ಬೀಜವೆಲ್ಲಿತ್ತೋ
ಯಾರು ಬಿತ್ತಿದರೋ?
ಮೂಡಣ ಪಡುವಣ
ತೆಂಕಣ ಬಡಗಣ
ದಶದಿಕ್ಕುಗಳಲು
ಹಬ್ಬಿರುವವಿದರ ಹೆಳಲು!
ಗೆಲ್ಲು ಗೆಲ್ಲಾಗಿ
ಚಿಗುರು ಎಲೆಯಾಗಿ
ಹೀಚಾಗಿ ಮಿಡಿಯಾಗಿ
ಕಾಯಾಗಿ ಹಣ್ಣಾಗಿ
ವಿಶ್ವಕ್ಕೇ
ಹಂಚಿದೆ ಅಮೃತಫಲ!
ಗಣ್ಣಿಗೊಂದು
ಬಿಟ್ಟು ಬಿಳಿಲು
ಲಾಗಾಯ್ತಿನಿಂದಲೂ
ಬಿರುಗಾಳಿ ಬರಸಿಡಿಲು
ಸಹಿಸಿ ಉಲ್ಕಾಪಾತ!
ನಿಂತಿದೆ
ತಾನೇ ತಾನಾಗಿ
ಜಗವೇ ನೋಡುತ್ತಿದೆ
ನಿಬ್ಬೆರಗಾಗಿ!
ಗೆಲ್ಲುಗೆಲ್ಲುಗಳಲ್ಲು
ವಿಹಂಗಸಂಕುಲದುಲಿತ
ರಾಮಾಯಣ ಭಾರತ
ಕೇಳಿತ್ತು ಭಗವದ್ಗೀತ!
ಕಡೆಕಡೆದು ಹೊಮ್ಮಿದ
ನವನೀತ!
ಬಂದವರೆಷ್ಟೋ
ಬಡಿದವರೆಷ್ಟೋ?
ಹೆಕ್ಕಿದವರೆಷ್ಟೋ
ಮುಕ್ಕಿದವರೆಷ್ಟೋ?
ಬಯಲಲಿ
ಬಿಕ್ಕಿದವರೆಷ್ಟೋ!
ಫಲವುಂಡು
ಸೊಕ್ಕಿದವರೆಷ್ಟೋ!
ಸಹಿಸಿ ಎಲ್ಲವನು
ಕೊಟ್ಟು ಬೆಲ್ಲವನು
ಮರ ಮಾತ್ರ ನಿಂತೇ ಇದೆ!
ಇದು
ಸನಾತನ ವೃಕ್ಷ!
- ಹುಳಗೋಳ ನಾಗಪತಿ ಹೆಗಡೆ
Comments