ಪಾರತಂತ್ರ್ಯದ ಧೂಳು
ಹೋರಾಟದ ಗಾಳಿಗೆ ಹಾರಿಹೋಗಿ
ಸ್ವಾತಂತ್ರ್ಯದ ನೆಲ ದಕ್ಕಿದೆ.
ತ್ಯಾಗ, ಬಲಿದಾನಗಳ ಸ್ಮರಣೆ
ಹೋರಾಡಿದವರು ಹೋದ ಹಾದಿ ಹಿಡಿದಿದೆ
ಅವರ ಗದ್ದುಗೆಗಳ ಮೇಲೆಯೇ
ಗದ್ದಿಗೆಗಳ ಕಟ್ಟಿಕೊಂಡವರು ನಾವು.
ಮನೆಯಲ್ಲಿ ಸಂಭ್ರಮದ ಹಬ್ಬ ಕ್ಷಣಮಾತ್ರ. ಮತ್ತೆ ಹರಿದ ಸೂತ್ರ.
ಅಡುಗೆ ಉಂಡಾದ ಮೇಲೆ ಮನೆ ಖಾಲಿಖಾಲಿ
ಬಂದವರಿಗೆ ಬಂದ ದಾರಿಯದೇ ಚಿಂತೆ
ಇದ್ದವರಿಗೆ ಯಾತರದೋ ಭ್ರಾಂತಿ.
ಕತ್ತಲೆಯೊಳಗಿನ ಕ್ರೌರ್ಯಕ್ಕೆ ಬಡವರೇ ಬಲಿ
ಭಾರತ ಬಡವರಿಂದ ಕೂಡಿದ ಶ್ರೀಮಂತ ದೇಶ!
ಸಿರಿತನದ ಮದವೇರಿದ ಮನಸುಗಳಿಗೆ
ಬಡವರ ಒಡಲಿನ ಹಸಿವಿಗೆ ಕನಿಕರವಿಲ್ಲ.
ಧರಣಿಪತಿಗಳಿಗೆ ಕಮರುಡೇಗು
ಜೋಪಡೊಯೊಳಗಿನ ಜೀವಗಳಿಗೆ ಬೆವರೇ ನೀರು, ಹಸಿವೇ ಊಟ
ನಿದ್ರೆಯೇ ನೆಮ್ಮದಿ, ಕನಸುಗಳೇ ಭಾಗ್ಯ!
ಉರಿವ ಸೂರ್ಯನೂ ಕೆಂಡಾಮಂಡಲ
ಬೀಸೋ ಗಾಳಿಗೂ ಸಿಟ್ಟು ಸೆಡವು.
ಒಗ್ಗೂಡದ ಮೋಡ, ಧರೆಗೆ ಜಾರದ ನೀರು.
ಗೂಡು ಕಟ್ಟಿದ ಹಕ್ಕಿಗಳಲ್ಲೇ ಒಡಕು
ದೋಣಿಯೊಡೆಯನಿಗೆ ದಣಿವಾಗಿದೆ
ಹಣತೆಯಲ್ಲಿನ ದೀಪದ ಸೊಡರು ನಂದುತ್ತಿದೆ.
ಸ್ವಾತಂತ್ರ್ಯದ ಬೆಲ್ಲ ಕೆಲವರಿಗೆ ಸಿಹಿ
ಇನ್ನು ಕೆಲವರಿಗೆ ನುಂಗಲಾಗದ ಕಹಿ
ದೇಗುಲದೊಳಗಿನ ದೇವರ ದರುಶನಕೆ
ದಲ್ಲಾಳಿಯ ದಯವೇಕೆ...?
ಒಳಗರಿವಿನ ಜ್ಯೋತಿ ಬೆಳಗಲು
ತ್ಯಾಗದ ತೈಲವನೆರೆಯಲು
ನಿತ್ಯ ಭಕ್ತಿ, ಪ್ರೀತಿಯ ಹೊನಲು
ತುಂಬಿ ತುಳುಕಲಿ ಮಾತೆಯ ಮಡಿಲು
ಅಂತರಾತ್ಮಗಳಲಿ ಹಬ್ಬಿ ಹರಡಲಿ ದೇಶಾಭಿಮಾನದ ಬಳ್ಳಿ
ಕಳಚದಿರಲಿ ಭಾರತಾಂಬೆಯ ಕಂದನ ಕರುಳಬಳ್ಳಿ

ಡಾ. ಸಂಗಮೇಶ ಎಸ್. ಗಣಿ
9743171324
ಕತ್ತಲೆಯೊಳಗಿನ ಕ್ರೌರ್ಯಕ್ಕೆ ಬಡವರೇ ಬಲಿ..
ಸ್ವಾತಂತ್ರ್ಯದ ನಂತರದ ಬವಣೆಗಳು ಪ್ರತಿಬಿಂಬಿಸುತ್ತಿವೆ..