top of page

ಸುಮ್ಮನೇ ದಕ್ಕಿದ್ದಲ್

ಖುದ್ದು ಕುಲುಮೆಯೊಳಗೆ ಧುಮುಕಿ, ತಾನೇ ಬೆಂದು ತನ್ನದೇ ಬೆವರ ಬಸಿದು ಎರಕ ಹೊಯ್ದ ಅಪರಂಜಿ ಚಿನ್ನವಿದು.


ಎಲ್ಲವೂ ಅಂದುಕೊಂಡಂತೇ ನಡೀತಿತ್ತು.

ಆಗಷ್ಟೇ ಕಾಮನ್ ವೆಲ್ತ್ ಹಾಗೂ ಏಷ್ಯನ್ ಗೇಮಿನಲ್ಲಿ ಬಂಗಾರದ ಪದಕ ಗೆದ್ದಿದ್ದ, ಮುಂದಿನ ವರ್ಷ ದೋಹಾದಲ್ಲಿ ನಡೆಯಲಿದ್ದ ವಿಶ್ವ ಚಾಂಪಿಯನ್ ಶಿಪ್ಪಿಗೂ ಅರ್ಹತೆ ಪಡೆದಿದ್ದ.

ಅದಕ್ಕಾಗಿ ಕಠಿಣ ತಯಾರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದವನಿಗೆ ಮೊದಲ ಬಾರಿ ಕಾಣಿಸಿಕೊಂಡಿತ್ತು ನೋವು.

ಅದು 2018ರ ನವಂಬರ್ ತಿಂಗಳು.


ಪ್ರತೀಬಾರಿ ಜಾವಲಿನ್ ಎಸೆದಾಕ್ಷಣ ಮೊಣಕೈನಲ್ಲಿ ಛಳಕ್ಕಂತ ಏನೋ ಕಳಚಿಕೊಂಡಂತೆ ನೋವು ಕಾಣಿಸಿಕೊಳ್ತಿತ್ತಾದರೂ, ಈ ವರ್ಷ ಸ್ಪರ್ಧೆಗಳೂ, ಪ್ರಾಕ್ಟೀಸ್‌ಗಳೂ ಜಾಸ್ತಿಯಾಯ್ತಲ್ಲ ಅದಕ್ಕೇ ಇರಬಹುದು ಅಂತ ಇಗ್ನೋರ್ ಮಾಡಿ ಪ್ರಾಕ್ಟೀಸ್ ಕಂಟಿನ್ಯೂ ಮಾಡಿದವ್ನಿಗೆ ನಂತರದಲ್ಲಿ ನೋವು ಅದೆಷ್ಟು ಉಲ್ಬಣವಾಗ್ತಾ ಹೋಯ್ತೆಂದರೆ, 2019ರ ಏಪ್ರಿಲ್ ಟೈಮಿಗೆ ಜಾವಲಿನ್ ಎಸೆಯೋದಿರಲಿ, ಕೈಯಿಂದ ಅದನ್ನು ಮೇಲಕ್ಕೆ ಎತ್ತೋಕೂ ಆಗದಿರೋಷ್ಟು ವಿಪರೀತವಾಗಿ ಮೊಣಕೈ ಸರ್ಜರಿ ಮಾಡೋದು ಅನಿವಾರ್ಯವಾಗಿ ಬಿಡ್ತು.

ಅಲ್ಲಿಗೆ ಆ ವರ್ಷ ವಿಶ್ವ ಚಾಂಪಿಯನ್ ಆಗೋ ಕನಸು ಬುಟ್ಟಿಗೆ ಸೇರಿತ್ತು.


ಹಾಗಂತ...

ಸೋಲೊಪ್ಪಿಕೊಂಡು ಕೈ ಕಟ್ಟಿ ಕೂರೋ ಆಸಾಮಿ ಅಲ್ವಲ್ಲ.

ಹೇಳಿ ಕೇಳಿ ಭಾರತೀಯ ಸೇನೆಯ ಮನುಷ್ಯ.

ಇದು ಮಿಸ್ ಆದ್ರೇನಾಯ್ತು.

ಮುಂಬರೋ ಓಲಂಪಿಕ್ ಕ್ರೀಡೆಯಲ್ಲಾದ್ರೂ ಸಾಧಿಸೋ ಕನಸಿನೊಂದಿಗೆ ಮತ್ತೆ ಪ್ರಾಕ್ಟೀಸಿಗೇನೋ ಇಳಿದುಬಿಟ್ಟ, ಆದರೆ ಸರ್ಜರಿ ಆಗಿದ್ದ ಕಾರಣ ಮುಂದಿನ ಒಂದಿಷ್ಟು ತಿಂಗಳು ಜಾವಲಿನ್ ಎಸೆಯೋ ಹಾಗೇ ಇರಲಿಲ್ಲ.

ಹಾಗಂತ ಸುಮ್ನೆ ಕೂರ್ಲಿಲ್ಲ. ಜಾವಲಿನ್ ಎಸೆಯೋಕಾಗದಿದ್ರೇನು? ದೇಹಕ್ಕೆ ಜಡ್ಡು ಹಿಡಿಯೋಕ್ ಬಿಡಬಾರದೆಂದು ದೇಹ ದಂಡಿಸೋ ಕಸರತ್ತುಗಳಿಗೆ ತೊಡಗಿಸಿಕೊಂಡು, ಕ್ರಮೇಣ ಮೊದಲಿನ ಲಯಕ್ಕೆ ಬಂದವನೇ...

ನಾನೀಗ ತಯಾರಾಗಿದ್ದೇನೆ, ನಂಗೆ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡೀ, ನಾನೀಗ ಅರ್ಹತೆ ಪಡೀಬೇಕಿದೆ ಓಲಂಪಿಕ್ಸಿಗೆ ಅಂದ್ರೆ,

ಜಾವಲಿನ್ ಎಸೆಯೋಕೇ ಆಗ್ತಿಲ್ಲ ನಿಂಗಿನ್ನೂ, ಇನ್ನೆಲ್ಲಿಯ ಪರ್ಮಿಷನ್ನು ಅಂತ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಈತನ ಅರ್ಜಿಯನ್ನು ತಿರಸ್ಕರಿಸಿ ಬಿಟ್ಟಿತ್ತು.


ಮೇಲೆ ಹೇಳಿದ್ನಲ್ಲ...

ಸೇನೆಯ ಮನುಷ್ಯ, ಸೋಲೊಪ್ಪಿಕೊಳ್ಳೋ ಆಸಾಮಿಯಲ್ಲ ಅಂತ.

ಇಲ್ಲಿದ್ರೆ ಆಗೋ ಕೆಲಸವಲ್ಲ ಇದು ಅಂತ ಗೊತ್ತಾಗ್ತಿದ್ದ ಹಾಗೆಯೇ, ತಾನು ಗಾಯಾಳುವಾಗಿದ್ದಾಗ ತರಬೇತಿಗಾಗಿ ಸೇರಿದ್ದ ಸೌಥ್ ಆಫ್ರಿಕಾದ ಫ್ಲೈಟ್ ಹತ್ತಿದವನೇ, ಒಂದಿಷ್ಟು ಕಠಿಣ ತರಬೇತಿಗಳ ನಂತರ ಅಲ್ಲಿನ ACNW ಲೀಗಿನಲ್ಲಿ ಭಾಗವಹಿಸಿ 87.86m ದೂರ ಎಸೆಯೋ ಮುಖಾಂತರ ಓಲಂಪಿಕ್ಸ್‌ಗೆ ಕ್ವಾಲಿಫೈ ಆಗಿಯೇ ಬಿಟ್ಟಿದ್ದ.


ಓಲಂಪಿಕ್ ಗೆ ಟಿಕೆಟ್ ಸಿಕ್ಕಿತ್ತು.

ಪಂದ್ಯಾವಳಿಗೆ ಇನ್ನು ಕೇವಲ ಆರು ತಿಂಗಳಿತ್ತು, ನೋವಿನ್ನೂ ಸಂಪೂರ್ಣ ಗುಣವಾಗದೆ ಆಗಾಗ ತನ್ನ ಇರುವನ್ನು ತೋರಿಸಿಕೊಳ್ಳುತ್ತಲೇ ಇತ್ತಾದ್ರೂ, ಆ ಸಮಯದಲ್ಲಿ ಕಾಣಿಸಿಕೊಂಡ ಕರೋನಾ ದಿಂದಾಗಿ ಪಂದ್ಯಾವಳಿಗಳು 2021ಕ್ಕೆ ಪೋಸ್ಟ್‌ಪೋನ್ ಆಗೋ ಮುಖಾಂತರ, ತಯಾರಿಗಾಗಿ ಮತ್ತೊಂದು ವರ್ಷ ಕಾಲಾವಕಾಶ ಲಭಿಸಿತ್ತು.

ಸಮಸ್ಯೆಗಳೆಲ್ಲಾ ಇಲ್ಲಿಗೆ ಕೊನೆಯಾಗಿ ಎಲ್ಲವೂ ಮತ್ತೆ ಮೊದಲಿನ ಹಳಿಗೆ ಬಂದು ನಿಂತಿದೆ ಅಂದುಕೊಂಡಿದ್ದಷ್ಟೇ.


ಪ್ರಾಕ್ಟೀಸಿಗಾಗಿ ಟರ್ಕಿಗೆ ಹೋದ್ರೆ,

ಕರೋನಾ ಕಾರಣ ನೀಡಿ ವಾಪಸ್ ಭಾರತಕ್ಕೆ ಕಳಿಸ್ತಾರೆ. ಮರಳಿ ಬಂದವನು ಹದಿನಾಲ್ಕು ದಿನ ಕ್ವಾರಂಟೈನ್ ಮುಗಿಸಿ ಪಟಿಯಾಲದ ಕ್ರೀಡಾಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರಕ್ಕೆ ಹೋದ್ರೆ, ಲಾಕ್ ಡೌನ್ ಕಾರಣದಿಂದಾಗಿ ಈಗ ಪ್ರಾಕ್ಟೀಸ್ ಮಾಡೋ ಹಾಗಿಲ್ಲ, ಕಾರ್ಯಾಗಾರ ಮುಂದೂಡಲಾಗಿದೆ ಅಂತಾರೆ.

ಇವೆಲ್ಲಾ ಮುಗಿದು ಮತ್ತೆ ಶುರುವಾದ ಕಾರ್ಯಾಗಾರದಲ್ಲಿ ಪ್ರಾಕ್ಟೀಸಿಗೆ ತೊಡಗಿಸಿಕೊಂಡ್ರೆ‌...

ಸೆಪ್ಟೆಂಬರ್ ತಿಂಗಳ ಅದೊಂದು ದಿನ, ಪ್ರಾಕ್ಟೀಸ್ ಮಾಡುತ್ತಿದ್ದವನು ಕಾಲು ಸ್ಲಿಪ್ ಆಗಿ ಅದ್ಯಾವ ಪರಿ ಬಿದ್ದನೆಂದರೆ, Ankle ಸಂಪೂರ್ಣ ಟ್ವಿಸ್ಟ್ ಆಗಿ ಓಡೋದಿರ್ಲಿ ಹೆಜ್ಜೆಯೂರಿ ನಡೆಯೋದೇ ಅಸಾಧ್ಯವಾಗಿ ಮತ್ತೆ ಆಸ್ಪತ್ರೆ ಸೇರಿಕೊಂಡು ಬಿಡ್ತಾನೆ.

ಓಲಂಪಿಕ್ಸ್‌ನಲ್ಲಿ ಪದಕ ಬಿಡೀ,

ಫಿಟ್ನೆಸ್ ಟೆಸ್ಟ್ ಪಾಸ್ ಆಗಿ ಅಲ್ಲಿಗೆ ಫ್ಲೈಟ್ ಹತ್ತೋದೂ ಕೂಡಾ ಡೌಟು ಅಂತ ಮಾತಾಡಿಕೊಂಡ್ರು ಎಲ್ಲರೂ,

ಇವನೊಬ್ಬನನ್ನು ಹೊರತುಪಡಿಸಿ.


2018ರಲ್ಲಿ...

ಬಿಲ್ಲುಗಾರಿಕೆಗೆ ಅನಿವಾರ್ಯವಾದ ಏಕಲವ್ಯನ ಹೆಬ್ಬೆರಳೇ ಕತ್ತರಿಸಿಹೋದಂತೆ,

ಜಾವಲಿನ್ ಎಸೆಯೋಕೆ ತೀರಾ ಅಗತ್ಯವಾದ ಮೊಣಕೈಗೇ ಸಮಸ್ಯೆ ಶುರುವಾಗಿ,

2019ರ ಇಡೀ ವರ್ಷ ಮೊಣಕೈ ಸರ್ಜರಿಯಿಂದಾಗಿ ಗಾಯಾಳುವಾಗಿಯೇ ಉಳಿದು, 2020ರಲ್ಲಿ ಕರೋನಾ ಲಾಕ್ ಡೌನು ಅಂತಾನೇ ಅರ್ಧ ವರ್ಷ ಕಳೆದು, ಕೊನೆಗೂ ಎಲ್ಲೋ ಒಂದಿಷ್ಟು ಪ್ರಾಕ್ಟೀಸ್ ಮಾಡುವಂತಾಗಿ, ಇನ್ನೇನು ಮೊದಲಿನ ಫಾರ್ಮಿಗೆ ಬರ್ತಿದಾನೆ ಅಂದುಕೊಳ್ಳುವಷ್ಟರಲ್ಲಿ ಮತ್ತೆ ಕಾಲಿಗೆ ಏಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ.

ಎಲ್ಲಿಂದ ಶುರುವಾಗಿತ್ತೋ, ಮತ್ತೆ ಅಲ್ಲಿಗೇ ಬಂದು ನಿಂತಿತ್ತು.


ಪ್ರತೀಬಾರಿಯೂ...

ಇನ್ನೇನು ವೃತ್ತಿ ಜೀವನವೇ ಮುಗಿದುಹೋಯ್ತು ಎಂಬಂತಹ ತೀವೃತರವಾದ ಘಟನೆಗಳು ಸಂಭವಿಸುತ್ತಿದ್ದರೂ,

ಏನೂ ಆಗಿಯೇ ಇಲ್ಲವೆಂಬಂತೆ ಮೈಕೊಡವಿ ಮೇಲೆದ್ದು ನಿಂತು,

ತನ್ನನ್ನು ಅನುಮಾನದಿಂದ ನೋಡುತ್ತಿದ್ದ, ಇನ್ನೇನ್ ಮಾಡೋಕಾಗತ್ತೆ ಇವ್ನ್ ಕೈಲಿ ಅಂತ ಆಡಿಕೊಳ್ಳುತ್ತಿದ್ದವರನ್ನಷ್ಟೇ ಅಲ್ಲದೆ, ತನ್ನನ್ನು ಸದಾ ಪರೀಕ್ಷೆಗೆ ಒಡ್ಡುತ್ತಿದ್ದ ದೇವರೂ ಸೋಲೊಪ್ಪಿ ಶರಣಾಗುವಂತೆ ಮಾಡಿ,

ಓಲಂಪಿಕ್ಸ್ ನಲ್ಲಿ ಇಲ್ಲಿಯವರೆಗೆ ಎಂದೂ ಕಾಣದ ಚಮಾತ್ಕಾರವೊಂದನ್ನು ನಿಜವಾಗಿಸಿ,

ಭಾರತಕ್ಕೆ ಮೊದಲ ಬಾರಿ ಅತ್ಲೆಟಿಕ್ಸ್‌ನಲ್ಲಿ ಬಂಗಾರದ ಪದಕವನ್ನು ಗೆದ್ದು ಕೊಟ್ಟಿದ್ದಾನೆ.


ಬದುಕಿನ ಯುದ್ಧದಲ್ಲೂ ಒಂದಿನಿತೂ ಹಿಂಜರಿಯದೆ ಪ್ರತೀಕ್ಷಣವೂ ದಿಟ್ಟೆದೆಯಿಂದ ಹೋರಾಡುತ್ತಲೇ ಇರುವ ಅಪ್ರತಿಮವೀರ

ಸುಬೇದಾರ್ ನೀರಜ್ ಚೋಪ್ರಾ. ❤


✍🏻 ಸುಧೀರ್ ಸಾಗರ್.

16 views0 comments

Comments


bottom of page