top of page

ಶಾ.ಮಂ.ಕೃಷ್ಣರಾಯರಿಗೆ ದತ್ತಿ ಪ್ರಶಸ್ತಿ

ಶಾ.ಮಂ.ಕೃಷ್ಣರಾಯರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿ


ಬೆಂಗಳೂರು: ಖ್ಯಾತ ಬರಹಗಾರರು, ಅನುವಾದಕರು, ಸಂಘಟಕರು, ಅಧ್ಯಾಪಕರು, ಪತ್ರಕರ್ತರೂ ಆದ ಶಾ.ಮಂ.ಕೃಷ್ಣ ರಾಯರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಶ್ರೀ ಟಿ.ಶ್ರೀನಿವಾಸ ಸ್ಮರಣಾರ್ಥ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯು ಒಮ್ಮತದಿಂದ ಈ ನಿರ್ಣಯವನ್ನು ತೆಗೆದು ಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಾ.ವರದಾ ಶ್ರೀನಿವಾಸ ಅವರು ಈ ದತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಟ್ಟಿದ್ದು 2017ನೆಯ ಇಸವಿಯಿಂದಲೂ ಒಬ್ಬ ಪುರುಷ ಮತ್ತು ಮಹಿಳಾ ಬರಹಗಾರರಿಗೆ ಈ ಪ್ರಶಸ್ತಿಯನ್ನು ನಿರಂತರವಾಗಿ ನೀಡುತ್ತಾ ಬರಲಾಗುತ್ತಿದೆ . ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ ಮತ್ತು ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಹಾಗೂ ದತ್ತಿ ದಾನಿಗಳಾದ ಡಾ.ವರದಾ ಶ್ರೀನಿವಾಸ್ ಅವರು ಇದ್ದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

ಶಾ.ಮಂ.ಕೃಷ್ಣರಾಯರು ಮೂಲತ: ಉತ್ತರ ಕನ್ನಡ ಜಿಲ್ಲೆಯವರು 1942ರ ಜೂನ್ ಒಂದರಂದು ಅವರು ಜನಿಸಿದ್ದು ಬೆಳಗಾವಿಯಲ್ಲಿ. ಆದರೆ ಅವರ ಕಾರ್ಯಕ್ಷೇತ್ರವಾಗಿದ್ದು ಗೋವಾ. 1961ರಲ್ಲಿ ಗೋವಾ ಸ್ವತಂತ್ರವಾದ ನಂತರ ಅಲ್ಲಿಗೆ ಹೋದ ಕೃಷ್ಣರಾಯರು ಮಡಗಾಂವ್, ಪಣಜಿ, ವಾಸ್ಕೋ, ಸಾವರ್ಜಿ, ತಿಸ್ಕಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿದರು. ‘ಗೋವಾ ಕನ್ನಡ ಸಂಘ’ ‘ಗೋಮಾಂತ ಭಾರತಿ’ ಕರ್ನಾಟಕ ಸಂಘ’ ಮೊದಲಾದ ಸಂಘಗಳನ್ನು ಕಟ್ಟಿ ಗೋವಾದಲ್ಲಿ ಕನ್ನಡ ಸಂಸ್ಕೃತಿಯನ್ನು ಬೆಳೆಸಿದರು. ಕರ್ನಾಟಕದ ಮಹತ್ವದ ಬರಹಗಾರರನ್ನು ಗೋವೆಗೆ ಕರೆಸಿ ಕಾರ್ಯಕ್ರಮಗಳನ್ನು ರೂಪಿಸಿದ ಹಾಗೆ ಗೋವೆಯ ಬರಹಗಾರನ್ನು ಕರ್ನಾಟಕಕ್ಕೂ ಕರೆ ತಂದು ಎರಡೂ ರಾಜ್ಯಗಳ ನಡುವಿನ ಸೇತುವೆಯಾದರು.

ಅ.ನ.ಕೃ ಅವರಿಂದ ಪ್ರೇರಣೆ ಪಡೆದು ಕನ್ನಡ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡ ಶಾ.ಮಂ.ಕೃಷ್ಣರಾಯರು ಅ.ನ.ಕೃ, ತ.ರಾ.ಸು ಮತ್ತು ಬೀಚಿಯವರ ಕುರಿತು ಮಹತ್ವದ ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದರು. ಕನ್ನಡದ ಜೊತೆಗೆ ಕೊಂಕಣಿ, ಹಿಂದಿ, ಮರಾಠಿ, ಸಂಸ್ಕೃತ, ಇಂಗ್ಲೀಷ್ ಹೀಗೆ ಬಹು ಭಾಷಾ ವಿದ್ವಾಂಸರಾದ ಶಾ.ಮಂ.ಕೃಷ್ಣರಾಯರು ನೂರಕ್ಕೂ ಹೆಚ್ಚು ಕೃತಿಗಳನ್ನು ಎಲ್ಲಾ ಪ್ರಕಾರಗಳಲ್ಲಿಯೂ ರಚನೆ ಮಾಡಿದ್ದಾರೆ. ‘ನೂತನ’ ಮತ್ತು’ಕರ್ಮವೀರ’ ಪತ್ರಿಕೆಗಳ ಸಂಪಾದಕರಾಗಿ ಕೂಡ ಕೆಲಸ ಮಾಡಿದ ಶಾ.ಮಂ.ಕೃಷ್ಣರಾಯರು ದೇಶದೆಲ್ಲೆಡೆ ಯಶಸ್ವಿಯಾಗಿ ಕೊಂಕಣಿ ಸಮ್ಮೇಳನಗಳನ್ನು ಸಂಘಟಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಹೇಮಂತ ಸಾಹಿತ್ಯದವರ 150 ಮಕ್ಕಳ ಪುಸ್ತಕಗಳ ಮಾಲಿಕೆಗೆ ಅವರು ಸಂಪಾದಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

ತಮ್ಮ 82ನೆಯ ವಯಸ್ಸಿನಲ್ಲಿಯೂ ಸಕ್ರಿಯರಾಗಿರುವ ಶಾ.ಮಂ.ಕೃಷ್ಣರಾಯರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತಾ ಅವರಿಂದ ಇನ್ನಷ್ಟು ಕನ್ನಡ ಸೇವೆ ಸಲ್ಲಲಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.


ಎನ್.ಎಸ್.ಶ್ರೀಧರ ಮೂರ್ತಿ

ಸಂಚಾಲಕರು, ಪ್ರಕಟಣಾ ಸಮಿತಿ

ಕನ್ನಡ ಸಾಹಿತ್ಯ ಪರಿಷತ್ತು


ಸಾಹಿತ್ಯಸಾಹಿತ್ಯದ ಬರವಣಿಗೆ,ಸಂಪಾದನೆ,ಅಭಿನಂದನ ಗ್ರಂಥಗಳ ಅರ್ಪಣೆಯ ಮೂಲಕ ಸತತ ಸಾಹಿತ್ಯ ಸೇವೆಯಲ್ಲಿ‌ ನಿರತರಾದ ನಮ್ಮೆಲ್ಲರ ಪ್ರೀತಿಯ ಬರಹಗಾರ ಶ್ರೀ ಶಾ.ಮಂ.ಕೃಷ್ಣರಾಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿ ದೊರಕಿದ್ದು ನಮಗೆಲ್ಲರಿಗು ಸಂತಸ ತಂದಿದೆ. ಪ್ರಿಯರು ಹಿರಿಯರುರು ಆದ ಶ್ರೀ ಶಾ.ಮಂ.ಕೃಷ್ಣರಾಯ ಅವರಿಗೆ ಆಲೋಚನೆ.ಕಾಂ ಪತ್ರಿಕೆಯ ಬಳಗದಿಂದ ಹಾರ್ದಿಕ‌ ಅಭಿನಂದನೆಗಳು.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ








20 views0 comments

Comments


bottom of page