ಶ್ರಾವಣ ಸಂಭ್ರಮ

ಬಂತು ಬಂತು ಶ್ರಾವಣ

ತಂತು ನಲಿವಿನ ತೋರಣ

ದಿನ ದಿನವೂ ಸಂಭ್ರಮ

ಜೀವ ಭಾವದ ಸಂಗಮ


ಬೀಸಿ ಬರುವ ಗಾಳಿಗೂ

ಹೂವ ಕಂಪ ಘಮ ಘಮ

ತೂರಿ ಬರುವ ಕಿರಣಕೂ

ಮಂದಸ್ಮಿತ ಅನುಪಮ


ಸಾಲು ಮರದ ಅಲೆಯಲೂ

ಹಸಿರು ವರ್ಣದೋಕುಳಿ

ಮತ್ತೆ ಕತ್ತನೆತ್ತಲು

ಮೊಲ್ಲೆ ಮೊಗ್ಗಿನೋಕುಳಿ


ಮಧುವನರಸುವ ದುಂಬಿಗೆ

ಪುಷ್ಪಹಾಸ ಚುಂಬನ

ಜೇನ ಸವಿದ ಮತ್ತಿಗೆ

ಕಾತರಿಕೆಯ ಮಿಲನ


ಸೋನೆ ಮಳೆಯ ಸೆರಗಿಗೆ

ಭುವಿಯು ಬೆರಗುಗೊಂಡಿದೆ

ಶ್ರಾವಣದ ಯಾತ್ರೆಗೆ

ಮುತ್ತೈದೆ ಜಾತ್ರೆ ನೆರೆದಿದೆ


-ಜಯಶ್ರೀ ರಾಜು, ಬೆಂಗಳೂರು


ಶ್ರೀಮತಿ ಜಯಶ್ರೀ ರಾಜು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು. ಪ್ರಸ್ತುತ ಬೆಂಗಳೂರು ನಿವಾಸಿತಾಗಿರುವ ಇವರು ಉಭಯ ಭಾಷಾ ಸಾಹಿತಿ. ಕೊಂಕಣಿ ಮತ್ತು ಕನ್ನಡ ಭಾಷೆಯಲ್ಲಿ ಕತೆ, ಕವನ, ಲೇಖನಗಳನ್ನು ಬರೆಯತ್ತಾರೆ. ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ, ನೃತ್ಯ, ಸಂಗೀತವನ್ನು ಹವ್ಯಾಸವನ್ನಾಗಿಸಿಕೊಂಡವರು. ಉತ್ತಮ ನಿರೂಪಕಿಯೂ ಕೂಡ. ಆಕಾಶವಾಣಿಯಲ್ಲಿ ಉಪನ್ಯಾಸ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಇವರ ಒಂದು ಕವನ ಈಗ ನಿಮ್ಮೆಲ್ಲರ ಓದಿಗಾಗಿ.....


36 views1 comment