top of page

"ಶ್ರಾವಣ ಶುಭ ತೋರಣ"

ಪೂಜ್ಯ ಶ್ರೀ ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಕ್ಷೇತ್ರ ನಾಲವಾರ ಅವರ ಸನ್ನಿಧಿಗೆ ಕೃತಾನೇಕ ವಂದನೆಗಳು.

ಪೂಜ್ಯರೆ "ಶ್ರಾವಣ ಶುಭ ತೋರಣ" ಕೃತಿಯನ್ನು ನೆನಪಿಟ್ಟು ಕಳಿಸಿ ಪ್ರೀತಿ ತೋರಿದ ನಿಮಗೆ ಅಭಿವಂದನೆಗಳು. ಇಂತಹ ಒಂದು ಕೃತಿಯ ಮೂಲಕ ಜ್ಞಾನ ದಾಸೋಹವನ್ನು ನಿತ್ಯ ನಿರಂತರ ನಡೆಸುತ್ತಿರುವ ನಿಮಗೆ ಅಭಿನಂದನೆಗಳು.

" ಓ ಚಿತ್ತ ಕದವ ತೆರೆ ಬೆಳಕು ಬರಲಿ ಇತ್ತ" ಎಂಬ ಕವಿವಾಣಿಯಂತೆ ನಿಮ್ಮ ಶ್ರೀ ಮುಖದಿಂದ ಲೇಖನಿಗೆ ಇಳಿದು ಜನ ಮನದಲ್ಲಿ ವಿಜಯವಾಣಿ ಪತ್ರಿಕೆಯ ಅಂಕಣದ ಮೂಲಕ ಸಂಚಲನವನ್ನುಂಟು ಮಾಡಿದ ಈಗ ಪುಸ್ತಕವಾಗಿ ಮನೆ ಮತ್ತು ಮನದಲ್ಲಿ ನೆಲೆಗೊಳ್ಳುವ ನೂರಾ ಒಂದು ಚಿಂತನಗಳು ನಿಜಕ್ಕೂ ನಿಮ್ಮ ಆಚಾರ ವಿಚಾರಗಳ ಅನುಷ್ಠಾನಗಳ ಮೂಸೆಯಲ್ಲಿ ಎರಕ ಹೊಯ್ದ ಅಣಿಮುತ್ತುಗಳೆ ಆಗಿವೆ. ನಿಮ್ಮ ಚಿಂತನದಲ್ಲಿ ನೀವು ಉದಾಹರಿಸುವ ಬಸವ,ಅಲ್ಲಮ,ಜೇಡರ ದಾಸಿಮಯ್ಯ ಮುಂತಾದ ಶರಣರ ಸೂಕ್ತಿಗಳು ಅದಕ್ಕೆ ನೀವು ಮಾಡಿದ ವ್ಯಾಖ್ಯಾನಗಳು ಮನದ ಕದವನ್ನು ತೆರೆದು ಅರಿವಿನ ಬೆಳಕು ಅಂತರಂಗದ ಕಣ್ಣನ್ನು ತೆರೆದು ಹೊಸ ಪ್ರಪಂಚದ ಕಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ಐಹಿಕವಾದ ಸುಖಕ್ಕಿಂತ ಮಿಗಿಲಾದ ಪಾರಮಾರ್ಥಿಕ ಸುಖವೊಂದಿದೆ ಅದು ಜ್ಞಾನಿಯಾದವನಿಗೆ ಮಾತ್ರ ಸಾಧ್ಯ. ವ್ಯಕ್ತಿಯನ್ನು ಜ್ಞಾನ ಸತ್ರದ ಕಡೆಗೆ ಕರೆದೊಯ್ಯುವ ಆತನನ್ನು ಚಿಂತನೆಗೆ ಹಚ್ಚಿ ಪುನೀತನನ್ನಾಗಿ ಮಾಡುವ ಶಕ್ತಿ ನಿಮ್ಮ ಲೇಖನಿಗೆ ಸಿದ್ಧಿದೆ." ಗುರವ: ಬಹವ ಸಂತಿ ಶಿಷ್ಯ ವಿತ್ತಾಪಹಾರಿಣ

ತೇಚ ಅಪಿ ವಿರಳ ಶಿಷ್ಯ ಚಿತ್ತಾಪ ಹಾರಿಣ" ಎಂಬ ಮಾತು ಶ್ರಾವಣ ಶುಭ ತೋರಣ ಕೃತಿಗೆ ಅನ್ಯಯಿಸುತ್ತದೆ. ಈ ಕೃತಿ ಗುರುವಾಗಿ ಶಿಷ್ಯರ ಚಿತ್ತಾಪಹಾರಿಯಾಗಿದೆ.

ನುಡಿದಂತೆ ನಡೆ ಇದೆ ಜನ್ಮ ಕಡೆ ಎಂಬ ಅಣ್ಣನ ವಚನದ ಆದರ್ಶ ಮತ್ತು ಆಶಯದೊಂದಿಗೆ ನೀವು ಶ್ರಾವಣದ ಶುಭ ತೋರಣವನ್ನು ಶ್ರೀಸಾಮಾನ್ಯರಿಗಾಗಿ ವಿರಚಿಸಿದ್ದೀರಿ. ಈ ತೋರಣದೊಳಗಿನ ಒಂದೊಂದು ಶೀರ್ಷಿಕೆಯು ಓದುಗನನ್ನು ತನ್ನತ್ತ ಸೆಳೆಯುವ ಚುಂಬಕ ಶಕ್ತಿಯನ್ನು ಪಡೆದಿದೆ. ಶಿವ ಶರಣರ,ದಾಸರ,ಸಂತರ ನುಡಿಗಡಣದೊಂದಿಗೆ,ಉಪನಿಷತ್ತು,ವೇದ,ಆಗಮ,

ಸುಭಾಷಿತಗಳ ಸಾರ ಸರ್ವಸ್ವವನ್ನು ಇಲ್ಲಿಯ ಚಿಂತನಗಳಲ್ಲಿ ನಿಮ್ಮ ಸ್ವಾನು ಭವವನ್ನು ಮಿಳಿತಗಳಿಸಿ ಎರಕ ಹೊಯ್ಯಲಾಗಿದೆ.

" ತಿಳಿಯ ಹೇಳುವೆ ಕೃಷ್ಣ ಕತೆಯನು ಇಳೆಯ ಜಾಣರು ಮೆಚ್ಚುವಂತಿರೆ" ಎಂದು ಕುಮಾರವ್ಯಾಸ ಅಂದು ಹೇಳಿದ.ಇಂದು ನೀವು ಜಗದ ಜೀವಿಗಳು ಬದುಕನ್ನು ಬಾಳುವೆಯಾಗಿ ರೂಪಿಸಿಕೊಳ್ಳಲು ಅಗತ್ಯವಾದ ಹತ್ತು ಹಲವು ವಿಚಾರಗಳನ್ನು ತಾಯಿ ತನ್ನ ಮಗುವಿಗೆ ಕೈತುತ್ತು ನೀಡಿ ಬೆಳೆಸುವಂತೆ ನಿಮ್ಮ ಚಿಂತನೆಗಳ ಪರಮಾನ್ನವನ್ನು ಉಣ ಬಡಿಸಿದ್ದೀರಿ. ಇಲ್ಲಿಯ ಒಂದೊಂದು ಚಿಂತನೆಗಳು ವಿವರಣೆಯನ್ನು ಬಯಸುವಷ್ಟು ಗಂಭೀರವಾಗಿದೆ. ಅದನ್ನೆಲ್ಲಾ ವಿವರಿಸುವ ಸಾಹಸ ನಾನು ಮಾಡುತ್ತಿಲ್ಲ. 'ಅನ್ನದ ಗುಣವನ್ನು ಅಗುಳಿನಲ್ಲಿ ನೋಡು' ಎಂಬ ಮಾತಿನಂತೆ ನೀವು ಬರೆದ ಚಿಂತನದ ಒಂದೊಂದು ಮಾತು ಸುಭಾಷಿತದಂತಿದೆ. ನಿಮ್ಮ ಮುಖೋದ್ಗತ ಓದುಗರ ಹೃದ್ಗತವಾಗುವ ಗುಣವನ್ನು ಹೊಂದಿದೆ.

ಗುರುಗಳೆ ನಿಮ್ಮ ಅಕ್ಷರ ದಾಸೋಹ ನಿತ್ಯ ನಿರಂತರವಾಗಲಿ.ಬ್ರಹ್ಮಮಾನಸ ಮಹದ್ಗರ್ಭ ಸಂಭವೆಯು ಭಾವ ಚಿಂತಾಖನಿಯು ಆದ ವಿದ್ಯಾದೇವಿ ಸರಸತಿಯು ನಿಮ್ಮ ಮತಿಗೆ ಮಂಗಳವನಿತ್ತು ಇನ್ನು ಹೆಚ್ಚು ಇಂತಹ ಸಾರ್ಥಕ ಕೃತಿಗಳು ಕನ್ನಡಮ್ಮನ ಉಡಿಯನ್ನು ತುಂಬಲಿ.


ಡಾ.ಶ್ರೀಪಾದ ಶೆಟ್ಟಿ.

ಸಂಪಾದಕ,ಆಲೋಚನೆ.ಕಾಂ






6 views0 comments
bottom of page