top of page

ಸ್ವಾತಂತ್ರ್ಯ [ವಚನ ಮತ್ತು ವಿಚಾರ ]

Updated: Aug 15, 2020

ಸ್ವಾತಂತ್ರ್ಯ( ವಚನ)

***

ಸ್ವಾತಂತ್ರ್ಯವೆಂದರೆ

ಹುಡುಗಾಟವಾಗಬಾರದು

ನಮ್ಮಂತರಂಗದ

ಹುಡುಕಾಟವಾಗಬೇಕು;

ಸ್ವಾತಂತ್ರ್ಯವೆಂದರೆ

ಮಂಗನ ಕೈಯ

ಮಾಣಿಕ್ಯವಾಗಬಾರದು

ಶರಣರ ಅಂಗೈ

ಲಿಂಗವಾಗಬೇಕು;

ಸ್ವಾತಂತ್ರ್ಯವೆಂದರೆ

ಇತಿಹಾಸದ

ಕಾಲಕೋಶವಾಗಬಾರದು

ನಿತ್ಯ ಸ್ಮರಣೆಯ

ಯಶೋಗಾಥೆಯಾಗಬೇಕು

ಸ್ವಾತಂತ್ರ್ಯವೆಂದರೆ

ಜೋಳದ ತೆನೆಯಂತಿರಬೇಕು,

ನೆಮ್ಮದಿಯ ಮನೆಯಂತಿರಬೇಕು

ಸ್ವಾತಂತ್ರ್ಯವೆಂದರೆ

" ಸ್ವಾತಂತ್ರ್ಯ"ವೆನಿಸುವಂತಿರಬೇಕು

-ಢಮಾರೇಶ್ವರ



ಸ್ವಾತಂತ್ರ್ಯ [ವಿಚಾರ]

********

ದೇಶ ಮತ್ತೊಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಏಳು ದಶಕಗಳ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಜನಕೋಟಿ ಇರಿಸಿಕೊಂಡ ಆಶೋತ್ತರಗಳು ಎಷ್ಟರಮಟ್ಟಿಗೆ ಈಡೇರಿವೆ ಎನ್ನುವದನ್ನು ನಾವಿಂದು ಯೋಚಿಸಬೇಕಾಗಿದೆ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ಹೋರಾಡಿದವರ ತ್ಯಾಗ ಬಲಿದಾನಗಳು ವ್ಯರ್ಥವಾಗದಂತೆ ನೋಡಿಕೊಳ್ಳುವದು ಇಂದಿನವರ ಜವಾಬ್ದಾರಿ. ಆದರೆ ಅಧಿಕಾರಕ್ಕೆ ಬಂದ ಸರಕಾರಗಳು ಕ್ರಮೇಣ ಅಧಿಕಾರದ ಕುರ್ಚಿಯ ಬೆನ್ನು ಹತ್ತಿ ಮತ ಕೊಟ್ಟ ಜನರನ್ನೂ ಮತಕ್ಷೇತ್ರಗಳನ್ನೂ ಮರೆತು ಸ್ವಾರ್ಥ ಸಾಧನೆಯಲ್ಲಿ ಮುಳುಗಿದ್ದನ್ನು ಕಾಣುವಂತಾಗಿದೆ. ಜನಪ್ರತಿನಿಧಿಗಳ ಅಪ್ರಾಮಾಣಿಕತೆ, ಅದಕ್ಷತೆಗಳ ದುಷ್ಪರಿಣಾಮ ಆಡಳಿತದ ಮೇಲೆ ಬೀಳುವಂತಾಗಿದೆ. ಜನರಿಗೆ ಅವರು ನಿರೀಕ್ಷಿಸುವ ಆಡಳಿತ ದೊರಕದೇ ನಿರಾಶೆಯಾಗಿದೆ.

ಇಂದಿನ ಪರಿಸ್ಥಿತಿ ಇನ್ನಷ್ಟು ಭಯಾನಕವಾದ ಚಿತ್ರವನ್ನು ನಮ್ಮ ಮುಂದಿಡುತ್ತಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಕೊರೋನಾ ಆಕ್ರಮಿಸಿಕೊಂಡು ದೇಶವನ್ನು ಎಲ್ಲ ರೀತಿಯಿಂದ ದುರ್ಬಲಗೊಳಿಸಿದೆ. ಜನತೆಯ ಜೀವನೋತ್ಸಾಹವನ್ನೇ ಕಸಿದುಕೊಂಡಿದೆ. ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ಸರಕಾರ ಹೆಣಗಾಡುತ್ತಿದೆ. ಇನ್ನೊಂದೆಡೆ ಕೊರೊನಾವನ್ನು ಹತೋಟಿಗೆ ತರಲು ಪ್ರಯತ್ನ ನಡೆದಿದೆ. ಜನರ ದೈನಂದಿನ ಬದುಕು ಹದಗೆಟ್ಟಿರುವದರಿಂದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವ ಸ್ಥಿತಿಯಿಲ್ಲದಂತಾಗಿದೆ. ಅಸಂಖ್ಯಾತ ಜನ ಕೆಲಸವನ್ನು ಕಳೆದುಕೊಂಡಿದ್ದಾರೆ. ಸಣ್ಣಪುಟ್ಟ ಉದ್ದಿಮೆಗಳು ಮುಚ್ಚಿವೆ. ಕೆಲಸಗಾರರು ಹಳ್ಳಿಗಳಿಗೆ ವಲಸೆ ಹೋಗಿದ್ದು ಅವರಿಗೆ ಸರಕಾರ ಕೆಲಸ ಒದಗಿಸಬೇಕಾಗಿದೆ. ಇವೆಲ್ಲ ಹಿನ್ನಡೆಗಳನ್ನು ಸರಿಪಡಿಸಿಕೊಂಡು ದೇಶ ಮುನ್ನಡೆಯುವಂತಾಗಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕು. ಒಮ್ಮೆಲೇ ಆಗುವಂತಹ ಬೆಳವಣಿಗೆಯಲ್ಲ ಇದು. ದೇಶ ಸದೃಢವಾಗುವಂತಾಗಲು ಜನರೂ ಸದೃಢರಾಗಬೇಕಾಗಿದೆ. ಆದರೆ ಸರಕಾರದ ಬೆಂಬಲವಿಲ್ಲದೇ ಜನಜೀವನ ಸುಧಾರಿಸುವದು ಕಷ್ಟ. ಹೀಗೆ ಇವು ಪರಸ್ಪರಾವಲಂಬಿಯಾಗಿ ಮುಂದೆ ಸಾಗಬೇಕಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಆತಂಕ ತಂದೊಡ್ಡಿರುವ ಕೊರೊನಾವನ್ನು ಹತೋಟಿಗೆ ತರುವದಕ್ಕೆ ಸದ್ಯದ ಆದ್ಯತೆ. ನಂತರ ತಿರುಗಿ ಎಲ್ಲರ ಕೈಗೆ ಕೆಲಸ ಕೊಡಬೇಕು. ಅಂದರೆ ಇದೊಂದು ಬಹಳ ದೊಡ್ಡ ಸವಾಲು ರಾಷ್ಟ್ರೀಯ ಸರಕಾರದ ಎದುರಿಗಿದೆ. ಇಂತಹ ಸಂದರ್ಭದಲ್ಲಿ ಪ್ರಜೆಗಳು ಧೈರ್ಯ ಕಳೆದುಕೊಳ್ಳದೇ ದೇಶವನ್ನು ಸಬಲಗೊಳಿಸುವ ಸರಕಾರದ ಕೆಲಸದಲ್ಲಿ ಕೈ ಜೋಡಿಸಬೇಕಾಗಿದೆ. ಸರಕಾರವೂ ಜನಜೀವನದ ನೆಮ್ಮದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಎಪ್ಪತ್ನಾಲ್ಕನೆಯ ಸ್ವಾತಂತ್ರ್ಯ ದಿನವನ್ನು ಯಾವ ಸಂಭ್ರಮ ಸಡಗರಗಳಿಲ್ಲದೆ ಸರಳವಾಗಿ ಆಚರಿಸುವದರೊಂದಿಗೆ ನಾವು ನಮ್ಮ ನಮ್ಮ ಕರ್ತವ್ಯಪ್ರಜ್ಞೆಯನ್ನಿರಿಸಿಕೊಂಡು ದೇಶದ ಪ್ರಗತಿಗೆ ಸಹಕರಿಸೋಣ. ಎಲ್ಲರಿಗೂ ಸ್ವಾತಂತ್ರ್ಯದಿನದ ಶುಭಾಶಯಗಳು.








ಎಲ್ ಎಸ್ ಶಾಸ್ತ್ರಿ

30 views0 comments

Comentários


©Alochane.com 

bottom of page