ಕಡಲ ತೀರದ ಭಾರ್ಗವ ಎಂಬ ಬಿರುದಾಂಕಿತರಾದ ಕನ್ನಡದ ಮೇರು ಸಾಹಿತಿ ಶಿವರಾಮ ಕಾರಂತರ ಸಾಧನೆಗಳ ಪ್ರಪಂಚವು ಅವರು ಅಪಾರವಾಗಿ ಪ್ರೀತಿಸಿದ ಕಡಲಿನಷ್ಟೇ ಆಳ-ವಿಸ್ತಾರಗಳನ್ನು ಹೊಂದಿರುವಂಥದ್ದು. 1902ರಲ್ಲಿ ಹುಟ್ಟಿ 1996 ರ ತನಕದ ಅವರ 94 ವರ್ಷಗಳ ಜೀವಿತಾವಧಿಯಲ್ಲಿ ಸಾಮಾನ್ಯ ಮನುಷ್ಯರಿಂದ ಕಲ್ಪಿಸಲಿಕ್ಕೂ ಆಗದಷ್ಟು ಕೆಲಸಗಳನ್ನು ಅವರು ಮಾಡಿದರು. ಸಾಹಿತ್ಯ, ಸಂಗೀತ, ನಾಟಕ, ಯಕ್ಷಗಾನ, ಚಿತ್ರಕಲೆ, ವಿಜ್ಷಾನ, ಮಕ್ಕಳ ಸಾಹಿತ್ಯ, ಸಿನಿಮಾ, ಪರಿಸರ ಜಾಗೃತಿ, ರಾಜಕೀಯ, ಸಮಾಜ ಸೇವೆ ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದು ಅಪರಿಮಿತ ಸಾಧನೆಗಳನ್ನು ಮಾಡಿದರು. ಅವರು ಬರೆದಿರುವ ಕಾದಂಬರಿಗಳ ಬಗ್ಗೆ ಒಂದು ಚುಟುಕು ಚಿತ್ರಣ ನೀಡುವುದು ಈ ಪ್ರಬಂಧದ ಉದ್ದೇಶ.
ಕಾರಂತರು ತಮ್ಮ ಬರವಣಿಗೆಯ ಆರಂಭದ ಹಂತದಲ್ಲಿ ಬರೆದ ಅಪಕ್ವ ಕಾದಂಬರಿಗಳನ್ನೂ ಸೇರಿಸಿ 45 ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ತಮ್ಮ ಕಾಲೇಜು ಓದನ್ನು ಅರ್ಧದಲ್ಲೇ ನಿಲ್ಲಿಸಿ ಗಾಂಧೀಜಿಯವರ ಕರೆಗೆ ಓಗೊಟ್ಟು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ನಂತರ ಜೀವನೋಪಾಯಕ್ಕಾಗಿ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಅವರು ದೇವಣ್ಣ ಪೈ ಎಂಬವರ ಜತೆಗೆ ಆರಂಭಿಸಿದ ‘ವಸಂತ ಮಾಸಪತ್ರಿಕೆ’ಯಲ್ಲಿ ಅವರ ಬರವಣಿಗೆ ಆರಂಭವಾಯಿತು. ಆರ್ಥಿಕ ಮುಗ್ಗಟ್ಟಿನಿಂದ ಪತ್ರಿಕೆಯನ್ನು ಬಹಳ ಕಷ್ಟದಿಂದ ನಡೆಸುತ್ತಿದ್ದು ಸಾಕಷ್ಟು ಲೇಖನಗಳು ಬಾರದಿದ್ದಾಗ ಅವರು ಸ್ವತಃ ತಾವೇ ಬರೆಯತೊಡಗಿದರು. ಹಾಗೆ ಧಾರಾವಾಹಿಯಾಗಿ ಪ್ರಕಟಿಸಲೆಂದು ಅವರು ಬರೆದ ಮೊದಲ ಎರಡು ಪತ್ತೇದಾರಿ ಕಾದಂಬರಿಗಳಾಗಿದ್ವವು ‘ವಿಚಿತ್ರಕೂಟ’ ಮತ್ತು ‘ಭೂತ’.ರೋಚಕಶೈಲಿಯಲ್ಲಿದ್ದ ಇವು ಇಂಗ್ಲಿಷ್ ಕಾದಂಬರಿಗಳ ಅನುಕರಣೆಯಾಗಿದ್ದವು. ಮುಂದೆ ಇನ್ನೊಬ್ಬ ಇಂಗ್ಲಿಷ್ ಲೇಖನನ್ನು ಮಾದರಿಯಾಗಿಟ್ಟುಕೊಂಡು ‘ದೇವದೂತರು’ ಎಂಬ ಒಂದು ವಿಡಂಬನಾತ್ಮಕ ಕಾದಂಬರಿಯನ್ನೂ ಬರೆದರು. . ಆದರೆ ತಮ್ಮ ಈ ಕಾದಂಬರಿಗಳ ಬಗ್ಗೆ ಅವರಿಗೆ ಏನೇನೂ ಸಮಾಧಾನವಿರಲಿಲ್ಲ.
ಅಂದಿನ ದಿನಗಳಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮವಾಗಿ ಭಾರತದ ಸಾಮಾಜಿಕ ಜನ ಜೀವನದಲ್ಲಿ ಸುಧಾರಣೆಯ ಗಾಳಿ ಬೀಸತೊಡಗಿತ್ತು. ಸ್ತ್ರೀ ಶೋಷಣೆ, ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಪ್ರಬಲ ವಿರೋಧಿ ಧ್ವನಿಗಳು ಕೇಳತೊಡಗಿದ್ದವು. ಸ್ತ್ರೀಯರ ಹೆಸರುಗಳೇ ಶೀರ್ಷಿಕೆಯಾಗಿದ್ದ ಇಂದಿರಾಬಾಯಿ, ವಾಗ್ದೇವಿ, ರೋಹಿಣಿ, ಭಾಗೀರಥಿ ಮೊದಲಾದ ಕಾದಂಬರಿಗಳು ಅದಾಗಲೇ ಸಾಹಿತ್ಯವಲಯದಲ್ಲಿ ಸಂಚಲನ ಮೂಡಿಸಿದ್ದವು. ಆಧುನಿಕ ಕನ್ನಡದ ಮೊದಲ ಕಾದಂಬರಿಕಾರ್ತಿಯಾದ ನಂಜನಗೂಡು ತಿರುಮಲಾಂಬಾರವರು ಹೆಣ್ಣಿನ ಬವಣೆಗಳ ಸುತ್ತ ಸುಶೀಲೆ, ವಿದ್ಯುಲ್ಲತೆ ಮೊದಲಾದ ಕಾದಂಬರಿಗಳನ್ನು ಬರೆದಿದ್ದರು. ರಾಷ್ಟ್ರೀಯ ಚಳುವಳಿಯೂ ಸಕ್ರಿಯವಾಗಿತ್ತು. ಈ ಘಟ್ಟದಲ್ಲಿ ಶಿವರಾಮ ಕಾರಂತರು ಗುಲ್ವಾಡಿ ವೆಂಕಟರಾಯರ ಮಾದರಿಯನ್ನನುಸರಿಸಿ ‘ನಿರ್ಭಾಗ್ಯಜನ್ಮ’ ಮತ್ತು ‘ಕನ್ಯಾಬಲಿ’ ಎಂಬ ಎರಡು ಕಾದಂಬರಿಗಳನ್ನು ಬರೆದು ತಮ್ಮ ವಸಂತ ಮಾಸಪತ್ರಿಕೆ ಯಲ್ಲಿ ಪ್ರಕಟಿಸಿದರು. ಈ ಎರಡೂ ಕಾದಂಬರಿಗಳಲ್ಲಿ ಅವರು ಹೆಣ್ಣಿನ ಸಮಸ್ಯೆಗಳ ವಿವಿಧ ಮುಖಗಳನ್ನು- ಮುಖ್ಯವಾಗಿ ಸಮಾಜವು ಆಕೆಯ ಬಗ್ಗೆ ತೋರಿಸುವ ತಾತ್ಸಾರ ಮನೋಭಾವ, ವಿಧವಾ ಸಮಸ್ಯೆ, ವೇಶಾ ್ಯ ಸಮಸ್ಯೆ-ಗಳನ್ನು ಅವರು ಚರ್ಚಿಸಿದರು. ಆದರೆ ಆದರ್ಶಪರತೆಯ ಆವೇಗದಲ್ಲಿ ಕಾದಂರಿಗಳ ರಚನಾತ್ಮಕ ಸೌಂದರ್ಯದ ಬಗ್ಗೆ ಅವರು ಕಡಿಮೆ ಗಮನ ಹರಿಸಿದ್ದರಿಂದ ಈ ಕಾದಂಬರಿಗಳು ವಿಮರ್ಶಕರ ಗಮನ ಸೆಳೆಯಲಿಲ್ಲ. ಆದರೆ ಅವರ ಮುಂದಿನ ಕಾದಂಬರಿ ‘ಚೋಮನ ದುಡಿ’ ಮಾತ್ರ ಅಂದಿನ ಕಾಲದ ಒಂದು ಜ್ವಲಂತ ಸಮಸ್ಯೆಯಾದ ದಲಿತ ವರ್ಗದವರ ಮೇಲಿನ ದಬ್ಬಾಳಿಕೆ-ದೌರ್ಜನ್ಯಗಳನ್ನು ಬಹಳ ಆಳವಾಗಿ ಮತ್ತು ಪರಿಣಾಮಕಾರಿಯಾಗಿ ಚರ್ಚಿಸಿತು. 1933ರಲ್ಲಿ ಪ್ರಕಟವಾದ ಈ ಕಾದಂಬರಿಯು ಅಂದಿನ ಸುಧಾರಣಾ ಚಳುವಳಿಯ ಉದ್ದೇಶದ ವೈಶಾಲ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿತು.
ದಲಿತರಿಗೆ ಮೇಲುಜಾತಿಯ ಜಮೀನ್ದಾರರುಗಳ ಭೂಮಿಯಲ್ಲಿ ದುಡಿಯುವ ಹಕ್ಕು ಮಾತ್ರ ಇತ್ತಷ್ಟೆ ಹೊರತು ಒಂದೇ ಒಂದು ಇಂಚಿನಷ್ಟು ಕೂಡಾ ಸ್ವಂತ ಭೂಮಿಯನ್ನು ಅವರು ಹೊಂದುವಂತಿಲ್ಲ ಎಂಬುದು ಮೇಲುಜಾತಿಯವರು ಧರ್ಮ-ಸಂಪ್ರದಾಯಗಳ ಹೆಸರಿನಲ್ಲಿ ಬೆಳೆಸಿಕೊಂಡು ಬಂದ ನಂಬಿಕೆಯಾಗಿತ್ತು. ಚೋಮನ ಮನಸ್ಸಿನಲ್ಲಿ ‘ನನ್ನದೊಂದು ಸ್ವಂತ ನೆಲವಿರಬೇಕು, ಅಲ್ಲಿ ನಾನು ದುಡಿದು ಬೆಳೆ ತೆಗೆದು ತಿನ್ನಬೇಕು’ ಎಂಬ ಅತ್ಯಂತ ಸಹಜವಾಗಿ ಮೊಳೆತ ಆಸೆಗೆ ಧ್ವನಿ ನೀಡಿದ ಕಾರಂತರು ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಚೋಮನ ಕಿತ್ತು ತಿನ್ನುವ ಬಡತನ, ಮನದಾಳದ ನೋವು, ನಿರಾಶೆ, ಹತಾಶೆ, ಅವನು ಎದುರಿಸುವ ವಿರೋಧಗಳು, ಕಷ್ಟಗಳ ಸರಮಾಲೆಗಳು- ಎಲ್ಲವೂ ಅತಿ ಕಡಿಮೆ ಸಂಖ್ಯೆಯ ಪುಟಗಳಲ್ಲಿ ಸಶಕ್ತ ಭಾಷೆ, ಶೈಲಿ, ಬಿಗಿ ಬಂಧದ ರಚನೆಗಳೊಂದಿಗೆ ಅಭಿವ್ಯಕ್ತಗೊಂಡಿದೆ. ದಮನಿತ ವರ್ಗದ ಕುರಿತಾದ ‘ಚೋಮನ ದುಡಿ’ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಧೃಢವಾಗಿ ನೆಲೆನಿಂತಂತಹ ಕಾದಂಬರಿ.
ಕಾರಂತರು ತಮ್ಮ ಬರವಣಿಗೆಯ ಆರಂಭ ಮತ್ತು ಮಧ್ಯದ ಹಂತಗಳಲ್ಲಿ ಬರೆದಂತಹ ಕಾದಂಬರಿಗಳನ್ನೇ ಇವತ್ತು ಅವರ ಪ್ರಧಾನ ಕಾದಂಬರಿಗಳೆಂದು ಪರಿಗಣಿಸಲಾಗುತ್ತಿದೆ. ಅವುಗಳು ಚರ್ಚೆಗೆ ತೆಗೆದುಕೊಂಡ ವಸ್ತುಗಳನ್ನು ಗಮನದಲ್ಲಿಟ್ಟುಕೊಂಡು ನಾವು ಅವುಗಳನ್ನು 1) ಸ್ತ್ರೀಪರ ಕಾಳಜಿಯುಳ್ಳ ಸುಧಾರಣಾವಾದಿ ಕಾದಂಬರಿಗಳು 2) ಸಾಮಾಜಿಕ ಕಥಾನಗಳು 3) ಕಲೆಯ ಕುರಿತಾದ ಕಾದಂಬರಿಗಳು 4) ರಾಜಕೀಯ ಕಾದಂಬರಿಗಳು ಮತ್ತು ನಿಸರ್ಗ-ಮನುಷ್ಯನ ನಡುವಣ ಸಂಬಂಧದ ಕುರಿತಾದ ಕಾದಂಬರಿಗಳೆಂದು ವಿಭಾಗಿಸಬಹುದು.
ಸ್ತ್ರೀಪರ ಕಾಳಜಿ ಎದ್ದು ಕಾಣುವ ಕಾದಂಬರಿಗಳಲ್ಲಿ ಬಹಳ ಚಿಕ್ಕ ಗಾತ್ರದ ‘ ಸರಸಮ್ಮನ ಸಮಾಧಿ’ಗೆ ಪ್ರಮುಖ ಸ್ಥಾನವಿದೆ. ಇದು ನಾಲ್ಕು ಕುಟುಂಬಗಳಲ್ಲಿ ಸ್ತ್ರೀಯರು ಪಡುವ ಯಾತನೆ, ಬವಣೆ, ಅಪಮಾನಗಳನ್ನು ಚಿತ್ರಿಸಿ ಹೊರಗಿನಿಂದ ಚಂದವಾಗಿಯೇ ಕಾ£ಣಿಸುವ ದಾಂಪತ್ಯ ಜೀವನದ ಒಳಗೆ ಅಡಗಿರುವ ದಾರುಣ ಸತ್ಯಗಳನ್ನು ಭೇದಿಸುತ್ತದೆ. ಕಾರಂತರಿಗೆ ಅಪಾರ ಹೆಸರನ್ನು ತಂದುಕೊಟ್ಟ ಕಾದಂಬರಿ ‘ಮರಳಿ ಮಣ್ಣಿಗೆ’. ಇದೊಂದು ಸ್ತ್ರೀಶಕ್ತಿಗೆ ಪ್ರಬಲ ಸಂಕೇತವಾಗಿ ನಿಲ್ಲುವಂತಹ ಕಾದಂಬರಿ. ಮೂರು ತಲೆಮಾರುಗಳ ಕಥೆಯನ್ನು ಹೇಳುವ ಇದು ತನ್ನ ಕಾವ್ಯಾತ್ಮಕ ಶೈಲಿಯಿಂದ ಒಂದು ಮಹಾಕಾವ್ಯದಂತೆ ಕಂಗೊಳಿಸುತ್ತದೆ.. ಒಂದು ಕುಟುಂಬದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯರ ಬಗ್ಗೆ ತೋರಿಸುವ ನಿರ್ಲಕ್ಷ್ಯ, ತಾತ್ಸಾರಗಳನ್ನು ಮತ್ತು ಕೌಟುಂಬಿಕ ಬದುಕಿನ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುವ ಪುರುಷರ ಧೋರಣೆಯನ್ನು ತಣ್ಣಗೆ ವಿರೋಧಿಸುತ್ತ ಸ್ತ್ರೀಯರ ಧೈರ್ಯ-ಸ್ಥೈರ್ಯ-ಪರಿಶ್ರಮ-ಸಾಧನೆ-ಜೀವಂತಿಕೆಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತದೆ. ಕಾರಂತರ ಸ್ತ್ರೀಪರ ಕಾಳಜಿಗೆ ಸಾಕ್ಷಿಯಾಗಿ ನಿಲ್ಲುವ ಇನ್ನಷ್ಟು ಕಾದಂಬರಿಗಳು ನಂಬಿದವರ ನಾಕ ನರಕ, ಧರ್ಮರಾಯನ ಸಂಸಾರ, ಒಡಹುಟ್ಟಿದವರು, ಜಾರುವ ದಾರಿಯಲ್ಲಿ, ಬತ್ತದ ತೊರೆ, ಕಣ್ಣಿದ್ದೂ ಕಾಣರು, ಇಳೆಯೆಂಬ, ಮೈಮನಗಳ ಸುಳಿಯಲ್ಲಿ, ಆಳ ನಿರಾಳ, ಸ್ವಪ್ನದ ಹೊಳೆ, ಕರುಳಿನ ಕರೆ, ಅಳಿದ ಮೇಲೆ ಮೊದಲಾದವುಗಳು. ಅಂತೆಯೇ ದಾಂಪತ್ಯದ ಬದುಕಿನಲ್ಲಿ ಪಡೆಯಬಹುದಾದಷ್ಟೂ ಸುಖಗಳನ್ನು ಪಡೆದ ನಂತರ ಮುಂದಿನ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಸನ್ಯಾಸದ ಸೋಗು ಹಾಕುವ ಪುರುಷರ ಪಲಾಯನವಾದಿ ಧೋರಣೆಯನ್ನು ಖಂಡಿಸುತ್ತ ಕಾರಂತರು ಸನ್ಯಾಸಿಯ ಬದುಕು, ಕೇವಲ ಮನುಷ್ಯರು, ಸಮೀಕ್ಷೆ, ಜಗದೋದ್ಧಾರನಾ, ಆಳ ನಿರಾಳ ಮೊದಲಾದ ಕಾದಂಬರಿಗಳು ಅವರ ಸ್ತ್ರೀಪರ ಕಾಳಜಿಯ ಇನ್ನೊಮದು ಮುಖವನ್ನು ಪರೋಕ್ಷವಾಗಿ ಚಿತ್ರಿಸುತ್ತವೆ.
ಮೂಕಜ್ಜಿಯ ಕನಸುಗಳು ಕಾರಂತರ ಅತ್ಯಂತ ವಿಶಿಷ್ಟ ಕಾದಂಬರಿ. ಇದು ‘ವಿಷನ್ಸ್ ಆಫ್ ಮೂಕಜ್ಜಿ’ ಎಂದು ಇಂಗ್ಲಿಷಿಗೆ ಅನುವಾದವಾಗಿದೆ. ಕಾರಂತರಿಗೆ 1978ರಲ್ಲಿ ಜ್ಷಾನಪೀಠ ಪ್ರಶಸ್ತಿ ದೊರಕಿದ್ದು ಇದೇ ಕಾದಂಬರಿಗೆ. ಮಾನವಶಾಸ್ತ್ರೀಯ ಹಿನ್ನೆಲೆಯಿಂದ ಧರ್ಮ, ಸಂಪ್ರದಾಯ, ದೇವರು ಮತ್ತು ಲೈಂಗಿಕ ಸಂಬಂಧಗಳ ಆಳವಾದ ಅಧ್ಯಯನದ ಮೂಲಕ ರಚನೆಯಾದಂತಹ ಕೃತಿಯಿದು. ಬಾಲವಿಧವೆ ಮೂಕಾಂಬಿಕೆ ಎದುರಿಸುವ ಕಷ್ಟ ಸಂಕಟಗಳು ಆಕೆಯನ್ನು ಮೌನಪ್ರಿಯಳನ್ನಾಗಿ ಮಾಡುವುದರಿಂದ ಆಕೆಗೆ ಆ ಹೆಸರು ಪ್ರಾಪ್ತವಾಗುತ್ತದೆ. ಆಕೆಯಲ್ಲಿ ಆವಾಹನೆಗೊಂಡ ಅತೀಂದ್ರಿಯ ಜ್ಷಾನದ ಮೂಲಕ ಅವಳು ಪುರಾತನ ಕಾಲಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ತಂದು ಅವಳ ಕೈಯಲ್ಲಿಟ್ಟರೂ ಅದರ ಬಗ್ಗೆ ಗಂಟೆಗಟ್ಟಲೆ ಮಾತನಾಢಬಲ್ಲಳು.ಅದರ ಸಂಪೂರ್ಣ ಇತಿಹಾಸವನ್ನು ಹೇಳಬಲ್ಲಳು. ಈ ಕಾದಂಬರಿಯಲ್ಲಿ ಮೂಕಜ್ಜಿಯ ನೆಪದಲ್ಲಿ ಕಾರಂತರು ಒಂದು ಅದ್ಭುತ ಜಗತ್ತನ್ನೇ ಕಟ್ಟಿ ಕೊಟ್ಟಿದ್ದಾರೆ. ಮತ್ತು ಆ ಮೂಲಕ ಇಂದಿನ ನಾಗರೀಕ ಜಗತ್ತಿನ ಪೊಳ್ಳುತನವನ್ನು ಬಯಲಿಗೆಳೆಯುತ್ತಾರೆ.
ಔದಾರ್ಯದ ಉರುಳಲ್ಲಿ ಎಂಬ ದೊಡ್ಡ ಗಾತ್ರದ ಕಾದಂಬರಿಯು ಕಾರಂತರ ರಾಜಕೀಯ ಜೀವನದ ಕುರಿತಾದ ಕಾದಂಬರಿ. ಯುವಕರಾಗಿದ್ದಾಗ ಗಾಂಧೀಜಿಯವರ ಕರೆಗೆ ಓಗೊಟ್ಟು ಭಾರತದ ಸ್ವಾತಂತ್ರ್ಯಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿದ್ದ ಕಾರಂತರು ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯು ಎದುರಿಸುವ ಸವಾಲುಗಳು ಹಾಗೂ ಅನುಭವಿಸುವ ಕಷ್ಟನಷ್ಟಗಳನ್ನು ಇಲ್ಲಿ ಚಿತ್ರಿಸುತ್ತಾರೆ. ಮೂಜನ್ಮ ಮತ್ತು ಗೊಂಡಾರಣ್ಯ ಎಂಬ ಇನ್ನೆರಡು ಕಾದಂಬರಿಗಳೂ ರಾಜಕೀಯ ಜೀವನದ ಕುರಿತಾಗಿಯೇ ಇವೆ.
ಕಾರಂತರ ನಿಸರ್ಗದ ಕುರಿತಾದ ಜಿಜ್ಷಾಸೆಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದ ಕಾದಂಬರಿ ‘ಬೆಟ್ಟದ ಜೀವ’ ಅವರಿಗೆ ಬಹಳ ಪ್ರಸಿದ್ಧಿಯನ್ನು ತಂದು ಕೊಟ್ಟ ಕಾದಂಬರಿ. ಗ್ರಾಮೀಣ ಬದುಕಿನಲ್ಲಿ ಮನುಷ್ಯ ಪ್ರಕೃತಿಯೊಂದಿಗೆ ಬೆಳೆಸುವ ಸಾಂಗತ್ಯದ ಕುರಿತಾದ ಮನಮುಟ್ಟುವ ಚಿತ್ರಣ ಇಲ್ಲಿದೆ. ಇಲ್ಲ ಬರುವ ಗೋಪಾಲಯ್ಯ ಎಂದೂ ಮರೆಯಲಾಗದ ಪಾತ್ರ. ನಿಸರ್ಗದೊಂದಿಗೆ ಸತತ ಹೋರಾಟ ನಡೆಸುತ್ತಲೇ ಅದರೊಂದಿಗೆ ಆತ್ಮೀಯ ಸಂಬಂಧವನ್ನೂ ಮತ್ತು ಗಾಢವಾದ ನಂಟನ್ನೂ ಬೆಳೆಸಿಕೊಳ್ಳುವ ಆತ ನಗರ ಜೀವನದ ಯಾಂತ್ರಿಕತೆಯಲ್ಲಿ ಸೋಲುವ ಆಧುನಿಕ ಜಗತ್ತಿನ ನಾಗರಿಕರಿಗೆ ಸವಾಲು ಹಾಕುತ್ತಾನೆ. ಕುಡಿಯರ ಕೂಸು, ಚಿಗುರಿದ ಕನಸು, ಮರಳಿ ಮಣ್ಣಿಗೆ ಕಾದಂಬರಿಗಳಲ್ಲಿ ಕೂಡಾ ನಿಸಗರ್U ಮತ್ತು ಮನುಷ್ಯರ ನಡುವಣ ಸಂಘರ್ಷವಿದೆ.
1948ರಲ್ಲಿ ಕಾರಂತರು ಬರೆದ ‘ಮೊಗ ಪಡೆದ ಮನ’, 1966ರಲ್ಲಿ ಬರೆದ ‘ಸ್ವಪ್ನದ ಹೊಳೆ’ ಮತ್ತು 1975ರಲ್ಲಿ ಬರೆದ ‘ಇಳೆಯೆಂಬ’ ಕಾದಂಬರಿಗಳು ಕಲೆ ಮತ್ತು ಕಲಾವಿದರ ಬದುಕಿನ ಕುರಿತಾದವುಗಳು. ಸ್ವತಃ ಕಲಾವಿದರಾಗಿದ್ದ ಕಾರಂತರು ತಮ್ಮ ಕಲಾಕ್ಷೇತ್ರದ ಅನುಭವಗಳನ್ನು ಇಲ್ಲಿ ಸುಂದರವಾಗಿ ಹೆಣೆದಿದ್ದಾರೆ. ಮರಳಿ ಮಣ್ಣಿಗೆ, ‘ಮೈಮನಗಳ ಸುಳಿಯಲ್ಲಿ’ ಮೊದಲಾದ ಕಾದಂಬರಿಗಳೂ ಸಂಗೀತ, ಚಿತ್ರಕಲೆ ಯಕ್ಷಗಾನಗಳ ಕುರಿತು ಬಹಳಷ್ಟು ಚರ್ಚಿಸುತ್ತವೆ.
ಕಾರಂತರು ನವೋದಯ, ನವ್ಯ ಮತ್ತು ನವ್ಯೋತ್ತರ ಕಾಲಗಳಲ್ಲಿ ತಮ್ಮ ಕೃತಿಗಳನ್ನು ರಚಿಸಿದವರು. ಆದರೆ ಅವರು ಈ ಯಾವ ಶೈಲಿಗಳಿಗೂ ಅಂಟಿಕೊಳ್ಳದೆ ‘ ಆನೆ ನಡೆದದ್ದೇ ದಾರಿ’ ಎಂಬಂತೆ ತಮ್ಮದೇ ಆದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ತಮ್ಮ ಕೃತಿಗಳಿಗೆ ರೂಪವಿತ್ತರು. ಸ್ವಭಾವದಲ್ಲೂ ಬರೆಹದಲ್ಲೂ ಏಕರೂಪವನ್ನು ಸಾಧಿಸಿದ ಅವರದ್ದು ನೇರ-ನಿಷ್ಠುರ ನಡೆನುಡಿ. ಸಮಾಜದ ಓರೆ-ಕೋರೆಗಳನ್ನು ತಿದ್ದಿ ಸರಿಪಡಿಸುವುದೇ ಸಾಹಿತ್ಯದ ಗುರಿಯಾಗಬೇಕೆಂದು ದುಡಿದ ಅವರ ಚಿಕಿತ್ಸಕ ಮನೋಭಾವ ನಮಗೆಲ್ಲರಿಗೂ ಅನುಕರಣೀಯ.
-ಡಾ.ಪಾರ್ವತಿ ಜಿ. ಐತಾಳ್, ಕುಂದಾಪುರ
ಕಡಲ ತೀರದ ಭಾರ್ಗವ ಎಂದು ಪ್ರತೀತ ಯಶರಾದ ಕೋಟ ಶಿವರಾಮ ಕಾರಂತರ ಜನ್ಮ ದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಬರವಣಿಗೆಯ ವಿವಿಧ ಆಯಾಮಗಳನ್ನು ಚಿತ್ರಿಸಿದ ಪಾರ್ವತಿ ಐತಾಳ ಅವರಿಗೆ ಉಪಕೃತಿಯ ವಂದನೆಗಳು
" ಗಗನಂ ಗಗನಾಕಾರಂ ಸಾಗರಂ ಸಾಗರೋಪಮಂ" ಎಂಬಂತೆ ಕಾರಂತರಿಗೆ ಕಾರಂತರೆ ಹೋಲಿಕೆ.ಆಡು ಮುಟ್ಟದ ಗಿಡವಿಲ್ಲ ಎಂಬಂತೆ ಕಾರಂತರು ಕನ್ನಡ ಸಾಹಿತ್ಯದ ತ್ರಿವಿಕ್ರಮ ಪ್ರತಿಭೆ. ಸಮುದ್ರದಂತೆ ಗಾಂಭೀರ್ಯ ಮತ್ತು ಹೊಸತನವನ್ನು ಪ್ರತಿನಿಧಿಸಿದ ಕಾರಂತರು ಕನ್ನಡ ನಾಡಿನ ತವನಿಧಿ. ಡಾ.ಶ್ರೀಪಾದ ಶೆಟ್ಟಿ.