ಸು.ರಂ.ಎಕ್ಕುಂಡಿ ಅವರ ಕಥನ ಕವನ
- ಆಲೋಚನೆ
- Jul 1, 2020
- 2 min read
ಗಜೇಂದ್ರ ಮೋಕ್ಷ.
ಹಸಿರು ಬನದೊಳು ನೀಲ ತಿಳಿಗೊಳ,ತುಂಬಿ ಹೊಳೆವವು ತಾವರೆ.
ಹೂಬಿಸಿಲಿನಲಿ ಮೀನು ಮಿಂದವು,ಮೇಲೆ ತಂದವು ಬಿಳಿ ನೊರೆ.
ಸುತ್ತ ಕಾನನ ಮೌನ ನೆಲೆಸಿತು.ಗಾಳಿ ಜಡೆಗಳ ಬಾಚಿತು.
ಅಲೆವ ಮೋಡದ ಚೆಲುವು ನೋಡಿದ ಕಮಲವೇತಕೊ ನಾಚಿತು.
ಸೂರ್ಯ ಮೇಲಕೆ ಬಂದ ಮುಗಿಲಲಿ.ಬಿಸಿಲು ತಟ್ಟಿತು ಕಾಡಿಗೆ.
ಸಾಲು ಮರಗಳು ನೆರಳ ನಿಟ್ಟುಸಿರಿಟ್ಟು ತೆರೆದವು ನಾಲಿಗೆ.
ಬನದ ಮೌನವ ಕದಡಿ ಕೇಳಿತು.ಮುರಿದ ಟೊಂಗೆಯ ವೇದನೆ.
ತನ್ನ ತೊತ್ತುಳಿದಿರುವ ಭಾರಕೆ ಹಸಿರು ಬಳ್ಳಿಯ ಯಾತನೆ.
ಆನೆ ಬಂತೊಂದಾನೆ ಕಾಡಿಗೆ ತಿಳಿಗೊಳ ತೀರಕೆ.
ತೃಷೆಯ ತಣಿಸಲು ಕೊಳಕೆ ನುಗ್ಗಿತು ತಂಪು ನೀರ ವಿಹಾರಕೆ.
ಹೆಜ್ಜೆ ಹೆಜ್ಜೆಗೆ ಕೆಸರ ಕೆದಕುತ ನೀರ ಕದಡಿತು ಕೆಂಪಗೆ
ತುಂಬಿ ಸೊಂಡಿಲಿನಲ್ಲಿ ಓಕುಳಿಯಾಡಿಕೊಂಡಿತು ತಂಪಿಗೆ.
ಕೊಳಕೆ ಕೊಳ ಹೊಯ್ದಾಡಿ ನಿಂದಿತು ಮೀನು ದಿಕ್ಕೆಟ್ಟೋಡಿತು.
ಹೊದರ ಮರೆಯಲಿ ಕುಳಿತು ಮೊಸಳೆಯು ತುಳಿವ ಕಾಲನೆ ನೋಡಿತು.
ತೆರೆದು ಕರಗಸ ಬಾಯಿಚಾಚುತ ಕಾಲು ಗಪ್ಪನೆ ಹಿಡಿಯಿತು.
ಆಗ ನಿಲ್ಲಿಸಿತಾಟ ಸೊಂಡಿಲನೆತ್ತಿ ಚೀರುತ ನಡೆಯಿತು.
ಬನದ ಮೌನವ ಕದಡಿ ಕೇಳಿತು ಹಿಡಿದ ಕಾಲಿನ ವೇದನೆ.
ಮೊಸಳೆ ಹಿಡಿದೆಳೆದಿರಲು ಹಿಂದಕೆ ತೋಡಿಕೊಂಡಿತು ಯಾತನೆ.
ಕೊಳದ ತೀರಕೆ ನಡೆಯಲೆಳಸುತ ಆನೆ ನುಗ್ಗಿತು ಮುಂದಕೆ.
ಕಾಲ ಕೊರೆಯುವೆನೆಂದು ನುಡಿಯುತ ಮೊಸಳೆ ಜಗ್ಗಿತು ಹಿಂದಕೆ.
ತುಂಬಿ ಸೊಂಡಿಲು ನೀರ ತೂರಿತು ದಿಕ್ಕು ಮುಗಿಲಿನ ಹರವಿಗೆ.
ಕೂಗಿ ಕರೆಯಿತು ಬನದ ಗಜಗಳ"ಯಾರು ಬರುವರು ನೆರವಿಗೆ" .
ಮೌನವಣಕಿಸುತಿತ್ತು ಮೆಲ್ಲಗೆ ಕುಸಿಯ ತೊಡಗಿತು ಮೈಬಲ.
ಆನೆ ಕಾಲಿನ ರಕ್ತ ಕಲಕಿತು ಕೆಂಪುಗೂಡಿಸಿ ಕೊಳ ಜಲ.
ನೋವು ಕರೆಯಿತು,ಸಾವು ಕರೆಯಿತು,ಆನೆ ಕಂಬನಿ ಸುರಿಸಿತು.
ಕೊಳದ ಹೊಂದಾವರೆಯ ಕೀಳುತ ಕಮಲನಾಭನ
ಸ್ಮರಿಸಿತು." ಬಾರೊ ಕರುಣಾನಿಧಿಯೆ ಕೇಶವ, ಬಾರೊ ಶ್ರೀನಾರಾಯಣ.
ಬಾರೊ ಮಾಧವ ಸಲಹು ಬಾ,ಗೋವಿಂದ ಭಕ್ತ ಪರಾಯಣ.
ದೀನ ವತ್ಸಲ ವಿಷ್ಣು ಮಧುಸೂದನ ತ್ರಿವಿಕ್ರಮ ವಾಮನ.
ಬಾರೊ ಶ್ರೀಧರ ಶ್ರೀ ಹೃಷಿಕೇಶ ಪ್ರಣತರಘುನಾಶನ.
ಪದ್ಮನಾಭನೆ ಬಾರೊ ದಾಮೋದರನೆ ಬಾ ಸಂಕರ್ಷಣ.
ವಾಸುದೇವನೆ ಬಾರೊ ಬಾ ಪ್ರದ್ಯುಮ್ನ ಸಜ್ಜನ ಪೋಷಣ.
ಶುದ್ಧ ಶ್ರೀ ಅನಿರುದ್ದ ಬಾರಯ್ಯ ಶ್ರೀ ಪುರುಷೋತ್ತಮ.
ಬಾ ಅಧೋಕ್ಷಜ ಬೇಗ ಬಾ ಲಕ್ಷ್ಮೀನೃಸಿಂಹ ಪರಾಕ್ರಮ.
ಅಚ್ಯುತನೆ ಬಾ ಶ್ರೀ ಜನಾರ್ದನ ಬಾರೊ ಸ್ವಾಮಿ ಉಪೇಂದ್ರನೆ.
ಬಾರೊ ಶ್ರೀ ಹರಿ ಕರುಣಿಗಳ ದೊರೆ,ಕೃಷ್ಣ ಯದುಕುಲ ಚಂದ್ರನೆ.
ಆನೆ ಕಂಬನಿ ಸುರಿದು ಸೊಂಡಿಲ ಹೂವ ಮುಗಿಲೊಳು ಹಾರಿಸಿ.
ಕೂಗಿ ಕರೆದ ಗಜೇಂದ್ರ ದೈನ್ಯದಿ,ಕೊಳದ ತಾವರೆ ಏರಿಸಿ.
"ಶರಣು ಶ್ರೀಹರಿ ಕಮಲನಯನನೆ ಶರಣು ವಿಷ್ಣು ಚತುರ್ಭುಜ.
ಶರಣು ಕೌಸ್ತುಭಧಾರಿ ಕೃಷ್ಣಮುರಾರಿ ಹರಿ ಗರುಡ ಧ್ವಜ".
ಆನೆಯಂತ:ಕರಣ ನೀಡಿದ ಹೂವ ಕೊಂಡನು ಶ್ರೀಹರಿ.
ಗರುಡವಾಹನ ಬಂದ ಶ್ರೀ ಗೋವಿಂದ ಚಕ್ರವ ಧರಿಸುತ.
ಅಭಯ ಹಸ್ತವ ನೀಡುತ,ಕುಂಜರ ಸುರಿದ ಕಣ್ಣೀರೊರಸುತ.
ಮೊಸಳೆಯನು ಕತ್ತರಿಸಿ ಕೊಂದನು ಅಪ್ಪಿಕೊಂಡು ಗಜೇಂದ್ರನ.
ಕಮಲಕೊಲಿಯುವ ಕಮಲನಾಭನು,ವರದರಾಜ ಮಹೇಂದ್ರನು.
ಹೂವನರ್ಪಿಸಿದವರ ಸಲುಹಿದನೆಂಥ ಕರುಣಿಯೊ ದೇವನು.
ಅಂತರಂಗದ ಹೂವನಿತ್ತರೆ ತನ್ನನೇ ತಾನೀವನು.
-ಸು.ರಂ.ಎಕ್ಕುಂಡಿ.

ಹೊಸಗನ್ನಡ ಸಾಹಿತ್ಯದ ಪ್ರಮುಖ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ೧೯೨೩ ನೆ ಇಸ್ವಿಯಲ್ಲಿ ಇಂದಿನ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿನ ಎಕ್ಕುಂಡಿಯಲ್ಲಿ ಜನಿಸಿದರು.ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದ ಆನಂದಾಶ್ರಮ ಹೈ ಸ್ಕೂಲಿನಲ್ಲಿ ಶಿಕ್ಷಕರಾಗಿ,ಮುಖ್ಯಾಧ್ಯಾಪಕರಾಗಿ ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು.ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಅವರು ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿದ್ದರು.ಬಂಕಿಕೊಡ್ಲದಂತಹ ಗ್ರಾಮೀಣ ಪರಿಸರದಲ್ಲಿದ್ದು ತಮ್ಮ ಕವಿತೆ,ಕತೆ,ಕಾದಂಬರಿ, ಜೀವನ ಚರಿತ್ರೆ ಮತ್ತು ಅನುವಾದಗಳ ಮೂಲಕ ಕನ್ನಡಿಗರ ಗಮನವನ್ನು ಸೆಳೆದವರು ಸು.ರಂ. ಎಕ್ಕುಂಡಿಯವರು.ಅವರು ೧೯೯೫ ನೆ ಇಸ್ವಿಯಲ್ಲಿ ನಿಧನರಾದರು.
ಕಾವ್ಯ: ಆನಂದ ತೀರ್ಥರು,ಸಂತಾನ,ಹಾವಾಡಿಗರ ಹುಡುಗ,ಮತ್ಸ್ಯಗಂಧಿ,ಬೆಳ್ಳಕ್ಕಿಗಳು,ಗೋಧಿಯ ತೆನೆಗಳು.
ಕತೆ: ನೆರಳು. ಕಾದಂಬರಿ:ಪ್ರತಿಬಿಂಬಗಳು ಮತ್ತು ಎರಡು ರಷ್ಯನ್ ಕಾದಂಬರಿಯ ಅನುವಾದಗಳು.
ವ್ಯಕ್ತಿ ಚಿತ್ರ: ಪು.ತಿ.ನರಸಿಂಹಾಚಾರ್
ಪ್ರಶಸ್ತಿ: ಬಕುಲದ ಹೂವುಗಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಎಡೆಮಿ ಪ್ರಶಸ್ತಿ.ಮತ್ಸ್ಯಗಂಧಿ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,ಸೋವಿಯತ್ ಲ್ಯಾಂಡ ನೆಹರು ಪ್ರಶಸ್ತಿ.
ಮಾಧ್ವ ಮತ್ತು ಮಾರ್ಕ್ಸವಾದವನ್ನು ತಮ್ಮ ಬರವಣಿಗೆಯಲ್ಲಿ ಅನುಸಂಧಾನ ಮಾಡಿದ,ಬಡ ಬಗ್ಗರ ಬವಣೆಯನ್ನು ಕಾವ್ಯದಲ್ಲಿ ಕಂಡರಿಸಿದ ತನ್ಮಯತೆಯ ಕವಿ ಎಕ್ಕುಂಡಿಯವರ ಗಜೇಂದ್ರ ಮೋಕ್ಷ ಕಥನ ಕವನ ನಿಮ್ಮ ಓದಿಗಾಗಿ.
'ಗಜೇಂದ್ರ ಮೋಕ್ಷ' ಮತ್ತೆ ಮತ್ತೆ ಓದಿಸಿಕೊಳ್ಳುವ ಕಥನ ಕಾವ್ಯ. ಕೊಳದಲ್ಲಿದ್ದ ಮೊಸಳೆಯೊಂದು ಆನೆಯ ಕಾಲು ಹಿಡಿದಾಗ ಅದು ಅನುಭವಿಸುವ ಸಂಕಟ ಕರುಳು ಹಿಂಡುತ್ತದೆ, ರಾಗ ಹಾಕಿ ಹಾಡುವಂತಿರುವ ಇದರ ಅದ್ಭುತ ಲಯ ತುಂಬಿದ ಸಾಲುಗಳು ಕವಿ ಎಕ್ಕುಂಡಿಯವರ ಕಾವ್ಯದ ಅಪ್ಪಟ ಮಾರ್ಧವತೆಯನ್ನು ಪರಿಚಯಿಸುತ್ತದೆ, ಆಯ್ಕೆ ಸೂಕ್ತವಾಗಿದೆ ಸರ್.