ಸಾಮಾನ್ಯ ವಿಷಯವನ್ನೂ ಅಸಾಮಾನ್ಯವನ್ನಾಗಿಸಿದ ನಿರೂಪಣೆ'ಜೀವನಪರ್ಯಂತ ಸಭ್ಯತೆಯ ಸೋಗಿನಲ್ಲಿ ಅನಾಗರಿಕರಾಗಿರುವರೊಡನೆ ವ್ಯವಹರಿಸುವುದು ಭೀಕರವಾಗಿಯೇ ಇರುತ್ತದೆ.' ಇದು ಆ ದಿನ' ಕಾದಂಬರಿಯಲ್ಲಿ ಶೂದ್ರ ಶ್ರೀನಿವಾಸರವರು ಈ ಮಾತನ್ನು ಅದೆಂಥಹ ತಿರುವಿನಲ್ಲಿ ಹೇಳಿದ್ದಾರೆಂದರೆ ಆ ಮಾತನ್ನು ಓದುತ್ತಿರುವಂತೆಯೇ ಬದುಕಿನ ಭೀಕರತೆಗಳೆಲ್ಲ ಕಣ್ಣೆದುರು ಸಾಲುಗಟ್ಟಿ ನಿಂತಂತಾಗುತ್ತದೆ. ಅಂದಹಾಗೆ ಇತ್ತೀಚಿನ ದಿನಗಳ ಕಾದಂಬರಿಗಳನ್ನು ಓದುವಾಗಲೆಲ್ಲ ಮಾಮೂಲಿ ನಿರೂಪಣೆಯ ಶೈಲಿ, ಅದದೇ ವಿಷಯ ವಸ್ತುಗಳನ್ನು ಓದಿ ಬೇಸರ ಹುಟ್ಟಿಬಿಡುವಾಗಲೇ 'ಆ ದಿನ' ತನ್ನ ನಿರೂಪಣಾ ಶೈಲಿಯಿಂದಲೇ ಮನಸ್ಸನ್ನು ಸೆಳೆಯುತ್ತದೆ. ಹಾಗೆಂದು ಇಲ್ಲಿನ ವಿಷಯ ಹೊಸದು ಎಂದು ಕೊಳ್ಳಬೇಕಿಲ್ಲ. ಇಡೀ ಕಾದಂಬರಿಯಲ್ಲಿ 'ಆ ದಿನ' ಎಂದು ಪದೇ ಪದೇ ಬರುವಂತಹ ಶಬ್ಧ ಭೀಕರತೆಯನ್ನೂ, ಆ ದಿನ ಏನಾಗಿತ್ತು ಎಂಬ ಕುತೂಹಲವನ್ನೂ ಕೊನೆಗೆ ಒಂದು ಹಂತದಲ್ಲಿ ಹೀಗೆಯೇ ಆಗಿರಬಹುದೇನೋ ಎಂಬ ಅನುಮಾನವನ್ನು  ಹುಟ್ಟಿಸುತ್ತದೆಯಾದರೂ ಕಾದಂಬರಿಯ ಕೊನೆಯವರೆಗೂ 'ಆ ದಿನ' ಏನಾಗಿತ್ತು ಎಂಬ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಕಾದಂಬರಿಯ ಕೊನೆಯಲ್ಲಿ ಕೂಡ ಕಥಾ ನಾಯಕಿ ಈ ಅನುಭವವನ್ನು ನೇರವಾಗಿ ಹೇಳದೇ ತನ್ನ ಸ್ನೇಹಿತೆಯೊಬ್ಬಳಿಗೆ ಹೀಗಾಗಿತ್ತು ಎಂದು ನಿರೂಪಿಸುತ್ತಾಲೆಯೇ ಹೊರತೂ ನೇರವಾಗಿ ಅದು ತನ್ನದೇ ಅನುಭವ ಎಂದು ಹೇಳಿಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಾವು ಮಾಮೂಲಿಯಾಗಿ ಕೇಳುವ, ಸಹೋದರನಿಂದ ಅತ್ಯಾಚಾರ, ಪಕ್ಕದ ಮನೆಯವನಿಂದ ಹಸುಗೂಸಿನ ಮೇಲೆ ಬಲಾತ್ಕಾರ, ಶಿಕ್ಷಕನಿಂದಲೇ ವಿದ್ಯಾರ್ಥಿನಿಯರ ಮೇಲೆ ಅಸಭ್ಯ ವರ್ತನೆ. ಹೆತ್ತ ತಂದೆಯೇ ಮಗಳನ್ನು ಕೂಡಿಹಾಕಿ ಅತ್ಯಾಚಾರ ಮುಂತಾದವುಗಳನ್ನು ಪದೇಪದೇ ನೊಡುತ್ತಿರುತ್ತೇವೆ. ಇಲ್ಲಿ ಕೂಡ ತಾಯಿಯ ಪ್ರಿಯಕರ ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ಮಗಳ ಮೇಲೆ ದೌರ್ಜನ್ಯವೆಸಗಿಬಿಡುತ್ತಾನೆ. ದಿನನಿತ್ಯದ ಪೇಪರ್‌ನಲ್ಲಿ, ಟಿವಿ ಛಾನಲ್‌ಗಳಲ್ಲಿ ಇಂತಹ ವಿಷಯಗಳು ಈಗ ಮಾಮೂಲಿ ಎನ್ನಿಸಿಬಿಟ್ಟಿರುವಾಗ ಶೂದ್ರ ಶ್ರೀನಿವಾಸರು ಈ ವಿಷಯವನ್ನಿಟ್ಟು ಕಾದಂಬರಿ ಬರೆಯಲು ಹೊರಟರೇ ಎಂದು ಕೇಳಬಹುದು. ಆದರೆ ಕಾದಂಬರಿಯ ಶ್ರೇಷ್ಠತೆ ಇರುವುದೇ ಇಲ್ಲಿನ ನಿರೂಪಣೆಯಲ್ಲಿ.


   ಕಾದಂಬರಿಕಾರರು ತಮ್ಮ ಮಾತುಗಳಲ್ಲಿ ಹೇಳಿರುವ ವಿಮಾನಯಾನದ ಕಥೆ, ಹಾಗೂ ಅಲ್ಲಿ ಅವರು ಭೇಟಿ ಮಾಡಿದ ವ್ಯಕ್ತಿಗಳು ಕಾದಂಬರಿಯಲ್ಲಿಯೂ ಪಾತ್ರಗಳಾಗಿ ನಿರೂಪಿಸುತ್ತಾರೆ. ಮನುಷ್ಯನ ಬದುಕಿನ ಸಂಕೀರ್ಣತೆಯನ್ನು ಬಿಚ್ಚಿಡುವ ಇಲ್ಲಿನ ಪಾತ್ರಗಳು ಒಂದೊಂದು ಕಾಲದಲ್ಲಿ ಒಂದೊಂದು ತರಹದ ಭಾವ ವಿಕಾರಗಳಲ್ಲಿ, ಭಾವ ವೈವಿಧ್ಯಗಳಲ್ಲಿ ನಮ್ಮೆಉರಿನ ರಂಗ ಮಂಚಕ್ಕೆ ಬರುತ್ತವೇ. ಥೇಟ್ ಕಾದಂಬರಿಯಲ್ಲಿ ಬರುವ ಬೆಕ್ಕಿನಂತೆ. ಆದರೆ ರಂಗಮಂಚದಲ್ಲಿ ತಮ್ಮ ಪಾತ್ರ ಮುಗಿದ ನಂತರ ಕೆಲವು ಪಾತ್ರಗಳ ನಿಜಮುಖದ ಅನಾವರಣವೂ ಆಗುತ್ತದೆ.


   ಇಲ್ಲಿ ಕಥಾನಾಯಕಿ ಒಬ್ಬಳು ಅಧ್ಯಾಪಕಿ. ಕೇವಲ ಪಠ್ಯದಲ್ಲಿರುವುದನ್ನು, ಅವಧಿಗೆ ತಕ್ಕಂತೆ ತಯಾರಿಸಿಕೊಂಡು ಬಂದು

ಸಿಲೇಬಸ್ ಮುಗಿಸುವ ಕಾಟಾಚಾರದ ಅಧ್ಯಾಪಕಿಯಲ್ಲ. ಸಾಹಿತ್ಯವನ್ನು ಮಕ್ಕಳೆದುರು ತೆರೆದಿಡುವ ಅಧ್ಯಾಪಕಿ. ಅಧ್ಯಾಪನ ವೃತ್ತಿಗೆ ಅಗತ್ಯವಿರುವ ಎಲ್ಲ ಓದು ಇವಳ ಬೆನ್ನಿಗಿದೆ. ಚಿಕ್ಕಂದಿನಲ್ಲಿಯೇ ತಂದೆ ನೀಡಿದ ಸಂಸ್ಕಾರ ಇದು. ಅಪಾರವಾದ ಓದು ಆಕೆಯನ್ನು ಜೀವನದ ಕೊಪ್ಪರಿಗೆಯಲ್ಲಿ ಬೇಯಿಸಿ ಹದವಾದ ಬೆಲ್ಲವನ್ನಾಗಿಸಿದೆ. ಎಲ್ಲವನ್ನೂ ಸ್ತಿತಿಪ್ರಜ್ಞತೆಯಿಂದ ನೋಡುವಂತಹ ಮನೋಭಾವವನ್ನು ಬೆಳೆಸಿದೆ. ತನ್ನ ಅಪಾರವಾದ ಓದು, ಪಾಶ್ಚಾತ್ಯ ಸಾಹಿತ್ಯದ ಆಳವಾದ ಅಧ್ಯಯನ, ಭಾರತೀಯ ಸಾಹಿತ್ಯದ ಕುರಿತಾದ ಜ್ಞಾನ, ಕನ್ನಡ ಸಾಹಿತ್ಯದ ಸಮಗ್ರ ಪರಿಚಯ ಅವಳನ್ನು ಉಳಿದೆಲ್ಲ ಅಧ್ಯಾಪಕರಿಂದ ಪ್ರತ್ಯೇಕವಾಗಿಸಿದೆ. ಮಕ್ಕಳಿಗೆ ಬೇಕಾದ ಓದಿನ ಮಹತ್ತನ್ನು ತಿಳಿಸುವ, ಅವರ ಜ್ಞಾನದ ಬೇಡಿಕೆಗೆ ತಕ್ಕಂತೆ ತನ್ನ ಪಾಠವನ್ನು ಆಗಿಂದಾಗ್ಗೆ ರೂಢಿಸಿಕೊಳ್ಳುವ ಕಲೆಗಾರಿಕೆಯೂ ಆಕೆಗಿದೆ. ಅದ್ಭುತವಾದ ಮಾತುಗಾರಿಕೆಯಿಂದ ವಿದ್ಯಾರ್ಥಿಗಳ ಗಮನವನ್ನು ತನ್ನ ಪಾಠದ ಮೇಲೇ ಕೇಂದ್ರಿಕರಿಸುವಂತೆ ಮಾಡುವಲ್ಲಿ ಯಶಸ್ವಿಯೂ ಆಗಿದ್ದಾಳೆ. ಇದು ಕೆಲವೊಮ್ಮೆ ಸಹ ಪ್ರಾಧ್ಯಾಪಕರ ಅಸೂಯೆಗೂ ಕಾರಣವಾಗಿದೆ. ಕೆಂಗಣ್ಣಿನ ಉರಿಯಲ್ಲಿ ನೋಯುವಂತೆ ಮಾಡಿದೆ. ಅಪಹಾಸ್ಯ, ವ್ಯಂಗ್ಯಗಳು ಬೆನ್ನ ಹಿಂದೆ ಚೂರಿಯಂತೆ ಇರಿದಿವೆ. ಸುಳ್ಳು ಆರೋಪಗಳಿಗೆ ಈಡು ಮಾಡಿದೆ. ಆದರೆ ಆಕೆ ತನ್ನ ವಿದ್ಯಾರ್ಥಿಗಳೊಂದಿಗೆ ಅದ್ಭುತವಾದ ಸೌಹಾದ ಸಂಬಂಧವನ್ನಿಟ್ಟುಕೊಂಡವಳು. ಹೀಗಾಗಿ ವಿದ್ಯಾರ್ಥಿಗಳ ಅಪಾರವಾದ ಗೌರವ ಪ್ರೀತಿ ಆಕೆಯ ಶ್ರೀರಕ್ಷೆ. ಇಷ್ಟೆಲ್ಲ ಇದ್ದೂ ಆಗಿಂದಾಗ್ಗೆ ಆ ದಿನ ಅವಳ ನೆನಪಿನ ಭಿತ್ತಿಯಲ್ಲಿ ಹಾಯ್ದು ತಲ್ಲಣಗೊಳ್ಳುವಂತೆ ಮಾಡಿದೆ.


           ಆಕೆ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಆ ದಿನ ಆಕೆಯ ನೆರಳಿನಂತೆ ಹಿಂಬಾಲಿಸುತ್ತದೆ. ತಂದೆ ಅಪಾರ ಕನಸುಗಳನ್ನು ಇಟ್ಟುಕೊಂಡು ಕಟ್ಟಿಸಿದ ಮನೆಯಲ್ಲಿ ಆಕೆ ಇದ್ದಾಳೆ. ಮನೆ ಕಟ್ಟಿಸುವಾಗ ತಂದೆಗೆ ಎಂತೆಂತಹ ಆಸೆಗಳಿದ್ದವೋ, ಸಂಸಾರ ಮಕ್ಕಳೊಂದಿಗಿನ ಬಾಂಧವ್ಯದ ಕುರಿತು ಅದೆಷ್ಟು ಬೆಟ್ಟದಂತಹ ಬಯಕೆಗಳಿದ್ದವೋ ಗೊತ್ತಿಲ್ಲ, ಮನೆ ಕಟ್ಟಿಸಿದ ಸ್ವಲ್ಪ ದಿನಗಳಲ್ಲೇ ತಂದೆ ತೀರಿಕೊಳ್ಳುತ್ತಾರೆ. ಅದಾದ ನಂತರ ತಾಯಿಯ ಜೊತೆ ಸಂಬಂಧ ಇಟ್ಟುಕೊಂಡವನೊಬ್ಬ ಒಂದು ದಿನ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾನೆ. ಈ ವಿಷಯವನ್ನು ತಾಯಿಯ ಬಳಿ ಹೇಳಿದಾಗ ತಾಯಿ ತನ್ನ ಮಗಳೇ ಆತನಿಗೆ ಸಹಕಾರ ನೀಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿ ಕಾಮಕ್ಕೆ ಕಣ್ಣಿಲ್ಲ ಎಂಬುದನ್ನು ನಿರೂಪಿಸಿ ಬಿಡುತ್ತಾಳೆ. ತಾನು ಹೆತ್ತ ಮಗಳಿಗಿಂತ ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನೆ ಆಕೆ ಹೆಚ್ಚಾಗಿ ನಂಬುವುದು ಕಾದಂಬರಿಯ ನಾಯಕಿಯಲ್ಲಿ ವಿಹ್ವಲತೆಯನ್ನು ಹುಟ್ಟಿಸುತ್ತದೆ. ಹೀಗಾಗಿ ಒಂದೇ ಮನೆಯಲ್ಲಿದ್ದರೂ ತಾಯಿಯೊಂದಿಗೆ ಮಾತು ನಿಲ್ಲಿಸಿ ದಶಕಗಳೇ ಕಳೆದಿವೆ. ಇತ್ತ ನಾಯಕಿ ಬಾಲ್ಯದಿಂದಲೂ ಅತಿಯಾಗಿ ಪ್ರೀತಿಸಿದ್ದ ಅವಳ ತಮ್ಮ ತನ್ನ ತಾಯಿಯ ಅನೈತಿಕ ಸಂಬಂಧವನ್ನು ವಿರೋಧಿಸಿ, ಅದನ್ನು ನೋಡಲಾಗದೇ ಮನೆ ಬಿಟ್ಟು ಓಡಿಹೋಗುತ್ತಾನೆ. ಒಂದೆಡೆ ತಾಯಿಯೇ ತನ್ನನ್ನು ನಂಬದ ಸ್ಥಿತಿ, ತನ್ನ ಮೇಲೆ ಒಂದು ದಿನ ಆದಂತಹ  ಲೈಂಗಿಕ ಅತ್ಯಾಚಾರ, ಅತಿಯಾಗಿ ಇಷ್ಟಪಡುತ್ತಿದ್ದ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋದ ನೋವು ನಾಯಕಿಯನ್ನು ಇಡೀ ಕಾದಂಬರಿಯುದ್ದಕ್ಕೂ ಕಾಡುತ್ತದೆ.


    ಯಾವುದಕ್ಕೂ ತೀವ್ರವಾಗಿ ಸ್ಪಂದಿಸದಂತಹ ಮನಃಸ್ಥಿತಿಯನ್ನು ನಾಯಕಿ ಉದ್ದೇಶಪೂರ್ವಕವಾಗಿ ರೂಢಿಸಿಕೊಳ್ಳುತ್ತಾಳೆ. ತನ್ನ ಬಗ್ಗೆ ಯಾರೇ ಹೊಗಳಿದರೂ ಅದನ್ನು ಒಂದು ಮುಗುಳ್ನಗೆಯಲ್ಲಿ ಸ್ವೀಕರಿಸಿ ಬಿಡುವಂತಹ ಸ್ಥಿತಿಪ್ರಜ್ಞತೆಯನ್ನೂ, ತನ್ನ ಕುರಿತಾಗಿ ಯಾರಾದರೂ ಕೆಟ್ಟ ಮಾತುಗಳನ್ನೇ ಆಡಿದರೂ ಅದನ್ನು ನಿರ್ವಿಕಾರವಾಗಿ ಸ್ವೀಕರಿಸುವಂತಹ ಮನೋಭಾವನೆಯನ್ನು, ತನ್ನೆದುರಿಗೇ ತನ್ನನ್ನು ಬೈಯ್ದರೂ, ಅಪಹಾಸ್ಯ ಮಾಡಿದರೂ ಕೋಪಿಸಿಕೊಳ್ಳದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತಹ ಸಮಚಿತ್ತತೆಯನ್ನು ಕಥಾನಾಯಕಿ ಪ್ರಯತ್ನಪೂರ್ವಕವಾಗಿ ತನ್ನದಾಗಿಸಿಕೊಂಡಿದ್ದಾಳೆ. ಹೀಗೆಂದೇ ಆಕೆ ತನ್ನ ಕಾಲೇಜಿಲ್ಲಿ ವಿದ್ಯಾರ್ಥಿಗಳು ಹೊಗಳುವುದನ್ನೂ, ತನ್ನ ಬೆನ್ನ ಹಿಂದೆ ತನಗೆ ಕೇಳಿಸಿಕೊಳ್ಳುವಂತೆಯೇ ಶೂದ್ರ ಶ್ರೀನಿವಾಸ ಸಹಪ್ರಾಧ್ಯಾಪಕರು ಮಾಡುವ ಟೀಕೆಯನ್ನು ಒಂದೇ ತರನಾಗಿ ಸ್ವೀಕರಿಸುತ್ತಾಳೆ. ಆಗಾಗ ಕೆಲವೊಮ್ಮೆ ತರಗತಿಯಲ್ಲಿ ಪಾಠ ಮಾಡುವಾಗಲೂ ಧುತ್ತೆಂದು ಎದುರು ನಿಂತು ಕಾಡಿದಂತಾಗುವ ಆ ದಿನದ ನೆನಪನ್ನೂ ಅಷ್ಟೇ ಚಾಕಚಕ್ಯತೆಯಿಂದ ನಿಭಾಯಿಸುತ್ತಾಳೆ. ಎಷ್ಟೇ ದುಃಖ, ನೋವು ಉಮ್ಮಳಿಸಿದಾಗಲೂ ಅವಡುಗಚ್ಚಿ ಸಹಿಸುತ್ತಾಳೆ.

     ಇಲ್ಲಿ ಕಾದಂಬರಿಕಾರರಿಗೆ ಆ ದಿನದ ಎರಡು ನಿಮಿಷದ, ಹೆಚ್ಚೆಂದರೆ ಬಲಾತ್ಕಾರಕ್ಕೆ ಬೇಕಾಗುವ ಹತ್ತು ನಿಮಿಷವೋ, ಅರ್ಧ ಗಂಟೆಯೋ ಮುಖ್ಯವಲ್ಲ. ನಡೆದು ಹೋದ ಆ ಘಟನೆಯ ಬಗ್ಗೆ ಕಾದಂಬರಿಕಾರರು ಎಲ್ಲಿಯೂ ಉದ್ವಿಗ್ನತೆಯಿಂದ ವಿವರಿಸುವುದಿಲ್ಲ. ಅತ್ಯಾಚಾರದ ವಿರುದ್ಧ ಆರ್ಭಟಿಸುತ್ತ ಗಂಟಲು ಕಿತ್ತು ಹೋಗುವಂತೆ ಹೂಂಕರಿಸುವುದಿಲ್ಲ. ಆದರೆ ಅಂತಹ ಒಮದು ಬಲಾತ್ಕಾರ ಹೆಣ್ಣಿನ ಮನಸ್ಸಿನ ಮೇಲೆ ಉಂಟು ಮಾಡುವ ಆಳವಾದ ಗಾಯವನ್ನು ವಿವರಿಸುತ್ತಾರೆ. ತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಸಾಮಾಜಿಕ ಸ್ಥಿತಿಯ ಕುರಿತಾಗಿಯೂ ಕಾದಂಬರಿಕಾರರು ಎಲ್ಲಿಯೂ ಚಕಾರ ಎತ್ತುವುದಿಲ್ಲ. ಯಾಕೆಂದರೆ ಗಂಡಿನ ತೆವಲಿಗೆ ಬಯಲಾಗುವ ಹೆಣ್ಣಿನ ಜೀವನದಲ್ಲಿ ಅದೊಂದು ಆಕ್ಸಿಡೆಂಟ್ ಆಗಿಯಷ್ಟೇ ಪರಿಗಣಿತವಾಗಬೇಕೆಂಬುದು ಅವರಿಗೆ ಗೊತ್ತಿದೆ. ಆದ ಅಪಘಾತದಲ್ಲಿ ದೇಹದ ಮೇಲಾಗುವ ಗಾಯಗಳು ಮಾಯುವಷ್ಟೇ ಸಹಜವಾಗಿ, ಸುಲಭವಾಗಿ ಅತ್ಯಾಚಾರವಾದಾಗಲೂ ಗಾಯ ಮಾಯುತ್ತದೆ. ಆದರೆ ಅತ್ಯಾಚಾರವಾದ ಹೆಣ್ಣಿನ ಮನಸ್ಸಿನ ಮೇಲಾದ ಗಾಯಕ್ಕೆ ಯಾವ ಔಷಧವಿದೆ? ಯಾವ ಮುಲಾಮು ಲೇಪಿಸಿ ಅವಳ ಮನದಾಳದಲ್ಲಿ ಉಂಟಾದ ಗೀರಿನ ಕಲೆಯನ್ನು ನಿವಾರಿಸಲು ಸಾಧ್ಯ ಹೇಳಿ? ಇಲ್ಲಿ ಕಾದಂಬರಿಕಾರರು ಇಂತಹ ಲೈಂಗಿಕ ದೌರ್ಜನ್ಯದಿಂದ ಮನಸ್ಸಿನ ಮೇಲೆ ಉಂಟಾದ ಗೀರಿದ ಗಾಯದ ಕಲೆಗಳು ಅವಳ ಮನೋವ್ಯಾಪಾರದ ಮೇಲೆ ಉಂಟು ಮಾಡುವ ದೀರ್ಘಕಾಲಿಕ ಪರಿಣಾಮಗಳ ಕುರಿತಾಗಿ ವಿಶ್ಲೇಷಿಸುತ್ತಾರೆ. ಕಾಮದ ಕುರಿತಾಗಿಯೇ ಅಸಹ್ಯವನ್ನು ಬೆಳೆಸಿಕೊಂಡ ನಾಯಕಿಯ ಸಹೋದ್ಯೋಗಿಯೊಬ್ಬ ಅವಳ ದೇಹದ ಅನಾಟಮಿಯ ಬಗ್ಗೆ ಮಾತನಾಡುತ್ತಾನೆ. ಪರಿಚಯವಾದ ಎರಡೇ ತಿಂಗಳಲ್ಲಿ ಅವಳ ದೈಹಿಕ ಸೌಂದರ್‍ಯವನ್ನು ಹೊಗಳುತ್ತ ಹೌ ಮಚ್ ಯು ಆರ್ ವೇಸ್ಟಿಂಗ್ ಯುವರ್ ಬ್ಯೂಟಿಫುಲ್ ಬಾಡಿ ಎಂದು ನೇರವಾಗಿಯೇ ಸೆಕ್ಸ್‌ಗೆ ಆಹ್ವಾನವಿತ್ತವನಂತೆ ಮತನಾಡುವಾಗ ಇವಳಿಗೂ ಒಮ್ಮೆ ತನ್ನ ದೇಹದ ಸೌಂದರ್‍ಯದ ಕಡೆ ಮನಸ್ಸು ತಿರುಗುತ್ತದೆ. ತನ್ನನ್ನೇ ತಾನು ಮೋಹಿಸಿಕೊಳ್ಳುವ ನಾರ್ಸಿಸಮ್ ಕಾಂಪ್ಲೆಕ್ಸ್ ಆವರಿಸಿದಂತೆ ಬೆತ್ತಲಾಗಿ ಕನ್ನಡಿಯೆದುರು ನಿಲ್ಲುವಂತಾಗುತ್ತದೆಯಾದರೂ ಮತ್ತೆ ಆ ದಿನದ ನೆನಪು ಅವಳೊಳಗಿನ ಎಲ್ಲ ಮಾರ್ಧವತೆಯನ್ನು ಹೊಸಕಿ ಹಾಕುತ್ತದೆ. ವಿಪರ್ಯಾಸವೆಂದರೆ ಹಾಗೆ ದೇಹವನ್ನು ನಿಮಿಷದ ಮಟ್ಟಿಗಾದರೂ ಮುಟ್ಟಿ, ತದುಕಿ ನೋಡಿಕೊಳ್ಳುವಂತೆ ಮಾಡಿದವನು ಎಂತಹ ನಿರ್ಲಜ್ಜ ಎಂಬುದು ತಂದೆಯ ಸಮಾನರಾದ ಗುರುಗಳೊಂದಿಗೆ ಇದ್ದಾಗ ಅದನ್ನೂ ಸರಸ ಎಂದು ಕರೆದಾಗ ಅರಿವಾಗುತ್ತದೆಯಲ್ಲದೆ ಮುಂದೆ ಹಂತ ಹಂತವಾಗಿ ಅಂದರೆ ಆ ಗುರುಗಳ ಅಸ್ಥಿಯನ್ನು ಬಿಡಲು ಪಾಂಡಿಚೆರಿಯ ಕಡಲಿಗೆ ಹೋದಾಗ ಅಲ್ಲೊಬ್ಬ ಹೆಂಗಸಿನ ನಡುಬಳಸಿಸಲ್ಲಾಪದಲ್ಲಿದ್ದಾಗ ನೋಡಿದಾಗ ಕಂಡುಕೊಳ್ಳುವಂತಾಗುತ್ತದೆ. ವಿಪರ್‍ಯಾಸವೆಂದರೆ ಆ ಮನುಷ್ಯನ ಹೆಂಡತಿ ಹಾಗೂ ಮಾವ ಇವಳ ಜೀವದ ಪ್ರತಿ ನೋವಿಗೂ ಹೆಗಲಾಗಿ ನಿಲ್ಲುತ್ತಾರೆ. ಇವಳನ್ನು ತುಂಬು ಗೌರವದಿಂದ ನಡೆಯಿಸಿಕೊಳ್ಳುತ್ತಾರೆ.


  ಎರಡು ದಶಕಗಳಿಂದ  ಒಂದು ದಿನವೂ ಮಾತನಾಡದ ತಾಯಿ ತೀರಿ ಹೋಗುತ್ತಾಳೆ. ಆಗ ಪ್ರತಿದಿನವೂ ಕಿಟಕಿಯಿಮದ ಬಂದು ಕದ್ದು ಹಾಲು ಕುಡಿಯುತ್ತ, ಕಿಟಕಿ ಮುಚ್ಚಿದ್ದರೆ ವಿಕಾರವಾಗಿ ಕೂಗಿ ಕಿಟಕಿ ತೆರೆಯಲು ಧಮಕಿ ಹಾಕುತ್ತಿದೆಯೇನೋ ಎಂಬ ಆತಂಕವನ್ನು ಸೃಷ್ಟಿಸುತ್ತಿದ್ದ ಬೆಕ್ಕು ತಾನೂ ಸಾವಿಗಾಗಿ ವಿಷಾದಿಸುತ್ತಿರುವಂತೆ ಧನಿಗೈದು ಇವಳ ಅನುಕಂಪ ಗಿಟ್ಟಿಸಿಕೊಳ್ಳುತ್ತದೆ.  ನಂತರ ಆ ಬೆಕ್ಕು ಇವಳ ಜೀವಮಾನವಿಡಿ ಅವಳಿಂದ ಮುದ್ದಿಸಿಕೊಳ್ಳುತ್ತ, ಅವಳ ಹಾಸಿಗೆಯನ್ನು ತನ್ನ ಹಕ್ಕಿನದ್ದು ಎಂಬಂತೆ ವರ್ತಿಸುತ್ತ ಗುರುಗಳ ಮನೆಗೆ ಹೊರಟಾಗ ವೇದನೆಯ ದನಿಗೈಯ್ಯುತ್ತ ಇವಳನ್ನು ಸಂಪೂರ್ಣವಾಗಿ ತನ್ನ ವಶಮಾಡಿಕೊಳ್ಳುತ್ತದೆ.ತಾಯಿ ಸತ್ತು ಹೋದಾಗಿನದ್ದಕ್ಕಿಂತ ತನ್ನ ಗುರುಗಳು ತೀರಿ ಹೋದಾಗ ಅವಳು ಅನಾಥ ಪ್ರಜ್ಞೆ ಅನುಭವಿಸುವ ಪರಿ, ಆ ಸಂದರ್ಭದಲ್ಲಿ ಸ್ಮೀತಾ ಹಾಗೂ ಅವಳ ತಂದೆ ನೀಡಿದ ನೈತಿಕ ಬೆಂಬಲ, ಕಾಲೇಜಿನಲ್ಲಿ ತೀರಾಸ್ಟ್ರಿಕ್ಟ್ ಎನ್ನಿಸಿಕೊಳ್ಳುತ್ತಿದ್ದ ಪ್ರಿನ್ಸಿಪಾಲರು ನೀಡಿದ ಆತ್ಮಸ್ಥೈರ್‍ಯ ಎಲ್ಲವೂ ಮನುಷ್ಯತ್ವ ಇನ್ನೂ ಇದೆ ಎನ್ನುವ ಭಾವ ಹುಟ್ಟಿಸುತ್ತದೆ. ಆದರೆ ವಿದೇಶದಿಂದ ತೀರಿಹೋದ ವಾರದ ನಂತರ ಬಂದ ಗುರುಗಳ ಮಗ ಹಾಗೂ ಮಗಳು ಮಾನವೀಯತೆಯ ಯಾವ ಲವಲೇಶದ ಅರಿವೂ ಇಲ್ಲದಂತೆ ವರ್ತಿಸುವಾಗ ಗುರುಪರಂಪರೆಯನ್ನು ಮುಂದುವರೆಸಲೆಂದು ಗುರುಗಳ ಹೆರಿನಲ್ಲಿ ವೇದಿಕೆ ಸೃಷ್ಟಿಸಿದವರು ದಂಗಾಗುತ್ತಾರೆ. ಆದರೆ ಇವರ ಮಾನವೀಯ ಮೌಲ್ಯಗಳು ಅವರನ್ನೂ ತಟ್ಟಿ ಅವರೂ ಇವಳ ಜೊತೆ ಕೈ ಜೋಡಿಸುವುದು ಎಂತಹ ಆಶಾದಾಯಕ ಭಾವನೆ.


   ಕಾದಂಬರಿಯ ಕೊನೆಯಲ್ಲಿ ಬರುವ ಕ್ರಿಸ್ಟೀನಾ ಹಾಗೂ ಅವಳ ಮಗ ಪ್ರಮೋದ ತನ್ನ ತಮ್ಮನ ಹೆಂಡತಿ ಹಾಗೂ ಮಗ ಎಂಬುದು ಅರಿವಾದಾಗ ಆಕೆ ನಡೆದುಕೊಳ್ಳುವ ರೀತಿ, ಎಲ್ಲದಕ್ಕೂ ತಯಾರಾಗಿಯೇ ಬಂದವಳಂತೆ ಜೋರುಜೋರಾಗಿ ವರ್ತಿಸುತ್ತಿದ್ದ ಕ್ರಿಸ್ಟೀನಾಳನ್ನು ಮೆದುಗೊಳಿಸಿ ಆಕೆ ಇವಳನ್ನು ಅಪಾರವಾಗಿ ಪ್ರೀತಿಸುವಂತೆ ಮಾಡುತ್ತದೆ.


   ಇವೆಲ್ಲದರ ನಡುವೆ ಮನೆಯ ಕಂಪೌಂಡ್ ಸ್ವಚ್ಛಗೊಳಿಸಲು ಬರುವ ಕಾಲೇಜಿನ ಜವಾನ ಮತ್ತು ಆತನ ಹೆಂಡತಿ ಮಾಡಿದ ಅಲ್ಪ ಸಹಾಯಕ್ಕಾಗಿ ಇವಳನ್ನು ದೇವರಂತೆ ಕಾಣುತ್ತಾರೆ. ಅವರ ಮಾನವೀಯ ಮೌಲ್ಯಗಳು ಇಲ್ಲಿ ಎಲ್ಲರಿಗಿಂತ ಉನ್ನತ ಮಟ್ಟದ್ದು, ತಾಯಿ ತೀರಿಕೊಂಡಾಗಲೇ ಇರಬಹುದು, ಗುರುಗಳು ತೀರಿಕೊಂಡಾಗಲೇ ಇರಬಹುದು ಆತ ವ್ಯವಹರಿಸಿದ ರೀತಿ, ಎಲ್ಲಿಯತೂ ಹೇಳಿಸಿಕೊಳ್ಳದೇ ತಾನೇ ಅರ್ಥ ಮಾಡಿಕೊಂಡು ಆತ ನಿಭಾಯಿಸುತ್ತಿದ್ದ ಜವಾಬ್ಧಾರಿಗಳು ಇಂದಿಗೂ ಮನುಷ್ಯತ್ವ ಉಳಿದಿದೆ ಎನ್ನುವುದಕ್ಕೊಂದು ನಿದರ್ಶನವಾಗಿ ಕಣ್ಣು ತೇವವಾಗುತ್ತದೆ. ಅಂತೆಯೆ ಕಾದಂಬರಿಯಲ್ಲಿ ಬರುವ ಡ್ರೈವರ್ ಕೂಡ ಮಾನವಿಯತೆಯ ಸಾಕಾರ ಮೂರ್ತಿಯಂತೆ, ತಾನು ಕೆಲಸ ಮಾಡುವವರ ಮನೆಯ ಗುಟ್ಟನ್ನು ಕಾಪಾಡಿಕೊಳ್ಳುವುದು ಧರ್ಮ ಎನ್ನುವಂತೆ ವ್ಯವಹರಿಸುವುದು ಕಣ್ಣಂಚನ್ನು ಒದ್ದೆಯಾಗಿಸುತ್ತದೆ.


       'ಬದುಕಿನಲ್ಲಿ ಬರುವ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನೋಡುತ್ತಲೇ ಸ್ವೀಕರಿಸುತ್ತಲೇ ಹೋಗಬೇಕು. ಯಾವುದರ ಸ್ವರೂಪ ಕುರಿತೂ ತೀರ್ಮಾನಕ್ಕೆ ಬರಬಾರದು.' ಎನ್ನುವ ಮನೋಭಾವದ ಕಥಾ ನಾಯಕಿಯ ಆತ್ಮ ಚರಿತೆಯ ತುಣುಕು ಬರೆಹದಂತೆ ಈ ಕಾದಂಬರಿ ರಚಿಸಲ್ಪಟ್ಟಿದೆ. ನಾಯಕಿಯ ಸಾವಿನ ನಂತರ ನಾಯಕಿಯಂತೆ, ಅವಳ ತಮ್ಮನಂತೆ ಓದಿನ ಸಂಸ್ಕಾರವನ್ನು ಬೆಳೆಸಿಕೊಂಡ ಅವಳ ತಮ್ಮನ ಮಗ ಪ್ರಮೋದ ಈ ದಿನಚರಿಗೊಂದು ಅಂತ್ಯ ಹಾಡುತ್ತಾನೆ.


   ಮೇಲ್ನೋಟಕ್ಕೆ ಮಾಮುಲಿ ಸಾಮಾಜಿಕ ಕಾದಂಬರಿ ಆಗಬಹುದಾಗಿದ್ದ, ಒಮ್ಮೆ ಓದಿದರೆ ಇದೆಂತಹ ಮಾಮೂಲಿ ವಿಷಯವನ್ನಿಟ್ಟುಕೊಮಡು ಬರೆದ ಕಾದಂಬರಿ ಎಂದುಕೊಳ್ಳುವಂತಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಸಾಮಾಜಿಕ ಬದ್ಧತೆಯುಳ್ಳ ಒಬ್ಬ ಹಿರಿಯ ಲೇಖಕನ ಪ್ರೌಢತೆಗಳು ಇಲ್ಲಿ ಎದ್ದು ಕಾಣುತ್ತದೆ. ಸಾಮಾಜಿಕ ಕಾದಂಬರಿಗಳಲ್ಲಿ ಆ ದಿನದ ಅತ್ಯಾಚಾರವೇ ಮುಖ್ಯ ವಿಷಯವಾಗಿ ವಿಜೃಂಭಿಸಿ ಅದಕ್ಕೆ ಸಂಬಂಧಿಸಿದ ಕಾನೂನು ತೊಡಕುಗಳು, ತಾಯಿಯ ಪ್ರಿಯಕರನಿಗೆ ಆಗಬಹುದಾದ ಶಿಕ್ಷೆ ಇವೇ ಮುಂತಾದ ವಿವರಣೆಗಳಿಂದ ಹಳಸಲಾಗಿ ಜಾಳುಜಾಳಾಗಿಬಿಡಬಹುದಾಗಿದ್ದು, ಕಾದಂಬರಿಕಾರರ ಅದ್ಭುತ ಕ್ರೀಯಾಶೀಲತೆಯಿಂದ ಆ ವಿಷಯ ಹಿಂದಾಗಿ ಆಕೆಯ ಮನೋವ್ಯಾಕುಲಗಳು ಮುನ್ನಲೆಗೆ ಬಂದು ನಿಲ್ಲುವಂತಾಗುತ್ತೆ. ಹಳಸಲು ವಿಷಯ ಹಿನ್ನಲೆಗೆ ಸರಿದು ನಾಯಕಿಯ ಆ ಮೂಲಕ ಇಡೀ ಹೆಣ್ಣು ಕುಲದ ನೋವು ನಮ್ಮ  ಅರಿವಿಗೆ ದಕ್ಕುವಂತಾಗುತ್ತದೆ.


ಸಮಾರಂಭದಲ್ಲಿ ಲೇಖಕಿಯವರೊಂದಿಗೆ


    ಆದರೆ ಸಾಮಾಜಿಕ ಕಾದಂಬರಿಗಳಲ್ಲಿನ ಸುಲಲಿತ ಭಾಷೆ ಇಲ್ಲಿ ಕಾಣಸಿಗುವುದಿಲ್ಲ. ಯಾವುದೋ ಅನುವಾದಿತ ಕಾದಂಬರಿಯನ್ನು ಓದುವಾಗ ಉಂಟಾಗುವ ಭಾಷಾ ತೊಡಕು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸರಳ ವಿಷಯವೂ ಗೊಜಲಾಗಿ ಎರಡು ನಿಮಿಷ ನಿಂತು ಮತ್ತೆ ಮತ್ತೆ ಓದಿ ಅರ್ಥೈಸಿಕೊಳ್ಳಬೇಕಾಗುತ್ತದೆಯಾದರೂ ಕಾದಂಬರಿ ಕಟ್ಟುವಲ್ಲಿನ ಬಿಗಿ ಬಂಧ ಕಾದಂಬರಿ ಎಲ್ಲಿಯೂ ಹಳಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


    ಇದೆಲ್ಲಕ್ಕಿಂತ ಈ ಕಾದಂಬರಿಯನ್ನು ಓದುವಾಗ ಶೂದ್ರ ಶ್ರೀನಿವಾಸರವರು ಅಲ್ಲಲ್ಲಿ ಹೆಸರಿಸಿದ ಅನೇಕ ಪುಸ್ತಕಗಳನ್ನು ಈಗಲೇ ತರಿಸಿಕೊಂಡು ಓದಿಯೇ ಬಿಡಬೇಕು ಎಂಬ ಭಾವ ಉಂಟಾಗುತ್ತದೆ. ಹತ್ತಾರು ಉತ್ಕೃಷ್ಟ ಕೃತಿಗಳನ್ನು ಅವರು ಇಲ್ಲಿ ಹೆಸರಿಸಿದ್ದಾರೆ. ಯಾವುದು ಉತ್ತಮ ಓದು ಎನ್ನುವುದನ್ನು ನೀಡುವ ಓದಿಗೊಂದು ದೀವಿಗೆಯನ್ನು ಹಿಡಿಯುವ ಕೆಲಸವನ್ನು ಶೂದ್ರ ಶ್ರೀನಿವಾಸ ಮಾಡುತ್ತಾರೆ. ಅದಕ್ಕಾಗಿ ಎಲ್ಲ ಓದುವ ತುಡಿತವಿರುವ ಯುವ ಸಾಹಿತಿಗಳ ಪರವಾಗಿ ಸಲಾಂ.

                   

- ಶ್ರೀದೇವಿ ಕೆರೆಮನೆ


273 views5 comments