top of page

ಸ್ವರ್ಗದೋಣಿಯ ಸೇರಿ 'ಕಥೆ' ಉಳಿಸಿ ಹೋದ ಅಬ್ಬಾಸ್ ಇನ್ನು ನೆನಪು ಮಾತ್ರ 

ಹೌದು! ಸಾವು ನಿಷ್ಕುರುಣಿ, ನಿರ್ದಯಿ. ಸಾತ್ವಿಕರನ್ನು ಕಂಡರೇ ಅದಕ್ಕೆ ಇನ್ನೂ ಬಲುಪ್ರೀತಿ. ಸಣ್ಣ ಸುಳಿವೂ ನೀಡದೆ ತನ್ನ ತೆಕ್ಕೆಗೆ ತೆಗೆದುಕೊಂಡು ಬಿಡುವ ಮಹಾಕ್ರೂರಿ ಎಂದರೆ ಈ ಸಾವೇ!.

ಸದ್ದಿಲ್ಲದೇ ಅಬ್ಬಾಸ್ ರನ್ನು ನುಂಗಿ ಬೀಗಿದ ನಿನಗೆ ಹಿಡಿಶಾಪ ಹಾಕುವುದನ್ನು ಬಿಟ್ಟರೆ ನಿನ್ನ ನಿಯಮವನ್ನು ಒಪ್ಪದೇ ವಿಧಿಯಿಲ್ಲ ನಮಗೆ..!

ಇಂದು ಮಧ್ಯಾಹ್ನ ಮೂರುಗಂಟೆಯ ಸಮಯ. ಜೋರಾಗಿ ಸುರಿವ ಮಳೆಯಲ್ಲಿ ಅಮೀನಪುರ(ಅಮೀನಗಡ)ದಿಂದ ನಮ್ಮೂರಿ(ಸೂಳೇಭಾವಿ)ಗೆ ನಡೆದುಕೊಂಡು ಬರುತ್ತಿದ್ದೆ. 

ತೊಯ್ದು ತೊಪ್ಪೆಯಾಗಿದ್ದೆ. ಅದೇ ವೇಳೆಯಲ್ಲಿ ಕಮತಗಿಯ ಗೆಳೆಯ ಪ್ರಕಾಶ ಗುಳೇದಗುಡ್ಡನಿಂದ ಕಾಲ್ ಬಂತು. ಫೋನ್ ತೆಗೆದು 'ಹಲೋ' ಎಂದೆ. ಅವನ ಧ್ವನಿ ನಡುಗುತ್ತಿತ್ತು. ಚಳಿಗೆ ಇರಬಹುದೆಂದುಕೊಂಡೆ. ಗಂಟಲು ಕಟ್ಟಿದಂತಿತ್ತು; ಮತ್ತೆ 'ಹಲೋ...: ಎಂದೆ. 'ಅಬ್ಬಾಸ್ ಸರ್ ಹೋದರು' ಎಂದ. ತಕ್ಷಣವೇ ಕಾಲು ಮುಂದೆ ಹೋಗದೇ ಹಿಂದೇಟು ಹಾಕಿದವು. ಮೈಯೆಲ್ಲಾ ಬೆವರಿಟ್ಟಿತು. ಕಣ್ಣೀರು ಮಳೆಯ ನೀರಲ್ಲಿ ಬೆರೆತಿದ್ದು ಗೊತ್ತಾಗಲೇ ಇಲ್ಲ. ಸಾವಿಗೆ ಶಾಪ ಹಾಕುತ್ತ, ಸುದ್ದಿ ಸುಳ್ಳಾಗಲಿ ಎಂದು ಸುಮ್ಮನೆ ನಡೆದೆ....

ಅಗಲಿಲ್ಲದ ಅಬ್ಬಾಸ್ ರನ್ನು ನೆನೆದು....


ಇಷ್ಟು ಬೇಗ ಕಾಲನ ಕರೆಗೆ ಓಗೊಟ್ಟು ಹೋಗುವ ವಯಸ್ಸು ಆಗಿರಲಿಲ್ಲ ಅಬ್ಬಾಸ್ ರಿಗೆ. ಅದೇನೊ ಗೊತ್ತಿಲ್ಲ, ವಿಧಿಯೇ ಅವರನ್ನು ಪ್ರೀತಿಯಿಂದ ಕಂಡು ಮಮ್ಮಲ ಮರುಗಿದೆ, ಬೇಗ ಕರೆಸಿಕೊಂಡಿದೆ. 


ಅಬ್ಬಾಸ್ ಎಂದರೆ ನೇರ, ನಿಷ್ಠುರ, ನಿರ್ಭಿಡೆಯ ಮನುಷ್ಯ ಎನ್ನುವುದನ್ನು ಒಪ್ಪಿಕೊಂಡೂ ಅವರು ಅಪಾರವಾಗಿ 

ಪ್ರೀತಿಸಲ್ಪಡುವ ಮನುಷ್ಯರಾಗಿದ್ದರು ಎಂಬುದನ್ನು ಯಾರೂ ಮರೆಯುವಂತಿಲ್ಲ. 


ಅದು 2003 ರ ಇಸವಿ. ನಾನಾಗ 'ಸಮಾಜವೀರ' ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ಆಗಾಗ ಕಚೇರಿಗೆ ಬರುತ್ತಿದ್ದ ಅಬ್ಬಾಸರನ್ನು ಕುರಿತು,"ಇವರು ಕಥೆ, ಕವನಗಳನ್ನು ಬರೀತಾರೆ. ನಿನಗೂ ಸಾಹಿತ್ಯ ಅಂದ್ರೆ ಇಷ್ಟಾ ಅಲ್ವಾ, ಇವರ ಸಲಹೆ, ಮಾರ್ಗದರ್ಶನ ತಗೋತಿರು" ಎಂದು ಆಗ ಸಂಪಾದಕರಾಗಿದ್ದ ಎನ್. ಎಚ್. ಶಾಲಗಾರರು ಹೇಳಿದ್ದು ನನಗೀಗಲೂ ನೆನಪಿದೆ. 

ಆಗಲೇ ಅಬ್ಬಾಸರು ನನಗೆ ಪರಿಚಿತರಾಗಿದ್ದು. ಆ ಪರಿಚಯ ಇಂದಿನವರೆಗೂ ಮುಂದುವರೆದಿತ್ತು. ಇನ್ನು ಮುಂದುವರೆಯುವುದಿಲ್ಲ ಎಂಬ ನೋವು ಹಾಗೇ ಉಳಿಯುತು. 

ಈ ನಡುವೆ ನಾನು


ಪದವಿ ಹಂತದಲ್ಲಿ ಅವರ ಕಥೆ "ಡೋಲಕ್ ಭಾಷಾ" ಓದಿದ್ದು. ಮುಂದೆ ಅವರ ಕವಿತೆ, ಕಥೆಗಳ ಓದುಗನಾದೆ. ಅಲ್ಲದೇ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದೆ. ಅವರು ಹಾಗೇ ಸಾಹಿತ್ಯಿಕವಾಗಿ ಮಾರ್ಗದರ್ಶನ ಮಾಡುತ್ತಲೇ ಇದ್ದರು. ಓದು, ಬರೆಹ, ಕವಿತೆ, ಲೇಖನ ಇತ್ಯಾದಿ ವಿಷಯಗಳ ಸಂಬಂಧವಾಗಿ ಚರ್ಚಿಸುತ್ತಲೇ ಇರುತ್ತಿದ್ದೆವು. ಆಗಾಗ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ 'ಏನು ಬರೆದೀರಿ? ಬರೀತಾ ಇರ್ರಿ. ಬರೆಯೋಕಿಂತ ಮುಂಚೆ ಚೆನ್ನಾಗಿ ಓದಿರಿ' ಎಂದು  ಅಧ್ಯಯನಕ್ಕೆ, ಬರವಣಿಗೆಗೆ ಪ್ರೇರೇಪಿಸುತ್ತಿದ್ದರು. ಅವರಿಗೆ ಬರೆಯುವವರನ್ನು ಕಂಡರೆ ನಿರ್ವ್ಯಾಜ ಪ್ರೇಮ. 

2014 ರ ಇಸವಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಬೆಂಗಳೂರು ವಿವಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿತ್ತು. ಅದೇ ಕಾರ್ಯಕ್ರಮದಲ್ಲಿ ನಾನು ಬರೆದ ಪುಸ್ತಕವೂ ಬಿಡುಗಡೆಯಾಗಲಿತ್ತು.

ಕಾಕತಾಳೀಯವೇನೋ! ಆಗ ಅಬ್ಬಾಸ್ ರು ತಮ್ಮ ಕೆಲಸದ ನಿಮಿತ್ತ್ಯ ಬೆಂಗಳೂರಿನಲ್ಲಿಯೇ ಇದ್ದರು. ಕರೆ ಮಾಡಿ 'ಕಾರ್ಯಕ್ರಮಕ್ಕೆ ಬನ್ನಿ ಸರ್' ಎಂದು ಕರೆದಾಗ ತುಂಬಾ ಪ್ರೀತಿಯಿಂದ ಬಂದು ನನಗೆ ಶುಭ ಹಾರೈಸಿದರು. ತಮ್ಮ ಪುಸ್ತಕವೇ ಪ್ರಕಟವಾದಷ್ಟು ಹಿಗ್ಗಿದರು. ಹೀಗೆ ಹಿಗ್ಗುವ, ಹುರಿದುಂಬಿಸುವ ನಿಷ್ಕಲ್ಮಷ ಪ್ರೀತಿ ಸುರಿಯುವ ಹೃದಯವಂತ ಮನುಷ್ಯ ಅವರು. ಆ ನೆನಪು ಇಂದಿಗೂ ಮನದಲ್ಲಿ ಹಸಿರಾಗಿದೆ.

ಅಂತಃಕರುಣದ ಅಬ್ಬಾಸ್ ರು ಕನ್ನಡ ನಾಡಿಗೆ ಕಥೆಗಾರರೆಂದೇ ಪ್ರಸಿದ್ಧರು.ಬರೆಯುವ, ಬೆಳೆಯುವ ಎಳೆಯರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೇಷ್ಟ್ರಾಗಿ ಪಠ್ಯವನ್ನು ಮಾತ್ರ ಬೋಧಿಸದೇ, ಬದುಕನ್ನು, ಮೌಲ್ಯಗಳನ್ನು ಬಿತ್ತುತ್ತಿದ್ದರು ಎಂಬುದು ಉತ್ಪ್ರೇಕ್ಷೆಯಲ್ಲ.


ಮಾನವತೆಯನ್ನು ಉದ್ದಕ್ಕೂ ಕಾಪಿಟ್ಟುಕೊಂಡು ಬಂದ ಅಬ್ಬಾಸ್ ರು ತಮ್ಮ ಸಾಹಿತ್ಯದಲ್ಲೂ ಅದನ್ನೇ ಕಾಣಿಸಿದರು. ತಮಗಿಂತ ಹಿರಿಯ ಲೇಖಕರನ್ನು ಗೌರವದಿಂದ ಕಾಣುವುದು, ತಮ್ಮ ಸಮಕಾಲೀನ ಬರೆಹಗಾರರೊಂದಿಗೆ ಅಷ್ಟೊಂದು ಸಲುಗೆಯನ್ನು ಬೆಳೆಸಿಕೊಳ್ಳದೇ,  ಸ್ನೇಹಮಯವಾಗಿಯೂ, ಯುವ ಬರಹಗಾರ ಬಗೆಗೆ ನಿರ್ಲಕ್ಷ್ಯವನ್ನು ತಾಳದೆ, ಅವರನ್ನು  ಆತ್ಮೀಯತೆಯಿಂದ, ಪ್ರೀತಿ ವಿಶ್ವಾಸದಿಂದ ಕಾಣುವ ಅವರಲ್ಲಿನ ಗುಣಗ್ರಾಹಿತ್ವ ಎಲ್ಲರಿಗೂ ಮಾದರಿ.


ಸಾಮಾನ್ಯವಾಗಿ ಕವಿತೆಯಿಂದಲೇ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುವವರ ಸಂಖ್ಯೆಯೇ ಅಧಿಕ. 

ಇದಕ್ಕೆ ಅಬ್ಬಾಸರೂ ಹೊರತಾಗಿರಲಿಲ್ಲ.ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು ಎಂಬ ಕವನ ಸಂಕಲನಗಳೇ ಇದಕ್ಕೆ ಸಾಕ್ಷಿ. ಮುಖ್ಯವಾಗಿ ಅವರದು ಅಪ್ಪಟ ಕಥಾಪ್ರತಿಭೆ. 

ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು, ಮತ್ತೊಂದು ಕರ್ಬಲಾ, ಹುಡುಕಾಟ, ಅರ್ಥ, ಬದುಕು ಎಂದರೆ ಇಷ್ಟ, ಕನ್ನಡಿ ಒಳಗಣ ಬಿಂಬ, ಬನದ ಹುಣ್ಣಿಮೆ, ಅಬ್ಬಾಸರ ಐವತ್ತು ಕಥೆಗಳು ಹೀಗೆ ಕಥಾಸಂಕಲನಗಳು ಪ್ರಕಟವಾಗಿ ಕನ್ನಡ ಕಥಾಪ್ರಪಂಚವನ್ನು  ಶ್ರೀಮಂತಗೊಳಿಸಿದ ಅವರು ತಮ್ಮ ಮಹತ್ವಾಕಾಂಕ್ಷೆಯ ಕಾದಂಬರಿ 'ಜನ್ನತ್ ಮೊಹಲ್ಲಾ'ವನ್ನೂ ಪ್ರಕಟಿಸಿದರು. 


ವಸ್ತುವಿನ ಆಯ್ಕೆ, ಪಾತ್ರಸೃಷ್ಟಿ, ಕಥಾ ವಿನ್ಯಾಸ, ಕಥೆ ಕಟ್ಟುವ ಕೌಶಲ ಎಲ್ಲವನ್ನೂ ಸಿದ್ಧಿಸಿಕೊಂಡ ಅವರು ಬದುಕಿನ ನಿಷ್ಠೆ, ತಾವು ನಂಬಿಕೊಂಡ ಮೌಲ್ಯಗಳು, ಮಾನವಪರ, ಮಾನವೀಯ, ಜೀವಪರ ನಿಲುವುಗಳನ್ನು ಪ್ರತಿಪಾದಿಸುತ್ತಲೇ ಬಂದರು.


ಜಾತಿ, ಧರ್ಮ, ಮೇಲು- ಕೀಳು, ಬಡವ- ಬಲ್ಲಿದ, ಶೋಷಣೆ, ಹಸಿವು, ಬಡತನ,  ವರ್ಗಸಂಘರ್ಷ, ಲಿಂಗತಾರತಮ್ಯ, ಕೋಮು ಸಂಘರ್ಷ, ಮನುಷ್ಯನ ಸಣ್ಣತನ, ಕೊಳಕುತನ, ಪ್ರೇಮ, ಕಾಮ, ಹಿಂಸೆ, ಗುಣ ದೌರ್ಬಲ್ಯ ಇತ್ಯಾದಿ ಸಂಗತಿಗಳನ್ನು ಪ್ರಸ್ತಾಪಿಸುವ ಅಬ್ಬಾಸರ ಕಥೆಗಳು,

ಮಾನವನಲ್ಲಿನ ಮೃಗತ್ವವನ್ನು  ದಾಖಲಿಸುವುದರ ಜೊತೆಗೆ ಅವನನ್ನು ಮಾನವೀಯ ನೆಲೆಗೆ ಪರಿವರ್ತಿಸುವ ಆಶಾವಾದಿತ್ವವನ್ನು ಪ್ರಕಟಿಸುತ್ತವೆ. ಮನುಷ್ಯನಲ್ಲಿನ ಸಂಘರ್ಷಾತ್ಮಕ ಸಂಗತಿಗಳನ್ನು ಸಂಯಮದಿಂದಲೇ ದಾಖಲಿಸುವ ಅಬ್ಬಾಸರು ಅಂತಿಮವಾಗಿ ಮಾನವೀಯತೆಯನ್ನು ಪ್ರತಿಪಾದಿಸುವುದು ಅವರ ಬರವಣಿಗೆಯ ಹೆಚ್ಚುಗಾರಿಕೆಯಾಗಿದೆ.


ಕಡು ಸ್ವಾಭಿಮಾನಿಯಾಗಿದ್ದ ಅಬ್ಬಾಸರು  ಪ್ರಶಸ್ತಿ, ಪುರಸ್ಕಾರಗಳಿಗಾಗಿ ಎಂದೂ ಲಾಭಿ ಮಾಡಿದವರಲ್ಲ. ಹೆಸರು, ಅಧಿಕಾರ, ಸ್ಥಾನಕ್ಕಾಗಿ ಅಧಿಕಾರಸ್ಥರ ಬಾಲ‌ ಬಡೆದವರಲ್ಲ. ಆತ್ಮಸಂತೋಷಕ್ಕಾಗಿಯೇ ಬರೆಯುತ್ತಿದ್ದ ಅವರು ಉದ್ದಕ್ಕೂ  ಬರೆಯುವುದೊಂದನ್ನೇ ನೆಚ್ಚಿಕೊಂಡಿದ್ದವರು. 


ನೈತಿಕತೆಯನ್ನು ಮೈಗೂಡಿಸಿಕೊಂಡಿದ್ದ ಅಬ್ಬಾಸರು  ಕವಿಯಾಗಿ, ಲೇಖಕರಾಗಿ, ಕಥೆಗಾರರಾಗಿ ಸಲ್ಲಿಸಿದ ಸೇವೆಗೆ ಚಿಕ್ಕೋಡಿ ತಮ್ಮಣ್ಣಪ್ಪ, ಗೊರೂರು, ಪಿ. ಲಂಕೇಶ್, ವೀಚಿ, ಮಾಸ್ತಿ ಮುಂತಾದ ಹತ್ತುಹಲವು ಪುರಸ್ಕಾರಗಳು ಸಂದಿವೆ.ಕುವೆಂಪು‌ ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅವರಿಗೆ ಬಾಗಲಕೋಟೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಒಲಿದು ಬಂತು.ಅಬ್ಬಾಸರು ತೋರಿದ ಸಾಹಿತ್ಯಿಕ ಬದ್ಧತೆ ದೊಡ್ಡದು.

ಬರೆಹಗಾರನಿಗೆ ಬದ್ಧತೆ ಬೇಕು. ಅದನ್ನು ಉಳಿಸಿಕೊಳ್ಳಲು ತಕ್ಕ ಸಿದ್ಧತೆ ಜೊತೆಗೆ ಸಂಯಮವೂ ಬೇಕು ಎಂದು ಬಲವಾಗಿ ನಂಬಿಕೊಂಡಿದ್ದ ಅಬ್ಬಾಸರು ತಮ್ಮ ಜೀವನದುದ್ದಕ್ಕೂ ಅದನ್ನು ಅನುಸರಿಸಿದರು.

ಅತಿ ನಿಷ್ಠುರತೆ ವ್ಯಕ್ತಿಗೆ ವೈರಿಗಳನ್ನು ಸೃಷ್ಟಿಸುತ್ತದೆ. ಹಾಗೆ ಸೃಷ್ಟಿಯಾದ  ವೈರಿಗಳು ಅವರ ಅದೇ ನಿಷ್ಠುರತೆಯನ್ನು ಜೊತೆಗೆ ಆ ವ್ಯಕ್ತಿಯನ್ನು ಒಳಗೊಳಗೇ ಅಪಾರವಾಗಿ ಪ್ರೀತಿಸುತ್ತಾರೆ. ಕನ್ನಡದಲ್ಲಿ ಲಂಕೇಶ್  ಇಂಥ ಪ್ರೀತಿಗೆ ಒಳಗಾದ ಅಪರೂಪದ ವ್ಯಕ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ

ಅಬ್ಬಾಸರು ಮೇಲ್ನೋಟಕ್ಕೆ ನೇರ ನಿಷ್ಠುರಿಯಾಗಿ ಕಂಡರೂ ಆಳದಲ್ಲಿ ಅಂತಃಕರಣಪೂರಿತ  ಪ್ರೀತಿಯನ್ನೇ ಧಾರೆಯೆರೆಯುತ್ತಿದ್ದರು. ಅದನ್ನು ಬದುಕು ಮತ್ತು ಬರೆಹದಲ್ಲೂ ಉಸುರಿದರು.

"ಮುಸ್ಲಿಂ ಸಂವೇದನೆ" ಎಂಬ ಕ್ಲೀಷೆಯನ್ನೂ ಮೀರಿ ಸಾಮಾಜಿಕ ಸಂಗತಿಗಳನ್ನೂ  ಕಥೆಗಳಲ್ಲಿ ಕಟ್ಟಿಕೊಟ್ಟವರು ಕಥೆಗಾರ ಅಬ್ಬಾಸ್. ಧರ್ಮಕೇಂದ್ರಿತ ದೃಷ್ಟಿ -ಧೋರಣೆಗಳು ಪೂರ್ವಗ್ರಹಪೀಡಿತ ಮನಸ್ಸುಗಳ ಅವಜ್ಞೆಗೆ ಗುರಿಯಾದ ಕಾರಣವೊ ಏನೋ ಕನ್ನಡದಲ್ಲಿ ಅಬ್ಬಾಸ್ ರು ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ. ಆ ಕೊರಗು ಅವರಿಗೂ ಕಾಡಿದ್ದಿರಬಹುದು.‌ 

ಕನ್ನಡ ಓದುಗರು ಇನ್ನಾದರೂ ಅವರ ಬರೆಹಗಳನ್ನು ಉದಾರ ಮನಸ್ಸಿನಿಂದ ಸ್ವೀಕರಿಸಿ, ಚರ್ಚೆಗೆ ಎತ್ತಿಕೊಳ್ಳಬೇಕು. ಅವರ ಬರೆಹದ ಆಳ ಅಗಲ, ಹರಹು ಹೂರಣದ ಕುರಿತು ವಿವೇಚಿಸುವುದು ಅವಶ್ಯವಿದೆ. 


ಅಬ್ಬಾಸರ ಅಗಲಿಕೆ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲ, ಇಡೀ ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ ಲೋಕಕ್ಕೆ ಆದ ನಷ್ಟ. ಹತ್ತುಹದಿನೈದು ದಿನಗಳ ಹಿಂದೆ ಫೋನ್ ಮಾಡಿದಾಗ "ಯಾಕೋ ಜೀವನ ಬೇಸರವೆನಸ್ತಿದೆ. ಒಂಟಿತನ ಕಾಡ್ತಿದೆ. ನೀವೆಲ್ಲಾ ಚೆನ್ನಾಗಿ ಬರೀಬೇಕು, ಬೆಳೀಬೇಕು. ನಿಮ್ಮಂಥ ಯುವ ಬರೆಹಗಾರರೇ ಭರವಸೆಯ ಬೆಳಕು. ಈಗ ನಮ್ಮದೇನಿದ್ದರೂ ಮುಗಿದ ಕಾಲ. ನಿಮ್ಮಂಥವರನ್ನು ನೋಡಿ ಖುಷಿಪಡಬೇಕಷ್ಟೇ " ಎಂದು ವಾರಿಗೆಯ ಗೆಳೆಯರೆನ್ನೆಲ್ಲ ನೆನೆಪಿಸಿಕೊಂಡು ದೀರ್ಘ ಉಸಿರೆಳೆದುಕೊಂಡಿದ್ದರು.


ಸಾಂಸ್ಕೃತಿಕ ಲೋಕ ತಮ್ಮನ್ನು ಕಡೆಗಣಿಸಿದ್ದರ ನೋವು ಅವರನ್ನು ತೀವ್ರವಾಗಿ ಬಾಧಿಸಿದಂತಿತ್ತು. ಅವರನ್ನು ಗೌರವದಿಂದ ನಡೆಸಿಕೊಳ್ಳುವಲ್ಲಿ ನಾವು ಎಲ್ಲೋ ಎಡವಿದ್ದೇವೆ ಎಂಬುದನ್ನು ನೆನಪಿಸಿದಂತಿತ್ತು. ಅಂದು ಆಡಿದ ಅವರ ಆ ಮಾತುಗಳು ಶಾಶ್ವತವಾಗಿ ಹೊರಡುವ ಮುನ್ಸೂಚನೆಯಾಗಿತ್ತೇನೊ? ನನಗೆ ಈಗಲೂ ನಂಬಲಾಗುತ್ತಿಲ್ಲ. ಆದರೆ ಇಷ್ಟು ಬೇಗ ಹೊರಡುತ್ತಾರೆಂದೂ ಊಹಿಸಿರಲಿಲ್ಲ. ಅಂತೂ ಒಂಟಿಯಾಗಿ ನಡೆದುಬಿಟ್ಟಿರಿ ಎಲ್ಲವನ್ನೂ ಇಲ್ಲಿಯೇ ಬಿಟ್ಟು.ಹೃದಯ ಆಘಾತಮಾಡಿಕೊಂಡು ನೀವು ನಡೆದಿರಿ ಮರಳಿ ಬಾರದ ಊರಿಗೆ. ಬೆಂಕಿ ನುಂಗಿ 'ಬನದ ಹುಣ್ಣಿಮೆ'ಯ ಬೆಳದಿಂಗಳೇ  ಸುರಿದಿರಿ. ಒಳಗೆ ಹಾಗೇ ತಣ್ಣಗೆ ಉಳಿದಿರಿ. ಈಗ  ನೀವಿಲ್ಲದಿರುವ ಶೂನ್ಯವನ್ನು ತುಂಬಿಕೊಳ್ಳುವುದೆಂತು...? ಸರ್ ಕ್ಷಮಿಸಿಬಿಡಿ ನಮ್ಮನ್ನು! ಮನ್ನಿಸಿಬಿಡಿ ನಮ್ಮೀ ಅಪರಾಧವನ್ನು!!


ತಮ್ಮ ಜೀವಿತದವರೆಗೂ ಮನುಕುಲಕ್ಕೆ ಪ್ರೀತಿಯ ಕಥೆ ಹೇಳಿಕೊಟ್ಟ  ಅಬ್ಬಾಸರು ಈಗ "ಸ್ವರ್ಗದ ಓಣಿ"(ಜನ್ನತ್ ಮೊಹಲ್ಲಾ) ಸೇರಿದ್ದಾರೆ. ಸ್ವರ್ಗದಲ್ಲಿರುವ ಅವರ ಆತ್ಮ ತಣ್ಣಗಿರಲಿ. 

ಅವರು ಬಿಟ್ಟುಹೋದ ಕಥೆಗಳಲ್ಲಿ ಅವರನ್ನು‌ ಕಾಣೋಣ.


ಡಾ. ಸಂಗಮೇಶ ಎಸ್. ಗಣಿ

28 views0 comments

Comentarios


bottom of page