ತಾಯಿ ತಾಯಾದ ಮಾತು
ಗೆಲ್ಲುವ ಹಠಕ್ಕೆ
ಜನ ಸಮುದಾಯದ್ದೆ ಉಸಿರು
ಗದ್ದೆ ಲೋಕದ ನಗುವಿಗೆ
ಊರ ತುಂಬಾ ನಂಟು.
ಎಷ್ಟೊಂದು ಕರುಳಬಳ್ಳಿಗಳು
ಹೆಗಲ ಹೊತ್ತ ಸೆರಗಿನಲಿ
ಸೂರಿಲ್ಲದವರ ಸಾವಿರ ಚಿತ್ರಗಳು.
ನಡೆಯುವ ಪ್ರತಿ ಹೆಜ್ಜೆಯಲ್ಲಿಯೂ
ಧಿಕ್ಕಾರ ಕೂಗಿದವರ ಅಂಗಾಲ ಗೆರೆಗಳು.
ಧ್ವನಿ ಇಲ್ಲದ ಗೋಡೆಗಳು ಕೆಳೀಸಿಕೊಂಡವೇ ಅಕ್ಕನ ಸಾವಿರ-ಸಾವಿರ ಮಾತುಗಳ
ದಿಕ್ಕಿಲ್ಲದ ಊರಲ್ಲಿ ಅಂಗಾಲಿನ ದಾರಿ ಇದು
ಮುಟ್ಟದಿದ್ದರೂ ನಡೆದೇ ನಡೆಯುವುದು
ತೊಟ್ಟಿಲ ಹೊತ್ತ ಗದ್ದೆ ಬಯಲಲ್ಲಿ
ಜನಸಮುದಾಯದ ಜೋಕಾಲಿಯದ್ದೇ ಕನಸು.
ಅಲ್ಲಿ ಇಲ್ಲಿ ಪಂಚಾಯಿತಿ ಕಟ್ಟೆಯಲಿ
ಹರತಾಳದೂರಲ್ಲಿ
ಅಕ್ಕ ಅಕ್ಕನೆಂಬ ಶಬುದ
ಮಿಡಿವ ಕರುಳಿಗೆ ಒಡಹುಟ್ಟಿದ ಸಾಕ್ಷಿ ಬೇಕೆ ?
ಸುನಂದಕ್ಕನಂಥವರು ಸಾಕು
ಬಸವರಾಜ ಹೂಗಾರ.
Comments