top of page

ಶಾಪಿತ ಸ್ವಾನ (ಜನಪದ ಕಥೆ)

ಮಲೆನಾಡಿನ ಒಂದು ಹಳ್ಳಿಯಲ್ಲಿ ಶಿವಪ್ಪ ಮತ್ತು ಬಸವ ಎಂಬ ಸಹೋದರರು ವಾಸಿಸುತ್ತಿದ್ದರು. ತಾಯಿ-ತಂದೆ ತಿರಿಕೊಂಡಿದ್ದು ಸಣ್ಣ ತಮ್ಮ ಬಸವನ ಜವಾಬ್ದಾರಿಗಳನ್ನೆಲ್ಲ ಶಿವಪ್ಪನ ಮೇಲಿತ್ತು. ಶಿವಪ್ಪ ಮದುವೆ ಮಾಡಿಕೊಂಡಿದ್ದನು. ಬಸವ ಇನ್ನೂ ಸಣ್ಣವನಿದ್ದು ಶಾಲೆ ಕಲಿಯುತ್ತಿದ್ದನು. ದೂರದ ಉರಿನಲ್ಲಿ ವಸತಿಗೃಹದಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದನು. ಮೂರೂ-ಆರೋ ತಿಂಗಳಿಗೊಮ್ಮೆ ಸೂಟಿಯಲ್ಲಿ ಮನೆಗೆ ಬಂದು ಹೋಗುತ್ತಿದ್ದನು. ಬಂದಾಗ ಹೊಲದಲ್ಲಿ ಅಣ್ಣನಿಗೆ ಸಹಾಯಮಾಡುತ್ತಿದ್ದನು. ತುಂಬಾ ಶಾಂತ ಸ್ವಭಾವದವನೂ, ಜಾಣನೂ ಇದ್ದನು.

         ಶಿವಪ್ಪನ ಹೆಂಡತಿಯಾ ಹೆಸರು ದೇವಮ್ಮ. ಆದರೆ ಅವಳಲ್ಲಿ ದೇವತ್ವದ ಒಂದು ಚೂರು ಲಕ್ಷಣಗಳಿರಲಿಲ್ಲ. ಗಂಡ ಎದುರಿಗೆ ಇದ್ದರೆ ಮೈದುನನ್ನು ಅತೀ ಅಕ್ಕರೆಯಿಂದಲೂ, ಮಮತೆಯಿಂದಲೂ ನೋಡಿಕೊಳ್ಳುತ್ತಿದ್ದಳು. ಗಂಡ ಮರೆಯದ ಕೂಡಲೇ ಮನೆಯಲ್ಲಿ ದುಡಿಯುವ ಆಳಿನಂತೆ ದುಡಿಸಿಕೊಳ್ಳುತ್ತಿದಳು. ನೀರು ತರುವುದು, ಕಟ್ಟಿಗೆ ತರುವುದು, ದನ ಕಾರುಗಳಿಗೆ ನೀರು-ಮೇವು ಹಾಕಿ ಅಡವಿಯಲ್ಲಿ ಮೇಯಿಸಿ ತರುವುದುನ್ ಮನೆ ಗುಡಿಸುವುದು ಮುಂತಾದ ಕೆಲಸಗಳನ್ನು ದೇವಮ್ಮ ನಿರ್ದಯವಾಗಿ ಹಚ್ಚುತ್ತಿದ್ದಳು.ಬಸವನಾದರೂ ಅತ್ತಿಗೆಯೇ ಹೆತ್ತಮ್ಮನೆಂದು ತಿಳಿದು ಅವಳು ಹೇಳುವ ಪ್ರತಿಯೊಂದು ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದನು. ದೇವಮ್ಮ ಮಾತ್ರ ಅವನನ್ನು ತಿರಸ್ಕಾರ ಮಾಡುತ್ತಿದ್ದಳು.

         ದೇವಮ್ಮ ಬಸವನ್ನು ತಿರಸ್ಕರಿಸುವುದಕ್ಕೆ ಒಂದು ಕಾರಣವಿತ್ತು. ತಂದೆ ಗಳಿಸಿಟ್ಟು ಹೋದ  ಆಸ್ತಿ ಅಪಾರವಾಗಿತ್ತು. ಅದರಲ್ಲಿ ಬಸವನಿಗೆ ಪಾಲು ಕೊಡಲು ದೇವಮ್ಮಳಿಗೆ ಇಚ್ಛೆ ಇರಲಿಲ್ಲ. ಬಸವನ್ನು ತಮ್ಮ ದಾರಿಯಿಂದ ಸದಾಗಾಗಿ ಇಲ್ಲವಾಗಿಸಲು ಒಂದು ದಿನ ಒಬ್ಬ ಮಂತ್ರಿಕನಲ್ಲಿಗೆ ಹೋಗಿ ಕಬ್ಬಿಣದ ತಂತಿಯನ್ನು ಮಂತ್ರಿಸಿ ತಂದಳು. ಮಾಂತ್ರಿಕ ಹೇಳಿದಂತೆ ಆ ಕಬ್ಬಿಣದ ತಂತಿಯನ್ನು ವಸವನ ತಲೆಯಲ್ಲಿ ಚುಚ್ಚಿದರೆ ಆತ ಮನುಷ್ಯ ರೂಪದಿಂದ ನಾಯಿರೂಪ ಪಡೆದುಕೊಳ್ಳುತ್ತಾನೆ ಎಂದು ಮಾಂತ್ರಿಕ ಹೇಳಿದನು. ಅದೇ ದಿನ ಸರಿಯಾಗಿ ಮಧ್ಯಾಹ್ನ ಸಮಯದಲ್ಲಿ ಬಸವ ಶಾಲೆಯಿಂದ ಮನೆಗೆ ಬಂದನು. ಶಿವಪ್ಪ ಹೊಲಕ್ಕೆ ಹೋಗಿದ್ದನು. ಅತ್ತಿಗೆ ಹೇಳಿದ ಮನೆಕೆಲಸವನ್ನೆಲ್ಲ ಮಾಡಿ ಮುಗಿಸಿದ ಬಳಿಕ ಅವನಿಗೆ ಹಸಿವೆಯಾಗಿತ್ತು. ಅತ್ತಿಗೆಗೆ ಊಟ ನೀಡಲು ಕೇಳಿದನು,

         “ಅತ್ತಿಗೆ, ತುಂಬಾ, ಹಸಿವಾಗಿದೆ, ಉಟಕ್ಕೆ ನೀಡು.”

         “ಮುಂಜಾನೆಯಿಂದ ದನ ದುಡಿದಂತೆ ದುಡಿದು ನನಗೆ ಸುಸ್ತಾಗಿ ಹೋಗಿದೆ. ಇನ್ನೂ ಅಡುಗೆ ಮಾಡುವ ತ್ರಾಣ ನನಗಿಲ್ಲ. ನಿನ್ನಣ್ಣ ಬರಲಿ, ಆಮೇಲೆ ಇಬ್ಬರಿಗೂ ಊಟಕ್ಕೆ ನೀಡುವೆ.”ಅಂದು ಅಸಡ್ಡೆಯಿಂದ ಹೇಳಿ ಒಳಗೆ ಹೋಗಿ ಮಲಗಿಕೊಂಡಳು.

         ಪಾಪ, ನಿರಾಶನಾದ ಬಸವ ಹರಿವೆಯಿಂದ ತಣ್ಣೀರು ಕುಡಿದು ತನ್ನ ಕೋಣೆಯಲ್ಲಿ ಮಲಗಿಕೊಂಡನು. ಬಸವನಿಗೆ ನಿದ್ರೆ ಹತ್ತಲು ದೇವಮ್ಮ ಅವನ ಕೋಣೆಯಲ್ಲಿ ಬಂದಳು. ಅವಳ ಆತ್ಮದಲ್ಲಿ ಇಂದು ರಾಕ್ಷಸ ಅವಿತುಕೊಂಡಿದ್ದನು. ಯಾವುದೇ ಪರಿಸ್ಥಿತಿಯಲ್ಲಿ ಬಸವನ ಬಂದೋಬಸ್ತು ಮಾಡಬೇಕೆಂದು ನಿರ್ಧರಿಸಿದಳು. ಅವನ ತಲೆ ಹತ್ತಿರ ಬಂದು ಮಾಂತ್ರಿಕ ಮಂತ್ರಿಸಿ ಕೊಟ್ಟ ತಂತಿಯನ್ನು ಬಸವನ ತಲೆಯಲ್ಲಿ ಕಿವಿಯ ಹಿಂಬದಿಗೆ ಜೋರಾಗಿ ಚುಚ್ಚಿದಳು. ಬಸವ “ಅಮ್ಮ” ಎಂದು ಜೋರಾಗಿ ಕಿರುಚಿದ, ಮರುಕ್ಷಣವೇ ಮನುಷ್ಯ ರೂಪದಿಂದ ನಾಯಿಯ ರೂಪದಲ್ಲಿ ರೂಪಾಂತರಹೊಂದಿದ್ದನು. ಅತ್ತಿಗೆಯ ಮೋಸದಿಂದ ಸ್ವಾನನಾದನು.

ನಾಯಿಯಾದ ಬಸವ ಅತ್ತಿಗೆ ಮಾಡಿದ ಅವಾಂತರವನ್ನು ಅಣ್ಣನಿಗೆ ಹೇಳಲು ಹೊಲಕ್ಕೆ ಹೋದನು. ನೇಗಿಲು ಹೊಡೆಯುತ್ತಿದ್ದ ಅಣ್ಣನ ಹತ್ತಿರ ಬಂದು “ಕುಯಿಂ ಕುಯಿಂ’ ಎಂದು ನರಳತೊದಗಿದ್ದನು. ನೆಗಿಲಕ್ಕೆ ಅಡ್ಡವಾಗಿ ನಿಂತನು. ಮಲಗಿದನು, ಅಣ್ಣನ ಮೈಮೇಲೆ ಏರಿ ತನ್ನ ಮನಸ್ಸಿನ ವ್ಯಥೆ ಹೇಳ ಬಯಸಿ ಅಣ್ಣನನ್ನು ಮುದ್ದಿಸಿದನು. ಆದರೆ ಶಿವಪ್ಪನಿಗೆ ಇದೆಲ್ಲ ವಿಚಿತ್ರವೆನಿಸಿ ಆಶ್ಹರ್ಯವೆನಿಸಿತು. ಎಂದೂ ನೋಡಿರದ ನಾಯಿಯೊಂದು ಸಲುಗೆಯಿಂದ ತನ್ನ ಮೈಮೇಲೆ ಏರಿ ಬರುತ್ತಿದೆಯಲ್ಲ? ಎಂದು ಸಿಟ್ಟಿನಿಂದ ಬಾರುಕೋಲಿನಿಂದ ಹೊಡೆದನು. ಪಾಪ ನಾಯಿಯಾದ ಬಸವ ಕುಂಯಿಗುಡುತ್ತ ದೂರ ಹೋಯಿತು. ಇನ್ನೂ ಮುಂದೆ ಕೆಲಸ ಮಾಡಲು ಶಿವಪ್ಪನಿಗೆ ಆಗಲಿಲ್ಲ. ಬೇಗ ಬೇಗನೆ ಮನೆಗೆ ಬಂದನು.

ಮನೆಗೆ ಬಂದು ಶಿವಪ್ಪ ಊಟಮಾಡುವಾಗ ನಾಯಿ ಮತ್ತೆ ನರಳುತ್ತ ಬಂದು ಸುತ್ತತೊಡಗಿತು. ಊಟ ಮಾಡುತ್ತಿದ್ದ ಅಣ್ಣನನ್ನು ಹಾಗೂ ತಟ್ಟೆಯಲ್ಲಿದ್ದ ಅನ್ನವನ್ನು ನೆಟ್ಟದೃಷ್ಠಿಯಿಂದ ನೋಡತೊಡಗಿತು. ಅಣ್ಣನ ತೊಡೆಯ ಮೇಲಿರುವ ರೊಟ್ಟಿಯನ್ನು ತನ್ನ ಕಾಲುಗಳಿಂದ ಎಳೆದುಕೊಳ್ಳಲು ಬಂದಾಗ “ಇದೆಂಥ ಹೊಲಸು ನಾಯಿ ಕಟ್ಟಿಕೊಂಡು ಬಂದಿದ್ದಿರಿ, ಹೊಡೆದು ದೂರ ಓಡಿಸಬಾರದೆ?” ಎಂದು ದೇವಮ್ಮ ಗಂಡನನ್ನು ಹೇಳಿದಳು. ಅದು ಬೇರೆ ಯಾರೂ ಇಲ್ಲ, ತನ್ನ ಮೈದುನನೆಂಬುದು ಅವಳಿಗೆ ಮಾತ್ರ ಗೊತ್ತಿತ್ತು. ತಮ್ಮನನ್ನು ಅಣ್ಣನ ಕೈಯಿಂದ ಹೊಡೆದು ಓಡಿಸುವಾಗ ಆಗುವ ವಿಕೃತ ಆನಂದದ ಸಮಾಧನನವನ್ನು ಪಡೆಯಬೇಕಾಗಿತ್ತು. ಆದರೆ ಗಂಡನಿಗೆ ನಿಜ ಸ್ಥಿತಿ ಗೊತ್ತಾದರೆ ತನ್ನ ಗತಿ ಅಧೋಗತಿ ಎಂಬುದು ಚೆನ್ನಾಗಿ ತಿಳಿದುಕೊಂಡಿದ್ದಳು. ಅದ್ದರಿಂದ ನಾಯಿಯನ್ನು ದೂರ ಕಳುಹಿಸುವ ಹೊಂಚು ಹಾಕತೊದಗಿದ್ದಳು. ಶಿವಪ್ಪ ಹತ್ತಿರ ಬಂದು ಮೈಮೇಲೆ ಬರುತ್ತಿದ್ದ ನಾಯಿಯನ್ನು ನಾಲ್ಕೈದು ಸಲ ಬರುಕೊಲಿನಿಂದ ಬಾರಿಸಿದಾಗ ನಾಯಿ ಕುಂಯಿಗುಡುತ್ತ ದೂರ ಹೋಯಿತು. ಆ ಊರನ್ನೇ ಬಿಟ್ಟು ಬಿಟ್ಟಿತು.

ಸೂರ್ಯ ದಿಕ್ಕಿಗೆ ಹೊರಟ ನಾಯಿರೂಪ ಪಡೆದ ಬಸವ ಅನೇಕ ಮೈಲುಗಳವರೆಗೆ ನಡೆದನು. ದೂರದ ಚೀನಾ ಪಟ್ಟಣದಲ್ಲಿ ಒಬ್ಬ ರಾಜನಿದ್ದನು. ಅವನ ಹೆಸರು ಚನ್ನಪ್ಪನಾಯಕ. ರಾಜನಿಗೆ ಒಬ್ಬ ವಯಸ್ಸಿಗೆ ಬಂದ ಸುಂದರ ಕನ್ಯೆ ಇದ್ದಳು. ಎಷ್ಟೋ ವರುಷಗಳಿಂದ ಅವಳಿಗೆ ಅನುರೂಪವರ ದೊರೆತಿರಲಿಲ್ಲ. ಚನ್ನಪ್ಪನಾಯಕ ರಾಜಕುಮಾರಿಯ “ಸ್ವಯಂವರ” ಆಯೋಜಿಸಿದ್ದನು. ದೂರ ದೂರದ ಅನೇಕ ದೇಶದ ರಾಜಕುಮಾರರಿಗೆ, ಹಿರಿಯರಿಗೆ, ರಾಜಕುಮಾರಿಯ ಜೊತೆ ವಿವಾಹವಾಗಬಯಸುವ ತರುಣರಿಗೆ ಈ ಸ್ವಯಂವರ ದಲ್ಲಿ ಆಮಂತ್ರಿಸಿದನು. ಒಂದು ಆನೆಯ ಸೊಂಡಿಲದಲ್ಲಿ ಹೂಮಾಲೆ ಹಾಕಿ ಜನರ ಗುಂಪಿನಲ್ಲಿ ಬಿಡಲಾಗುವುದು. ಆನೆ ಯಾರ ಕೊರಳಿಗೆ ಹೂಮಾಲೆ ಹಾಕುವುದೋ ಆ ವ್ಯಕ್ತಿಯೊಂದಿಗೆ ರಾಜಕನ್ಯೆಯ ವಿವಾಹ ಮಾಡಿಕೊಡಲಾಗುವುದು ಹಾಗೂ ತನ್ನ ತನ್ನ ಸಾಮ್ರಾಜ್ಯದ ಅರ್ಧಭಾಗವನ್ನು ಅವನಿಗೆ ಬಳುವಳಿಯಾಗಿ ನೀಡಲಾಗುವುದಾಗಿ ಡಂಗುರ ಸಾರಿದ್ದರು. “ಸ್ವಯಂವರ”ವಿದ್ದ ದಿನವೇ ನಾಯಿಯಗಿರುವ ಬಸವ ಆ ರಾಜ್ಯದಲ್ಲಿ ಬಂದಿದ್ದನು.

ಮಂಗಲವಾದ್ಯಗಳೊಂದಿಗೆ ಆರಂಭಗೊಂಡ ಸ್ವಯಂವರದಲ್ಲಿ ಅನೇಕ ದೇಶಗಳಿಂದ ತರುಣ-ವೃದ್ಧರಾದಿ ಅರಸರೂ, ರಾಜಕುಮಾರರೂ ಹೀಗೆ ಅಪಾರ ಜನಜಾತ್ರೆ ಆಗಮಿಸಿದರು. ಈ ಗೊಂಧಲದಲ್ಲಿ ನಾಯಿ ಕೂಡ ಬಂದು ಒಂದು ಮೂಲೆಯಲ್ಲಿ ನಿಂತುಕೊಂಡಿತ್ತು. ಸ್ವಯಂವರ ಆರಂಭವಾಯಿತು. ಅಲಂಕರಿಸಿದ ಆನೆಯ ಸೊಂಡಿಲಿಗೆ ಹೂಮಾಲೆ ಹಾಕಿ ಜನರ ಗುಂಪಿನಲ್ಲಿ ಬಿಡಲಾಯಿತು.ಆನೆಯು ಸುತ್ತ –ಮುತ್ತ ಎರಡು-ಮೂರೂ ಸುತ್ತು ತಿರುಗಿ ಮಾನವರ ಗುಂಪಿನಲ್ಲಿ ಒಬ್ಬರ ಕೊರಳಿಗೂ ಮಾಲೆ ಹಾಕಲಿಲ್ಲ. ರಾಜಕುಮಾರಿಯ ಎದುರಿನಿಂದ ಹೋಗುವಾಗ ಆನೆಯು ಜೋರಾಗಿ ಘಿಳಿಟ್ಟಿತು. ರಾಜಕುಮರಿಯನ್ನೇ ನೋಡುತ್ತಾ ಹಿಂದೆ-ಹಿಂದೆ ಸರಿಯುತ್ತ ಹೋಗಿ ಮೂಲೆಯಲ್ಲಿ ಜನಕಂಜಿ ಮುದುಡಿಯಾಗಿ ಕುಳಿತ ನಾಯಿ ಕೊರಳಿಗೆ ಮಾಲೆ ಹಾಕಿತು. ನೆರೆದ ರಾಜ-ಮಹಾರಾಜರೆಲ್ಲ ಅವಮಾನಿತರಾಗಿ ಕೊಪಗೊಂಡವರಾಗಿ ಒಬ್ಬೊಬ್ಬರು ಮಂಟಪ ಬಿಟ್ಟು ಹೋಗಿಬಿಟ್ಟರು. ಒಂದು ನಾಯಿಜೊತೆ ತನ್ನ ಏಕೈಕ ಸುಂದರ ಕನ್ಯೆಯ ವಿವಾಹ ಹೇಗೆ ಮಾಡುವುದು ಎಂದು ಚನ್ನಪ್ಪನಾಯಕ ರಾಜನಿಗೆ ಚಿಂತೆಯಾಯಿತು. ರಾಜಕುಮಾರಿ ಬುದ್ಧಿವಂತಳಿದ್ದಳು. ತಂದೆಯ ಅವಸ್ಥೆ ಅರಿತು ಮುಂದೆ ಬಂದು ನುಡಿದಳು,

         “ಅಪ್ಪಾಜಿ, ನನ್ನ ಹಣೆಬರಹ ಹೇಗಿದೆಯೋ ಹಾಗೇ ಆಗುತ್ತದೆ. ನೀವೇಕೆ ಚಿಂತೆ ಮಾಡುತ್ತಿರಿ. ನನ್ನ ಬಾಳು ಈ ನಾಯಿಯೊಂದಿಗೆ ಸಾಗಬೇಕೆಂದು ಆ ಬ್ರಹ್ಮ ಬರೆದಿದ್ದರೆ ಯಾರಿಂದ ತಪ್ಪಿಸಲು ಸಾಧ್ಯವಿಲ್ಲ. ನೀವು ನಿಮ್ಮಮಾತಿನಂತೆ ಕನ್ಯಾದಾನ ಮಾಡಿಬಿಡಿ. ಆದರೆ ಈ ರಾಜ್ಯ ನನಗೆ ಬೇಡ. ನಾನು ಈ ರಾಜ್ಯದಲ್ಲಿ ನಾಯಿಜೊತೆ ಸಂಸಾರ ಮಾಡಿದರೆ ನೀವು ಸಂಕೋಚಪಡುವಿರಿ. ಆದ್ದರಿಂದ ನಾವು ಎಲ್ಲಾದರೂ ಹೋಗಿ ಬದುಕಿಕೊಳ್ಳುತ್ತೇವೆ.”

ರಾಜ ಭಾರವಾದ ಹೃದಯದಿಂದ ರಾಜಕುಮಾರಿ ಹಾಗೂ ನಾಯಿಯ ಮದುವೆಯನ್ನು ಅದೇ ಸಭೆಯಲ್ಲಿ ಮಾಡಿದನು. ನಾಯಿಯನ್ನು ಕರೆದುಕೊಂಡು ಕಣ್ಣಿರಿಡುತ್ತ ರಾಜಕುಮಾರಿ ತನ್ನ ತಂದೆಯ ಸುಖದ ಸುಪ್ಪತ್ತಿಗೆ ಬಿಟ್ಟು ಕಾಡಿನ ದಾರಿ ಹಿಡಿದಳು.ರಾಜನು ಸಂಸಾರಕ್ಕೆ ಬೇಕಾಗುವ ಎಲ್ಲ ಸಾಹಿತ್ಯಗಳನ್ನು ಬೇರೆ ಗಾಡಿ ಮಾಡಿಕೊಂಡು ಕಳುಹಿಸಿದನು. ಮೈಲು-ಎರಡು ಮೈಲು ದೂರ ಹೋದ ರಾಜಕುಮಾರಿ ಒಂದು ತಂಪಾದ ಮರದಡಿಯಲ್ಲಿ ವಿಶ್ರಾಂತಿ ಪಡೆದಳು. ತಾಯಿ ಕಟ್ಟಿ ಕಳುಹಿಸಿದ ಬುತ್ತಿ ಬಿಚ್ಚಿ ತನ್ನ ಧರ್ಮ ಪತಿಯಾದ ನಾಯಿಗೂ ಎರಡು ರೊಟ್ಟಿ ತಿನಿಸಿ ತಾನು ಊಟಮಾಡಿದಳು. ನಂತರ ಒಂದೇ ಸವನೆ ನಾಯಿಯತ್ತ ನೋಡುತ್ತ ವಿಚಾರ ಮಾಡಿದಳು. ದೇವರೇ, ನನ್ನ ಭಾಗ್ಯದಲ್ಲಿ ಮಾನವರೂಪಿಯಾದ ಗಂಡನನ್ನು ದಯಪಾಲಿಸದೆ  ನಾಯಿಯ ಜೊತೆ ಸಂಸಾರ ಮಾಡುವಂತ ಪರಿಸ್ಥಿತಿ ತಂದಿರುವಿಯಾ ತಂದೆ. ಯಾವ ಹೆಣ್ಣಿಗೂ ಇಂಥ ಸ್ಥಿತಿ ಬಾರದಿರಲಿ, ದೇವಾ. ಎನ್ನುತ್ತ ನಾಯಿಯ ತಲೆಯನ್ನು ತಾಯಿ ಮಮತೆಯಿಂದ ನೇವರಿಸಿದಳು. ಸವರಿದಳು. ಹಾಗೇ ಕೈಯಾಡಿಸುವಾಗ ಏನೋ ಕೈಗೆ ಚುಚ್ಚಿದಂತಾಯಿತು. ಮತ್ತೊಮ್ಮೆ ಕೈಯದಿಸಿ ನೋಡಲು ಅಲ್ಲಿ ಒಂದು ಕಬ್ಬಿಣದ ತಂತಿ ಕಂಡಳು. ಆಶ್ಚರ್ಯಚಕಿತಳಾಗಿಆ ತಂತಿಯನ್ನು ಸಾವಕಾಶವಾಗಿ ಕಿತ್ತಿದಳು. ಬಸವನ ನಾಯಿರೂಪ ಸಾವಕಾಶವಾಗಿ ಮರೆಯಾಗಿ ಅವನೊಬ್ಬ ಸುಂದರ ಯುವಕನ ರೂಪಹೊಂದಿದನು. ಅವನನ್ನು ನೋಡಿ ಸುಂದರಿ ಮತ್ತೆ ಆಶ್ಚರ್ಯಗೊಂಡು ಅತ್ಯಾನಂದಿತಳಾಗಿ ಗಂಡನನ್ನು ಒಪ್ಪಿಕೊಂಡು ಅಳತೊಡಗಿದ್ದಳು.

ರಾಜಕುಮಾರಿಗೆ ಸಮಾಧಾನಪಡಿಸಿದ ಬಸವ ತನ್ನ ಕಥೆಯನ್ನೆಲ್ಲ ಹೇಳಿದನು. ತನ್ನ ತಂದೆ ಹಾಗೂ ಊರಿನವರ ಸಮ್ಮುಖದಲ್ಲಿ ಸ್ವಾನದೊಂದಿಗೆ ಮದುವೆಯಾಗಿದ್ದು ಈಗ ಈ ತರುಣನೊಡನೆ ಸಂಸಾರಮಾಡುವುದನ್ನು ಗೊತ್ತಾದರೆ ನಾಯಿಯನ್ನು ಕೊಂಡು ಯಾರೊಂದಿಗೋ ರಾಜನ ಮಗಳು ಓಡಿಹೋಗಿದ್ದಾಳೆ ಎಂದು ಜನ ಆಡಿಕೊಳ್ಳುತ್ತಾರೆ. ತನ್ನ ತಂದೆಗೆ ಚ್ಚಿಮಾರಿ ಹಾಕುತ್ತಾರೆ. ಆದ್ದರಿಂದ ತಾನು ಮತ್ತೆ ತಂದೆಯ ಬಳಿಗೆ ಹೋಗಿ ನಿಜಸ್ಥಿತಿಯ ಬಗ್ಗೆ ತಿಳಿಸಬೇಕು ಎಂದು ನಿರ್ಧರಿಸಿ ಕಬ್ಬಿಣದ ತಂತಿಯನ್ನು ಮತ್ತೆ ಬಸವನ ತಲೆಯಲ್ಲಿ ಚುಚ್ಚಿದಳು. ಬಸವ ಮತ್ತೆ ನಾಯಿಯಾದನು. ಅವನನ್ನು ಕರೆದುಕೊಂಡು ಮರಳಿ ರಾಜನ ಅರಮನೆಗೆ ಬಂದಳು.ಬೇರೆ ಮನೆ ಮಾಡಿ ಇರುವೆ ಎಂದು ಹೇಳಿ ಹೋಗಿರುವ ಮಗಳು ಮತ್ತೆ ಅಳಿಯನನ್ನು ಕರೆದುಕೊಂಡು ಮರಳಿರುವುದನ್ನು ಕಂಡು ರಾಜನಿಗೆ ಆಶ್ಚರ್ಯವಾಯಿತು. ರಾಜಕುಮಾರಿ ನಡೆದ ಘಟನೆಯನ್ನೆಲ್ಲ ಹೇಳಿ ತನ್ನ ಪತಿಯ ತಲೆಯಿಂದ ಕಬ್ಬಿಣದ ತಂತಿ ತೆಗೆದಳು. ನಾಯಿ ಸಾವಕಾಶವಾಗಿ ಮಾನವರೂಪ ಪಡೆದನು. ಸಂತೋಷಗೊಂಡ ರಾಜ-ರಾಣಿಯರು ಮತ್ತೊಮ್ಮೆ ಊರಿನವರಿಗೆಲ್ಲ ಕರೆಸಿ ಅದ್ದೂರಿಯಾಗಿ ಮಗಳ ಮದುವೆ ಮಾಡಿದರು. ಪಂಚಪಕ್ವಾನದ ಮೃಷ್ಟಾನ್ನ ಭೋಜನಡ ಅಡುಗೆ ಮಾಡಿ ಊಟ ಹಾಕಿದರು. ತನ್ನ ಮಾತಿನಂತೆ ಬಸವನಿಗೆ ತನ್ನ ರಾಜ್ಯದ ಅರ್ಧಪಾಲುಕೊಟ್ಟು ಮಹಾರಾಜನನ್ನಾಗಿ ಮಾಡಿದರು. ಬಸವನು ರಾಜನಾಗಿ ತನ್ನ ಪ್ರಜೆಗಳ ಸುಖ-ದುಃಖಗಳಲ್ಲಿ ಸಹಭಾಗಿಯಾದನು.

ಅನೇಕ ವರ್ಷಗಳು ಗತಿಸಿದ ನಂತರ ಬಸವನ ರಾಜ್ಯದಲ್ಲಿ ಒಂದು ದಿನ ಒಬ್ಬ ಬಿಕ್ಷುಕಿಯಂತೆ ಕಾಣಿಸುವ ಹೆಣ್ಣುಮಗಳು ಚಿಂದಿ ಬಟ್ಟೆಗಳೋ, ಪ್ಲಾಸ್ಟಿಕ್ ವಸ್ತುಗಳೋ ಆರಿಸುತ್ತ ಬೀದಿ-ಬೀದಿಗಳಲ್ಲಿ ತಿರುಗಾಡುತ್ತಿರುವುದು ಕಾಣಿಸಿತು. ಬಡತನದ ಬೇಗೆಯಲ್ಲಿ ಬೆಂದು ಕೃಶವಾಗಿದ್ದವಳು ತನ್ನ ಅತ್ತಿಗೆಯೇ ಎಂದು ಬಸವ ಗುರುತಿಸಿದನು. ತನ್ನ ಪರಿಚಯ ಹೇಳದೇ ಅವಳನ್ನು ದರಬಾರಿಗೆ ಕರಿಸಿ, “ನೀನು ಯಾರು? ನಿನ್ನ ಗಂಡ ಏನು ಕೆಲಸ ಮಾಡುತ್ತಾರೆ?” ಮುಂತಾಗಿ ಕೇಳಿದನು.

“ನಾವು ದೂರದ ಊರಿನವರು. ಬರಗಾಲ ಬಿದ್ದಿರುವುದರಿಂದ ಹೊಲಮನೆಯನ್ನೆಲ್ಲ ಮಾರಿ ಈ ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ಬಂದಿದ್ದೇವೆ. ನನ್ನ ಗಂಡ ನಿಮ್ಮ ಆಸ್ಥಾನದಲ್ಲಿಯೇ ಕೂಲಿ ಕೆಲಸ ಮಾಡುತ್ತಾರೆ ನಾನು ಈ ರೀತಿ ಚಿಂದಿ ಬಟ್ಟೆ ಆರಿಸಿಕೊಂಡು ಮಾರುತ್ತೇನೆ. ಅಲ್ಪ –ಸ್ವಲ್ಪ ಹೊಟ್ಟೆಗೆ ಆಗುತ್ತದೆ.” ಎಂದಳು ದೇವಮ್ಮ.      

“ನಾಳೆ ನಿನ್ನ ಗಂಡನನ್ನು ನಾನು ಕರೆದಿರುವುದಾಗಿ ಹೇಳು. ಅವನಿಗೇನಾದರು ಕೆಲಸ ಕೊಡಿಸುವೆ.” ಎಂದು ಹೇಳಿ ಅವಳನ್ನು ಕಳುಹಿಸಿದನು ಬಸವ.

         ಅರಸನು ತನ್ನನ್ನು ಅರಮನೆಗೆ ಕರೆದನು ಎಂದು ಕೇಳಿ ಶಿವಪ್ಪನಿಗೆ ಗಾಬರಿಯಾಯಿತು. ನನ್ನಿಂದೇನಾದರೂ ತಪ್ಪಾಯಿತೇ? ಈ ಪಟ್ಟಣಕ್ಕೆ ದುಡಿಯಲು ಬರಬಾರದಾಗಿತ್ತೆ? ಎಂದು ಅಂಜುತ್ತ ಅಳುಕುತ್ತ ಅರಮನೆಗೆ ಬಂದನು. ಅಲ್ಲಿ ಅವನಿಗೆ ಸುಖದಾಶ್ಚರ್ಯ ಕಾದಿತ್ತು. ತನ್ನ ತಮ್ಮ ಮಹಾರಾಜನಾಗಿರುವುದನ್ನು ನೋಡಿ ತನ್ನ ಕಣ್ಣುಗಳನ್ನೇ ನಂಬದಾದನು. ಸಹೋದರರಿಬ್ಬರೂ ಗಾಢವಾಗಿ ಬೀಗಿದಪ್ಪಿಕೊಂಡರು. ಕಂಗಳಲ್ಲಿ ಧಾರಾಕಾರವಾಗಿ ನೀರೂರಿತು.

         “ ನೀನು ಅದೆಲ್ಲಿಗೆ ಹೋಗಿದ್ದೆ ತಮ್ಮ? ನಿನಗಾಗಿ ಎಷ್ಟು ಅಲೆದಾಡಿದೆ ನಾನು? ಅದೆಷ್ಟು ಹುಡುಕಾಡಿದೆ? ಏನಾಯಿತ್ತು? ಹೇಗೆ ನೀನು ರಾಜನಾದೆ?” ಎಂದು ಶಿವಪ್ಪನು ಅಳುತ್ತ ಕೇಳಿದನು.

         ಬಸವನು ಅಣ್ಣನನ್ನು ಆಸನದ ಮೇಲೆ ಕುಳ್ಳರಿಸಿದನು. ರಾಜಕುಮಾರಿ ನೀರು ತಂದು ಕೊಟ್ಟಳು. ಬಸವ ನಡೆದ ಘಟನೆಗಳನ್ನೆಲ್ಲ ಸಮಾಧಾನದಿಂದ ವಿವರಿಸಿದನು. ಶಾಲೆಯಿಂದ ತಾನು ಮನೆಗೆ ಬಂದು ಅತ್ತಿಗೆಯನ್ನು ಊಟ ನೀಡು ಎಂದು ಬೇಡಿದ್ದೆ, ಊಟ ನೀಡದೇ ತಾನು ಮೈಮರೆತು ಮಲಗಿದ್ದಾಗ ಕಬಿಣ್ಣದ ಮಳೆಯನ್ನು ತಲೆಯಲ್ಲಿ ಚುಚ್ಚಿ ಮಂತ್ರದಿಂದ ನಾಯಿಯನ್ನಾಗಿ ಮಾಡಿದಳು. ಅಣ್ಣ ಸಂಜೆ ಊಟ ಮಾಡುವಾಗ ತಾನು ಬಂದು ರೊಟ್ಟಿ ಕಸಿದು ತಿನ್ನುವಾಗ ಬಾರುಕೋಲಿನಿಂದ ಹೊಡೆದೋಡಿಸಿದ್ದು. ತಾನು ಊರು ಬಿಟ್ಟು ಈ ಪಟ್ಟಣ ಸೇರಿದ್ದು, ರಾಜಕುಮಾರಿಯ ‘ಸ್ವಯಂವರದಲ್ಲಿ’ ಆನೆ ತನ್ನ ಕೊರಳಿಗೆ ಮಾಲೆ ಹಾಕಿದ್ದು ಎಲ್ಲವನ್ನು ಹೇಳಿದ ನಂತರ ಶಿವಪ್ಪನಿಗೆ ತುಂಬಾ ದುಃಖವಾಯಿತು. ನನ್ನ ಒಡಹಾಟ್ಟಿದ ತಮ್ಮನನ್ನೇ ಹೊಡೆದು ಮನೆ ಬಿಡಿಸಿದೆನಲ್ಲ ನಾನೆಥ ಪಾಪಿಯೆಂದು ಪಶ್ಚಾತ್ತಾಪ ಪಟ್ಟನು. ಇದಕ್ಕೆಲ್ಲ ಕಾರಣಳಾದ ತನ್ನ ಹೆಂಡತಿ ದೇವಮ್ಮಳನ್ನು ಹೊಡೆದು ತಲೆ ಬೊಳಿಸಿದನು. ಕತ್ತೆಯ ಮೇಲೆ ಕೂಡಿಸಿ ಊರಿನಲ್ಲಿ ಮೆರವಣಿಗೆ ಮಾಡಿ ಮನೆಯಿಂದ – ಆ ಊರಿನಿಂದಲೇ ಹೊರ ಹಾಕಿದನು ಅನೇಕ ವರ್ಷಗಳ ವರೆಗೆ ಸಹೋದರರಿಬ್ಬರೂ ಸುಖವಾಗಿ ಬದುಕಿದರು.


  -ಲೇಖಕರು:ದಿನೇಶ  ಠಾಕೂರದಾಸ ಚವ್ಹಾಣ 

ಪ್ರಾಥಮಿಕ ಶಿಕ್ಷಕರು, ಜಿ.ಪ. ಪ್ರಾಥಮಿಕ ಕನ್ನಡ ಶಾಲೆ ಬಬಲಾದ ತಾ. ಅಕ್ಕಲಕೋಟ ಜಿ. ಸೋಲಾಪುರ 

ಮೊಬ. ನಂ. ೭೦೬೬೧೦೨೦೬೬

26 views0 comments
bottom of page