ಸಿದ್ಧಗಂಗೆಯ ಬೆಳಕು
- ಆಲೋಚನೆ
- Oct 11, 2022
- 1 min read
ಸಿದ್ಧಗಂಗೆಯ ಬೆಳಕು ಆರಿಹೋಯಿತು ಅಂದು!
ಸಮಸ್ತ ಜನರು ಅಶ್ರುತರ್ಪಣಗೈದರು ನೊಂದು!
ಭೌತಿಕವಾಗಿ ಅಳಿದ,
ಚಿರಸ್ಥಾಯಿಯಾಗಿ ಉಳಿದ,
ಕಾಯಕಯೋಗಿಯ ಸ್ಮರಣೆಗೆಂದು!!
ಸಜ್ಜನರ ಸಮ್ಮುಖದೆ ನಾವೆಲ್ಲ ಸೇರಿರುವೆವು ಇಂದು!!
ಜನಮಾನಸದ ಯೋಗಿವರ್ಯ!
ಧ್ಯಾನ ಭಕ್ತಿಯನ್ನೊಳಗೊಂಡ ಆಂತರ್ಯ!
ಸಕಲಜನ ಹಿತ ಪರಿಪಾಲಕ!
ಆಧ್ಯಾತ್ಮಿಕ ನಾಯಕ!
ಜನಸೇವೆಗೆ ಮುಡಿಪಾಗಿಟ್ಟರು ಬದುಕ!!
ಮಹಾನ್ ಶಕ್ತಿ ಚೈತನ್ಯಮೂರ್ತಿ!
ಎಲ್ಲರಲೂ ತೋರಿದರು ವಾತ್ಸಲ್ಯ ಪ್ರೀತಿ!
ಅಂತರಂಗ ಬಹಿರಂಗದಲೂ ಒಂದೇ ರೀತಿ!
ನಿಸ್ವಾರ್ಥ ಬದುಕಿನ ಆರಾಧ್ಯ ಮೂರ್ತಿ!!
ಜವಾಬ್ದಾರಿಯ ಹೊತ್ತು - ದೀಕ್ಷೆಯ ತೊಟ್ಟು!
ನಿರಂತರ ಶ್ರಮಿಸುತ್ತ-ಧೃತಿಗೆಡದೆ,
ಮುನ್ನಡೆದರು ಸಾಧನೆಯ ಕಡೆಗೆ!
ಅಭಿವೃದ್ಧಿ ಸಾಧಿಸುತ -ವಿಸ್ತರಿಸುತ
ಶ್ರೇಯಸ್ಸಿನೆಡೆಗೆ!!
ಬಾಲ ವಿಹಾರದಿಂದ ಪ್ರಾರಂಭಗೊಂಡು!
ವಿಜ್ಞಾನ ಕಲೆ ಪದವಿ - ವೃತ್ತಿಪರ ತರಬೇತಿ!
ಶಿಕ್ಷಣ - ಆಶ್ರಯ - ಅನ್ನದಾಸೋಹದ ಜೊತೆ, ಸತ್ಪಥದೆ ಜೀವಿಸುವಾ ರೀತಿ!
ಜಾತಿ ಧರ್ಮ, ಬೇಧ - ಭಾವ ಇಲ್ಲಿಲ್ಲ!
ಸಮಾನತೆಯ ತತ್ವ ಪರಿಪಾಲಿಸಿದರಲ್ಲ!!
ಸರಳ ಶತಾಯುಷಿಗೆ ಅರಸಿ ಬಂದವು -ಬಿರುದು ಸನ್ಮಾನಗಳು!!
ನಡೆದಾಡುವ ದೇವರು - ತ್ರಿವಿಧ ದಾಸೋಹಿ!
ಆಧುನಿಕ ಬಸವಣ್ಣ -ಕರ್ನಾಟಕ ರತ್ನ!
ಪದ್ಮಭೂಷಣ ಮುಡಿಗೇರಿದವು!!
ಇಷ್ಟಲಿಂಗ ಪೂಜೆ - ಹಿತಮಿತದೇ ಆಹಾರ!
ಕೆಲಸಗಳ ಪರಿಶೀಲನೆ -ಕಾಯಕ -ಪ್ರಾರ್ಥನೆ!
ಬರುವ ಭಕ್ತರ ಸಮಸ್ಯೆಗಳ ಆಲಿಸುತ,
ಸಾಂತ್ವನವ ನೀಡುತ್ತ,
ಪಾವನಗೊಂಡಿತ್ತು ಈ ಪುಣ್ಯಭೂಮಿ!!
ಮಠದ ಆವರಣದ ತುಂಬಾ ಪ್ರಾರ್ಥನೆಯ ಏಕಧ್ವನಿ!
ಭಕ್ತಿ ಭಾವದೇ ರೋಮಾಂಚನಗೊಳಿಸುವುದು ಆ ದಿವ್ಯ ಸನ್ನಿಧಿ!!!!
ಭವ ಬಂಧನವ ಕಳೆದು ನೆಲೆಸಿರ ಬಹುದೇ ದೇವಸನ್ನಿಧಿಯಲ್ಲಿ!
ನಡೆಯಬೇಕಿದೆ ಅವರು ತೋರಿರುವ ಮಾನವೀಯತೆಯ ಮಾರ್ಗದಲ್ಲಿ!!
ಸಂತ ಶಿವಕುಮಾರ ಸ್ವಾಮೀಜಿಯವರಿಗೆ ಶತಕೋಟಿ ನಮನ!!
ಈ ನಾಡ ಏಳಿಗೆಗೆ ಜನ್ಮತಾಳಿ ಬನ್ನಿ- ಆಶಿಸಿದೆ ಈ ಮನ.....!!
ಸಾವಿತ್ರಿ ಶಾಸ್ತ್ರಿ, ಶಿರಸಿ
Commentaires