top of page

ಸಾಮಾಜಿಕ ಸಂಘಟನೆಗಳಲ್ಲಿ ಮಹಿಳಾ ಘಟಕಗಳ ಪ್ರಸ್ತುತತೆ

Updated: Sep 14, 2020

ಡಾ.ಪಾರ್ವತಿ ಜಿ.ಐತಾಳ್

[ಮಹಿಳಾ ಸಂಘಟನೆಗಳ ಆತ್ಮಾವಲೋಕನದ ಜರೂರಿನ ಕುರಿತು ಒಳಬೆಳಕು ಚೆಲ್ಲುವ ಡಾ. ಪಾರ್ವತಿ ಜಿ ಐತಾಳ್ ಅವರ ಚಿಂತನಾತ್ಮಕ ಈ ಬರಹ ತಮ್ಮ ಓದಿಗೆ -ಸಂಪಾದಕ]

ಜಾಗತಿಕ ಮಟ್ಟದಲ್ಲಿ ಇಂದು ಮಹಿಳೆಯ ಸ್ಥಿತಿ-ಗತಿ, ಸ್ಥಾನ-ಮಾನಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಭಿವೃದ್ಧಿಯೂ ಆಗಿದೆ. ಸಾವಿರಾರು ವರ್ಷಗಳಿಂದ ಮನೆಯೊಳಗಿನ ನಾಲ್ಕು ಗೋಡೆಗಳ ನಡುವೆ ಅತ್ತೆ-ಮಾವ, ಗಂಡ, ಮನೆ, ಮಕ್ಕಳು ಎಂಬ ಸೀಮಿತ ವಲಯದೋಳಗೆ ಬಂಧಿತಳಾಗಿದ್ದ ಮಹಿಳೆ ಇವತ್ತು ಹೊಸಿಲು ದಾಟಿ ಹೊರಗೆ ಬಂದಿದ್ದಾಳೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಮತ್ತು ರಾಜಕೀಯ ಸ್ಥಾನ-ಮಾನಗಳಿಗಾಗಿ ಸತತ ಹೋರಾಟ ನಡೆಸಿ ಆಕೆ ಅವೆಲ್ಲವನ್ನೂ ಈಗಾಗಲೇ ಪಡೆದುಕೊಂಡಿದ್ದಾಳೆ. ಅನೇಕರ ದೃಷ್ಟಿಯಲ್ಲಿ ಆಕೆಯ ಸಮಾನತೆಯ ಕನಸು ನನಸಾಗಿದೆ. ಒಂದು-ಒಂದೂವರೆ ಶತಮಾನಗಳಿಂದೀಚೆಗೆ ಮಹಿಳೆಯರು ಸಂಘಟಿತರಾಗಿ ಹೋರಾಟ ನಡೆಸಿದ್ದೇ ಬಹುಮುಖ್ಯವಾಗಿ ಇಂದು ಕಾಣುತ್ತಿರುವ ಪಲ್ಲಟಗಳಿಗೆ ಕಾರಣವೆಂಬುದರಲ್ಲಿ ಸಂದೇಹವಿಲ್ಲ.ಹಾಗಾದರೆ ಇಮದು ಮಹಿಳೆ ಪೂರ್ತಿಯಾಗಿ ಸ್ವತಂತ್ರಳಾಗಿದ್ದಾಳೆಯೆ? ಪಿತೃಪ್ರಧಾನ ಮೌಲ್ಯಗಳಿಗೆ ಪ್ರಾಧಾನ್ಯ ನೀಡುವ ಸಂಪ್ರದಾಯಗಳಿಂದ ಆಕೆಯನ್ನು ಶೋಷಣೆಗೆ ಗುರಿಪಡಿಸುತ್ತಿದ್ದ ಸಮಾಜ ಅವೆಲ್ಲವನ್ನೂ ಬಿಟ್ಟು ಸಮಾನತೆಯ ಮೇಲೆ ನೆಲೆನಿಂತ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಿದೆಯೇ?


ಇದು ಬಹಳ ಜಟಿಲವಾದ ಪ್ರಶ್ನೆ. ಯಾಕೆಂದರೆ ಬಾಹ್ಯ ನೋಟಕ್ಕೆ ಮಹಿಳೆಯ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಕಾಣುತ್ತಿದೆ. ವರದಕ್ಷಿಣೆ, ಪತ್ನಿಪೀಡನೆ, ಲೈಂಗಿಕ ಕಿರುಕುಳ, ಮಹಿಳಾ ದೌರ್ಜನ್ಯ ಮೊದಲಾದ ಸಮಸ್ಯೆಗಳ ವಿರುದ್ಧ ಕಾನೂನುಗಳೇ ಇವೆ. ಇತ್ತೀಚೆಗೆ ಮುಸ್ಲಿಂ ಮಹಿಳೆಯರ ಬಹು ದೊಡ್ಡ ಸಮಸ್ಯೆಯಾದ ತ್ರಿವಳಿ ತಲ್ಲಾಖ್ ನ ವಿರುದ್ಧ ಕಾನೂನು ಹೊರಡಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಪುರುಷರ ಮಾನಸಿಕ ಪರಿವರ್ತನೆಯಲ್ಲದೆ ಇಂಥ ಕಾನೂನುಗಳ ಮೂಲಕ ಮಹಿಳೆಗಾಗುವ ಅನ್ಯಾಯವನ್ನು ತಡೆಗಟ್ಟಲು ಸಾಧ್ಯವಿಲ್ಲ ಅನ್ನುವುದು ಅನೇಕರ ಅನುಭವಕ್ಕೆ ಬಂದ ವಿಚಾರ. ದಿನಬೆಳಗಾದರೆ ಕೇಳುವ ಲೈಂಗಿಕ ಅತ್ಯಾಚಾರಗಳು ಮತ್ತು ಹೇಣ್ಣುಮಕ್ಕಳನ್ನು ವೇಶ್ಯಾ ವಾಟಿಕೆಗೆ ದೂಡುವ ಮೋಸದ ಜಾಲಗಳು ಭಯ ಹುಟ್ಟಿಸುತ್ತಿವೆ. ಪ್ರೀತಿಗೆ ಪ್ರತಿಕ್ರಿಯಿಸಿಲ್ಲ ಎನ್ನುವ ಕಾರಣಕ್ಕೆ ಆಸಿಡ್ ಎರಚುವುದೋ ಕೊಲೆ ಮಾಡುವುದೋ ಮೊದಲಾದ ಪ್ರಕರಣಗಳೂ ಆಘಾತಕಾರಿಯಾಗಿವೆ. ಆದರೆ ಹೊರಗಣ್ಣಿಗೆ ಕಾಣುವ ಇಂಥ ಕ್ರೌರ್ಯಗಳ ಬಗ್ಗೆ ಪ್ರತಿಯೊಬ್ಬರೂ ಸಹಾನುಭೂತಿಯಾದರೂ ತೋರಿಸುತ್ತಾರೆ. ಪುರುಷರ ವಿಕೃತ ಕಾಮದ ಬಗ್ಗೆ ಛೀಮಾರಿ ಹಾಕುತ್ತಾರೆ ಕೂಡಾ. ಆದರೆ ಅಸಮಾನತೆಯ ನೆಲೆಗಳು ಇನ್ನೂ ಹಾಗೆಯೇ ಉಳಿದಿರುವ ನೂರಾರು ಸಮಸ್ಯೆಗಳು ಬೂದಿ ಮುಚ್ಚಿದ ಕೆಂಡದಂತೆ ಮಹಿಳೆಯ ಬದುಕನ್ನು ನರಕವಾಗಿಸುತ್ತಿರುವುದು ಅನೇಕರ ಗಮನಕ್ಕೆ ಇನ್ನೂ ಬಂದಿಲ್ಲವೆನ್ನುವುದು ಕಹಿ ಸತ್ಯ.

ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯ ಬಯಸಿದಾಗ ‘ಎಷ್ಟಾದರೂ ಮುಂದೆ ಅಡುಗೆ ಕೆಲಸ ತಾನೇ ಕಟ್ಟಿಟ್ಟ ಬುತ್ತಿ ? ’ ಅನ್ನುತ್ತಾರೆ.’ ‘ಹೆಚ್ಚು ಓದಿದರೆ ಗಂಡ ಸಿಗುವುದಿಲ್ಲ.’ ಅನ್ನುತ್ತಾ ರೆ (ಮದುವೆಯಾಗಿ ಕುಟುಂಬ ನೋಡಿಕೊಳ್ಳುವುದೇ ಅವಳ ಜೀವನದ ಪರಮ ಧ್ಯೇಯವೋ ಎನ್ನುವ ಹಾಗೆ ! ಗಂಡು ಮಗ ಎಷ್ಟು ಓದಿ ಉನ್ನತ ಸ್ಥಾನ ಪಡೆದರೂ ಅದು ಸ್ವಾಗತಾರ್ಹ !) ಹೆಚ್ಚು ಓದಿದ ಅಥವಾ ಹೆಚ್ಚು ಸಂಬಳ ಪಡೆಯುವ ಹೆಂಡತಿಯನ್ನು ¸ಮಾಜ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಗಂಡ ನಾದವನು ಹೆಂಡತಿಗಿಂತ ಯಾವಾಗಲೂ ಮೇಲೆ ಇರಬೇಕೆನ್ನುವುದು ಪುರುಷ ಪ್ರಧಾನ ಸಮಾಜ ಬೆಳೆಸಿಕೊಂಡು ಬಂದ ನಂಬಿಕೆ. ಮದುವೆಯಾದ ನಂತರ ಗಂಡ-ಹೆಂಡತಿಯರ ನಡುವೆ ಒಳ್ಳೆಯ ಹೊಂದಾಣಿಕೆಯಿದ್ದರೂ ಸಮಾಜ ಅನಾವಶ್ಯಕವಾಗಿ ಇಂಥ ವಿಷಯಗಳಲ್ಲಿ ತಲೆ ಹಾಕುವುದನ್ನು ನಿಲ್ಲಿಸಿಲ್ಲ. ಕುಟುಂಬದೊಳಗೆ ಸಮಾನತೆ ಸಾಧಿಸುವ ಮನಸ್ಸು ಒಬ್ಬ ಒಳ್ಳೆಯ ಪುರುಷನಿಗೆ ಇದ್ದರೂ ಸಾಂಪ್ರದಾಯಿಕ ಸಮಾಜ ಅಡ್ಡ ಬರುವುದಿದೆ. ಗಂಡ ಅಡುಗೆ ಮಾಡಿ ಹೆಂಡತಿಗೆ ಬಡಿಸಿದರೆ, ಅಥವಾ ಹೆಂಡತಿ-ಮಕ್ಕಳ ಬಟ್ಟೆ ಒಗೆದರೆ ಅವನನ್ನು ಅಮ್ಮಾವ್ರ ಗಂಡನೆಂದು ಕರೆದು ಗೇಲಿ ಮಾಡಿ ನೋಯಿಸುತ್ತಾರೆ. ಉದ್ಯೋಗದಲ್ಲಿರುವ ಹೆಂಡತಿ ಎಷ್ಟೋ ಕುಟುಂಬಗಳಲ್ಲಿ ಇಂದು ಕೂಡಾ ಮನೆಯೊಳಗೂ ಹೊರಗೂ ಸೋತು ಸುಣ್ಣವಾದರೂ ಯಾರೂ ಆ ಬಗ್ಗೆ ಗಮನ ಹರಿಸುವುದಿಲ್ಲ. ಅದು ಅತ್ಯಂತ ಸಹಜವೇನೋ ಎಂಬಂತೆ ನಡೆದುಕೊಳ್ಳುತ್ತಾರೆ. ಹೆಂಡತಿ ತನ್ನ ಉದ್ಯೋಗ ಸ್ಥಳದಿಂದ ನೇರವಾಗಿ ಮನೆಗೆ ಬರಬೇಕು. ಗಂಡ ಮನೆಯ ಗೊಡವೆಯಿಲ್ಲದೆ ಊರೆಲ್ಲ ಸುತ್ತಿ, ಕೆಲವೊಮ್ಮೆ ಕಂಠಪೂರ್ತಿ ಕುಡಿದು ಬಂದು ಸಾಯಹೊಡೆದರೂ ಅದನ್ನು ಹೇಂಡತಿ ಸಹಿಸಿಕೊಳ್ಳಬೇಕು.ಅದು ‘ ಗಂಡಹೆಂಡಿರ ಜಗಳ’ವೆಂದು ಹೇಳಿ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಷ್ಟೊ ಕುಟುಂಬಗಳಲ್ಲಿ ಗಂಡ ಸಂಪಾದಿಸುವ ಹಣವೆಲ್ಲ ಅವನ ವೈಯಕ್ತಿಕ ಖರ್ಚಿಗೆ. ಮನೆಗೆ ಬೇಕಾದ ಎಲ್ಲ ವಸ್ತುಗಳನ್ನೂ ಹೆಂಡತಿಯೇ ಕೊಂಡು ತರಬೇಕು. ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವ, ಅವರನ್ನು ಶಾಲೆಗೆ ಹೊರಡಿಸುವ ಮತ್ತು ಕಳುಹಿಸುವ ಜವಾಬ್ದಾರಿ ಹೆಂಡತಿಯದ್ದು ಮಾತ್ರ. ಯಾಕೆಂದರೆ ಗಂಡ-ಮನೆ-ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೊರುವ ಹೆಣ್ಣಷ್ಟೇ ಆದರ್ಶ ಭಾರತೀಯ ನಾರಿ. ಇನ್ನು ಪೂರ್ಣಕಾಲಿಕ ಗೃಹಿಣಿಯರ ಪಾಡಂತೂ ದೇವರಿಗೇ ಪ್ರೀತಿ. ಮನೆಯಲ್ಲಿ ಎಲ್ಲರ ಸೇವಕಿಯಂತೆ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ರಾತ್ರಿ ನಿದ್ರೆ ಮಾಡುವ ಸಮಯವೊಂದು ಬಿಟ್ಟು ದಿನದ 16 - 18 ಗಂಟೆಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಳ್ಳಬೇಕು. ಇಂದು ಟಿ.ವಿ.ಧಾರಾವಾಹಿ- ಸಿನಿಮಾ-ಜಾಹೀರಾತುಗಳಲ್ಲೇ ನೋಡಿ. ಮಹಿಳೆ ಮನೆಯವರ ಸೇವೆಗಾಗಿಯೇ ಇರುವವಳು ಎಂಬಂತೆ ಎಲ್ಲ ಸನ್ನಿವೇಶಗಳಲ್ಲಿ ಚಿತ್ರಿಸಲ್ಪಡುತ್ತಾಳೆ. ಇಂದಿನ ಯುವ ತಲೆಮಾರಿನ ಬೆರಳೆಣಿಕೆಯ ಮಂದಿಯಾದರೂ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿರುವುದು ಒಂದು ಸಮಾಧಾನದ ಸಂಗತಿ.


ಇಂದು ಹೆಚ್ಚಿನ ಸಾಮಾಜಿಕ ಸಂಘಟನೆಗಳಲ್ಲಿ ಒಂದು ಮಹಿಳಾ ಘಟಕವಿರುತ್ತದೆ. ಆದರೆ ಇದರ ಧ್ಯೇಯೋದ್ದೇಶಗಳಾಗಲಿ ಕಾರ್ಯಸೂಚಿಗಳಾಗಲಿ, ಅವು ನಡೆಸುವ ಯಾವುದೇ ಚಟುವಟಿಕೆಗಳಾಗಲಿ ಮೇಲೆ ಹೇಳಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಆಗಿರುವುದಿಲ್ಲ. ಕನಿಷ್ಠ ಪಕ್ಷ ಅವುಗಳ ಕುರಿತು ವಿಚಾರ ಸಂಕಿರಣಗಳು ಮತ್ತು ಚರ್ಚೆಗಳನ್ನೂ ನಡೆಸುವ ಕೆಲಸ ಅವುಗಳಿಂದ ಆಗುವುದಿಲ್ಲ. ಅವರು ನಡೆಸುವ ಚಟುವಟಿಕೆಗಳು ಸಾಂಪ್ರದಾಯಿಕವಾದ ಭಜನೆ, ಸ್ತೋತ್ರ ಪಠಣ, ಮತ್ತು ಸಂಗೀತ-ನೃತ್ಯ ಮೊದಲಾದ ಪ್ರತಿಭಾ ಪ್ರದರ್ಸನಗಳಿಗೆ ಸೀಮಿತವಾಗಿರುತ್ತದೆ. ಬರೇ ಸಂಪ್ರದಾಯಗಳನ್ನು ಯಥಾವತ್ ಮುಂದುವರೆಸುವುದಾದರೆ ಪ್ರತ್ಯೇಕ ಸಂಘಟನೆಯ ಅಗತ್ಯವೇನಿದೆ? ನಮ್ಮ ಸಂಪ್ರದಾಯಗಳಲ್ಲಿ ಮಹಿಳೆಯರಿಗೆ ಸಂಬಂಧ ಪಟ್ಟಂತೆ ಅನೇಕ ಅಮಾನವೀಯ ಪದ್ಧತಿಗಳಿವೆ. ಜೀವ ವಿರೋಧಿ ನಿಲುವುಗಳಿವೆ. ‘ಹೆಣ್ಣನ್ನು ತಾಯಿ ಎಂದು ಗೌರವಿಸುವ ಸಮಾಜ ಆಕೆ ಗಂಡನನ್ನು ಕಳೆದುಕೊಂಡು ವಿಧವೆಯಾದಾಗ ಆಕೆಯನ್ನು ಯಾವ ರೀತಿ ಕ್ರೂರವಾಗಿ ನಡೆಸಿಕೊಳ್ಳುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೆಣ್ಣಿಗೆ ಗಂಡ ಜೀವಂತವಾಗಿದ್ದಾಗ ಸುಮಂಗಲಿ ಎನ್ನುವ ಪಟ್ಟ, ಆತ ತೀರಿಕೊಂಡ ನಂತರ ವಿಧವೆ ಎಂಬ ಬಹಿಷ್ಕಾರ. ಹಾಗಾದರೆ ಆಕೆಯ ವ್ಯಕ್ತಿತ್ವಕ್ಕೆ ಬೆಲೆಯಿಲ್ಲವೆ? ಪುರುಷನಂತೆಯೇ ಆಕೆಯೂ ಒಬ್ಬ ವ್ಯಕ್ತಿಯಲ್ಲವೆ? ಗಂಡನ ಮೂಲಕವಷ್ಟೇ ಆಕೆಯ ವ್ಯಕ್ತಿತ್ವಕ್ಕೆ ಬೆಲೆ ಸಿಗಬೇಕೇ? ಮಾತೆ ಎಂದಾದರೆ ಆಕೆ ಯಾವಾಗಲೂ ಗೌರವಾನ್ವಿತಳೇ. ಆಕೆಯ ಹಣೆಯಲ್ಲಿ ಕುಂಕುಮ, ನೆತ್ತಿಯಲ್ಲಿ ಸಿಂಧೂರ ಯಾವಾಗಲೂ ಶೋಭಿಸುತ್ತಿರಬೇಕು. ಸೌಭಾಗ್ಯದ ಎಲ್ಲ ಚಿಹ್ನೆಗಳನ್ನೂ ಇಟ್ಟುಕೊಳ್ಳುವ ಅವಕಾಶ ಆಕೆಗಿರಬೇಕು.


ಈ ವಿಚಾರವನ್ನೆತ್ತಿದಾಗ ಸಂಪ್ರದಾಯಸ್ಥ ಪುರುಷರು ಹೇಳುವ ಒಂದು ಕುಂಟು ನೆಪ ನೆನಪಾಗುತ್ತದೆ. ಆಕೆ ಸುಂದರವಾಗಿ ಕಾಣಿಸಿದರೆ ಪುರುಷರಿಗೆ ಆಕೆಯಲ್ಲಿ ಆಕರ್ಷಣೆಯುಂಟಾಗುತ್ತದೆ ಎಂದು. ಹಾಗೊಂದು ವೇಳೆ ಆದರೆ, ಅವಳ ಒಪ್ಪಿಗೆಯೂ ಇದ್ದರೆ ಮರುಮದುವೆಯಾಗಬಹುದಲ್ಲ? ಅದ್ಯಾಕೆ ಪುರುಷರು ಮಾತ್ರ ನಾಲ್ಕು-ಐದು ಬಾರಿ ಮದುವೆಯಾದರೂ ಯಾರೂ ಏನೂ ಅಡ್ಡಿ ಹೇಳುವುದಿಲ್ಲ?ಹೆಣ್ಣು ತೀರಾ ಸಣ್ಣ ವಯಸ್ಸಿನಲ್ಲಿ ವಿಧವೆಯಾದರೂ ಅವಳ ಮೇಲೆ ಕಟ್ಟುನಿಟ್ಟಿನ ಕ್ರಮ. ಸನ್ಯಾಸಿನಿಯಂತೆ ಆಕೆ ಕಳೆಯಬೇಕು. ಲೈಂಗಿಕ ಬಯಕೆಗಳು ಪುರುಷರಲ್ಲಿರುವಂತೆ ಸ್ತ್ರೀಯರಲ್ಲೂ ಇರುವುದು ನಿಸರ್ಗ ನಿಯಮವಲ್ಲವೆ? ವಿಧವೆಯಾದ ಹೆಣ್ಣಿನ ಮೇಲೆ ಮಾತ್ರ ಈ ವಿಚಾರದಲ್ಲಿ ನಿಷೇಧ ಹೇರುತ್ತದೆ? ಬೇಸರದ ಸಂಗತಿಯೆಂದರೆ ಇಂತಹ ತಾರ್ಕಿಕ ಪ್ರಶ್ನೆಗಳನ್ನು ಎಷ್ಟೋ ಮಹಿಳೆಯರೇ ಎತ್ತುತ್ತಿಲ್ಲ. ಸಂಪ್ರದಾಯದ ಕೂಪದೊಳಗೆ ಹುದುಗಿ ಹೋಗಿರುವ ಅಂಥವರ ಮನಸ್ಸು ಹೊಸ ರೀತಿಯಲ್ಲಿ ಚಿಂತನೆ ಮಾಡಲು ಒಡಂಬಡುತ್ತಿಲ್ಲ. ಅವರಿಗದು ಅರ್ಥವಾಗುವುದೂ ಇಲ್ಲ. ‘ ನಮಗೆ ಸಮಾಜದಲ್ಲಿ ಸ್ಥಾನ ಮಾನ ಗೌರವಗಳನ್ನು ನಮ್ಮ ಯೋಗ್ಯತೆ ನೋಡಿ ಕೊಡಿ, ಬದಲಿಗೆ ಗಂಡ ಇದ್ದಾರೋ ಇಲ್ಲವೋ ಅಂತ ನೋಡಿ ಅಲ್ಲ’ ಎಂದು ದಿಟ್ಟತನದಿಂದ ಹೇಳುವ ಮಹಿಳೆಯರನ್ನು ಇಂಥ ಮಹಿಳಾ ಸಂಘಟನೆಗಳು ಸೃಷ್ಟಿಸಬೇಕಾಗಿದೆ.


ಕೆಲವು ಸಾಮಾಜಿಕ ಸಂಘಟನೆಗಳು ಹೆಣ್ಣುಮಕ್ಕಳಿಗಾಗಿ ಸಂಸ್ಕೃತಿ ಶಿಬಿರಗಳನ್ನ ಏರ್ಪಡಿಸುವುದನ್ನು ನಾನು ಗಮನಿಸಿದ್ದೇನೆ. ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಹೇಗೆ, ರಂಗೋಲಿ ಹಾಕುವುದು ಹೇಗೆ, ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು ಹೇಗೆ, ಮಕ್ಕಳನ್ನು ಯಾವ ರೀತಿ ಬೆಳೆಸಬೇಕು- ಒಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಹೆಣ್ಣುಮಕ್ಕಳಿಗೆ ಕಲಿಸುವುದು ಈ ಸಂಸ್ಕೃತಿ ಶಿಬಿರಗಳ ಮುಖ್ಯ ಉದ್ದೇಶ. ನಮ್ಮ ಸಂಪ್ರದಾಯಗಳು ಸೃಜನಾತ್ಮಕವಾದರೆ ಅವು ಉಳಿಯಬೇಕೆನ್ನವುದು ನಿಜ. ಏಕೆಂದು ಅರ್ಥವಾಗದಿದ್ದರೂ ಪಾಶ್ಚಾತ್ಯ ಸಂಸ್ಕೃತಿಯ ಟೊಳ್ಳು ಅಂಶಗಳನ್ನು ಅನುಕರಿಸುವ ಇಂದಿನ ಯುವಜನಾಂಗವನ್ನು ನಾವು ಮತ್ತೆ ನಮ್ಮ ಸಂಸ್ಕೃತಿಯತ್ತ ಒಲಿಸಿಕೊಳ್ಳಬೇಕಾದ ತುರ್ತು ಇಂದು ಇದೆ. ಆದರೆ ಇಂದಿನ ಬದಲಾದ ಜೀವನ ಕ್ರಮದಲ್ಲಿ ಸಂಸ್ಕೃತಿಯನ್ನು , ಮನುಷ್ಯ ಸಂಬಂಧಗಳನ್ನು ಅಥವಾ ಕೌಟುಂಬಿಕ ಬದುಕಿನ ಬಂಧಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಹೆಣ್ಣುಮಕ್ಕಳ ಮೇಲೆ ಮಾತ್ರ ಹೊರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸುವುದು ಬೇಡವೇ? ಒಂದು ಕುಟುಂಬವು ಸುರಕ್ಷಿತವಾಗಿ ಉಳಿಯಬೇಕಾದರೆ ಎಲ್ಲ ಜವಾಬ್ದಾರಿಗಳನ್ನೂ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ಸಮಾನವಾಗಿ ಹಂಚಿಕೊಳ್ಳಲು ಕಲಿಯದಿದ್ದರೆ ವೈವಾಹಿಕ ವಿಚ್ಛೇದನದಂಥ ಘೋರ ಪರಿಣಾಮವನ್ನು ಎದುರಿಸುವವರು ಯಾರು ? ನಮ್ಮ ಮಕ್ಕಳೇ ತಾನೇ? ವಿಚ್ಛೇದನಕ್ಕೆ ಕಾರಣ ತಾವು ಸಂಪಾದನೆ ಮಾಡುತ್ತೇವೆಂದು ಅಹಂಕಾರ ಪಡುವ ಹೆಣ್ಣುಮಕ್ಕಳು, ಅವರಿಗೆ ಹೊಂದಾಣಿಕೆಯೆಂದರೆ ಏನೆಂದು ತಿಳಿಯದು ಎಂದು ಮೊನ್ನೆ ಯಾರೋ ಭಾಷಣದಲ್ಲಿ ಹೇಳಿದರು. ಆದರೆ ಹೊಸ ಬದಲಾವಣೆಗೆ ಹೊಂದಿಕೊಂಡು ಬಾಳಲು ಗಂಡು ಮಕ್ಕಳಿಗೂ ನಾವು ಕಲಿಸಬೇಕಲ್ಲವೇ? ಆದ್ದರಿಂದ ಈ ಎಲ್ಲ ವಿಚಾರಗಳನ್ನೂ ನಾವು ನೋಡುವ ದೃಷ್ಟಿ ಬದಲಾಗ ಬೇಕಾಗಿದೆ.


ಇಂದು ನಗರಗಳು ಐಟಿ-ಬಿಟಿ ಜಗತ್ತುಗಳಾಗಿ ಬಿಟ್ಟಿವೆ. ಹೆಣ್ಣುಮಕ್ಕಳೂ ಕೈತುಂಬಾ ಸಂಪಾದನೆ ಮಾಡುವ ಕಾಲವಿದು. ತಮಗೆ ದೊರಕಿದಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಅವರು ದುರುಪಯೋಗ ಮಾಡಿಕೊಳ್ಳುತ್ತಿರುವುದು ಇಂದು ಹುಟ್ಟಿಕೊಂಡಿರುವ ಇನ್ನೊಂದು ಸಮಸ್ಯೆ. ಸ್ವಾತಂತ್ರ್ಯವು ಆರೋಗ್ಯಕ್ಕೂ ವ್ಯಕ್ತಿತ್ವಕ್ಕೂ ಮಾರಕವಾಗಿ ಪರಿಣಮಿಸುವ ಸ್ವೇಚ್ಛೆಯಾಗಬಾರದಲ್ಲ? ಮಾದಕ ವ್ಯಸನ, ಮದ್ಯಪಾನ ಮತ್ತು ಧೂಮಪಾನಗಳ ಚಟಗಳಿಗೆ ಅಂಟಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆ ನಾನಿಲ್ಲಿ ಹೇಳುತ್ತಿದ್ದೇನೆ. ‘ಗಂಡು ಮಕ್ಕಳು ಮಾಡುತ್ತಿದ್ದಾರಲ್ಲ, ನಾವೇಕೆ ಹಾಗೆ ಮಾಡಬಾರದು ?’ ಎಂಬುದು ಅಂಥ ಹೆಣ್ಣುಮಕ್ಕಳ ಪ್ರಶ್ನೆ. ಇತ್ತೀಚೆಗೆ ಒಂದು ಪ್ರಸಿದ್ಧ ದಿನಪತ್ರಿಕೆಯಲ್ಲಿ ಈ ಕುರಿತು ಒಂದು ಲೇಖನ ಪ್ರಕಟವಾಗಿತ್ತು. ಮದ್ಯಪಾನವು ಹೆಣ್ಣಿನ ಶಾರೀರಿಕ ಸ್ಥಿತಿಯ ಮೇಲೆ ಗಂಡಿಗಿಂತ ಹೆಚ್ಚು ಹಾನಿಯುಂಟು ಮಾಡುತ್ತದೆಯೆಂದೂ, ಹೆಣ್ಣಿನ ಯಕೃತ್ತು ಚಿಕ್ಕದಿರುತ್ತದೆಯೆಂದೂ, ಗರ್ಭಿಣಿ ಹೆಂಗಸು ಕುಡಿದರೆ ಅದು ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆಂದೂ ಅವರ ವಾದ. ಅದು ವೈಜ್ಞಾನಿಕ ಸತ್ಯ. ಆದರೆ ಹೆಣ್ಣುಮಕ್ಕಳು ಕುಡಿಯುವುದರಿಂದ ಕೌಟುಂಬಿಕ ಬದುಕು ಹಾಳಾಗುತ್ತದೆ, ಮಕ್ಕಳ ಮೇಲೆ ದುಷ್ಪರಿಣಾಮವಾಗುತ್ತದೆ ಎನ್ನುತ್ತ ಇವೆಲ್ಲವನ್ನೂ ಕಾಪಾಡುವ ಹೊಣೆಯನ್ನು ನಯವಾಗಿ ಹೆಣ್ಣುಮಕ್ಕಳ ಮೇಲೆ ಹಾಕುವ ಹುನ್ನಾರವಿದೆಯಲ್ಲ, ಅದನ್ನು ನಾವು ವಿರೋಧಿಸ ಬೇಕಾಗುತ್ತದೆ. ‘ಗಂಡಸರು ಮದ್ಯಪಾನ ಮಾಡುತ್ತಾರಾದರೆ ಅವರಿಗೆ ಯಾವುದರಲ್ಲೂ ಕಡಿಮೆಯಿಲ್ಲದ ನಾವೇಕೆ ಮಾಡಬಾರದು’ ಎಂದು ವಾದಿಸಿ ಹೆಣ್ಣುಮಕ್ಕಳು ಕುಡಿಯುತ್ತಾರೆಂದಾದರೆ ಅದು ಮೂರ್ಖತನ. ನಾವು ಯಾವಾಗಲೂ ಇನ್ನೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನಲ್ಲವೆ ಅನುಕರಿಸಬೇಕಾದದ್ದು ? ಸಮಾನತೆಯ ಹೆಸರಿನಲ್ಲಿ ಅಪಾಯಗಳನ್ನು ಯಾಕೆ ಮೈಮೇಲೆ ಎಳೆದುಕೊಳ್ಳ ಬೇಕು? ಇನ್ನು ಕೆಲವು ಹೆಣ್ಣುಮಕ್ಕಳು ಗಂಡಸರಂತೆ ನಾವೂ ಉಡುಗೆ ತೊಡುಗೆ ತೊಟ್ಟುಕೊಳ್ಳುತ್ತೇವೆಂದು ಹೊರಡುತ್ತಾರೆ. ಅಂಥವರು ಗಂಡು-ಹೆಣ್ಣುಗಳ ನಡುವೆ ಇರುವ ಜೈವಿಕ ಮತ್ತು ಶಾರೀರಿಕ ಭಿನ್ನತೆಗಳನ್ನು ಪರಿಗಣಿಸುವುದಿಲ್ಲ. ನಮ್ಮ ನಮ್ಮ ಶರೀರ ಪ್ರಕೃತಿಗೆ ಮತ್ತು ಭೌಗೋಳಿಕ ವಾತಾವರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಟ್ಟೆ ಹಾಕಿಕೊಂಡರೆ ತಾನೆ ನಮಗೂ ಹಿತ?

ನಾವು ಸಮಾನತೆ ಸಾಧಿಸಬೇಕಾದ್ದು ಇಂಥ ಬಾಹ್ಯ ವಿಚಾರಗಳಲ್ಲಲ್ಲ. ಬೌದ್ಧಿಕ ಸಮಾನತೆ, ಸಮಾಜದಲ್ಲಿ ಸಿಗುವ ಸ್ಥಾನಮಾನಗಳಲ್ಲಿ ಸಮಾನತೆ, ಹಕ್ಕುಗಳು, ಅವಕಾಶಗಳು ಮೊದಲಾದ ವಿಚಾರಗಳಲ್ಲಿ ಸಮಾನತೆ ಸಾಧಿಸುವುದು ಮುಖ್ಯ. ಬ್ರಾಹ್ಮಣ ಸಂಘಟನೆಗಳು ಇವತ್ತು ಕೂಡಾ ಎಷ್ಟೊಂದು ಪುರುಷ ಪ್ರಧಾನವಾಗಿವೆ ಎಂದರೆ ಅಲ್ಲಿ ಮಹಿಳೆಯರು ಕೇವಲ ನಾಮ್ ಕೆ ವಾಸ್ತೆ ಇದ್ದಾರೆ. ಕೆಲವು ಸಂಘಟನೆಗಳಲ್ಲಿ ಮತ ಚಲಾಯಿಸುವುದು ಕೂಡಾ ಪುರುಷರು ಮಾತ್ರ. ಅಲ್ಲದೆ ಇವತ್ತು ಸಾರ್ವಜನಿಕ ವೇದಿಕೆಗಳಲ್ಲಿ ನೋಡಿ. ಹತ್ತು ಮಂದಿ ಪುರುಷರಿಗೆ ಒಬ್ಬ ಮಹಿಳೆ ಇದ್ದರೆ ಹೆಚ್ಚು.ಕೆಲವೊಮ್ಮೆಯಂತೂ ವೇದಿಕೆಯ ತುಂಬ ಪುರುಷರೇ ವಿಜೃಂಭಿಸುತ್ತಾರೆ. ಬ್ರಾಹ್ಮಣ ಸಮ್ಮೇಳದ ಸಂದರ್ಭ ಇದಕ್ಕೆ ಒಳ್ಳೆಯ ಉದಾಹರಣೆ. ಮನೆಯೊಳಗಿನ ಕೆಲಸಗಳು, ಕೌಟುಂಬಿಕ ಜವಾಬ್ದಾರಿಗಳಲ್ಲಿ ಸದಾ ತೊಳಲಾಡುವ ಮಹಿಳೆಯರಿಗೆ ಇದು ಬೇಕಾಗಿಯೂ ಇಲ್ಲ. ಅವರಲ್ಲಿ ಪ್ರತಿಭೆಯಿದ್ದರೂ ಅದು ಪ್ರೋತ್ಸಾಹ ಮತ್ತು ಅವಕಾಶ ಸಿಗದೆ ಕಮರಿ ಹೋಗುವುದೇ ಹೆಚ್ಚು. ಇದರ ಉಪಯೋಗ ಪಡೆದು ತೀರಾ ಸಾಮಾನ್ಯ ಪ್ರತಿಭೆಯುಳ್ಳ ಪುರುಷರು ಕೂಡಾ ಎಲ್ಲ ಅವಕಾಶಗಳನ್ನೂ ತಾವೇ ಕಬಳಿಸಿಕೊಂಡು ಮೆರೆಯುತ್ತಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅವಕಾಶಗಳು ಮಹಿಳೆಯರಿಗೆ ಸಿಗುತ್ತವೆ. ಇಂಥ ವಿಚಾರಗಳ ಕುರಿತು ಮಹಿಳ ಘಟಕಗಳಲ್ಲಿ ಚರ್ಚೆಗಳು ಆಗಬೇಕಾಗಿವೆ. ಮತ್ತು ಆ ಮೂಲಕ ಸಂಪ್ರದಾಯವನ್ನು ಬಿಟ್ಟು ಚಿಂತನೆ ಮಾಡಲಾರದ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ.


- ಡಾ.ಪಾರ್ವತಿ ಜಿ.ಐತಾಳ್



17 views0 comments

Commentaires


bottom of page