top of page

ಸಹೃದಯಜೀವಿ...

ಇನ್ನೊಂದು ಹೆಜ್ಜೆಯನು ಎಲ್ಲಿಡಲಿ ಎನ್ನುತಲಿ

ಮೂಲೋಕ ವ್ಯಾಪಿಸಿದ ಸಾಕಲ್ಯಮೂರ್ತಿ

ಕನ್ನಡದ ಕೈಂಕರ್ಯ ಸತತ ನಡೆಸಿದ ಯೋಗಿ

ಜೀವಿಸಿದಿರಿಲ್ಲಿ ನೀವ್ ಶತಮಾನಪೂರ್ತಿ |


ವಿಧವಿಧದ ನುಡಿಗಳಿಗೆ ಅರ್ಥವನು ನಿರವಿಸಿದ

ಶಬ್ದಕೋಶದ ಶಿಲ್ಪಿ ನಿಮಗೆ ನುಡಿನಮನ

ಅಂಬೆಗಾಲಿಕ್ಕುವರ ಕೈಹಿಡಿದು ನಡೆಸುತ್ತ

ಹುರಿದುಂಬಿಸಿದ ನಿಮಗೆ ಸಾವಿರದ ನಮನ |


ಅಪ್ಪಯ್ಯನೊಡನಾಟ ನೆನೆಸಿಕೊಳ್ಳುತಲಂದು

ತೀರ್ಥರೂಪರ ತೆರದಿ ಹರಸಿದಿರಿ ನನ್ನ

ಅಪ್ರಬುದ್ಧಳ ಕರೆದು ನುಡಿಸೇಸೆಯನ್ನಿಟ್ಟ

ಗುರುಚರಣದಲ್ಲಿಡುವೆ ನನ್ನ ಶಿರವನ್ನ |


ಸರಸತಿಯ ವರಪುತ್ರ ನಿಮ್ಮಾತ್ಮಶ್ರೀ ಇಂದು

ಭವಬಂಧನವ ಕಳಚಿ ಸಾಯುಜ್ಯಗೊಳಲಿ

ನೀವು ಸಾಗಿದ ದಾರಿ ಮುಂದಿರುವ ಪೀಳಿಗೆಗೆ

ಎಡವದೆಯೆ ನಡೆಯಲಿಕೆ ದೀಪವಾಗಿರಲಿ ||

- ಇಂದಿರಾಜಾನಕಿ.

 
 
 

Comments


©Alochane.com 

bottom of page