top of page

ಸೋತು ಸತ್ತರೆ ಸತ್ತು ಗೆಲ್ಲುವುದಾದರೂ ಏನು ? [ಕಥೆ]

ಮಲೆನಾಡು ಅಂದರೇ ಕರ್ನಾಟಕದ ಕಾಶ್ಮೀರ..! ಮಳೆಗಾಲದಲ್ಲಿ ಮಲೆನಾಡು ಇನ್ನು ರಮಣೀಯ..ಮಲೆನಾಡು ಎಂದಾಕ್ಷಣ ತಕ್ಷಣ ನೆನಪಾಗುವುದು ಬೆಟ್ಟ, ಗುಡ್ಡ, ನದಿ, ತೊರೆ, ಕಾಡು, ಗದ್ದೆಯ ಕೋಗು, ಹಳ್ಳ, ಮಳೆಗಾಲದಲ್ಲಿ ಉಸಿರುಕಟ್ಟಿ ಹೊಯ್ಯುವ ಮಳೆ,ಅಡಿಕೆ– ಕಾಫಿ ತೋಟ...ಹಸಿರು ಸಿರಿಯ ನಡುವಿನ ಒಂದೊಂದು ದೃಶ್ಯವು, ಒಂದೊಂದು ದೃಶ್ಯಕಾವ್ಯ!! ಒತ್ತಡದ ಬದುಕಲ್ಲಿ ಸಿಲುಕಿ ನಲುಗಿದ ಮನಸ್ಸು ಮುದಗೊಂಡು ಹೊಸ ಉತ್ಸಾಹ ಮೂಡುತ್ತದೆ! ಇಂಥದ್ದೊಂದು ಪ್ರಕೃತಿ ಸಿರಿಯ ನಡುವೆ ನಿರಮ್ಮಳವಾಗಿ ಬದುಕಿಬಿಡಬೇಕೆನಿಸುತ್ತದೆ!

ನಮ್ಮ 'ವಿಶ್ವ' 'ಮಲೆನಾಡಿನ ಹೆಬ್ಬಾಗಿಲು' ಎಂದು ಕರೆಯುವ ಶಿರಸಿಯವನು..ಒಂದು ದಿನದ ಹಿಂದಿನವರೆಗೂ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದವನು ಕೈತುಂಬಾ ಸಂಬಳ.. ಗೌರವ.. ಸುತ್ತಲೂ ಹೊಗಳುಭಟ್ಟರು..

ಆದರೆ ಇವತ್ತು ಜೀವನದಲ್ಲಿ ಬಿರುಗಾಳಿ ಎದ್ದಿತ್ತು.. ! ಜೀವನ ಬದಲಾಗಿತ್ತು.. ! ಒಂದು ದೊಡ್ಡ ಪ್ರಾಜೆಕ್ಟ್ ಇವನ ತಪ್ಪಿನಿಂದ ಕಂಪನಿಗೆ ತಪ್ಪಿಹೋಗಿತ್ತು! ವಿಶ್ವ ಕಂಪನಿಯ ಗುಪ್ತ ಮಾಹಿತಿಯನ್ನು ವಿರೋಧಿ ಕಂಪನಿಗೆ ನೀಡಿ ಕಂಪನಿಗೆ ನಷ್ಟ ಆಗುವಂತೆ ಮಾಡಿರುವ ಆರೋಪ ಇತ್ತು ಅವನ ಮೇಲೆ.. ತಕ್ಷಣ ಜಾರಿಗೆ ಬರುವಂತೆ ಆದೇಶ ಹೊರಡಿಸಿ ವಿಶ್ವನನ್ನು ಕೆಲಸದಿಂದ ತೆಗೆಯಲಾಗಿತ್ತು! ನಿನ್ನೆತನಕ ಹಿಂದೆ ಮುಂದೆ ಸುತ್ತುತ್ತಿದ್ದ ಜನ ಇಂದು ಫೋನ್ ಕೂಡಾ ರಿಸೀವ್ ಮಾಡುತ್ತಿರಲಿಲ್ಲ!! ಆದ ಅವಮಾನ ಅವನನ್ನು ತತ್ತರಿಸುವಂತೆ ಮಾಡಿತ್ತು!

ಆವತ್ತು ಆಫೀಸಿನಿಂದ ಮನೆಗೆ ಬಂದವನಿಗೆ ಏನು ಬೇಡವಾಗಿತ್ತು. ಇನ್ನು ಬೆಂಗಳೂರಿನಲ್ಲಿರುವ ಮನಸ್ಸಾಗಲಿಲ್ಲ ಅವನಿಗೆ.. ಮರುದಿನ ಬೆಳಗ್ಗೆಯೇ ತನ್ನ ಕಾರನ್ನು ತೆಗೆದುಕೊಂಡು ಊರಿಗೆ ಹೊರಟಿದ್ದ.. ಬೆಳಗ್ಗೆ ಅವನು ಹೊರಟಾಗ 6 ಗಂಟೆ.. ಸತತವಾಗಿ 6 ತಾಸು ಡ್ರೈವ್ ಮಾಡಿಕೊಂಡು ಬಂದಿದ್ದ.. ಶಿವಮೊಗ್ಗಕ್ಕೆ ಬಂದಾಗ ಹೊಟ್ಟೆ ತಾಳ ಹಾಕುತ್ತಿತ್ತು.. ಬೆಳಗಿನಿಂದ ಏನೂ ತಿಂದಿರಲಿಲ್ಲ.. ಇನ್ನೂ ಸಾಗರಕ್ಕೆ 72 ಕಿಲೋಮೀಟರ್.. ಅಲ್ಲಿಂದ ಮುಂದೆ ಶಿರಸಿಯನ್ನು ತಲುಪಲು 80 ಕಿಲೋಮೀಟರ್ ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಿದ.. ದಾರಿಯುದ್ದಕ್ಕೂ.. ಅವಳು ಯಾಕೆ ಹೀಗೆ ಮಾಡಿದಳು?? ಛೇ.. ಯಾಕೆ ಮೋಸ ಮಾಡಿದಳು?? ಎಂದೆಲ್ಲಾ ಯೋಚಿಸುತ್ತಿದ್ದ ಅವನಿಗೆ ಇನ್ನು ಡ್ರೈವ್ ಮಾಡಲಾಗುವುದಿಲ್ಲ ಎನಿಸಿತು.. ಆದರೂ ಊಟ ಮಾಡುವ ಮನಸ್ಸಾಗಲಿಲ್ಲ..ಅಲ್ಲೇ ದಾರಿಯಲ್ಲಿ ಕಂಡ ಎಳನೀರು ಕುಡಿಯುವ ಮನಸ್ಸಾಗಿ ಕಾರು ನಿಲ್ಲಿಸಿದ.ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ ಹೊಟ್ಟೆಗೆ ಸ್ವಲ್ಪ ಎಳನೀರು ಇಳಿದ ಮೇಲೆ ಬುದ್ಧಿ ಸ್ವಲ್ಪ ಚುರುಕಾಗಿತ್ತು.. ಕಾರಿನಲ್ಲಿ ಬಂದು ಕುಳಿತವನಿಗೆ ಹೊರಟಾಗಿನಿಂದಲೂ ಒಂದೇಸಮನೆ ಕೇಳುತ್ತಿದ್ದ ಹಿಂದಿ ಹಾಡು ಬೇಸರ ತರಿಸಿತ್ತು..ಬೇರೆ ಏನೋ ಹುಡುಕುತ್ತಿದ್ದವನಿಗೆ ಹೋದ ಸಲ ಅಪ್ಪ ಬೆಂಗಳೂರಿಗೆ ಬಂದಾಗ ತಂದಿದ್ದ U.S.B ಸಿಕ್ಕಿತು. U.S.B ಯನ್ನು ಆಡಿಯೋ ಪ್ಲೇಯರ್ ಕಿವಿಗೆ ಚುಚ್ಚಿ ಓನ್ ಮಾಡುತ್ತಿದ್ದಂತೆ ಶುರುವಾಗಿದ್ದು ವಿಶ್ವಾಮಿತ್ರ ಮೇನಕೆ ಯಕ್ಷಗಾನ!

ಯಕ್ಷಗಾನ ಕೇಳುತ್ತಾ ಕಾರು ಓಡಿಸುತ್ತಿದ್ದವನ ತಲೆಯಲ್ಲಿ ಏನೋ ಸಂಚಲನ! ಅವಳೇ! ಅವಳೇ! ಮೋಸ ಮಾಡಿದ್ದು..ಅವಳ ಉದ್ದೇಶವೇ ಅದಾಗಿತ್ತು.. ಆ ಪ್ರೊಜೆಕ್ಟ್ ಕೈವಶ ಮಾಡಿಕೊಳ್ಳುವುದು.. ಅಷ್ಟರಲ್ಲೇ ಎದುರಿನಿಂದ ಬಂದ ಲಾರಿ ಅವನ ಯೋಚನೆಗೆ ಬ್ರೇಕ್ ಹಾಕಿತ್ತು.. ಅವನ ಗಮನ ಜೋರಾಗಿ ಕೇಳಿಸುತ್ತಿದ್ದ ಯಕ್ಷಗಾನದ ಕಡೆ ಹೋಯಿತು..

ಅಲ್ಲಿ ಮೇನಕಾ.. " ದೇವೇಂದ್ರ ನನ್ನಿಂದ ಕೌಶಿಕನ ತಪೋಭಂಗ ಸಾಧ್ಯವೇ?? ನಿನಗೇಕೆ ನನ್ನ ಮೇಲೆ ವೈರ? ಬಂಡೆಯ ಮೇಲೊಂದು ಬಂಡೆಯಂತೆ ಕುಳಿತು ತಪಸ್ಸು ಮಾಡುತ್ತಿರುವ ಕೌಶಿಕನೇನು ಸಾಮಾನ್ಯನೇ? ನೀನು ಹೇಳಿದಂತೆ ನಾನೇನಾದರೂ ಕೌಶಿಕನ ತಪೋಭಂಗ ಮಾಡಲು ಹೋಗಿ ಅವನೇನಾದರೂ ಕೋಪದಿಂದ ನನಗೆ ಶಾಪ ಕೊಟ್ಟರೇ ನನ್ನ ಗತಿಯೇನು? ನನ್ನ ಕುಡಿಗಣ್ಣ ನೋಟದಿ ಚಂಚಲ ಚಿತ್ತದ ಹುಡುಗರ ಗಮನ ಸೆಳೆಯಬಲ್ಲೆನೇ ಹೊರತು.. "ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜೋ ಬಲಂ ಬಲಂ" ಎನ್ನುತ್ತಾ ಸಕಲ ವೈಭೋಗವನ್ನು ಬಿಟ್ಟು ಮಹರ್ಷಿ ಆಗಲು ಹೊರಟ ಈ ಕೌಶಿಕ ನನ್ನ ಕಡೆ ನೋಡುವನೇ?' ಆಡಿಯೋ ಸಿಸ್ಟಮ್' ನಿಂದ ಬರುತ್ತಿದ್ದ ಯಕ್ಷಗಾನದ ಈ ಮಾತುಗಳನ್ನು ಕೇಳಿದ

ವಿಶ್ವನಿಗೆ ತನ್ನ ಜೀವನದಲ್ಲಿ ನೆಡೆದ ಘಟನೆ ನೆನಪಾಯಿತು..

"ಸರ್ ' ಒಳಗೆ ಬರಬಹುದೇ?' ಎನ್ನುವ ಕೋಗಿಲೆಯಂಥ ಧ್ವನಿ ಕೇಳಿಯೂ ಕೆಲಸದಲ್ಲಿ ಮಗ್ನನಾಗಿದ್ದ ವಿಶ್ವ ತಲೆ ಮೇಲೆತ್ತದೆ..yes ಎಂದ.. 'ಸರ್ ನನ್ನ ಹೆಸರು ಅಪ್ಸರಾ ಇವತ್ತು join ಆಗಿದೀನಿ ' ಎಂದಾಗಲೂ ತಲೆ ಎತ್ತದೆ.. ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದ್ದ..senior employee ಈಶ್ವರ್ ಅವರನ್ನು ಒಳಕರೆದು ಅವರಿಗೆ ಮಾಡಬೇಕಾಗಿದ್ದನ್ನೆಲ್ಲ ವಿವರಿಸಿ.. Thank u ಎನ್ನುವಾಗ ಅಪ್ಸರಾಳನ್ನು ನೋಡಿದ್ದ..

ಹೀಗಾದರೇ ಅಂದುಕೊಂಡಿದ್ದನ್ನು ಸಾಧಿಸುವುದು ಕಷ್ಟವೇ ಇದೆ ಎಂದುಕೊಂಡಿದ್ದಳೋ ಏನೋ ಆಗ ಅಪ್ಸರಾ!

ಇತ್ತ ಯಕ್ಷಗಾನದ ಮೇನಕೆ ಕೂಡ ದೇವೇಂದ್ರನಲ್ಲಿ ಮಾತು ಮುಂದುವರಿಸುತ್ತಾ.. ನನಗೆ ಮಾರ ಮತ್ತು ಮಾರುತ ಸಹಾಯ ಮಾಡಿದರೆ ಕೌಶಿಕನ ತಪೋಭಂಗ ಮಾಡುವ ಪ್ರಯತ್ನವನ್ನು ಮಾಡಬಹುದೋ ಏನೋ ಎನ್ನುತ್ತಿದ್ದಳು.. ಮಾರುತ ನಿಸರ್ಗದಲ್ಲಿ ಬದಲಾವಣೆ ಮಾಡುವ ಮೂಲಕ.. ಮನ್ಮಥನ ಹೂ ಬಾಣ ಕೌಶಿಕನಿಗೆ ತಾಗಿದರೇ ಅವನ ಚಿತ್ತ ನನ್ನತ್ತ ಹರಿದಿತು... !

ಆಗ ವಿಶ್ವ ಯೋಚಿಸತೊಡಗಿದ.. ಹೌದು ಅಪ್ಸರಾಳಿಗೆ ನನ್ನ ತಲೆಕೆಡಿಸಲು ಯಾರು ಸಹಾಯ ಮಾಡಿರಬಹುದು ಎಂದು... ಸಧ್ಯಕ್ಕೆ ಎಲ್ಲವೂ ಗೋಜಲಾಗಿತ್ತು ಅವನಿಗೆ..

ಕಣ್ಣು ರಸ್ತೆಯ ಮೇಲಿದ್ದರೂ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು..

ಅಪ್ಸರಾ ಕಂಪನಿಗೆ ಸೇರಿ ಕೆಲವು ದಿನಗಳವರೆಗೂ ಅವರಿಬ್ಬರ ಭೇಟಿ ಅಷ್ಟಾಗಿ ಆಗುತ್ತಿರಲಿಲ್ಲ.. ವಿರಾಮದ ಸಮಯದಲ್ಲಿ ಅಪ್ಸರಾ ವಿಶ್ವನ ಎದುರಿಗೆ ಸುಳಿದಾಡಿದರು ಅವಳಿಗೆ ವಿಶ್ವನನ್ನು ಮಾತನಾಡಿಸುವ ಧೈರ್ಯವಿರಲಿಲ್ಲ.. ! ಯಾಕೆಂದರೆ ವಿಶ್ವನ ವ್ಯಕ್ತಿತ್ವವೇ ಹಾಗಿತ್ತು.. ಅವನ ಗಮನವೆಲ್ಲ ಕೆಲಸದ ಮೇಲೆ ಇತ್ತು.. ಯಾವತ್ತೂ ಹಲ್ಲು ಗಿಂಜಿಕೊಂಡು ಹುಡುಗಿಯರ ಹಿಂದೆ ಹೋದವನಲ್ಲ..ಅವನ ಏಕಾಗ್ರತೆ ಅವನನ್ನು 32 ವರ್ಷಕ್ಕೆ ವೃತ್ತಿ ಜೀವನದ ಉತ್ತುಂಗಕ್ಕೆ ತಲುಪಿಸಿತ್ತು..

ಎಂದಿನಂತೆ ಆಫೀಸಿಗೆ ಬಂದ ವಿಶ್ವನಿಗೆ ಅವತ್ತೊಂದು ಆಶ್ಚರ್ಯ ಕಾದಿತ್ತು.. ಆಫೀಸಿನಲ್ಲಿ ಅದೇನೋ ಸಂಭ್ರಮ.. ಎಲ್ಲರೂ ಅಪ್ಸರಳಿಗೆ ಶುಭ ಕೋರುತ್ತಿದ್ದರು.. ಅಚಾನಕ್ಕಾಗಿ ಎದುರಿಗೆ ಬಂದ ಅಪ್ಸರಾ ಸರ್ "ಇವತ್ತು ನನ್ನ ಜನ್ಮದಿನ ನೀವು ನನಗೆ ವಿಶ್ ಮಾಡುವುದಿಲ್ಲವೇ ??" ಎಂದು ಕೇಳಿದಳು.. ಎದುರಿಗೆ ತುಂಬಾ ಹತ್ತಿರದಲ್ಲೇ ತಿಳಿ ನೀಲಿ ಸೀರೆಯುಟ್ಟು ಅಪ್ಸರೆಯಂತೆ ಕಾಣುತ್ತಿದ್ದ ಅಪ್ಸರಾಳನ್ನು ನೋಡಿ ವಿಶ್ವನ ಹೃದಯಬಡಿತ ಜೋರಾಯಿತು..!ವಿಶ್ವನಿಗೆ ತಿಳಿಯದೆ ಅವನ ಮುಖದಲ್ಲಿ ಮಂದಹಾಸ ಮೂಡಿತ್ತು.. ವಿಶ್ ಮಾಡಿ ಮುಂದೆ ಹೋರಾಟವನು ಮತ್ತೆ ಹಿಂತಿರುಗಿ ಅವಳನ್ನು ನೋಡಿದ್ದ.. ಹಾಗೆ ಕಾಲಿಟ್ಟಿದ್ದಳು ಅಪ್ಸರಾ ವಿಶ್ವನ ಜೀವನದೊಳಗೆ!

"ಬ್ರಹ್ಮರ್ಷಿ ಆಗಲು ಹೊರಟ ಗಾಧಿ ಸುತ,, ಕನ್ಯಾಕುಬ್ಜದ ದೊರೆ, ಭೋಗ ಭಾಗ್ಯಗಳನ್ನು ಬಿಟ್ಟು ಬಂದ ನಾನು .. ಮೇನಕೆಯ ಮೋಹಕ್ಕೆ ಬಲಿಯಾಗಿ ಬದುಕಿನ ಗುರಿಯನ್ನೇ ಮರೆತೆ.." ಎನ್ನುವ ಮಾತುಗಳು ಆಡಿಯೋ ಸಿಸ್ಟಮ್ನಿಂದ ಬರುತ್ತಿತ್ತು.. ತಾನು ಅಪ್ಸರಳಿಂದ ಕಳೆದುಕೊಂಡ ಗೌರವ, ಹುದ್ದೆಗಳ ನೆನಪಾಗಿ 'ಆಡಿಯೋ ಸಿಸ್ಟಮ್' off ಮಾಡಿದ ವಿಶ್ವ...

ಅಪ್ಸರಾಳ ಮಾತು, ನಗು ವಿಶ್ವನ ತಲೆ ಕೆಡಿಸಿತ್ತು! ಅಪ್ಸರಾಳ ಉದ್ದೇಶ ಬೇರೆಯೇ ಇತ್ತು! ಅವಳಿಗೆ ಆ ಪ್ರಾಜೆಕ್ಟನ ಮಾಹಿತಿ ಬೇಕಿತ್ತು.. ವಿಶ್ವ ಅವಳನ್ನು ಪೂರ್ತಿಯಾಗಿ ನಂಬಿದ್ದ.. ಅಪ್ಸರಾಳ ಪ್ರೀತಿಯ ನಾಟಕವನ್ನು ನಂಬಿದ್ದ ವಿಶ್ವ ಒಂದು ದಿನ ಲಹರಿಯಲ್ಲಿ.. "ನಾನು ಪ್ರಾಜೆಕ್ಟಿನ ಎಲ್ಲಾ ಮುಖ್ಯ ವಿಷಯಗಳನ್ನು hard disk ನಲ್ಲಿ save ಮಾಡಕೋತೀನಿ ಎಂದಿದ್ದ.." ಅವನ ಅದೇ ಮಾತನ್ನು ದುರುಪಯೋಗಪಡಿಸಿಕೊಂಡ ಅಪ್ಸರ ಅವನಿಗೆ ಮೋಸ ಮಾಡಿದ್ದಳು..!! ಮಾಹಿತಿಯನ್ನು ವಿರೋಧಿ ಕಂಪನಿಗೆ ನೀಡಿ ವಿಶ್ವನನ್ನು ಸಿಕ್ಕಿಸಿದ್ದಳು.. ಇದೆಲ್ಲಾ ಯೋಚಿಸುತ್ತಿದ್ದ ವಿಶ್ವನ ಮನಸ್ಸು ಆತ್ಮಹತ್ಯೆಯ ಕಡೆಗೆವಾಲಿತ್ತು...

ಒಟ್ಟಿನಲ್ಲಿ ಪ್ರೀತಿ, ಕೆಲಸ ಎಲ್ಲಾ ಕಳೆದುಕೊಂಡ ವಿಶ್ವ.. ಎಲ್ಲರ ಮೇಲೂ ನಂಬಿಕೆ ಕಳೆದುಕೊಂಡಿದ್ದ.. 'ಇನ್ನು ಯಾಕೆ ಬದುಕಿರಬೇಕು... ಈ ಅವಮಾನ, ಅಪಮಾನ ನನಗ್ಯಾಕೆ ಬೇಕು..? ಈ ಜೀವನ ಯಾರಿಗೆ ಬೇಕು? ಈ ರೀತಿಯ ಬದುಕಿಗಿಂತ ಸಾವೇ ಸುಲಭ ಎಂದುಕೊಳ್ಳುತ್ತಾ' ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದ ವಿಶ್ವ.. ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸುವುದರಲ್ಲಿದ್ದ..

ಅಷ್ಟರಲ್ಲೆ ಅವನ ಫೋನ್ ರಿಂಗ್ ಆಯಿತು..! ಕಾರನ್ನು ಸೈಡಿಗೆ ನಿಲ್ಲಿಸಿ ಫೋನ್ ರಿಸೀವ್ ಮಾಡಿದ.. ಆ ಕಡೆಯಿಂದ 'ಹಲೋ ಅಣ್ಣ' ಎಂದಳು ತಂಗಿ.. ಇವನು 'ಹಲೋ' ಎನ್ನಲೂ ಸಮಯ ಕೊಡದೆ ಮಾತಾಡಲು ತೊಡಗಿದಳು.." ಅಣ್ಣ ಟಿ.ವಿ ನೋಡಿದ್ಯಾ? ಆ ಅವನು ಸಿನೇಮಾದ ಹೀರೋ ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ.. 34 ವರ್ಷಕ್ಕೆ ಅವನಿಗೇನು ಬಂದಿತ್ತು ರೋಗ? ನಿಂಗೆ ಗೊತ್ತಲ್ಲ ಅವನು ನನ್ನ favorite ಅಂತ...

ಹುಂ ಎಂದ ವಿಶ್ವ..

ಅಲ್ಲಾ ಅಣ್ಣ! ಅವತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾಷಣ ಮಾಡುತ್ತಾ ಎಷ್ಟು ಚೆನ್ನಾಗಿ ಹೇಳಿದ್ದಾ ಅಲ್ವಾ? ಹಣ ಮತ್ತು ಹೆಸರು ಎರಡರಿಂದಲೇ ಜೀವನದಲ್ಲಿ ಸುಖ ಕಾಣುವುದಕ್ಕೆ ಸಾಧ್ಯವಿಲ್ಲ.. ನಾವು ಮಾಡುವ ಕೆಲಸದಲ್ಲಿ ನಮಗೆ ಖುಷಿ ಸಿಗಬೇಕು ಅಂತಾ.. ತಾಯಿಯಿಲ್ಲದ ಅವನನ್ನು ಅವನ ಅಪ್ಪ, ಅಕ್ಕಂದಿರು ಹೀಗೆ ಅವನು 'ಸಾಯಲಿ' ಎಂದು ಅಷ್ಟು ಕಷ್ಟ ಪಟ್ಟು ಸಾಕಿದರೇನು?


ತಂಗಿಯ ಗದ್ಗದಿತ ಸ್ವರ ಅವಳ ದುಃಖವನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು.. "ಬೇರೆಯವರಿಗಾಗಿ ಸಾಯುವವರು.. ನಮ್ಮವರಿಗಾಗಿ ಯಾಕೆ ಬದುಕುವುದಿಲ್ಲ "ಅಣ್ಣ ಎಂದಳು.. "ಅವನ ವಯಸ್ಸಾದ ತಂದೆಯ ದುಃಖ ನೋಡಲಾಗುತ್ತಿಲ್ಲ" ಎಂದು ತಂಗಿ ಹೇಳುತ್ತಿರುವಾಗಲೇ.. 'ಮನೆಗೆ ಬರ್ತಿದ್ದೇನೆ' ಕಣೆ ಅಲ್ಲೇ ಮಾತಾಡೋಣ ಎಂದು ಫೋನ್ ಕಟ್ ಮಾಡಿದ...

ಛೇ.. ಎಂಥಾ ಕೆಲಸ ಮಾಡಲು ಹೊರಟಿದ್ದೆ.. ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ..ಬದುಕಿದ್ದರೆ ಬೇಕಾದಷ್ಟನ್ನು ಸಾಧಿಸಬಹುದು.. ಪರಿಹಾರವಿಲ್ಲದ ಸಮಸ್ಯೆಯಿಲ್ಲಾ.. ಸೋತೇನೆಂದು ಸತ್ತರೆ.. ಸತ್ತು ಗೆಲ್ಲುವುದು ಏನನ್ನು? ಎಂದು ಯೋಚಿಸುತ್ತ ಹೊಸ ಗುರಿಯೊಂದಿಗೆ ಹೊಸ ಬೆಳಕಿನ ನಿರೀಕ್ಷೆಯೊಂದಿಗೆ ಮುಂದಿನ ಹೆಜ್ಜೆಯಿಟ್ಟ ವಿಶ್ವ .....

00=00
: ಸಂಗೀತಾ ವೈದ್ಯ

133 views0 comments

Comentarios


bottom of page