ಸಿಕ್ಕೀತೇ ಹರುಷ....!
- ಆಲೋಚನೆ
- Aug 13, 2020
- 1 min read
Updated: Aug 14, 2020
ಹೊಸ್ತಿನಲಿ ಕುಳಿತು
ಬಾಳ ಪುಟಗಳನು
ಒಮ್ಮೆ ತಿರುಗಿಸಿ ನೋಡಿ
ಎಲ್ಲಿ ಸಿಕ್ಕಿದೆ
ಹರುಷ ಎಲ್ಲರಿಗೂ
ಬುದ್ಧ ಹುಡುಕಲಿಲ್ಲವೇ
ದಟ್ಟ ಕಾನನ ಹೊಕ್ಕು
ಸಾಧು ಸಂತರು ಅರಸಲಿಲ್ಲವೇ
ಮಂಜು ಮುಸುಕಿದ
ಶುಭ್ರ ಹಿಮಾಲಯದಲ್ಲಿ ಸಿಕ್ಕು !
ಕಾಣ ಬಯಸಲಿಲ್ಲವೇ
ಕದಳೀ ವನದಲ್ಲಿ
ವಿಷದ ಬಟ್ಟಲಲ್ಲಿ
ಇದೆಯಾ ಎಂದು ನೋಡಲಿಲ್ಲವೇ.....?
ಹೌದು,
ಹರುಷವೊಂದು ಮರೀಚಿಕೆಯಂತೆ
ಬೆನ್ನು ಹತ್ತುವವರೇ
ನಾವೆಲ್ಲಾ ಓಡಿದಷ್ಟು ಮುಂದೆ
ಹಿಡಿಯಲು ಹಿಂದೆ
ಕಾಣದಿರುವುದನ್ನು ಕೈಚಾಚಿ
ಇರುವುದೆಲ್ಲವ ಬಿಟ್ಟು
ನಮ್ಮ ತನ ಸುಟ್ಟು
ಆರಸುತ್ತಿಲ್ಲವೇ ಸಾಯುವ ತನಕ
ಒಮ್ಮೆಯಾದರೂ ನೆನೆಯಬಾರದೇ
ಆ ಭಗವಂತನಲ್ಲಿ ಮನವಿಟ್ಟು
ಈ ಬಂಧನವ ಬಿಟ್ಟು ......!
- ಪ್ರಭಾಕರ ತಾಮ್ರಗೌರಿ

ಉತ್ಸಾಹ ಮತ್ತು ಸೃಜನಶೀಲತೆಯನ್ನು ಕಾಪಿಟ್ಟುಕೊಂಡು ಬಂದಿರುವ ಪ್ರಭಾಕರ ತಾಮ್ರಗೌರಿ ಅವರು ಶ್ರೀಕ್ಷೇತ್ರ ಗೋಕರ್ಣದ ಪಾರ್ವತಿ ದೇವಸ್ಥಾನದ ಆವರಣದಲ್ಲಿ ನೆಲೆಸಿರುವ ಕವಿ,ಕತೆಗಾರ,ಕಾದಂಬರಿಕಾರ ಹಾಗು ಸ್ನೇಹ ಜೀವಿ.ಬಿ.ಕಾಂ.ಪದವೀಧರರಾಗಿರುವ ಇವರಿಗೆ ಪುಸ್ತಕ ಪ್ರಾಧಿಕಾರದ ಬಹುಮಾನಸಂಚಯ ಕಥಾ ಸ್ಪರ್ಧೆಯ ಬಹುಮಾನ,ಬೆಂಗಳೂರು ಟಿ.ಎಂ.ಪಿ.ಕೇಂದ್ರದ ಟಿಎಂ.ಪಿ.ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ಕಥಾ ಸ್ಪರ್ಧೆ ಬಹುಮಾನ,ಮಾಸ್ತಿ ಕಥಾ ಸ್ಪರ್ಧೆ ಬಹುಮಾನಗಳು ದೊರೆತಿವೆ.
ಕನಸು ಕರೆಯುತಿದೆ,ಕಾರ್ತಿಕದ ಬೆಳಕು ಅವರ ಕವನ ಸಂಕಲನಗಳು.
ಮತ್ತೆ ಬಂದ ವಸಂತ,ಅನುರಾಗ ಬಂಧನ,ಕರಗಿದ ಕಾರ್ಮೋಡ, ಅವರ ಕಾದಂಬರಿಗಳು. ಬದಲಾದ ದಿಕ್ಕುಗಳು, ಬಾಳ ಸಂಜೆಯ ನೆರಳು, ಮುಸ್ಸಂಜೆಯ ಹೊಂಬಿಸಿಲು ಮತ್ತು ಇತರ ಕಥೆಗಳು ,ಔದಾರ್ಯದ ನೆರಳಲ್ಲಿ ಪ್ರಭಾಕರ ಅವರ ಕಥಾ ಸಂಕಲನಗಳು.ಪ್ರಚಾರದಿಂದ ದೂರ ಉಳಿದಿರುವ ಸಜ್ಜನ ಪ್ರಭಾಕರ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.
Comments