ಪಾತಾಳದಸುರರ ಬಸಿರ ಶಿಶು
' ಲಿಟ್ಲ್ ಬಾಯ್ ' ಸಂತಾನವೇ
ಉರುಳುತ್ತ ಜಗದ ಸಂವತ್ಸರವೇ
ನರಳುತ್ತಿರುವಾಗ
ಶ್ರಾವಣಿಯೇ , ನೀನೊಬ್ಬಳೆ
ರತ್ನಗರ್ಭೆಯಾಗಿ
ಹಬ್ಬ ಹಬ್ಬಗಳ ಹೆರುತ್ತ
ಪುರುಷಾರ್ಥ ಗಳ ರಕ್ಷೆ ಕಟ್ಟುತ್ತ
ಸಂಭ್ರಮದ ಸಿಂಹ ಸಂಕ್ರಾಂತಿ
ಜಗಕೆ ಹಂಚುತ್ತಿರುವೆ
ಅಮಾಸೆ, ಕುಟ್ಣ, ಗೌರಿ, ಗಂಪು, ನಾಗಣ್ಣ
ಗಂಗೆ, ಭೂಮಿ, ದುರ್ಗಿ, ಕಮಲಿ,ತುಳಸಿ
ಬಲೀಂದ್ರ, ಶಿವಪ್ಪ, ರಾಮಪ್ಪ
ಎಲ್ಲರನು ಹೆತ್ತೆ ಸಮಸಮ
ಒಂದೆ ತೊಟ್ಟಿಲಲಿ ತೂಗುತಿರುವೆ
ಇಂದೇಕೋ ತಾಯೆ
ಎಡ -ಬಲ ಧೃತರಾಷ್ಟ್ರ ಗಾಂ
ಧಾರಿಯರು ಸಂಸ್ಕೃತಿಯ
ಬಾಹ್ಯ ಪ್ರತಿಮೆಯನೆ
ಅಪ್ಪಿ ಹಿಡಿದಿಹರು
ಹಾಲನೂಡುವ ಕೆಚ್ಚಲಿಗೆ
ಸಿಡಿವ ಕಿಚ್ಚ ಹಚ್ಚಿ
ಅಂಗಾಂಗಕೆಲ್ಲ ಬಣ್ಣ ಎರಚಿ
ಹುಚ್ಚು ನರ್ತನ ದ ದರ್ಶನ
ಊಡು ಮತ್ತೊಮ್ಮೆ
ಮಹದಾಯಿ ಶ್ರಾವಣಿಯೆ
ಸಾಮರಸ್ಯದ ಕ್ಷೀರಧಾರೆ
ಭದ್ರವಾಗಲಿ ತೀರದ ಬದುಕು
ತುಂಬಿ ತುಳುಕಲಿ ವರ್ಷ
ತೃಪ್ತವಾಗಲಿ ಶ್ರಾವಣ
🌾 ಡಾ.ಜಿ.ಎಸ್. ಹೆಗಡೆ,
ಹಡಿನಬಾಳ
Kommentare