top of page

ಶ್ರೀರಂಗರು (ಆರ್.ವಿ.ಜಾಗೀರ್ದಾರ)ನಾಟ್ಯ- ನಾಟಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯಿತ್ತ

ಶ್ರೀರಂಗ ( ಆದ್ಯ ರಂಗಾಚಾರ್ಯರು)

**************************************

ಶ್ರೀರಂಗ/ ಆದ್ಯ ರಂಗಾಚಾರ್ಯ / ಆರ್. ವಿ. ಜಾಗೀರ್ದಾರ....

೪೦ ದೊಡ್ಡ ನಾಟಕ, ೬೭ ಏಕಾಂಕಗಳು, ೧೨ ಕಾದಂಬರಿಗಳು, ೧೨೦ ರಷ್ಟು ಹಾಸ್ಯಪ್ರಬಂಧ, ಇತರ ಹಲವು ವಿಮರ್ಶೆ, ಕಲೆ, ಶಾಸ್ತ್ರಗಳ ಕುರಿತಾದ ಗ್ರಂಥಗಳು ಸೇರಿ ನೂರಕ್ಕೂ ಹೆಚ್ಚು ಕೃತಿಗಳನ್ನಿತ್ತ ಶ್ರೀರಂಗರು ಕನ್ನಡ ರಂಗಭೂಮಿಯಲ್ಲಿ ಹೊಸ ಅಲೆಯನ್ನೆಬ್ಬಿಸಿದ ಪ್ರಸಿದ್ಧ ನಾಟಕಕಾರರು. ಅಷ್ಟೇ ಅಲ್ಲ, ಭರತನ ನಾಟ್ಯಶಾಸ್ತ್ರ, ಭಾರತೀಯ ರಂಗಭೂಮಿಗಳ ಕುರಿತು ಅವರು ಬರೆದ ಉದ್ಗ್ರಂಥಗಳು ಬಹಳ ಮಹತ್ವದ ಕೊಡುಗೆಗಳೆನಿಸಿವೆ. ಅವರ " ಕಾಳಿದಾಸ" ಕೃತಿಗೆ ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಾಗೆಯೇ ಭಾರತ ಸರಕಾರದ ಅತ್ಯುಚ್ಚ " ಪದ್ಮಭೂಷಣ " ಗೌರವಗಳು ದೊರೆತಿವೆ.

ವಿಜಾಪುರ ( ವಿಜಯಪುರ) ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಎಂಬಲ್ಲಿ ೧೯೦೪ ಸೆಪ್ಟೆಂಬರ್ ೨೬ ರಂದು ಜನಿಸಿದ ಶ್ರೀರಂಗರು ಲಂಡನ್ನಿನಲ್ಲಿ ಭಾಷಾಶಾಸ್ತ್ರದ ಮೇಲೆ ಎಂ. ಎ. ಪದವಿ ಪಡೆದರು (೧೯೨೫-೨೮). ಬಾಲ್ಯದಿಂದಲೇ ನಾಟಕಗಳತ್ತ ಆಕರ್ಷಿತರಾಗಿದ್ದ ಅವರ ಮೇಲೆ ವಿಜಾಪುರ ಮತ್ತು ಪುಣೆಯ ಕಂಪನಿ ನಾಟಕಗಳು ತುಂಬ ಪ್ರಭಾವ ಬೀರಿದ್ದವು. ಇಂಗ್ಲಂಡಿನಲ್ಲಿದ್ದ ಮೂರು ವರ್ಷವೂ ಅವರು ಆಂಗ್ಲ ರಂಗಭೂಮಿಯ ಸಂಪರ್ಕ ಹೊಂದಿದ್ದರು. ೧೯೨೮ ರಿಂದ ೧೯೪೮ ರತನಕ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರು ಸಂಸ್ಕೃತ, ಇಂಗ್ಲಿಷ ಕನ್ನಡ ಮೂರೂ ಭಾಷೆಗಳಲ್ಲಿ ಪರಿಣಿತರಾಗಿದ್ದರು. ಆಳ ಅಧ್ಯಯನದ ಹಿನ್ನೆಲೆಯಲ್ಲಿ ಅವರು ಭರತಮುನಿಯ ನಾಟ್ಯಶಾಸ್ತ್ತ, ಭಗವದ್ಗೀತೆಗಳಂತಹ ವಿಷಯಗಳ ಮೇಲೆ ಅಮೂಲ್ಯ ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದರು. ನಾಟ್ಯಶಾಸ್ತ್ರವನ್ನು ಇಂಗ್ಲಿಷಿನಲ್ಲಿಯೂ ತಂದರು.

೧೯೩೩ ರಲ್ಲಿ ಸ್ವತಃ ಕಲಾವಿಲಾಸಿ ನಾಟ್ಯ ಸಂಘ ಸ್ಥಾಪಿಸಿ ತಾವೇ ನಾಟಕಗಳನ್ನು ಬರೆದು ಪ್ರದರ್ಶಿಸಿದರು. ವಿಶೇಷವಾಗಿ ಇಂಗ್ಲಿಷ ನಾಟಕಗಳ ಪ್ರಭಾವವಿದ್ದ ಅವರ ನಾಟಕಗಳಲ್ಲಿ ಹೊಸ ತಂತ್ರ- ಪ್ರಯೋಗಗಳು ಕಂಡುಬಂದವು. ಕೇಳು ಜನಮೇಜಯ, ಹರಿಜನ್ವಾರ, ಸ್ವರ್ಗಕ್ಕೆ ಮೂರೇ ಬಾಗಿಲು, ನರಕದಲ್ಕಿ ನರಸಿಂಹ, ಶೋಕಚಕ್ರ, ಕತ್ತಲೆ ಬೆಳಕು, ರಂಗ ಭಾರತ, ಗುಮ್ಮನೆಲ್ಲಿಹ ತೋರಮ್ಮ, ನೀ ಮಾಯೆಯೊಳಗೊ, ಸಂಧ್ಯಾಕಾಲ, ಗೆಳೆಯ ನೀನು,ಹಳೆಯ ನಾನು ಮೊದಲಾದ ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿದವು. ನಾಡಿನ ಹವ್ಯಾಸೀ ಕಲಾ ತಂಡಗಳು ಅವನ್ನು ರಂಗಕ್ಕೆ ತರತೊಡಗಿದವು. ಖ್ಯಾತ ನಿರ್ದೇಶಕ ಬಿ. ವಿ. ಕಾರಂತರು ಶ್ರೀರಂಗರ " ದಾರಿ ಯಾವುದಯ್ಯಾ ವೈಕುಂಠಕೆ" ನಾಟಕ ನಿರ್ದೇಶನ ಮಾಡಿ ಆಡಿದ್ದರು.

ಶ್ರೀರಂಗರು ಅನಾದಿ, ಕುಮಾರಸಂಭವ, ವಿಶ್ವಾಮಿತ್ರ ಸೃಷ್ಟಿ, ಪ್ರಕೃತಿ ಮೊದಲಾದ ಹತ್ತು ಹನ್ನೆರಡು ಕಾದಂಬರಿಗಳನ್ನು ಬರೆದಿದ್ದು ಅವು‌ ವಿಶಿಷ್ಟ ಪ್ರಜ್ಞಾಪ್ರವಾಹ ತಂತ್ರದಿಂದ ಕೂಡಿವೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದ ಅವರು ೧೪೬ ರಲ್ಲಿ ಆಗಿನ ಪ್ರಧಾನಿ ನೆಹರೂರನ್ನು ಭೆಟ್ಟಿಯಾಗಿ ಭಾಷಾವಾರು ಪ್ರಾಂತ ರಚನೆ ಬಗ್ಗೆ ಒತ್ತಾಯಿಸಿದ್ದರು.

೧೯೪೮ ರಲ್ಲಿ ಪ್ರಾಧ್ಯಾಪಕ ಕೆಲಸ ಬಿಟ್ಟ ಅವರು ೧೯೫೪ ರಲ್ಲಿಕೇಂದ್ರ ಸಮಾಚಾರ ಪ್ರಸಾರ ಇಲಾಖೆಯಲ್ಲೂ, ನಂತರ ಬೆಂಗಳೂರು ಆಕಾಶವಾಣಿ ನಾಟಕ ವಿಭಾಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.

೧೯೫೪ ರಲ್ಲಿ ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಅವರದಾಗಿತ್ತು‌ . ಮೂರುವರ್ಷ ಸತತ ಆನಂದಕಂದರ ಜಯಂತಿ ಪತ್ರಿಕೆಗೆ ಅಂಕಣ ಲೇಖನ ಬರೆದ ಅವರು " ನನ್ನ ನಾಟ್ಯದ ನೆನಪುಗಳು" ಎಂಬ ಆತ್ಮಕಥನವನ್ನೂ ಬರೆದಿದ್ದಾರೆ. ಅವರ ಪತ್ನಿ ಶಾರದಾ ಆದ್ಯ. ಮಗಳು ಶಶಿ ದೇಶಪಾಂಡೆ ಖ್ಯಾತ ಆಂಗ್ಲಭಾಷಾ ಲೇಖಕಿ. ೧೯೮೪ ರ ಅಕ್ಟೋಬರ್ ೧೭ ರಂದು ಅವರು ನಿಧನರಾದರು.

- ಎಲ್. ಎಸ್. ಶಾಸ್ತ್ರಿ


ಹಿರಿಯ ಸಾಹಿತಿಗಳು ಚಿಂತಕರು ಆದ ಶ್ರೀ ಎಲ್.ಎಸ್.ಶಾಸ್ತ್ರಿ ಅಂಅವರು ಪ್ರಗತಿಪರ ನಾಟಕಕಾರ,ವಿದ್ವಾಂಸ ಶ್ರೀರಂಗರ ಕುರಿತು ಬರೆದ ಲೇಖನವಿದು. 1973 ರಲ್ಲಿ ಸಿರಾಲಿಯ ಚಿತ್ರಾಪುರದ ಮಠದಲ್ಲಿ ನಡೆದ ಅಭಿನವ ಸಮ್ಮೇಳನಕ್ಕೆ ಬಂದ ಶ್ರೀರಂಗರನ್ನು ನನ್ನ ಸಹಪಾಠಿ ಜಿ.ವಿ.ಭಟ್ಟ ಹಂದ್ಯಾನೆಮಠ ಅವರೊಂದಿಗೆ ಸಂದರ್ಶನ ಮಾಡಿ ಬಹಳ ಹೊತ್ತು ಆ ಮೇಧಾವಿಗಳೊಂದಿಗೆ ಕಳೆದ ಸಮಯ ಅಪೂರ್ವ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
27 views0 comments
bottom of page