top of page

ಸಮೂಹ (mass) ಮತ್ತು ವಿದ್ವದ್ವಲಯ (class)

’ಸಮೂಹ’ ಎಂದರೆ ಎಲ್ಲರೂ ಸೇರಿಕೊಂಡಿರುವ ಒಂದು ಗುಂಪು ಅಥವಾ ಒಟ್ಟಾಗಿ ಇಡೀ ಸಮಾಜ. ಅಲ್ಲಿ ವಯಸ್ಸು ಜಾತಿ ಧರ್ಮ ಲಿಂಗ ಮುಂತಾದ ಯಾವ ವ್ಯತ್ಯಾಸವೂ ಇಲ್ಲ. ಅದೊಂದು ರಾಶಿ (mass).


ವಿದ್ವದ್ವಲಯ ಹಾಗಲ್ಲ; ಅಲ್ಲಿ ಇರುವವರು ಪ್ರೌಢರು, ಹಿರಿಯರು, ತಿಳಿದವರು, ಜ್ಞಾನಿಗಳು, ವಿದ್ವಾಂಸರು ಮತ್ತು ಶ್ರೇಷ್ಠರು (class) ಎಂದು ಹೇಳಬಹುದು. ಅವರ ಸಂಖ್ಯೆ ಶೇಕಡಾ ಅರ್ಧ ಕೂಡ ಇರಲಾರದು. ಈ ಗುಂಪನ್ನು ಬುದ್ಧಿವಂತರ ’ಬೆಂಚು’ ಅನ್ನಬಹುದು. ಇವರು ತಲೆಗೆ ಮುಂಡಾಸು ಕಟ್ಟಿಕೊಂಡು ಸದಾ ಸದ್ದು ಮಾಡುತ್ತ ಸುದ್ದಿಯಲ್ಲಿರುತ್ತಾರೆ.


ಸಮೂಹಕ್ಕೂ ವಿದ್ವದ್ ವಲಯಕ್ಕೂ ತುಂಬ ವ್ಯತ್ಯಾಸ ಇದೆ. ಸಮೂಹ ದೇಹವಾದರೆ ವಿದ್ವದ್ ವಲಯ ತಲೆ; ಒಂದು ಕಣದಲ್ಲಿರುವ ರಾಶಿ, ಇನ್ನೊಂದು ಅಯ್ದು ಜರಡಿ ಹಿಡಿದ ಕಾಳು.


ತಲೆ ಮತ್ತು ದೇಹ ಎಲ್ಲ ಸಂದರ್ಭಗಳಲ್ಲೂ ಸಮನ್ವಯತೆಯಿಂದ ಕೆಲಸ ಮಾಡೆಬೇಕೆಂದೇನಿಲ್ಲ. ಕೆಲವೊಮ್ಮೆ ದೇಹವು ’ತಲೆ’ಯನ್ನು ಧಿಕ್ಕರಿಸಿ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ’ಸಮೂಹ’ಕ್ಕೆ ಅದರದೇ ಆದ ಒಂದು ನಡೆ (ಚಲನೆ) ಇದೆ. ಆ ನಡೆ ಆ ನಿರ್ದಿಷ್ಟ ಸಮಯಕ್ಕೆ ತೀರ ಅಗತ್ಯವಾಗಿರುತ್ತದೆ. ತಲೆಯನ್ನು ಧಿಕ್ಕರಿಸಿ ದೇಹ ತೆಗೆದುಕೊಳ್ಳುವ ಅಂತಹ ನಿಲುವುಗಳನ್ನು ಅರ್ಥೈಸಿಕೊಳ್ಳಲು ಕೂಡ ’ತಲೆ’ಗೆ ಸಾಧ್ಯವಾಗುವುದಿಲ್ಲ. ನಿಜವಾಗಿ ಅದು ’ತಲೆ’ಯ ವೈಫಲ್ಯದ ಸಂದರ್ಭವಾಗಿರುತ್ತದೆ; ’ತಲೆ’ ತಪ್ಪಿ ಬಿದ್ದಿರುತ್ತದೆ ಅಥವಾ ತಲೆಗೆ ’ತಲೆ ಸರಿ ಇಲ್ಲ’ ಎಂದು ದೇಹ ನಿರ್ಧರಿಸಿಬಿಟ್ಟಿರುತ್ತದೆ!


ಕೆಲವೊಮ್ಮೆ ’ತಲೆ’ ತನ್ನ ಪಾತ್ರವನ್ನು ವಿಚಿತ್ರವಾಗಿ ನಿರ್ವಹಿಸಿ ಹೆಸರು ಕೆಡಿಸಿಕೊಳ್ಳುವುದುಂಟು. ಆಗ ದೇಹ ಕಂಡೂ ಕಾಣದಂತೆ ಸುಮ್ಮನಿರುತ್ತದೆ. ’ತಲೆ’ಯ ಗೌರವ ಹಾಳಾಗುವುದು ಬೇಡ ಎಂದು ತನ್ನ ಕೆಲಸ ತಾನು ಮಾಡುತ್ತ ಇರುತ್ತದೆ. ಆ ಸಂದರ್ಭದಲ್ಲಿ ದೇಹ ತಲೆಯ ಉಪದ್ವ್ಯಾಪಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಇರುತ್ತದೆ. ಆದರೆ ದೇಹ ತನ್ನನ್ನು ಗಮನಿಸುತ್ತಿರುತ್ತದೆ ಎಂಬುದು ತಲೆಗೆ ಗೊತ್ತೇ ಇರುವುದಿಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಏನೇನೊ ಮಾಡುವ ಎಲ್ಲ ಸಂದರ್ಭಗಳಲ್ಲೂ ಹೀಗೆಯೇ ಆಗುವುದು. ದೇಹ ತನ್ನದೇ ದಿಟ್ಟ ನಡೆ ತೆಗೆದುಕೊಳ್ಳುವಾಗ ತಲೆಗೆ ಮಂಕು ಕವಿದಿರುತ್ತದೆ.


ಇವೆರಡರದು ಒಂದು ಸಾರ್ಥಕ ಸಂಯೋಗ ಆದರೆ ಎಷ್ಟು ಚೆನ್ನ! ಆಗ ಸಹಯೋಗದ ಜೀವನ ಸಾಧ್ಯವಾಗುತ್ತದೆ. ಒಂದು ಕಾರ್ಯ ಪ್ರವೃತ್ತವಾದಾಗ ಇನ್ನೊಂದು ಸುಮ್ಮನಿದ್ದರೆ ಯಶಸ್ಸು ಸಿಗುತ್ತದೆ; ಎರಡೂ ಒಟ್ಟೊಟ್ಟಿಗೆ ಕಾರ್ಯಪ್ರವೃತ್ತವಾದರೆ ಎತ್ತು ಏರಿಗೆಳೆವಾಗ ಕೋಣ ನೀರಿಗೆಳೆದಂತಾಗಿ ಹದ ತಪ್ಪುತ್ತದೆ ಮತ್ತು ಅಪಾಯ ಸಂಭವಿಸುತ್ತದೆ.


ಸಮಾಜಕ್ಕೆ mass ಮತ್ತು class ಎರಡೂ ಬೇಕು. ಒಂದನ್ನೇ ಅವಲಂಬಿಸುವುದು ಅಪಾಯಕಾರಿ. ಅದು ಅಂಗವೈಕಲ್ಯದ ಸ್ಥಿತಿ. ಕೆಲವೊಮ್ಮೆ ವಿದ್ವದ್ವಲಯ ಹಾದಿ ತಪ್ಪುವುದುಂಟು. ಆಗ ಅದಕ್ಕೆ ’ಬುದ್ಧಿಜೀವಿಗಳು’ ಎಂಬ ಹೆಸರು ಅಂಟಿಕೊಂಡು ಕೆಟ್ಟ ಅರ್ಥ ಬರುತ್ತದೆ. ನೀರೊಳ್ಳೆ ನೀರು ಬಿಟ್ಟು ಕಾಡು ಹೊಕ್ಕರೆ ಕೊಳಕುಮಂಡಲ (ಮಂಡೆಲಿ) ಆಗುತ್ತದೆ ಎಂಬ ತುಳು ಮಾತು ಪ್ರಚಲಿತದಲ್ಲಿದೆ. ಅವವು ಅವವುಗಳ ಕ್ಷೇತ್ರದಲ್ಲಿದ್ದರೆ ಮಾನವೂ ಮರ್ಯಾದೆಯೂ ಹೆಚ್ಚು.


ಚರಿತ್ರೆಗಳು ಸಂಭವಿಸುವುದು ಸಮೂಹದಿಂದಲೇ (mass) ಹೊರತು class ವರ್ಗದ ಕೆಲವರಿಂದ ಅಲ್ಲ. ಹಾಗೆಂದು ’ಬುದ್ಧಿಜೀವಿ’ಗಳು ಚರಿತ್ರೆ ಸಂಭವಿಸಲು ಕೆಲವೊಮ್ಮೆ ನೆಪ ಆಗಬಹುದು. ಅದು ಕೆಲವೊಮ್ಮೆ ’ಪರ’ವಾಗಿಯೂ ಕೆಲವೊಮ್ಮೆ ’ವಿರುದ್ಧ’ವಾಗಿಯೂ ಇರಬಹುದು. ಗಮನಿಸಬೇಕಾದ ಅಂಶವೆಂದರೆ ಸಮೂಹ ತೆಗೆದುಕೊಳ್ಳುವ ನಿರ್ಧಾರ ಸಮೂಹಕ್ಕೆ ಅನುಕೂಲಕರವಾಗಿಯೇ ಇರುತ್ತದೆ. Class ತೆಗೆದುಕೊಳ್ಳುವ ನಿರ್ಧಾರ mass ಗೆ ಅನುಕೂಲಕರವಾಗಿ ಇರಬೇಕೆಂದೇನಿಲ್ಲ.


ಬುದ್ಧಿಜೀವಿಗಳ ನಡೆ ಸಮಾಜಕ್ಕೆ ಪೂರಕವಾಗಿದ್ದಾಗ ಪೂರಕವಾದ ಚರಿತ್ರೆ ಸಂಭವಿಸಬಹುದು. ಅವರ ನಡೆ ಸಮಾಜಕ್ಕೆ ವಿರುದ್ಧವಾಗಿದ್ದಾಗ ಸಮಾಜವು ಅವರನ್ನು ಮೂಟೆ ಕಟ್ಟಿ ಬದಿಗಿಟ್ಟು ತಾನು ಮಾತ್ರ ಮುಂದೆ ಹೋಗುತ್ತದೆ. ಸಮಾಜ ಇರುವುದರಿಂದ ಬುದ್ಧಿಜೀವಿಗಳಿದ್ದಾರೆ ಹೊರತು ಬುದ್ಧಿಜೀವಿಗಳಿಗಾಗಿ ಸಮಾಜ ಇರುವುದಲ್ಲ!

ರಾಶಿಯಲ್ಲಿ (ಸಮಾಜ) ಜೊಳ್ಳು-ಕಾಳು ಎರಡೂ ಇರಬಹುದು; ರಾಶಿಗೆ ಗಾಳಿಮಳೆಯಿಂದ - ಕೀಟಪಕ್ಷಿಗಳಿಂದ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವ ಜರೂರತ್ತು ಇರುತ್ತದೆ. ಕಾಳುಗಳ ಚೀಲದಲ್ಲಿ ಕೊಳೆತವೂ, ಹಾಳಾಗಿ ಮೊಳಕೆ ಒಡೆಯದಿರುವವೂ ಇರಬಹುದು. ಕಾಳಿನ ಚೀಲಕ್ಕೆ ಕಾಲಕಾಲಕ್ಕೆ ಕಾಯಕಲ್ಪ ಆಗುತ್ತಿರಬೇಕಾಗುತ್ತದೆ.


ಹಾಗೆಂದು ಸಮಾಜಕ್ಕೆ ಎರಡೂ ಬೇಕು. ಬರೇ class ತುಂಬಿಕೊಂಡಿದ್ದರೆ ದುಡಿಮೆಯ ಕ್ಷೇತ್ರ ಬಡವಾಗುತ್ತದೆ. mass ಮಾತ್ರ ತುಂಬಿಕೊಂಡಿದ್ದರೆ ಮಾಡಿದ ಕೆಲಸ ಅರ್ಥಪೂರ್ಣವಾಗುವುದಿಲ್ಲ. ಎರಡೂ ಸಾರ್ಥಕವಾಗಿ ಸಂಲಗ್ನಗೊಂಡಾಗ ಸಮಾಜ ಕ್ಷಿಪ್ರಗತಿಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ.


ಸಮೂಹ ಮತ್ತು ವಿದ್ವದ್ವಲಯ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆದರೆ ಕಾಲಕಾಲಕ್ಕೆ ಜರಡಿ ಹಿಡಿಯುವ ಕೆಲಸ ಆಗಬೇಕಾಗುತ್ತದೆ. ಆಗ ಎರಡೂ ಕ್ರಿಯಾಶೀಲವಾಗಿರುತ್ತವೆ.


-ಡಾ. ವಸಂತಕುಮಾರ ಪೆರ್ಲ.

1 commentaire


Sir, You have explained very well the importance of (ಸಮೂಹ) mass and ವಿದ್ವದ್ವಲಯ(class).

J'aime

©Alochane.com 

bottom of page