top of page

ಸ್ವಲ್ಪ ಸ್ವಚ್ಛವಾಗಿ ಇರಬಾರದೇ?

ಸ್ವಚ್ಛತೆಯನ್ನು ಯಾರಾದರೂ ಹೇಳಿ ಕೊಡಬೇಕೇ? ತಮ್ಮ ತಮ್ಮ ಮೈಮಂಡೆ, ಮನೆ, ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗದಿದ್ದರೆ ಅಂಥವರಿಗೆ ಯಾರು ತಾನೇ ಸಹಾಯ ಮಾಡಲು ಸಾಧ್ಯ? ಅವರವರೇ ಆ ಕೆಲಸ ಮಾಡದಿದ್ದರೆ ದೇವರು ಕೂಡ ಅಂಥವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ.


Cleanliness is next to Godliness ಎಂಬ ಒಂದು ಮಾತು ಇಂಗ್ಲಿಷ್ ನಲ್ಲಿದೆ. ದೇವರ ಅನಂತರದ ಸ್ಥಾನ ಶುದ್ಧತೆಗೆ ಎಂಬುದು ಅದರ ಅರ್ಥ. ಶುದ್ಧವಾಗಿ, ಶುಚಿಯಾಗಿ (clean) ಮತ್ತು ಮಡಿ (neat) ಆಗಿ ಇರದ ಮನುಷ್ಯರನ್ನು ಯಾರು ತಾನೆ ಇಷ್ಟ ಪಡುತ್ತಾರೆ? ನಾಲ್ಕು ಮಂದಿ ನಮ್ಮನ್ನು ಇಷ್ಟಪಡುವಂತಾಗಲು ನಾವು ಶುದ್ಧ ಮತ್ತು ಸ್ವಚ್ಛವಾಗಿರಬೇಕಾದದ್ದು ಕೂಡ ಅಷ್ಟೇ ಅಗತ್ಯ. ಅದು ನೇರವಾಗಿ ನಮ್ಮ ಆರೋಗ್ಯದೊಂದಿಗೆ ಥಳಕು ಹಾಕಿಕೊಂಡಿರುವ ವಿಷಯ. ಇದೀಗ ನಮ್ಮ ರಾಷ್ಟ್ರದ ಆದ್ಯತೆಯ ವಿಷಯವಾಗಿರುವ ಸ್ವಚ್ಛತೆ, ಶುದ್ಧತೆ ಮತ್ತು ಮಡಿಯ ಜೊತೆಗೆ ಹೊಸದೊಂದು ವಿಷಯ ಸೇರಿಕೊಂಡಿದೆ. ಅದು ’ನಿಮ್ಮ ಕಸ ನಿಮಗೆ.’


ಇವತ್ತು ಬಹುತೇಕ ಕಾರ್ಖಾನೆಯ ಉತ್ಪಾದನೆಗಳು ಪ್ಲಾಸ್ಟಿಕ್ ನಿಂದ ಸುತ್ತಲ್ಪಟ್ಟಿರುತ್ತವೆ. ನಾವು ಹಣ ಕೊಟ್ಟು ಉತ್ಪಾದನೆಗಳನ್ನು ಖರೀದಿಸುವಾಗ ಅನಗತ್ಯ ಕಸವಾಗಿರುವ ಪ್ಲಾಸ್ಟಿಕ್ ನಮ್ಮ ಮನೆಗೆ ಬಂದು ಬೀಳುತ್ತದೆ. ಆ ಪ್ಲಾಸ್ಟಿಕ್ ಕಸ ನಮಗೇಕೆ? ಹಾಗಾಗಿ ಆ ಕಸವನ್ನು ಪುನಃ ಪ್ಯಾಕ್ ಮಾಡಿ ಕಂಪನಿ ಉತ್ಪಾದಕರಿಗೆ ಕಳಿಸಿ ಕೊಡುವ ಅಭಿಯಾನವೇ ’ನಿಮ್ಮ ಕಸ ನಿಮಗೆ!’.


ಪ್ಲಾಸ್ಟಿಕ್ ಲಕೋಟೆಗಳಲ್ಲಿ ಕಸ/ತ್ಯಾಜ್ಯ ತುಂಬಿಸಿ ರಸ್ತೆ ಬದಿಯಲ್ಲಿ ಎಸೆದು ಹೋಗುವವರಿಗೂ ಇದೇ ರೀತಿ ಮಾಡಬೇಕು. ಆ ಕೊಳೆತ ತ್ಯಾಜ್ಯವನ್ನು ಎತ್ತಿ, ಮರಳಿ ಅವರ ಮನೆಗೆ ಬಿಸಾಡಿ ಬರಬೇಕು. ಆಗ ಹೊಣೆಗೇಡಿ ಕೆಲಸ ಮಾಡುವವರು ತುಸು ಎಚ್ಚರಗೊಳ್ಳುತ್ತಾರೆ.


ಐಸ್ ಕ್ರೀಮ್ ಮಾರುವವರು ಇರಬಹುದು, ಚುರಮುರಿ ಅಂಗಡಿಯವರಿರಬಹುದು ಅಥವಾ ಇನ್ನಾವುದೇ ಅಂಗಡಿ ಇಟ್ಟುಕೊಂಡವರಿರಬಹುದು, ಗಿರಾಕಿಗಳು ತಿಂದೆಸೆಯುವ ಕಸವನ್ನು ಅಲ್ಲೇ ಬಿಟ್ಟು ತೆರಳುತ್ತಾರೆ. ಇಡೀ ಪರಿಸರ ಅಸಹನೀಯವಾಗಿ ಅಸಹ್ಯವಾಗಿ ಕಾಣುತ್ತದೆ. ಶುಚಿಗೊಳಿಸಲು ಯಾರು ಬರಬೇಕು? ಆ ಅಂಗಡಿಯವರು ತಾವೇ ಒಂದು ದೊಡ್ಡ ಬುಟ್ಟಿಯನ್ನು ಇಟ್ಟುಕೊಳ್ಳುವುದಕ್ಕೆ ಏನು ತೊಂದರೆ? ಕಸವನ್ನು ಆ ಬುಟ್ಟಿಯಲ್ಲಿ ಎಸೆಯುವಂತೆ ಗಿರಾಕಿಗಳಿಗೆ ಸೂಚಿಸಬೇಕು. ವ್ಯಾಪಾರ ಮುಗಿದ ಬಳಿಕ ಆ ವ್ಯಾಪಾರಿ ಕಸದ ವಿಲೇವಾರಿ ತಾನೇ ಮಾಡಬೇಕು. ವ್ಯಾಪಾರದ ಲಾಭ ಬೇಕು, ಅಲ್ಲಿ ಉತ್ಪತ್ತಿಯಾಗುವ ಕಸ ಬೇಡ ಎಂದರೆ ಹೇಗೆ! ತೆಗೆದುಕೊಂಡು ಹೋಗಿ ಕಸಕ್ಕೆ ವ್ಯವಸ್ಥೆ ಮಾಡದಿದ್ದರೆ ಸ್ಥಳೀಯಾಡಳಿತ ಅಂಥವರಿಗೆ ದಂಡ ವಿಧಿಸಬೇಕು.


ಟೂರಿಸ್ಟ್ ಬಸ್ ಗಳು ನಿಲ್ಲುವ ಕೆಲವು ತಾಣಗಳಿರುತ್ತವೆ. ಅಲ್ಲಿ ಹೊಟೇಲ್ ಮತ್ತಿನ್ನಿತರ ಅಂಗಡಿಗಳಿರುತ್ತವೆ. ಆದರೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಹೊಟೇಲ್ ಹಾಗೂ ಅಂಗಡಿಗಳವರಿಗೆ ಬಸ್ ಗಳಲ್ಲಿ ಬರುವ ಜನರ ವ್ಯಾಪಾರ ಬೇಕು; ಲಾಭಾಂಶ ಬೇಕು. ಅದರಲ್ಲೇ ಅವರ ಜೀವನ ಸಾಗುತ್ತದೆ. ಆದರೆ ಅವರಲ್ಲಿಗೆ ಬರುವ ಗಿರಾಕಿಗಳಿಗಾಗಿ ನಾಲ್ಕು ಶೌಚಾಲಯ ಕಟ್ಟಿಸುವುದಿಲ್ಲ. ಅಂಗಡಿ ಮುಂಗಟ್ಟುಗಳ ಮುಂದೆ ಕಸದ ಬುಟ್ಟಿ ಇರುವುದಿಲ್ಲ. ಸ್ಥಳೀಯಾಡಳಿತ ಇಂಥವುಗಳನ್ನು ಕಡ್ಡಾಯ ಮಾಡಬೇಕು. ಇಲ್ಲವಾದರೆ ಅವರ ಪರವಾನಿಗಿ ರದ್ದು ಮಾಡಬೇಕು.


ಶುದ್ಧವಾಗಿ, ಮಡಿಯಾಗಿ, ನಿರ್ಮಲವಾಗಿ ಇರಲು ಯಾರೂ ಹಣ ವ್ಯಯ ಮಾಡುವ ಅಗತ್ಯವಿಲ್ಲ. ಅಂದರೆ ಅವರವರೇ ಮಾಡಿಕೊಳ್ಳುವ ಕೆಲಸ ಅದು. ಮಿಂದು ಶುಚಿಯಾಗಿರಲು, ಶುಭ್ರವಾದ – ಮಡಿಯಾದ ಬಟ್ಟೆಗಳನ್ನು ತೊಟ್ಟುಕೊಳ್ಳಲು ಮತ್ತು ನಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಯಾವ ಶಿಕ್ಷಣದ ಅಗತ್ಯವೂ ಇಲ್ಲ. ನಮ್ಮ ಸುತ್ತಮುತ್ತಲಿರುವ ಇತರರನ್ನು ನೋಡಿಯಾದರೂ ಇಂತಹ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲವೇ? ಸ್ವಚ್ಛತೆಯಿಂದಲೇ ತಾನೇ ಆರೋಗ್ಯಪ್ರಾಪ್ತಿ?


ಕೆಲವು ಜನರು ಜನ್ಮೇಪಿ ಕೊಳಕುತನವನ್ನು ಅಂಟಿಸಿಕೊಂಡು ಹುಟ್ಟಿರುತ್ತಾರೆ. ಶುದ್ಧವಾಗಿ ನಿರ್ಮಲವಾಗಿ ಇರುವುದು ಹೇಗೆಂಬುದನ್ನೇ ಅವರು ಅರಿಯರು. ಸುತ್ತಮುತ್ತ ಕಸ ಕೊಳಕು ತುಂಬಿಕೊಂಡಿರುತ್ತದೆ. ಆ ಕೊಚ್ಚೆಯಲ್ಲೇ ದಿನ ಕಳೆಯುತ್ತಿರುತ್ತಾರೆ. ಅದನ್ನು ನೋಡಿದರೆ ವಾಕರಿಕೆ ಬರುವಂತಾಗುತ್ತದೆ. ಅಂಥವರು ಬೇರೆಯವರನ್ನು ನೋಡಿರುವುದಿಲ್ಲವೋ ಅಥವಾ ಅಂಥವರಿಗೆ ಯಾರೂ ತಿಳಿಯ ಹೇಳುವುದಿಲ್ಲವೋ ಗೊತ್ತಿಲ್ಲ. ಜನ್ಮವೇ ಆ ರೀತಿ ಇರುತ್ತದೋ ಗೊತ್ತಾಗುವುದಿಲ್ಲ. ಬರೇ ತಿಂದುಂಡು ಪಶುಜೀವನ ನಡೆಸುತ್ತಿರುತ್ತಾರೆ. ಕೆಲಸ ಮಾಡದೆ ಹಗಲು ಹೊತ್ತು ಜಾಡ್ಯವನ್ನು ಹೊದ್ದುಕೊಂಡು ಮಲಗಿರುತ್ತಾರೆ!


ಬಡತನ ಮತ್ತು ಶ್ರೀಮಂತಿಕೆಗೂ ಶುದ್ಧ ಮತ್ತು ನೈರ್ಮಲ್ಯಕ್ಕೂ ಸಂಬಂಧವಿಲ್ಲ. ಎಷ್ಟೋ ಮಂದಿ ಶ್ರೀಮಂತರು ಕೊಳಕರಾಗಿರುತ್ತಾರೆ ಮತ್ತು ತೀರಾ ಬಡವರು ಶುದ್ಧ ಹಾಗೂ ಮಡಿಯನ್ನು ಜೀವನ ಪೂರ್ತಿ ತಪಸ್ಸಿನಂತೆ ಆಚರಿಸಿಕೊಂಡು ಬಂದಿರುತ್ತಾರೆ; ಬಡವರಾದರೂ ಇದ್ದುದನ್ನು ಚಂದವಾಗಿ ಬಳಸುವುದನ್ನೂ, ಮನೆ ಹಾಗೂ ಸುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದನ್ನೂ ಕಲಿತಿರುತ್ತಾರೆ.


ಔದಾಸೀನ್ಯದ ಜಾಡ್ಯಬದುಕಿಗೆ ಸಂಬಂಧಿಸಿ ಹಳ್ಳಿ ಕಡೆ ಒಂದು ಗಾದೆ ಮಾತು ಹೇಳುತ್ತಾರೆ: ’ಅವರು ಉಗುರು ಮುರಿದು ನೀರಿಗೆ ಹಾಕುವ ಜಾಯಮಾನದವರಲ್ಲ’ ಎಂದು. ಅಂಥವರ ವ್ಯಕ್ತಿತ್ವ, ಮನೆ, ಪರಿಸರ ಪೂರ್ತಿ ಜಾಡ್ಯವೇ ಹೊದ್ದು ಮಲಗಿರುತ್ತದೆ. ಏಳಿಗೆಯೇ ಇರುವುದಿಲ್ಲ. ಕೆಲಸ ಮಾಡದೆ ಯಾರಾದರೂ ಉದ್ಧಾರ ಆದದ್ದಿದೆಯೇ?


ಸ್ವಚ್ಛತೆ ಎಂಬುದು ಒಂದು ಜೀವನ ವಿಧಾನ. ಅದನ್ನು ಅರಿಯದವರ ಮುಂದೆ ಆ ಬಗ್ಗೆ ಮಾತಾಡುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆಯೇ ಸರಿ.


-ಡಾ. ವಸಂತಕುಮಾರ ಪೆರ್ಲ.

2 views0 comments

Commenti


bottom of page