ಅಂಗೈಗಳಲಿ ಗದ್ದವ ಇಟ್ಟು
ಕಿಟಕಿಯ ಸರಳಿಂದಾಚೆಗೆ ನೋಡುತ
ಇದ್ದಾನವನು ಇದ್ದಾನೆ
ಹಾಗೇ ಹಾಗೇ ಇದ್ದಾನೆ
ನಗರೇಶ್ವರ ಗುಡಿ ಚೌಗಡ ಕೇಳಿಸಿ
ಮಸೀದಿಯಿಂದ ದನಿಯೂ ಬಂದು
ಹಿತ್ತಲಿನಲ್ಲಿ ಕಾವ್ ಕಾವ್ ಕೇಳಿ
ಅಲ್ಲಿಯೆ ಇದ್ದಾನವನು ಹೌದು
ಅಲ್ಲಿಯೇ ಇದ್ದಾನೆ !
ತಲಬಾಗಿಲ ಕದ ತೆಗೆದೂ ಆಗಿ
ಅಂಗಳಕ್ಕೆ ಥಳಿ ಹೊಡೆದೂ ಆಗಿ
ರಂಗವಲ್ಲಿಯನು ಬಿಟ್ಟೂ ಆಗಿ
ಅವ್ವನ ಕೂಗು ಕೇಳಿಯು ಆಗಿ
ಇದ್ದಾನಿದ್ದಾನಿದ್ದಾನೆ
ಇನ್ನೂ ಅಲ್ಲಿಯೆ ಇದ್ದಾನೆ !
ಪೇಪರು ಹೊಸಿಲಲಿ ಬಿದ್ದೂ ಆಯಿತು
ಸೊಪ್ಪು ಮಾರುವವಳು ಹೊರಟೂ ಹೋದಳು
ನಲ್ಲಿಯ ಸೊರ್ ರರ್
ಶುರವೂ ಆಯಿತು
ಟಕ್ ಟಕ್ ಟಕ್ ಟಕ್
ಕೋಲಿನ ಸದ್ದು
ಮೇಲಿನ ಮನೆಯಾ
ದೇಸಾಯರದು
ವಾಕಿಂಗ್ ಮುಗಿಸಿ
ಬಂದೂ ಆಯಿತು
ಅಪ್ಪನ ತುಟಿಯಲಿ ಟೀ ಇಳಿಯುವಾ ಯಾರಿಗು ಕಾಣದ ದೂರದಲೆಲ್ಲೋ
ಸರರ ಸೌಂಡೂ ಕೇಳಿಸಿ ಆಯಿತು ಅಡಗಿಕೊಂಡಿಹುದನೇನೋ ಅವನು
ಉಂಹಂ ಉಂಹುಂ ನೋಡುತಲಿದ್ದಾನಿದ್ದಾನೆ !
ಉಂಹುಂ ಉಂಹುಂ ಸಂಡೇ ಅಂದರೆ ಸಂಡೇ ಅದು
ಇದ್ದಾನಿನ್ನೂ ಇದ್ದಾನೆ ಎಲ್ಲಾ ಮರೆಸಿ ಎಲ್ಲಿಯೊ ಇರಿಸಿ
ಅವನು ಅಲ್ಲಿಯೆ ಇದ್ದಾನೆ ! ಸುಮ್ಮನೆ ಇರಿಸುವ ಸಿಹಿಸಿಹಿ ಉಂಡೆ
ಯಾರಿಗು ಕಾಣದ ಹಾಗೇ ಹೂಂ
ಈದಿನ ಸಂಡೆ, ಏನಿದು ಮೂಡೆ (mooಜ) . . .? ಮೆಲ್ಲುತಲಿದ್ದಾನಿದ್ದಾನೆ
ಕಾಲನು ಚಾಚಿ ಉದ್ದಕೆ ಉದ್ದಕೆ
ಬಿದ್ದುಕೊಂಡಲ್ಲಿಯೆ ಅಲ್ಲಿಯೆ ಅಲ್ಲಿಯೆ
ಕಿಟಕಿಯಲ್ಲಿ ಮುಖವಿಟ್ಟು ಆಚೆಗೆ
ಏನೊ ನೋಡುತ್ತಿದ್ದಾನವನು
ಇದ್ದಾನಿದ್ದಾನಿದ್ದಾನೆ !ಉಪ್ಪಿಟ್ಟೇ ಉಪ್ಪಿಟ್ಟು, ಉಪ್ಪಿಟ್ಟು !
ಉಪ್ಪಿಟ್ಟೇ ಉಪ್ಪಿಟ್ಟು
ಉಪ್ಪಿಟ್ಟಂದ್ರೆ ಉಪ್ಪಿಟ್ಟು
ಇದಕ್ ಸಮಾ ಯಾವದುಂಟು
ಇದನ್ನ ಬಿಟ್ರೆ ಉಂಟೆ ಉಂಟೆ
ಬ್ರಹ್ಮಾಂಡದಲ್ಲಿ ಬೇರೆ ಉಂಟೆ
ಅದಕ್ಕೇ ಬನ್ನಿ
ತಿನ್ನಿ ತಿನ್ನಿ
ನಾಯಿ ಜೂಲಿಗು ಉಪ್ಪಿಟ್ಟು
ಉಪ್ಪಿಟ್ಟು ಉಪ್ಪಿಟ್ಟು
ಪುಟಾಣಿ ಗುಬ್ಬಿಗು ಉಪ್ಪಿಟ್ಟು
ಉಪ್ಪಿಟ್ಟೇ ಉಪ್ಪಿಟ್ಟು
ಸಳ್ಳನೆ ಇಳಿಯುವ
ಬಾಲ ಏರಿಸುವ
ಅಳಿಲಣ್ಣನಿಗೂ ಒಂದಿಷ್ಟು
ಘಮಘಮಾಡ್ಸುವಾ ಉಪ್ಪಿಟ್ಟು
ಮಂಕಿ ಮರಿಯೆ
ಮಿಕಿ ಮಿಕಿ ಮಿಕಿ ಮಿಕಿ
ನೋಡೋದ್ಯಾಕೆ ಹಿಡಿ ಹಿಡಿ ಹಿಡಿ ಹಿಡಿ
ಬೇಕೇ ನಿನಗೂ ಉಪ್ಪಿಟ್ಟು
ಸಾಲು ಹಿಡಿದಿರುವ ಇರುವೆಗಳೆ
ವೈಯ್ಯಿರಿ ಹೊರೆ ಹೊರೆ ಉಪ್ಪಿಟ್ಟು
ಒಪ್ಪವಾಗಿ ಅಹ ಕುಳಿತುಕೊಂಡಿರುವ
ಮೊಗೆಮೊಗೆದಷ್ಟೂ ಮಿಕ್ಕುತಲಿರುವ
ಮೆದುಮೆದುವಾದ ಉಪ್ಪಿಟ್ಟು
ರಾಜಾ ರೋಜಾ
ಸಿದ್ದಾ ಡಿಸೋಜ
ರಂಜನಿ ರಜನಿ
ಮೌಸಮಿ ಸಿಮಿ
ಸಂಜು ಸಚಿನ್
ಬಾಬು ವಿನ್‍ಸ್ಟನ್
ಎಲ್ಲರಿಗೂ ಕೈತುತ್ತು
ಕೊಟ್ಟು ಕೊಟ್ಟು ಉಪ್ಪಿಟ್ಟು
ಆಗಿಹೋಗಿಹನು ಒಬ್ಬಟ್ಟು
ಎಲ್ಲರಿಗೂ ನಮ್ ಪುಟ್ಟು
ಭಲೆ ಅನ್ನಿರಿ ಭಲೆ ಅನ್ನಿರಿ
ಭಲೆ ಭಲೆ ಭಲೆ ಭಲೆ ಭಲೆ ಅನ್ನಿರಿ
ಏನ್ ಕಾರಣಾ ಈ ಪರಿ ದಾನಾ
ಉಪ್ಪಿಟ್ಟಿನದೀ ಸಮಾರಾಧನಾ
ಅಂತಾ ಮಾತ್ರಾ ಬಾಯ್‍ಬಿಟ್ಟು
ಕೇಳೋದಕ್ಕೆ ಹೋದಗೀದೀರಿ !
ಹೂಂ, ಅದು ಅವನಿಗೇ ಗೊತ್ತು
ಅವನ ಟಿಫಿನ್ ಬಾಕ್ಸಿಗೇ ಗೊತ್ತು
ದಿನವೂ ದಿನವೂ ತಪ್ಪದೆ ಅಮ್ಮ
ಬರೀ ಉಪ್ಪಿಟ್ಟೇ ಮಾಡಿ ಕೊಡೋ ಗುಟ್ಟು!
-ಆನಂದ ಪಾಟೀಲ

Comments