮಹಾನಕ್ಷತ್ರ ಮಳೆನೀರಿನ ಮಹತ್ವ

ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇರಿಸುತ್ತಿದ್ದುದು ನೆನಪಿದೆ. ಅದಕ್ಕಿರುವ ಔಷಧೀಯ ಗುಣಗಳನ್ನು ಈಗಿನವರು ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..??

ಈ ವರ್ಷದ ಸ್ವಾತಿ ಮಹಾನಕ್ಷತ್ರವು, ಇದೇ ಅಕ್ಟೋಬರ್ 23 ರಿಂದ ನವೆಂಬರ್ 4 ರ ವರೆಗಿದೆ. ಈ ದಿನಗಳಲ್ಲಿ ಬೀಳುವ ಮಳೆ ನೀರು ಸಾದಾ ನೀರಾಗಿರದೆ, ಬಹಳ ಮಹತ್ವ ಉಳ್ಳದ್ದಾಗಿದೆ. ಈ ನೀರನ್ನು ಶುದ್ಧವಾಗಿ ಸಂಗ್ರಹಿಸುವುದೂ ಒಂದು ನಾಜೂಕಿನ ಕೆಲಸ. ಮಳೆಯ ನೀರು ನೆಲಕ್ಕೆ ಬೀಳುವ ಮೊದಲೇ ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಟ್ಟು, ಆಕಾಶದಿಂದ ನೇರವಾಗಿ ಬೀಳುವ ನೀರನ್ನು ಸಂಗ್ರಹಿಸಬೇಕು. ನಂತರ ಶುದ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ..!! ನನ್ನ ಬಳಿ ಇರುವ 6 ವರ್ಷಗಳಷ್ಟು ಹಳೆಯ ನೀರು, ಇಂದಿಗೂ ಸ್ಪಟಿಕ ಜಲವೇ ಹೌದು.. ಒಂದಿನಿತೂ ಕೆಡದೆ ಅತ್ಯಂತ ಪರಿಶುದ್ಧವಾಗಿದೆ ಎಂದರೆ ನಂಬುವಿರಾ?!

ಚಿಪ್ಪಿನೊಳಗೆ ಬಿದ್ದ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಒಂದು ಹನಿಯಿಂದ ಅನರ್ಘ್ಯ ಮುತ್ತು ರೂಪುಗೊಳ್ಳುವುದೆಂದು ಕೇಳಿದ್ದೇವೆ. ಅದೇ ನೀರು ಕೆಲವು ರೋಗಗಳಿಗೂ ದಿವ್ಯ ಔಷಧಿಯಾಗಿರುವುದು ವಿಶೇಷವಲ್ಲವೇ..? ಸ್ವಾತಿ ಮಳೆನೀರಿನ ಮಹತ್ವವು ಸ್ವತ: ನನ್ನ ಅನುಭವಕ್ಕೆ ಬರುವಂತಹ ಸುಯೋಗ ಒದಗಿ ಬಂದುದು ನಿಜವಾಗಿಯೂ ಆಶ್ಚರ್ಯ! ನನ್ನ ಎಡ ಕೈಯ ಕಿರುಬೆರಳಿನ, ಉಗುರಿನ ಬುಡದಲ್ಲಿ ಒಮ್ಮಿಂದೊಮ್ಮೆಲೆ ಕೆಂಪಾಗಿ ನೋವು ಪ್ರಾರಂಭವಾಯ್ತು. ತಿಂಗಳುಗಟ್ಟಲೆ ಔಷಧೋಪಚಾರ ನಡೆಯಿತೆನ್ನಿ.. ಯಾವ ವೈದ್ಯರನ್ನೂ ಬಿಡಲಿಲ್ಲ. ಎಲೊಪತಿ, ಹೊಮಿಯೊಪತಿ, ಆಯುರ್ವೇದ ಎಲ್ಲವೂ ಮುಗಿದವು. ಜಪ್ಪಯ್ಯ ಎಂದರೂ ನೋವು ಕಡಿಮೆಯಾಗಲಿಲ್ಲ.. ಹೀಗೇ 6ತಿಂಗಳುಗಳು ಕಳೆದವು. ರೂಢಿಯಂತೆ, ಕಣ್ಣಿಗೆ ದಿನಾ ಬೆಳಗ್ಗೆ ಎರಡೆರಡು ಬಿಂದು ಸ್ವಾತಿ ನೀರು ಹಾಕುತ್ತಿದ್ದೆ. ಹಾಂ..ಇದನ್ನು ಮರೆತು ಬಿಟ್ಟೆನಲ್ಲ ಎನಿಸಿತು. ಇದನ್ನೂ ಯಾಕೆ ಪ್ರಯೋಗಿಸಿ ನೋಡಬಾರದು ಎಂದುಕೊಂಡು, ಸಮಯ ಸಿಕ್ಕಾಗಲೆಲ್ಲಾ ನೋವಿರುವ ಉಗುರಿಗೆ ಹಾಕುತ್ತಾ ಬಂದಾಗ ನಿಧಾನವಾಗಿ ನೋವು ಕಡಿಮೆಯಾಗಿ, ಆರೋಗ್ಯವಾದ ಉಗುರು ಬರಲು ಪ್ರಾರಂಭವಾಯಿತು. ಸುಮಾರು ಎರಡು ತಿಂಗಳುಗಳಲ್ಲಿ ಸರಿಯಾದ ಹೊಸ ಉಗುರು ಪೂರ್ತಿ ಬಂದಿತ್ತು..ನನಗೇ ನಂಬಲಾಗಲಿಲ್ಲ! ಹಾಗೆಯೇ ಸಣ್ಣ ಪುಟ್ಟ ಕಿವಿ ನೋವು ಹಾಗೂ ಕಣ್ಣು ನೋವುಗಳನ್ನು ಗುಣಪಡಿಸುವಲ್ಲಿ ಕೂಡಾ ಇದು ಬಹಳ ಸಹಕಾರಿಯಾಗಿದೆ. ಇದು ಮಾತ್ರವಲ್ಲದೆ, ಹಾಲಿಗೆ ಹೆಪ್ಪು ಹಾಕಲು ಉಪಯೋಗಿಸಿ, ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡಬಹುದು. ಇದರಿಂದ ಮಾಡಿದ ಮೊಸರು ವಿಶೇಷ ರುಚಿ ಹಾಗೂ ಸುವಾಸನೆಯನ್ನು ಕೂಡಾ ಹೊಂದಿರುತ್ತದೆ ಎಂಬುದು ನನ್ನ ಅನುಭವವೂ ಹೌದು. ವರ್ಷಕ್ಕೊಮ್ಮೆ ರೇಶ್ಮೆ ಸೀರೆಗಳನ್ನು ಈ ಸಮಯದಲ್ಲಿ ಎಳೆ ಬಿಸಿಲಿಗೆ ಒಂದು ತಾಸು ಅಥವಾ ಮನೆಯೊಳಗೆ ನೆರಳಿನಲ್ಲಿ ನಾಲ್ಕೈದು ತಾಸು ಹರವಿ ಗಾಳಿಯಾಡಲು ಹಾಕಿದರೆ ವರ್ಷವಿಡೀ ಸೀರೆಗೆ ಕೀಟ ಬಾಧೆ ಇರುವುದಿಲ್ಲ. ಈ ಸಮಯದಲ್ಲಿ ಗಿಡಗಳನ್ನು ನೆಟ್ಟು ಚೆನ್ನಾಗಿ ಬದುಕಿದ ನಿದರ್ಶನ ನನ್ನಲ್ಲಿದೆ. ನನ್ನ ಈ ಸ್ವಾನುಭವಗಳನ್ನು ಇತರರಿಗೂ ತಿಳಿಸಿ, ಅವರು ಕೂಡಾ ಇದರ ಉಪಯೋಗ ಪಡೆಯುವಂತೆ ಆಗಬೇಕೆಂಬುದು ನನ್ನಾಸೆ. ವೈದ್ಯರ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ. ನನ್ನ ಗೆಳತಿಯೊಬ್ಬಳು ಈ ಸಮಯದಲ್ಲಿ ಚೆನ್ನಾಗಿ ಮಳೆ ಬಂದರೆ ದೊಡ್ಡ ಹಂಡೆಯಲ್ಲಿ ಸ್ವಾತಿ ನೀರನ್ನು ಸಂಗ್ರಹಿಸಿಟ್ಟು ಕೂದಲು ತೊಳೆಯಲು ಉಪಯೋಗಿಸಿ, ತನ್ನ ಉದ್ದವಾದ ದಟ್ಟ ಕೂದಲನ್ನು ಕಾಪಾಡಿಕೊಂಡಿದ್ದಳು. ಈ ಸಲದ ಹವಾಮಾನದ ಸೂಚನೆಯನ್ನು ಕಾಣುವಾಗ ಎಲ್ಲರೂ ಹಂಡೆಗಳಲ್ಲೇ ಈ ವಿಶೇಷವಾದ ನೀರನ್ನು ತುಂಬಿಸಿ ಇಡುವ ಸಾಧ್ಯತೆಯಿದೆಯೆಂದು ನನ್ನೆಣಿಕೆ. ಪುಟ್ಟ ಮಗುವಿಗೆ ಈ ನೀರು ತಾಯಿಯ ಎದೆ ಹಾಲಿನಷ್ಟೇ ಆರೋಗ್ಯಕರವೆಂದು ನನ್ನ ಹಿರಿಯರು ಹೇಳುತ್ತಿದ್ದ ನೆನಪು.

ಆದರೆ, ಹಿತ್ತಲ ಗಿಡ ಮದ್ದಲ್ಲವೆಂಬಂತೆ, ನಮಗೆ ತಿಳಿದ ಹಾಗೂ ತಿಳಿಯದ ಅತ್ಯದ್ಭುತ ಔಷಧೀಯ ಗುಣ ಹೊಂದಿದ, ಸುಲಭವಾಗಿ, ಉಚಿತವಾಗಿ ಸಿಗುವಂತಹ ಈ ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವು ಬಹಳ ಪ್ರಚಾರ ಪಡೆದಿಲ್ಲ, ಹಾಗೆಯೇ ಯಾರಿಗೂ ತಿಳಿದಿಲ್ಲ. ಅಗ್ಗದ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯಿಸುವ ನಮ್ಮ ಸರಕಾರ ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಸಂಶೋಧನೆ ನಡೆಸಿದರೆ ಇದರಲ್ಲಿರುವ ರೋಗ ನಿರೋಧಕ ಔಷಧೀಯ ಗುಣಗಳನ್ನು ಪತ್ತೆ ಹಚ್ಚಬಹುದು.ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹಲವು ರೋಗಗಳಿಗೆ ಔಷಧಿ ಸಿಗುವ ಸಂಭವವಿದೆ. ಇನ್ನು ಮುಂದಾದರೂ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಉಪಯುಕ್ತತೆಯ ಕುರಿತು ಎಲ್ಲರಿಗೂ ಅರಿವುಂಟಾಗಿ ಅದರ ಸದುಪಯೋಗವಾಗಲಿ ಎಂದು ಹಾರೈಸೋಣ.. ಹಾಗೆಯೇ ಈ ವಿಶೇಷವಾದ ಸ್ವಾತಿ ನೀರನ್ನು ಸಂಗ್ರಹಿಸಲು ಹಂಡೆಗಳನ್ನು ಸಿದ್ಧಪಡಿಸಿಡುವಿರಿ ತಾನೇ..?


ಶಂಕರಿ ಶರ್ಮ, ಪುತ್ತೂರು.

9449856033

15 views1 comment

1 Comment


Roshan Coorg
Roshan Coorg
Jul 11, 2022

ಸಂಗ್ರಹಿಸುವುದಕ್ಕೆ ಸೂರಿನಿಂದ (ಹಂಚಿನ) ಬಂದ ನೀರು ಆಗೋದಿಲ್ಲವಾ.....?

Like
bottom of page