1
ಎಡೆ ಇಡುವಲ್ಲೆಲ್ಲ ಉಂಡು ತೇಗಲೆಂದು
ಕೂಡುವವರ ನಡುವೆ
ಅಪರಿಗ್ರಹದೆಚ್ಚರ ಅಳಿಯದ
ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
2
ರಾಜಠೀವಿಯ ಹೆಸರು ನೂರಾರು
ಹೆಸರಿಗೆ ತಕ್ಕ ಬದುಕಲ್ಲ
ಸಿದ್ಧ ಸಾಧ್ಯರ ಹೆಸರು ನೂರಾರು
ಹೆಸರಿಸತಕ್ಕ ಬದುಕಲ್ಲ
ನನ್ನ ಶ್ರೀ ಗುರು ಸಿದ್ಧಲಿಂಗಯ್ಯ ಹೆಸರಿಗೆ
ಅಪರಿಗ್ರಹದ ಬಂಗಾರ ಚೌಕಟ್ಟು
3
ಬಿದ್ದು ಪೆಟ್ಟಾದಾಗ ಏಳಲಾರದ ದೇಹ
ಮಲಗಲಾರದ ಮನಸ್ಸು
ಕಿಡಕಿಗೆ ಹಗ್ಗ ಕಟ್ಟಿ ಹಿಡಿದು ಕೂಡುತ್ತ
ಏಳುತ್ತ ಎದ್ದು ಕುಂಟುತ್ತ
ಅತ್ತಿತ್ತ ಕೈಚಾಚಿ ಕೂಗದೆ ನೆರವ
ಮತ್ತೆ ಮತ್ತೆ ಮುಟ್ಟಿದ್ದು
ನಡೆದು ಮುನ್ನಡೆದದ್ದು
ಶ್ರೀ ಗುರು ಸಿದ್ಧಲಿಂಗಯ್ಯ
ಶೂನ್ಯ ಸಂಪಾದನೆಯ ಸೋಪಾನಗಳು
4
ಶಿಕ್ಷಣವೆ ನೆಲ ಶಿಕ್ಷಣವೆ ಹಾಸು
ಶಿಕ್ಷಣವೆ ಶಾಲು ಅದರ ಅಂಚು ಅಂಚಲ್ಲಿ
ಕಾವ್ಯವಲ್ಲರಿಯ ಅಲಂಕಾರ ವಚನ
ವೈಭವದ ಚಿನ್ನದ ಸರಿಗೆ ವಿಮರ್ಶೆ
ಯ ಬೆಳ್ಳಿಯ ಗುಚ್ಛ ಕೆಸರೆನ್ನದಿದ್ದರೂ
ಲೌಕಿಕವ ಅಂಟಿಕೊಳ್ಳದ ನನ್ನ
ಶ್ರೀ ಗುರು ಸಿದ್ಧಲಿಂಗಯ್ಯ
5
ಪದವಿ ಬಂದೀತು ಹೋದೀತು
ಸಂಪತ್ತು ಬಂದೀತು ಹೋದೀತು
ನಡೆದ ಹೆಜ್ಜೆಯ ಗುರುತೂ ಅಳಿದೀತು
ಆದರೂ ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
ನಡೆದ ದಾರಿ
ಕರೆಯುತ್ತ ಬಲ್ಲಿದರ ಹೊಳೆ ಹೊಳೆವುದು
6
ಅನ್ನ ಕೊಟ್ಟವರುಂಟು ಹೊನ್ನ ಕೊಟ್ಟವರುಂಟು
ಹೆಣ್ಣನೂ ಕೊಟ್ಟಾರು
ನನ್ನ ಶ್ರೀ ಗುರು
ಸಿದ್ಧಲಿಂಗಯ್ಯ ವಿದ್ಯೆ ಬುದ್ಧಿಯ ಅನ್ನದೆಲೆಯಲ್ಲಿ
ಬದುಕ ಕೊಟ್ಟರು
ಶರಣಾರ್ಥಿ
7
ಓಹೋಹೋ ಬನ್ನಿ, ನಮಸ್ಕಾರ
ನೋಡಿ ಎಷ್ಟೋ ವರ್ಷವಾಯಿತು
ಹದಿನೈದಕ್ಕೆ ಕಡಿಮೆಯಿಲ್ಲ
ಮನೆ ಎಲ್ಲಿ?
ವಿಜಯನಗರ
ಮಕ್ಕಳು
ನಿಜ ಹೇಳಲೆ?
ಸುಳ್ಳು ಗೊತ್ತೇನು?
ಅದಿರಲಿ, ನನ್ನ ತರಗತಿಯ ಹುಡುಗರೆಲ್ಲ
ಮಕ್ಕಳೆ
ಹೌದು, ಇಂದು ದೇಶ ವಿದೇಶಗಳಲ್ಲಿ
ಗುರುಸಂತತಿ ತಂದೆಯೆಂದು, ಗುರುವೆಂದು
ಮಾರ್ಗದರ್ಶಿಯೆಂದು ಕೊಂಡಾಡಿ ಬೈಗು ಬೆಳಗು
ನೆನೆವ ಪುಣ್ಯಪುರುಷ ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
8
ಮುಲಾಜಿಲ್ಲದೆ ಮಾತಾಡುತ್ತ
ಕೈಎತ್ತಿ ತೆರೆದಲ್ಲಾಡಿಸುವಾಗ
ಹೆಡೆಯೆತ್ತಿದಂತೆ
ಸಂದರ್ಭಕ್ಕೆ ತಕ್ಕ ನಡೆ ನುಡಿ ವಿನಯ
ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
9
ಬೆಂಗಳೂರಿಂದ ಮಂಗಳೂರ ಕಂಕನಾಡಿ ಆಸ್ಪತ್ರೆ ಹತ್ತಿರವಲ್ಲ
ಅಪಘಾತಕ್ಕೀಡಾಗಿ ಮಲಗಿದ ತನ್ನ ವಿದ್ಯಾರ್ಥಿಯ ಸನಿಹ
ಮತ್ತೆ ಮತ್ತೆ ಏನಾದರಗತ್ಯ ಇದೆಯೇ ಎಂದು
ಕುಳಿತು ಸಾಂತ್ವನ ಹೇಳುವ
ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
10
ಅಮ್ಮ ಎಂದರೆ ಅಮ್ಮ ಲಲಿತಮ್ಮ
ಕೈತುತ್ತ ಇತ್ತಮ್ಮ
ಮೃದು ಮಧುರ ನುಡಿಯ
ಸರಲ ಸಜ್ಜನಿಕೆಯ
ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
ಕಳೆಗಟ್ಟಿದ ರತ್ನ
11
ಅಧಿಕಾರ ವ್ಯಕ್ತಿಯಲ್ಲ ಅದೊಂದು ನಿರ್ವಹಣೆ
ನಿಮಗೆ ಸಲ್ಲುವುದು ನಿಮ್ಮೊಂದಿಗೇ ಇದೆ
ತಡೆಗೋಡೆ ಬೆಚ್ಚನೆಯ ಮಾತಿಲ್ಲ ಎಂಬ
ನ್ಯಾಯದುಸಿರ ಅಧ್ಯಾಪಕರ ಕಣ್ಮಣಿ
ನನ್ನ ಶ್ರೀ ಗುರು ಸಿದ್ಧಲಿಂಗಯ್ಯ
- ಗಜಾನನ ಈಶ್ವರ ಹೆಗಡೆ
ಗಜಾನನ ಈಶ್ವರ ಹೆಗಡೆ ಯವರು ಮೂಲತಃ ಹೊನ್ನಾವರ ತಾಲೂಕಿನ ಹಡಿನಬಾಳದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಮುಗಿಸಿ ತದನಂತರ ಚಿತ್ರದುರ್ಗದ ಸಿರಿಗೆರೆಯ ಎಂ.ಬಿ.ಆರ್ ಪ್ರಥಮ ದರ್ಜೆಯ ಕಾಲೆಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೆವೆಸಲ್ಲಿಸಿದ ಇವರು ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕತೆ,ಕವನ, ವಿಮರ್ಶೆ,ಗೀತ ನಾಟಕ, ಪ್ರಬಂಧ ಹೀಗೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಸಾಹಿತ್ಯ ಕೃಷಿ ನಡೆಸಿದ ಇವರು ಹಲವಾರು ಸಂಕಲನಗಳನ್ನು ಹೊರತಂದಿದ್ದಲ್ಲದೆ ರಸರಾಮಾಯಣವೆಂಬ ಮಹಾಕಾವ್ಯವನ್ನೂ ಪ್ರಕಟಿಸಿದ್ದಾರೆ. ಇವರು ರಚಿಸಿದ ಗೀತನಾಟಕಗಳು ನಾಡಿನ ಹಲವೆಡೆ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದಿವೆ. ವಿವಿಧ ಸಾಹಿತಿಕ ಸ್ಪರ್ಧೆಗಳಲ್ಲಿ ಇವರ ಬರಹಕ್ಕೆ ಬಹುಮಾನ ದೊರೆತಿದೆ. ಗಜಾನನ ಹೆಗಡೆಯವರ ಸಾಹಿತಿಕ ಪ್ರತಿಭೆಯನ್ನು ಗುರುತಿಸಿದ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಿರುವುದು ಉಲ್ಲೇಖನಾರ್ಹ.ಇವರ ಪತ್ನಿಯವರಾದ ಶ್ರೀಮತಿ ಪದ್ಮಿನಿ ಹೆಗಡೆಯವರು ಸಹ ಸಾಹಿತಿಗಳಾಗಿದ್ದು ಮನೆಯೇ ಸರಸ್ವತಿ ನಿಲಯವಾಗಿದೆಯೆಂದರೆ ಅತಿಶಯೋಕ್ತಿಯೇನೂ ಅಲ್ಲ- ಸಂಪಾದಕ
Comments