ನಾಯಿಗಳು ತುಂಬ ಪ್ರಾಮಾಣಿಕ ಎಂದು ನಾವು ಮನುಷ್ಯಪ್ರಾಣಿಗಳು ಒಪ್ಪಿಕೊಂಡರೂ ಸಹ ಅವುಗಳಂತೆ ಪ್ರಾಮಾಣಿಕವಾಗಿ ಬದುಕಲು ನಾವು ಯೋಚಿಸುತ್ತಿಲ್ಲವಲ್ಲ ಎಂಬ ಅಚ್ಚರಿ ನನ್ನದು. ನಾಯಿಗಳ ಆ ಪ್ರಾಮಾಣಿಕ ಗುಣದ ಬದಲು ನರಿಗಳ ವಂಚನೆಯ ಗುಣ ಮನುಷ್ಯರಲ್ಲಿ ಬಂದಿರುವದೇಕೆಂಬ ಬಗ್ಗೆ ಸಮಾಜ ಶಾಸ್ತ್ರಜ್ಞರೇ ಯೋಚಿಸಬೇಕಾಗಿದೆ. ಅಲ್ಲದೇ ಗೋವುಗಳನ್ನು ಬಹಳ ಪವಿತ್ರ ಪ್ರಾಣಿ ಎನ್ನುವ ನಾವು ದತ್ತಾತ್ರಯನ ಬಳಿ ಇರುವಂತಹ ನಾಯಿಗಳನ್ನೇಕೆ ಪವಿತ್ರ ಪ್ರಾಣಿಯಾಗಿ ಸ್ವೀಕರಿಸಿಲ್ಲ ಎನ್ನುವ ಪ್ರಶ್ನೆಯೂ ನನ್ನನ್ನು ಬಹಳ ಕಾಲದಿಂದ ಕಾಡುತ್ತಿದೆ. ಸಂಗಡ ಹನುಮಂತನ ಸಂತಾನವೆಂದೋ , ನಮ್ಮ ಪೂರ್ವಜರೆಂದೋ ಮಂಗಗಳನ್ನು ಸಹ ನಾವು ಗೌರವಿಸುತ್ತೇವೆ. ಇದು ನಾಯಿಗಳ ಬಗ್ಗೆ ಒಂದು ರೀತಿಯ ಪಕ್ಷಪಾತದ ಧೋರಣೆಯೆಂದೇ ನನಗನಿಸುತ್ತದೆ.
ನಾಯಿಗೂ ಮನುಷ್ಯರಿಗೂ ಇರುವ ಒಂದು ಸಣ್ಣ ಹೋಲಿಕೆಯೆಂದರೆ ನಾಯಿಯ ಬಾಲ ಡೊಂಕಾಗಿದ್ದರೆ ಮನುಷ್ಯನ ಬುದ್ಧಿ ಡೊಂಕಾಗಿರುತ್ತದೆ. ಬಾಲ ಡೊಂಕಾದರೆ ಯಾರಿಗೂ ಅಪಾಯವಿಲ್ಲ. ಆದರೆ ಬುದ್ಧಿ ಡೊಂಕಾದರೆ ಅದು ಬಹಳ ಅಪಾಯಕಾರಿ. " ಡೊಂಕು ಬಾಲದಾ ನಾಯಕರೆ, ನೀವೇನಾಟವನಾಡುವಿರಿ " ಎಂದು ದಾಸರು ಹಾಡಿದ್ದು ನಾಯಿಯ ಕುರಿತಲ್ಲ, ಅದು ನಮ್ಮ ನಡುವೆ ಇರುವ ಡೊಂಕು ಬುದ್ಧಿಯ ಮನುಷ್ಯರ ಕುರಿತಾಗಿಯೇ ಎನ್ನುವದರಲ್ಲಿ ಸಂದೇಹವಿಲ್ಲ. ಅದರಲ್ಲೂ ವಿಧಾನ ಸಭೆಗೆ ಹೋಗಿ ಅಲ್ಲಿ ಮೇಜು ಕುಟ್ಟುವ ರಾಜಕಾರಣಿಗಳಿಗಾಗಿಯೇ ದಾಸರು" ಕಣಕವ ಕುಟ್ಟುವಲ್ಲಿಗೆ ಹೋಗಿ ಕುಂಯ್ ಕುಂಯ್ ರಾಗವ ಹಾಡುವಿರಿ" ಎಂದಿದ್ದಿರಲೇಬೇಕು. ಕಣಕವ ಕುಟ್ಟು ಎನ್ನುವ ಬದಲು ತವಡು ಕುಟ್ಟು ಎಂದರೂ ನಡೆಯುತ್ತಿತ್ತು.
ನಾಯಿಗಳ ಪ್ರಾಮಾಣಿಕತೆ, ಸ್ವಾಮಿನಿಷ್ಠೆಗಳ ಕುರಿತು ಇರುವಷ್ಟು ಕತೆಗಳು ಬಹುಶಃ ಮನುಷ್ಯರ ಪ್ರಾಮಾಣಿಕತೆ , ನಂಬಿಕೆಗಳ ಬಗ್ಗೆ ಇರಲಿಕ್ಕಿಲ್ಲ. ಯಾಕೆಂದರೆ ಮನುಷ್ಯ ಯಾವತ್ತೂ ಯಾರಿಗೂ ಖಾಯಂ ನಿಷ್ಠನಾಗಿದ್ದವನೇ ಅಲ್ಲ. ಎಲ್ಲರೂ ಸಂದರ್ಭಕ್ಕನುಸಾರವಾಗಿ ಮತ್ತು ತಮ್ಮ ತಮ್ಮ ಪ್ರಯೋಜನಕ್ಕನುಸಾರವಾಗಿ ನಿಷ್ಠೆ ಬದಲಿಸುವವರೇ.
ನಮ್ಮ ದತ್ತಾತ್ರಯ ತಾಪತ್ರಯಗಳ ಸಂಕೇತವಾಗಿ ಶ್ವಾನಗಳನ್ನು ತನ್ನ ಬಳಿ ಇರಿಸಿಕೊಂಡಿರಬಹುದಾದರೂ ಕೆಲವರ ನಂಬಿಕೆಯ ಪ್ರಕಾರ ಚತುರ್ವೇದಗಳ ಸಂಕೇತವಾಗಿರಿಸಿಕೊಂಡು ಅವುಗಳಿಗೂ ಧಾರ್ಮಿಕ ಸಾಮಾಜಿಕ ಗೌರವ ತಂದುಕೊಡಲು ಪ್ರಯತ್ನಿಸಿರಬಹುದು. ಆದರೆ ನಾವು ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬೆಲೆ ಕೊಡುವವರಲ್ಲದ್ದರಿಂದಲೇ ನಾಯಿಗಳಿಗೂ ಬೆಲೆ ಕೊಡುತ್ತಿಲ್ಲವೆಂದು ನನ್ನ ಅನಿಸಿಕೆ. ಇತ್ತೀಚೆಗೆ ನಾಯಿ ಸಾಕುವದು ದೊಡ್ಡವರ ಪ್ರತಿಷ್ಠೆಯ ಸಿಂಬಾಲ್ ಆಗಿದೆಯಂತೆ.
ಹಾಗೆ ನೋಡಿದರೆ ಶ್ವಾನಗಳಿಗೆ ಪ್ರಾಚೀನ ಇತಿಹಾಸವೇ ಇದೆ. ದ್ವಾಪರಾಯುಗದಲ್ಲಿ ಧರ್ಮರಾಯನ ಹಿಂದೆ ನೇರವಾಗಿ ಸ್ವರ್ಗಕ್ಕೆ ಹೋದ ಶ್ರೇಯಸ್ಸು ನಾಯಿಯದೇ. ಅದಕ್ಕೂ ಹಿಂದೆ ತ್ರೇತಾಯುಗದಲ್ಲಿ ಶ್ರೀ ರಾಮ ಕಪಿಗಳಿಗೆ ಹೆಚ್ಚು ಮಹತ್ವ ನೀಡಿದ್ದರಿಂದ ಶ್ವಾನಗಳಿಗೆ ಮಹತ್ವ ದೊರಕಿರಲಿಕ್ಕಿಲ್ಲ. ನನ್ನಲ್ಲಿ ಇರುವ ದೊಡ್ಡ ಜಿಜ್ಞಾಸೆ ಎಂದರೆ ಮಹಾವಿಷ್ಣು ಹಂದಿ, ಕೂರ್ಮ, ಮತ್ಸ್ಯ, ( ನರ) ಸಿಂಹ ಮೊದಲಾದ ಪ್ರಾಣಿಗಳ ಅವತಾರ ತಾಳಿದನಾದರೂ ಶ್ವಾನಾವತಾರವನ್ನೇಕೆ ತಾಳಲಿಲ್ಲ ಎನ್ನುವದು. ಆತ ಹಾಗೇನಾದರೂ ಶ್ವಾನಾವತಾರ ತಾಳಿದ್ದರೆ ಇಂದು ಅವಕ್ಕೂ ಪೂಜಾರ್ಹ ಗೌರವದ ಸ್ಥಾನಮಾನಗಳು ಲಭಿಸುತ್ತಿದ್ದವೆಂವುದು ನನ್ನ ಭಾವನೆ. ಈ ದೃಷ್ಟಿಯಿಂದ ನಾಯಿಯೆಂಬ ಪ್ರಾಣಿಗೆ ಅನ್ಯಾಯವಾಗಿದೆ ಎನ್ನುವದನ್ನು ಅಲ್ಲಗಳೆಯಲಾಗದು. ಪ್ರಾಮಾಣಿಕತೆಗೆ ಯಾವಾಗಲೂ ಬೆಲೆ ಇಲ್ಲ ಎಂಬ ಮಾತು ಸತ್ಯವಾದಂತಾಗಿದೆಯಲ್ಲವೇ?
ನಾಯಿ ಒಂದು ಬ್ಯಾಂಕಿನ ಸಿಂಬಾಲ್ ಆಗಿದೆಯಾದರೂ ವಾಸ್ತವವಾಗಿ ಅದು ನಮ್ಮ "ರಾಷ್ಟ್ರೀಯ ಪ್ರಾಣಿ" ಯಾಗುವ ಎಲ್ಲ ಅರ್ಹತೆ ಹೊಂದಿದೆ ಎನ್ನುವದು ನನ್ನ ನಂಬಿಕೆ. ಒಂದು ವೇಳೆ ನಾಯಿಯಷ್ಟೇ ಪ್ರಾಮಾಣಿಕರಾದವರು ಅಧಿಕಾರಕ್ಕೆ ಬಂದರೆ ಅಗ ನಾಯಿಗೂ ಗೌರವ ಸಿಗಬಹದೇನೊ.
ನನ್ನ ಬೇಸರದ ಇನ್ನೊಂದು ಕಾರಣವೆಂದರೆ ಮನುಷ್ಯ ನಾಯಿಗಳ ಕುರಿತು ಅನೇಕ ಅಗೌರವಕರವಾದ ಗಾದೆ ಮಾತುಗಳನ್ನೂ ಸೃಷ್ಟಿಸಿರುವದು. " ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ, ನಾಯಿ ಬೊಗಳಿದರೆ ಆನೆ ಹಿಂದಿರುಗಿ ನೋಡುತ್ತದೆಯೇ, ಬೊಗಳುವ ನಾಯಿ ಕಚ್ಚುವದಿಲ್ಲ .. ಇತ್ಯಾದಿ ಮಾತುಗಳೆಲ್ಲ ಪ್ರಾಮಾಣಿಕ ನಾಯಿಗಳ ಬಗ್ಗೆ ಅಪ್ರಾಮಾಣಿಕ ಮನುಷ್ಯನಿಗೆ ಇರುವ ಅಸಹನೆಯ ಪ್ರತೀಕವೇ ಆಗಿವೆ ಎಂದು ಅನ್ನಿಸುತ್ತದೆ. ನಾಯಿಗಳಷ್ಟೇ ಏಕೆ, ಸದಾಕಾಲ ಬೊಗಳುವ ಮನುಷ್ಯರೂ ಇಲ್ಲವೆ?.
ನಾನೇನೂ ನಾಯಿ ಸಾಕಿಲ್ಲ. ಅದಕ್ಕೆ ಎರಡು ಕಾರಣಗಳಿವೆ. ಒಂದು: ನನ್ನ ಹತ್ತಿರ ನಾಯಿ ಸಾಕುವಷ್ಟು ಹಣ ಇಲ್ಲ. ಎರಡನೆಯದು : ನಾಯಿ ಕಾಯುವಷ್ಟು ಸಂಪತ್ತೂ ನನ್ನಲ್ಲಿ ಇಲ್ಲ. ನನ್ನ ಹತ್ತಿರ ಇರುವ ಪುಸ್ತಕ ಸಂಪತ್ತನ್ನು ನಾಯಿಯೂ ಮೂಸುವದಿಲ್ಲ ಎನ್ನುವದು ನನಗೆ ಗೊತ್ತಿದೆ. ಅಂದರೆ ನನ್ನಲ್ಲಿರುವ ಸಂಪತ್ತೇ ಯಾರೂ ಕದ್ದೊಯ್ಯದ ಶಾಶ್ವತವಾದ ಸಂಪತ್ತು.
ನಾಯಿಗಳು ಗೌರವಾರ್ಹ ಪ್ರಾಣಿಗಳೇ ನನ್ನ ದೃಷ್ಟಿಯಲ್ಲಿ. ಆದರೆ ಅವನ್ನು ಗೌರವಿಸುವಂತಹ ಯೋಗ್ಯತೆ ಮನುಷ್ಯನಲ್ಲಿ ಉಳಿದಿಲ್ಲ ಅಷ್ಟೇ.

Comments