ಈ ಸಂಜೆ ಶರಣಾಗಿದೆ
ಪಡುವಣದ ಹಾದಿ ಬೀದಿಯ ರಂಗಿಗೆ
ಈ ಹಗಲಿನ ತುದಿಯೆಲ್ಲಿದೆಯೋ
ಬೆಳಕು ಮಲಗುವ ಜಾಗೆಯೆಲ್ಲೋ...?
ಹೆದ್ದಾರಿಯ ಅಂಚಿನ ಪಾಸ್ಟ್ ಪುಡ್ ಅಂಗಡಿಯಲ್ಲಿ
ತರಾತರಿಯಲ್ಲಿ ಸದ್ದಿಲ್ಲದೇ ನಳಪಾಕ ತಯಾರಾಗುತಿದೆ
ರಾಜ್ಯಗಳ ಗಡಿದಾಟಿ ಬಂದ ಗಾಡಿಯವ
ಸಿಂಗಲ್ ಚಾ ಗೆ ಮೊರೆಹೊಗಿದ್ದಾನೆ
ಬೆಳಕಿನ ಬೀಳ್ಕೊಡುಗೆಗೆ
ಬೀದಿ ದೀಪಗಳು ಕಣ್ಣರಳಿಸಿವೆ
ಮೆಲ್ಲಗೆ ಮುದುಡುತಿರುವ ಹೂದಳಗಳು
ಮುಂಜಾವಿನ ದುಂಬಿಯ ಸವಿಮುತ್ತ ನೆನೆದಿವೆ
ಹಳ್ಳ, ನದಿ, ಕಡಲ ದಂಡೆಯಲಿ
ಎಂತೆಂತದೋ ಪಟ್ಟಂಗದ ತಂಡಗಳು
ಸೂರ್ಯನ ಕುಂಕುಮದ ಮೈ ಬಣ್ಣವ
ಮುಲಾಜಿಲ್ಲದೇ ನೋಡುತಿವೆ ಹಾಗೆ
ಗೂಡಿಗೊರಟ ಹಕ್ಕಿಗಳು
ನಾಳೆ ಮೇಯುವ ಜಾಗವ ಕಾದಿರಿಸಿವೆ
ಗದ್ದೆ ಬಯಲ ಮಣ್ಣ
ಮೈಗಂಟಿಸಿಕೊಂಡ ಮಗು
ಬಚ್ಚಲ ಮನೆಯಲ್ಲಿ ಸಣ್ಣ ಗೊಣಗುವಿಕೆಯ ಸೃಷ್ಟಿಮಾಡಿದೆ
ಈ ಕತ್ತಲನು ಗುತ್ತಿಗೆಗೆ ಪಡೆಯಬೇಕು
ಈ ಸಂಜೆಯೊಳಗೆ ಇರುಳು ಒಳ ನುಸುಳುವ
ಕತ್ತಲು ಬೆಳಕು ದಾರಿ ಬದಲಿಸುವ
ಕಂಡಲ್ಲಿ ಕಂಡಷ್ಟು ಈ ಸೃಷ್ಟಿಯ ಅಗೋಚರತೆಯನರಿಯಲು.....
@ ಮೋಹನ್ ಗೌಡ ಹೆಗ್ರೆ
Comments