ರಾವಣನ ಕಾಲ ಸದ್ದು ದೂರವಾಗೆ
ಕೆರಳಿ ನಿಂತಿದ್ದ ಸೀತೆಯ
ಸೆರಗ ತುದಿ ಕಣ್ಣೀರ ತೊಡೆಯಿತು
ಹೆಜ್ಜೆ ಸಾಗಿದ ಹಾದಿಯತ್ತ
ಹರಿದ ಆಕೆಯ ನೋಟ
ನಿಡುಸುಯ್ದಿತು
ಲಂಕಾಧೀಶ ಹೆಚ್ಚು ಯಾಚಿಸಬೇಡ
ನಾನು ರಾಮನ ಮಡದಿ
ಅಶೋಕ ವನದ ಒಂದೊಂದು ಹೂ
ಅರಳಿದಾಗಲೂ
ಸಾಗರದಾಚೆಯ ಅವನ ನೆನಪು
ಗುಟ್ಟಾದ ಮನದ ಮಾತಿದು
ಹೆಣ್ಣಿಗೆ ಧೈರ್ಯವಂತ ಇಷ್ಟ
ಏನು ಮಾಡಲಿ?
ಪ್ರಜಾರಾಧಕನ ಮಡದಿ ನಾನು
ಸೂರ್ಯವಂಶದ ರಾಣಿ
ಅವನಿದ್ದರೂ ನೀನಿದ್ದರೂ
ನಾನು ರಾಣಿಯೇ
ಅವನ ರಾಣಿಯಾಗಿ ಮೆರೆಯಲಿಲ್ಲ
ನಿನ್ನ ರಾಣಿಯಾಗಿ ಮೆರೆಯಲಾರೆ
ಅಯೋಧ್ಯೆಯ ರಾಣಿಗೆ
ನಿನ್ನ ನೆನಪು ಆಗದಿರದು
ಇದು
ಧರ್ಮಕ್ಕೆ ತಿಳಿಯದ ಮಾತು
ಆದರೂ ಪಾಲಿಸುತ್ತೇನೆ
ಧರ್ಮವನ್ನು
ಜಗವು ನನಗೆ ನೀಡುವ ಸ್ಥಾನ
ನನ್ನ ಮನದಲ್ಲಿ ನಿನಗೂ ಇದೆ
ಇದು
ಹೆಣ್ಣಿನ ಮನದ ಮಾತು.
=000=
- ನೂತನ ದೋಶೆಟ್ಟಿ
ನೂತನ ದೋಶೆಟ್ಟಿಯವರು ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಸಮೂಹ ಸಂವಹನಹಾಗೂ ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೂರು ಕವನ ಸಂಕಲನ, ಒಂದು ಕಥಾಸಂಕಲನ ಹಾಗೂ ಬಿಡಿ ಬರಹಗಳ ಸಂಕಲನವನ್ನು ಹೊರತಂದಿದ್ದಾರೆ. ಇವರ ಕಥಾ ಸಂಕಲನ ಕುವೆಂಪು ವಿಶ್ವವಿದ್ಯಾಲಯದ ಪದವಿ ವಿಧ್ಯಾರ್ಥಿಗಳಿಗೆ 2010 ರಲ್ಲಿ ಪಠ್ಯವಾಗಿತ್ತು. ಅದೇ ರೀತಿ ಇವರ ಕವನ ಸಂಕಲನವು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆಪಠ್ಯವಾಗಿತ್ತು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನಗಳು ದೊರಕಿವೆ. ಒಬ್ಬ ಭರವಸೆಯ ಬರಹಗಾರ್ತಿಯಾಗಿ ನೂತನ ದೊಸೆಟ್ಟಿ ಯವರು ಪರಿಚಿತರಾಗಿದ್ದಾರೆ -ಸಂಪಾದಕ
Comments