ಅಂಗಳದಿ ಗಿಡವೊಂದು ಮುದುಡುತ ಇರಲು
ನಸುನಗುತ ನೀರನ್ನು ಎರೆದವಳು ನೀನು.
ಜಲಪಾತದ ಜಲಧಾರೆ ಒಮ್ಮೆಲೆ ಧುಮುಕಿರಲು
ಅಣ್ಣ ಎಂದು ಎದೆಗವಚಿಕೊಂಡವಳು ನೀನು.
ಜ್ವರದಿಂದ ಹಾಸಿಗೆಯಲಿ ಚಳಿಯೆಂದು ಮಲಗಿರಲು
ಆಗಾಗ ಔಷದವ ನೀಡಿದವಳು ನೀನು.
ಪರಿಕ್ಷೆಯ ಫಲಿತಾಂಶ ಸಿಗದೇ ಎಲ್ಲ ನಿಂದಿಸುತಿರಲು
ಬದುಕ ದಾರಿಯ ತೋರಿದವಳು ನೀನು.
ಅಪ್ಪನ ಕಿಸೆಯ ಹಣವ ನಾ ದೋಚುತಿರಲು
ಪೆಟ್ಟು ಬಿದ್ದೊಡನೆ ಸಂತೈಸಿದವಳು ನೀನು.
ಗಂಡನ ಜೊತೆ ನೀ ಸಿರಿವಂತಳಾಗಿರಲು
ತಿರುತಿರುಗಿ ಅಣ್ಣನ ನೋಡಿದವಳು ನೀನು.
ನಾ ಎಲ್ಲಿರಲಿ ಹೇಗಿರಲಿ ನಿನ್ನ ಮನದಲ್ಲಿರಲು
ಆಗಾಗ ಕರೆಮಾಡಿ ಕರೆವವಳು ನೀನು.
ಈ ಬಂಧ ಅನುಬಂಧ ಸದಾ ನಮ್ಮೊಳಗಿರಲು
ರಾಖಿ ಕಟ್ಟುತ ಮಾಡುವೆ ಈ ಬಾಳ ಹಸನು.
- ಅರುಣ ಗೌಡ.ಜೂಗ

ಅರುಣ ಎಮ್. ಗೌಡ. ಇವರು ಅಂಕೋಲಾ ತಾಲೂಕಿನ ಜೂಗ ಗ್ರಾಮದವರು. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಉದ್ಯೊಗಿಯಾಗಿರುವ ಇವರು ಬಿಡುವಿನ ವೇಳೆಯಲ್ಲಿ ಕೃಷಿ ಮತ್ತು ಹೊಲಿಗೆ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ಚುಟುಕು, ಕವನ ರಚನೆಯಲ್ಲಿ ಅಸಕ್ತರಾಗಿರುವ ಅರುಣರು ಸಾರ್ವಜನಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನ ‘ಗುಮಟೆ ಪಾಂಗ್’ 2019 ರಲ್ಲಿ ಬಿಡುಗಡೆಗೊಂಡಿದೆ. ಇವರು ಭಾಗವಹಿಸಿದ ‘ ಮರೆಯಾದ ಸ್ನೇಹ’ ವೆಂಬ ಕಿರುಚಿತ್ರ ಯೂ ಟ್ಯೂಬ್ ನಲ್ಲಿ ಲಭ್ಯ. -ಸಂಪಾದಕ
Comments