top of page

'ಸಿಲಬಸ್ಸು ಇರಬಾರ್ದ ಸಿನಿಮಾ ಥರ'

ಪುಸ್ತಕ ಓದು ಪ್ರಾರಂಭವಾಗಿದ್ದು ಇನ್ನೊಬ್ಬರ ಆಜ್ಞೆಯಿಂದಲೇ. ಪಠ್ಯಪುಸ್ತಕ ಬರೀ ಬ್ಯಾಗಿಗೆ ಮಾತ್ರ ಭಾರವಿರಲಿಲ್ಲ. ನಮ್ಮ‌ ಮನಸ್ಸಿಗೂ ಬಹಳಾ ಭಾರವೇ ಇತ್ತು. ಹಾಗಾಗಿ ಯೋಗರಾಜ ಭಟ್ಟರ 'ಸಿಲಬಸ್ಸು ಇರಬಾರ್ದ ಸಿನಿಮಾ ಥರ' ನಮ್ಮ ಒಳಧ್ವನಿಯೇ ಆಗಿದೆ.


ಆದರೆ ಕ್ರಮೇಣ ಕನ್ನಡ ಪಾಠ & ಪದ್ಯಗಳಲ್ಲಿ ಏನೊ ರುಚಿಸುವುದಕ್ಕೆ ಪ್ರಾರಂಭವಾಯಿತು. ನೇಗಿಲ ಹಿಡಿದು ಹೊಲದಳು ಹಾಡುತ, ತಿಳುಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ, ಬಂದ ಬಂದ ಸಣ್ತಮ್ಮಣ್ಣ, ಕೋಳಿ ಕೋತಿ ಮದುವೆ ಪದ್ಯ, ಧರಣಿ ಮಂಡಲ ಮಧ್ಯದೊಳಗೆ, ಮೊಲ ಮತ್ತು ಬಾತುಕೋಳಿಯ ಸಣ್ಣ ಕಥೆ, ಒಗ್ಗಟ್ಟಿನಲ್ಲಿ ಬಲವಿದೆ ಕಥೆಗಳು ಪದಗಳನ್ನು ಹಿಡಿಯುವ ಯತ್ನಕ್ಕೆ ನೀರೆದದ್ದು ಸತ್ಯ.


ಎಂಟನೇ ತರಗರಿಯೋ ಒಂಭತ್ತನೇ ತರಗತಿಯಲ್ಲೋ ಪರಿವರ್ತನೆ ಎಂಬ ಪಾಠ. ಹುಡುಗ ಕಷ್ಟದ ಕುಟುಂಬದವ. ಆದರೆ ಶಾಲೆಗೆ ತಡವಾಗಿ ಬರುತ್ತಾನೆ. ಮೇಷ್ಟ್ರಿಗೆ ಇದು ಗೊತ್ತಿಲ್ಲ. ಬೆನ್ನ ಮೇಲೆ ಬಾರಿಸುತ್ತಾರೆ. ಒಮ್ಮೆ ಸತ್ಯ ಗೊತ್ತಾಗುತ್ತದೆ. ಈ ಕಥೆಯ ಶೀರ್ಷಿಕೆ ಪರಿವರ್ತನೆ. ಇಂತಹ ಬಡತನವನ್ನು ಮಮತೆಯನ್ನು ಒಟ್ಟೊಟ್ಟಿಗೆ ಉಣಬಡಿಸುವ ಕಥೆಗಳನ್ನು ಪಾಠ ಕೇಳುವಾಗಷ್ಟೇ ಅಲ್ಲದೆ ನಂತರವೂ ನಾವು ಓದಿಕೊಳ್ಳುತ್ತಿದ್ದೆವು. ಇವೆಲ್ಲ ಪುಸ್ತಕ ಗೀಳಿನ ದಾರಿಗಳೆ.


ಆಮೇಲೆ ಅಜ್ಜಿ ಊರಿನಲ್ಲಿ ಅಮ್ಮನ ಐದನೇ ತರಗತಿವರೆಗಿನ ಪುಸ್ತಕಗಳ ಗಂಟೊಂದಿತ್ತು. ಅಲ್ಲಿಗೆ ಹೋದಾಗಲೆಲ್ಲ ಆ ಗಂಟನ್ನು ಬಿಚ್ಚಿ ಕನ್ನಡ ಪುಸ್ತಕ ತಿರುವಿ ಹಾಕುವುದರ ಸುಖ ಇಂದಿಗೂ ಹಿತ. ಆ ಪಾಠಗಳು ನಮ್ಮ ಬದುಕೇ ಆಗಿರುತ್ತಿದ್ದವು. ಗೆಳೆಯರೆಲ್ಲ ಸೇರಿ ಜೇನು ಹಿಡಿದ ಬಗ್ಗೆ ಪಾಠ ಸ್ವಾರಸ್ಯವಾಗಿದ್ದರೆ ಅದರ ಜತೆಜತೆಗೆ ಜೇನಿನ ವಿಧಗಳು, ಸಾಕುವ ಜೇನಾವುದು ಇಂತಹ ಮಾಹಿತಿಗೂ ನಮ್ಮ ಸ್ಮೃತಿಗೆ ಗೊತ್ತೇ ಆಗದಂತೆ ತಲುಪುತ್ತಿತ್ತು. ನಮ್ಮ ಹಬ್ಬಗಳು ಪಾಠದಲ್ಲಿ ಯುಗಾಧಿಗೆ ಕಟ್ಟುವ ತೋರಣದ ಚಿತ್ರಗಳನ್ನು ಬಣ್ಣಬಣ್ಣದ ಫೋಟೋಗಳ ಮೂಲಕ ವಿವರಿಸಲಾಗುತ್ತಿತ್ತು. ಹೀಗೆ ಕನ್ನಡ ಪುಸ್ತಕ ಪ್ರೀತಿಯನ್ನು ನಮ್ಮ ಪರಿಸರ ಮತ್ತು ಕನ್ನಡಕ್ಕಿರುವ ಆ ಲಾಲಿತ್ಯ ಹಾಗೂ ಇಲ್ಲಿನ ಸಹೃದಯಿ ಬರಹಗಾರರು ಹೆಚ್ಚಿಸಿದ್ದಾರೆ. ಇದರಂತೆಯೆ ಶಾಲೆಯಲ್ಲಿ ಒಂದು ವಾರಕ್ಕೆ ಒಂದರಂತೆಯೇ ಪಂಚತಂತ್ರ ಪುಸ್ತಕಗಳನ್ನು ಕೊಡುತ್ತಿದ್ದರು. ಅಲ್ಲಿನ ಕಥೆಗಳ ರೋಚಕತೆ ಅಷ್ಟಿಷ್ಟಲ್ಲ. ಓದುತ್ತಿದ್ದಂತೆಯೇ ನಮ್ಮ ಸ್ಮೃತಿ ಪಟಲದಲ್ಲಿ ಆ ಕಥೆ ದೃಶ್ಯ ರೂಪವಾಗಿ ಸಿನಿಮಾದಂತೆ ಮನದಲ್ಲಿ ಪ್ರಸಾರವಾಗ ತೊಡಗುತ್ತಿತ್ತು. ಪುಸ್ತಕ ಅಂದರೆ ಬರೀ ಹಾಳೆಗಳ ಗಂಟು ಅನ್ನುವುದನ್ನು ಮರೆಸಿದವು.


ಇದಾದ ನಂತರ ಕಾನೂರು ಹೆಗ್ಗಡಿತಿ ಕೈಸೇರಿತು. ಪುಸ್ತಕ ಪ್ರೀತಿ ಹೆಚ್ಚಾಯಿತು. ಆದರೆ ಯಾವುದೇ ಪುಸ್ತಕವಾದರೂ ನಾನು ಕೊಂಡು ಓದಿ ಇಷ್ಟವಾದ ಪುಸ್ತಕಕ್ಕಿಂತ ಯಾರಾದರೂ ಇದನ್ನು ಓದು ಚನ್ನಾಗಿದೆ ಎಂದು ಆ ಪುಸ್ತಕದ ಕೆಲ ಗುಣಸ್ವಭಾವ ಮತ್ತು ಪುಸ್ತಕದ ಹವಾಮಾನ ವಿವರಿಸಿದಾಗಲೇ ಇದು ನಾನು ಓದಲೇಬೇಕಾದ ಪುಸ್ತಕ ಅನ್ನಿಸುತ್ತಿತ್ತು. ಮತ್ತು ಒಮ್ಮೆ ಒಬ್ಬ ಲೇಖಕನ ಬರಹ ಇಷ್ಟವಾದರೆ ಆತನ ಇನ್ನುಳಿದ ಬರಹಗಳ ಕಡೆ ಗಮನ ಹೋಗುತ್ತಿತ್ತು. ತೇಜಸ್ವಿಯವರ ಕರ್ವಾಲೊ ಓದಿದ ಮೇಲೆ ಅವರ ಪರಿಸರದ ಕತೆಯನ್ನು ಓದಿ ಎಂದು ಯಾರೂ ನಮಗೆ ಹೇಳಬೇಕಿಲ್ಲ. ಹಾಗಾಗಿ ಯಾರು ಎಷ್ಟೇ ಹೇಳಿದರೂ ಇತಿಹಾಸಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ನಾನು ಓದಲಿಚ್ಚಿಸುವುದಿಲ್ಲ. ಆ ಪುಸ್ತಕದ ಹವಾಮಾನ ನನಗೆ ಇನ್ನೂ ರುಚಿಸಿಲ್ಲ. ಸೃಜನಾತ್ಮಕ ಬರವಣಿಗೆ, ಕಥೆ, ಕಾದಂಬರಿ, ಕವನ, ಆತ್ಮಚರಿತ್ರೆಗಳು ನಮ್ಮ ಬದುಕಿಗೆ ಎಲ್ಲೊ ಎಂದೊ ಒಂದು ಕಡೆ ಸಂಧಿಸುತ್ತವೆ. ನಮ್ಮವೇ ಆಗುತ್ತವೆ. ಬಿ ಎ ಓದುವಾಗ ಅಲ್ಲಿ ಇತಿಹಾಸ ಅನಿವಾರ್ಯವಿತ್ತು. ಪರೀಕ್ಷೆಗಾಗುವಷ್ಟು ಓದಿದ್ದರೂ ಅಲ್ಲಿ ಒಂದೇ ಇತಿಹಾಸವನ್ನು ಇಬ್ಬರು ಲೇಖಕರು ಅವರಿಗೆ ಅನುಕೂಲವಾಗುವಂತೆ ಬರೆದಿರುವುದು ಗೊತ್ತಾಯಿತು. ಇದರಿಂದ ಆ ಇಬ್ಬರೂ ಲೇಖಕರು ಕಾಣದ ಚರಿತ್ರೆಯನ್ನು ತಮ್ಮ ಗ್ರಹಿಕೆಗೆ ಬಂದ ಮಾಹಿತಿಯ ಮೇರೆಗೆ ಬರೆದಿರುತ್ತಾರೆ ಮತ್ತು ಅವರಿಗೂ ಕೆಲ ಲೇಖಕರ ಪುಸ್ತಕಗಳು ಸಹಾಯ ಮಾಡಿರುತ್ತವೆ ಎಂಬುದೂ ಗೊತ್ತಾಯಿತು. ಹಾಗೆ ನೋಡಿದರೇ ಆ ಹಿರಿಯ ಹಳೆಯ ಲೇಖಕರೂ ಒಂದೇ ಇತಿಹಾಸವನ್ನು ಬೇರೆ ಬೇರೆ ಬರೆದಿರುವ ಸಾಧ್ಯತೆಯಿದೆ. ಇದನ್ನೆಲ್ಲ ಅವಲೋಕಿಸದಷ್ಟು ಇಂದಿನ ನಮ್ಮ ಬದುಕಿಗೂ ಆ ದಂಡೆತ್ತಿ ಬಂದು ದಾಳಿ ಮಾಡುವ ಕಾಲದ ಬದುಕಿಗೂ ಅಜಗಜಾಂತರ ವ್ಯತ್ಯಾಸ ಇತ್ತು. ಹಾಗಾಗಿ ಕಲಾತ್ಮಕತೆ, ಸೃಜನ ಬರವಣಿಗೆ, ಅನುಭವ, ಸೃಷ್ಟಿ, ಬದುಕನ್ನು ತೆರೆಗಾಣಿಸುವ ಬರಹಗಳು ಆಪ್ತ. ಇದಿಷ್ಟೂ ನನ್ನ ವೈಯುಕ್ತಿಕ ಅಭಿಪ್ರಾಯ. ಇದು ಹೀಗೆ ಇರಬೇಕೆಂದೇನೂ ಇಲ್ಲ. ಕೆಲವರಿಗೆ ಇತಿಹಾಸವೆಂದರೆ ಬಹಳಾ ಇಷ್ಟ. ನನ್ನೊಬ್ಬ ಗೆಳೆಯನಿಗೆ ಇತಿಹಾಸ ಪುಸ್ತಕಗಳು ಮತ್ತು ಕಥೆ ಕಾದಂಬರಿಗಳು ಬಹಳಾ ಇಷ್ಟ. ಹಾಗಾಗಿ ಅಭಿಪ್ರಾಯ ಹೀಗೆ ಇರಬೇಕೆಂದೇನೂ ಇಲ್ಲ.


ಈಗ ಬಿchi ಅವರ ನನ್ನ ಭಯಾಗ್ರಫಿ ಓದುತ್ತಿದ್ದೆ. ಈ ಪುಸ್ತಕದ ಮುನ್ನುಡಿಯಲ್ಲಿ 'ಮೆಟ್ಟಿಲೇರುವ ಮುನ್ನ' ಬರಹವಿದೆ. ಇದು ಕೇವಲ ಮುನ್ನುಡಿಯಲ್ಲ. ಅಥವಾ ಆತ್ಮಕಥೆ ಬರೆವವನ ತನ್ನ ಗ್ರಂಥದ ಮತ್ತು ಗ್ರಹಿಕೆಯ ಮಾಹಿತಿಯಾಗಿ ನನಗೆ ಕಾಣಲಿಲ್ಲ. ಒಟ್ಟಾರೆಯಾಗಿ ಮನುಷ್ಯ ಆಲೋಚಿಸಬೇಕಾದ ಬಗೆಯನ್ನು ಈ ಸಾಲುಗಳು ತಿಳಿಸುತ್ತವೆ. ವ್ಯಕ್ತಿ ತನ್ನನ್ನು ತಾನು ಪ್ರಾಮಾಣಿಕನಾಗಿ ನೋಡುವ ತನ್ನ ತಪ್ಪುಗಳನ್ನು ತಾನೇ ಒಪ್ಪಿಕೊಳ್ಳುವ, ಪ್ರಾಮಾಣಿಕವಾಗಿ ಇನ್ನೊಬ್ಬರ ಅನಿಸಿಕೆಗಳನ್ನು ಕೇಳುವ ದೃಷ್ಟಿಕೋನದ ಪ್ರಬಂಧ ಈ ಮುನ್ನುಡಿ. ನೆನ್ನೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ಲಿನಲ್ಲಿ ಪ್ರಾಣೇಶ್ ಅವರು ಈ ಕೃತಿಯ ಬಗ್ಗೆ ಉಲ್ಲೇಖಿಸಿದ್ದರು. ಹೀಗೆ ಒಂದು ಪುಸ್ತಕದ ಬಗ್ಗೆ ಏಳುವ ಚರ್ಚೆಗಳು ಅದನ್ನು ಅನೇಕರು ಓದುವಂತೆ ಮಾಡುತ್ತವೆ. ಅನೇಕರು ಒಂದು ಪುಸ್ತಕವನ್ನು ಓದುವುದೇ ಭಾಷೆಯ ಬರಹಗಾರನ ಗುಣಮಟ್ಟಕ್ಕೆ ಸಾಕ್ಷಿ. ಹೆಚ್ಚು ಮಂದಿ ಓದದ ಪುಸ್ತಕಗಳಲ್ಲಿ ಸತ್ವವೇ ಇಲ್ಲ ಅನ್ನುವುದಲ್ಲ. ಹೆಚ್ಚು ಜನರನ್ನ ಓದಿಸಿಕೊಳ್ಳುವುದು ಓದಿದ ವ್ಯಕ್ತಿಯ ಅಭಿಪ್ರಾಯದಿಂದ ಅನ್ನುವುದು ನನ್ನ ಮಾತಿನ ಅರ್ಥ. ಹಿಂದೆ ಮೈಸೂರಿನ 'ನಾಗಾಭರಣ ಸಿನಿಮಾವರಣ' ಕಾರ್ಯಕ್ರಮದಲ್ಲಿ ಚಂದ್ರಶೇಖರ ಕಂಬಾರರ ಒಂದು ಮಾತು ನೆನಪಾಗುತ್ತದೆ. "ನನಗೆ ಜ್ಞಾನಪೀಠ ಬಂದುದರ ಒಂದು‌ ಮುಖ್ಯ ಉಪಯೋಗವೆಂದರೆ ಇನ್ನು ಮುಂದಾದರು ಜನ ನನ್ನ ಪುಸ್ತಕ ಓದುತ್ತಾರೆ". ಹೀಗೆ ಓದಿದವರು ಓದಿ ಮೌನವಾಗಿ ಉಳಿಯಬಾರದು‌. ಆ ಪುಸ್ತಕದ ಬಗ್ಗೆ ಹೇಳಿಕೊಳ್ಳಬೇಕು. ಓದಿಸಬೇಕು.


ಕಾನೂರು ಹೆಗ್ಗಡಿತಿ ಪುಸ್ತಕ ಅದು ನನಗೆ ಹಿಡಿಸಿದ ಪರಿಗೆ ಸಾಕಷ್ಟು ನನ್ನ ಸ್ನೇಹಿತರಿಗೆ ಓದಲು ಹೇಳಿದ್ದೆ.‌ ಕೆಲವರು ಓದಿ ಅಲ್ಲಿನ ಪಾತ್ರಗಳನ್ನು ಪ್ರಸಂಗಗಳನ್ನು ನನ್ನೊಂದಿಗೆ ಹಂಚಿಕೊಳ್ಳುವಾಗ ಆಗುವ ಆನಂದವೇ ಬೇರೆ. ಕೆಲ ಆಪ್ತರ ಮದುವೆಗಳಿಗೆ ಕಾನೂರು ಹೆಗ್ಗಡಿತಿ ಕೃತಿಯನ್ನೇ ಉಡುಗೊರೆಯಾಗಿ ನೀಡುತ್ತಿದ್ದೆ. ಓದುವ ಸಂಸ್ಕೃತಿ ಹೆಚ್ಚಾಗಬೇಕು. ಮನುಷ್ಯನಾಗುವ ಪ್ರಕಾರಗಳಲ್ಲಿ ಓದು ಮುಖ್ಯವಾದುದು.


- ಚಂದ್ರು ಎಂ ಹುಣಸೂರು

10 views0 comments

Comments


bottom of page