top of page

ಶೂನ್ಯಕ್ಕೆ ಮಹತ್ತರ ಗುರಿ [ ವಾರದ ಕೃತಿ ಪರಿಚಯ ಅಂಕಣ]


[ದಿನೇಶ್ ಮಡಗಾಂವಕರ್ ಅವರ 'ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು' ಈ ಕಥಾ ಸಂಕಲನದ ಕೃತಿ ಪರಿಚಯವನ್ನು ಈ ವಾರದ ಅಂಕಣದಲ್ಲಿ ತಮ್ಮ ಮುಂದಿಡುತ್ತಿದ್ದಾರೆ ಲೇಖಕಿ, ಶ್ರೀದೇವಿ ಕೆರೆಮನೆ. ಓದಿ ಪ್ರತಿಕ್ರಿಯಿಸಿ - ಸಂಪಾದಕ ]

       

    ಒಂದು  ಪ್ರಕಾರದ ಈಗಿನ ಟ್ರೆಂಡ್ ನೋಡಬೇಕೆಂದರೆ ನವಯುವಕರತ್ತ ನೋಡಬೇಕು ಎನ್ನುವುದು ನನ್ನ ಯಾವತ್ತಿನ ನಂಬಿಕೆ. ಅದರಲ್ಲೂ ಸಾಹಿತ್ಯ ಪ್ರಕಾರದಲ್ಲಂತೂ ಜಡ್ಡುಗಟ್ಟಿದ ಹಳೆಯ ಕ್ಲೀಷೆಗಳನ್ನು ಬಿಟ್ಟು ಹೊಸದನ್ನು ನೋಡುವುದು ಇಂತಹ ಹೊಸಬರಿಂದಲೇ ಸಾಧ್ಯ. ಅದೇ ಜಡ್ಡುಗಟ್ಟಿದ ಪದಗಳು, ಅದೇ ವಿವರಣೆಗಳು ಮತ್ತದೇ ರೂಪಕಗಳ ನಡುವೆ ನಿಂತನೀರಾಗಿರುವ ಸಾಹಿತ್ಯವನ್ನು ಒಂದಿಷ್ಟು ಹೊಳಪಿನಲ್ಲಿ ಹೆಚ್ಚಿಸಲು ಇಂತಹ ಯುವಕರು ಬರುತ್ತಿರಬೇಕು. ಎಣ್ಣೆಜಿಡ್ಡನ್ನು ತಿಕ್ಕಿತಿಕ್ಕಿ ತೊಳೆದು ಪ್ರಕಾಶಿಸುವಂತೆ ಮಾಡುವುದು ಇಂತಹ ಹೊಸಬರಿಂದ ಮಾತ್ರ ಸಾಧ್ಯ. ದಿನೇಶ್ ಮಡಗಾಂವ್ಕರ್ ಅವರ ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು ಕಥಾ ಸಂಕಲನ ಇಂತಹ ಹೊಸತನಗಳಿಗೆ ಉದಾಹರಣೆಯಾಗಿ ನಮ್ಮೆದುರಿಗೆ ನಿಲ್ಲುತ್ತದೆ. ದಿನೇಶ ಒಳ್ಳೆಯ ಓದುಗ ಎನ್ನುವುದು ನನಗೆ ಗೊತ್ತು. ಎಲ್ಲೋ ಮಾತಿನ ಮಧ್ಯೆ ಕವನ ಬರೆದೆ ಎಂದದ್ದೂ ಗೊತ್ತು. ಆದರೆ ಸಂಕಲನಕ್ಕಾಗುವಷ್ಟು ಕಥೆಗಳನ್ನು ಬರೆದದ್ದನ್ನು ಹೇಳದೇ ಮುಚ್ಚಿಟ್ಟುಕೊಂಡ ಜಿಪುಣ ಎಂಬುದು ಗೊತ್ತಾಗಿದ್ದೇ ಸಂಕಲನ ನನ್ನ ಕೈ ಸೇರಿದ ನಂತರ.  


'ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು' ಎನ್ನುವ ಕಥಾ ಸಂಕಲನದಲ್ಲಿ ಒಟ್ಟೂ ಎಂಟು ಕಥೆಗಳಿವೆ. ಪ್ರತಿ ಕಥೆಯೂ ನಿರೂಪಣಾ ದೃಷ್ಟಿಯಿಂದ ಬೇರೆಯದ್ದೇ ಆದ ತಂತ್ರವನ್ನು ಅಳವಡಿಸಿಕೊಂಡು ಓದುಗರನ್ನು ಓದಿನ ಸುಖದಲ್ಲಿ ಮುಳುಗೇಳುವಂತೆ ಮಾಡುವುದು ಇಲ್ಲಿನ ವಿಶೇಷ. ಮೊದಲ ಕಥೆಯೇ 'ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು'. ಇಡೀ ಕಥೆ ನಮ್ಮ ಮಲೆನಾಡಿನ ಹಳ್ಳಿಯ ನೈಜ ಚಿತ್ರಣವನ್ನು ಎದುರಿಗಿಡುತ್ತ, ಇದು ನಮ್ಮದೂ ಅನುಭವವಲ್ಲವೇ ಎಂದು ಅಚ್ಚರಿ ಪಡುವಂತೆ ಮಾಡುತ್ತದೆ. ಗೆಂಡೆಹಳ್ಳಿ ಎನ್ನುವ ಅತ್ತ ಊರೆಂದರೆ ಊರಲ್ಲದ, ಕಾಡೆಂದರೆ ಕಾಡಲ್ಲದ ಹಳ್ಳಿಯಲ್ಲಿ ರಾಮ ಆ ಊರಿನ ಪ್ರಸಿದ್ಧ ಪಾರ್ವತಿ ದೇವಸ್ಥಾನದ ಅರ್ಚಕ. ಸದಾ ಪೂಜೆ, ಮಂತ್ರದ ಗುಂಗಿನಲ್ಲಿರುವ ರಾಮನಿಗೆ ಐಹಿಕ ವಿಷಯಗಳೇ ಗೊತ್ತಿಲ್ಲ ಎಂಬಷ್ಟು ನಿರ್ಲಿಪ್ತ. ರಾಮನ ವಿವರಣೆಯ ಜೊತೆಜೊತೆಗೇ ಬರುವ ಗೆಂಡೆಹಳ್ಳಿಯ ವರ್ಣನೆ ಕೂಡ ಒಂದು ಕ್ಷಣ ಇಡೀ ಹಳ್ಳಿ ಹಾಗು ಒಂದಿಷ್ಟು ಹೊಟ್ಟೆ ಬಂದಿರುವ ರಾಮನನ್ನು ಯಥಾವತ್ತಾಗಿ ಕಣ್ಣೆದುರು ನಿಲ್ಲಿಸುವಂತೆ ಮಾಡುತ್ತದೆ. ಇಡೀ ಕಥೆಯೇ ಚಿತ್ರದ ಚೌಕಟ್ಟಿನಲ್ಲಿ ಕೊರೆದಷ್ಟು ನಿಖರವಾಗಿ ನಮ್ಮೆದುರಿಗೆ ಬಿಂಬವನ್ನು ಕಟ್ಟಿಡುತ್ತದೆ. ಪೂಜೆಗೆಂದು ಕುಳಿತ ರಾಮನಿಗೆ ಸೊಂಟ ಉಳುಕಿಕೊಂಡಿದ್ದು, ಸುಣ್ಣದ ಸಾಬರ ಬಳಿ ಉಳುಕಿನ ಮಂತ್ರ ಹಾಕಿಸಿಕೊಳ್ಳಲು ಹೋಗಿದ್ದು ಎಲ್ಲವೂ ಇದೇ ಈಗ ನಮ್ಮೆದುರಿಗೇ ನಡೆಯುತ್ತಿದೆ ಎಂದೆನಿಸದೇ ಇರದು. ಉಳುಕಿದ ಜಾಗಕ್ಕೆ ಕತ್ತಿಯ ಹಿಂಬದಿಯಲ್ಲಿ ನೀವಿ ಥೂ...ಥೂ... ಎಂದು ಉಗುಳಿ ಉಳುಕನ್ನು ತೆಗೆಯುವ ಪರಿಪಾಟವೇ ಒಂದು ವಿಚಿತ್ರ ಆಚರಣೆ. ವೈಜ್ಞಾನಿಕವಾಗಿ ಅದೆಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲದಿದ್ದರೂ ನಾನೂ ಬಹಳಷ್ಟು ಸಲ ಕತ್ತಿ ಹಿಮ್ಮಡಿಯ ಈ ಮಂತ್ರಕ್ಕೆ ಒಳಪಟ್ಟು ಉಳುಕನ್ನು ನಿವಾರಿಸಿಕೊಂಡಿದ್ದಿದೆ. ಹೀಗೆ ಸಾಬರ ಮನೆಗೆ ಹೋದ ರಾಮ ಮತ್ತು ಅವರಪ್ಪ ನಾಣಿ ಹೆಗ್ಡೇರಿಗೆ ಸಾಬರ ಮಗಳು ಚಂದದ ಹೊಂಬಣ್ಣದ ಘಮಘಮಿಸುವ ಮಾವಿನ ಹಣ್ಣು ನೀಡುವುದು, ಮಾರನೇ ದಿನ ನಡೆಯುವ ಸತ್ಯನಾರಾಯಣನ ವೃತಕ್ಕೆ ಬಂದು ಪ್ರಸಾದ ಸ್ವೀಕರಿಸಲು ಹೇಳುವುದೂ, ಸಾಬರು ಬಂದು ಸತ್ಯನಾರಾಯಣನ ಪ್ರಸಾದ ಚಪ್ಪರಿಸುವುದು ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಪೇಟೆಯಲ್ಲಿ ಧರ್ಮದ ಕಣ್ಣುಪಟ್ಟಿಯನ್ನು ಕಟ್ಟಿಕೊಂಡ ಗಾಂಧಾರಿಯಂಥವರಿಗೆ ಅಸಾಧ್ಯ ಎನ್ನಿಸಬಹುದಾದರೂ ಹಳ್ಳಿಯಲ್ಲಿ ರಂಜಾನೋ,ಬಕ್ರೀದೋ ಬಂತೆಂದರೆ ಸಿರಕುಂಬಾ ಸಿಗುತ್ತದೆ ಎಂದು ಬಾಯಲ್ಲಿ ನೀರೂರಿಸಿಕೊಳ್ಳುವ ನಮಗೆ ಅದು ಅಂತಹ ವಿಶೇಷವೇನಲ್ಲ. ಉಳುಕಿಗೆ ಮಂತ್ರ ಹಾಕಿಸಿಕೊಂಡ ಮಾರನೆಯ ದಿನ ಸತ್ಯನಾರಾಯಣ ಪ್ರಸಾದವೂ ತಿಂದಾದ ನಂತg ವನವಾಸಕ್ಕೆ ಹೊರಡುತ್ತೇನೆ ಎಂದು ಘೋಷಿಸಿದ ರಾಮನ ವರ್ತನೆ ತಾಯಿ ಸುಜಾತಾಳಿಗೆ ಅಚ್ಚರಿ ಎನ್ನಿಸಲಿಲ್ಲ. ಸದಾ ಆಧ್ಯಾತ್ಮಿಕ ಚಿಂತನೆಯಲ್ಲೇ ಇರುವ ಮಗನ ಈ ಮಾತನ್ನು ಆಕೆ ಅಷ್ಟೇ ಸಹಜವಾಗಿ ಸ್ವೀಕರಿಸಿದ್ದರು. ಆದರೆ ಸಾಬರು ಮಗಳು ಸೂರಯ್ಯನನ್ನು ಹುಡುಕುವುದು, ಕರಡಿ ಸೊಪ್ಪಿಗಾಗಿ ಬಂದ ದೇವಕಕ್ಕನಿಗೆ ಸೊಪ್ಪಿನ ಹಿಂಡಿನ ಮರೆಯಲ್ಲಿ ಕಪ್ಪು ಬುರುಕ, ಜನಿವಾರ  ಹಾಗೂ ರುದ್ರಾಕ್ಷಿ ಸರ ಸಿಕ್ಕು, ಆಕೆ ಅದು ಮತ್ಯಾರ ಕಣ್ಣಿಗೂ ಕಾನದಂತೆ ಕರಡಿ ಸೊಪ್ಪು ತುಂಬಿಕೊಂಡು ಬಂದ ಮುಟ್ಟಿಯ ಅಡಿಯಲ್ಲಿರುವುದು ಎಲ್ಲವೂ ಸಹಜ ಎನ್ನಿಸಿಕೊಂಡು ಬಿಡುತ್ತದೆ. ಮನುಷ್ಯನ ಪ್ರೇಮ ಎಂಬ ಪೂಜೆಯ ಎದುರು ಯಾವ ದೈವ ಏನು ಕೆಲಸ ಮಾಡೀತು ಹೇಳಿ? ಅದೆಲ್ಲದಕ್ಕಿಂತಲೂ ಬುರಕಾ ಹಾಗೂ ಜನಿವಾರ ಮತ್ತು ರುದ್ರಾಕ್ಷಿಯನ್ನು ಯಾರಿಗೂ ಕಾಣದಂತೆ ತಂದ ದೇವಕ್ಕಕ್ಕನಂಥವರೇ ಈ ಸಮಾಜದ ನಿಜವಾದ ಹರಿಕಾರರು ಎನ್ನಿಸಿಕೊಳ್ಳುವ ಸತ್ಯವನ್ನು ಅಲ್ಲಗಳೆಯುವುದು ಸಾದ್ಯವೇ ಇಲ್ಲ.

ಎರಡನೇ ಕಥೆ 'ಓಂ ಭೂರ್ ಭೂವಸ್ವಃ  ಕೂಡ ಇಂತಹುದ್ದೇ ಹಳ್ಳಿಯ ಹಿನ್ನಲೆಯ ಕಥೆ. ಇಲ್ಲಿ ಕೂಡ ಮೈಯ್ಯೆಲ್ಲ ವೃಣವಾಗಿ ಕೀವು ಸೋರಿ ರಾಮ ಹೆಗ್ಡೆಯ ಮೈಯಿಂದ ಹೊಮ್ಮುವ ತಡೆಯಲಾಗದ ವಾಸನೆಗೆ ಮನೆ ಮಂದಿಯೇ ಮೂಗುಮುಚ್ಚಿಕೊಂಡು ಮನೆ ಕೆಲಸಕ್ಕೆ ಬರುವ ಸುಶೀಲಾಳ ಬಳಿ ಸ್ನಾನ ಮಾಡಿಸಲು ಹೇಳುವುದು, ಸ್ವಚ್ಛ ಮಾಡಲು ಪಾತ್ರೆಯಾದರೇನು? ದೇಹವಾದರೇನು ಎನ್ನುವ ನಿರ್ಲಿಪ್ತತೆಯಿಂದ ರಾಮ ಹೆಗ್ಡೆಯನ್ನು ಸ್ನಾನಮಾಡಿಸಲು ಮುಂದಾಗುವುದು ಈ ಕಥೆಯ ಮೊದಲ ಹಂತ. ಹೆಗ್ಗಡೆಯ ಒಂದೊಂದೆ ವಸ್ತ್ರಗಳನ್ನು ಕಳಚುವ ಹೊತ್ತಿಗೆ ಉಗ್ರವಾಗಿ ಪ್ರತಿಭಟಿಸುವ ರಾಮ ಹೆಗ್ಡೆ ಕೊನೆಗೆ ಪ್ರತಿಭಟಿಸಲು ತ್ರಾಣವಿಲ್ಲದೇ ಸುಮ್ಮನಾಗಿ ಬಿಡುತ್ತಾನೆ. ಸುಶೀಲಾ ಸ್ನಾನ ಮಾಡಿಸಲು ತೊಡಗುವುದೇ ತಡ, ಮನುಷ್ಯನ ಅಂಗಗಳಲ್ಲಿ ನಾಚಿಕೆ ಎಂಬುದೊಂದಿದೆ ಎಂಬುದೇ ಕಲ್ಪನೆ ಎನ್ನಿಸಿತ್ತು ಎನ್ನುವ ಕಥೆಗಾರರ ಮಾತನ್ನು ಗಮನಿಸುತ್ತಲೇ ಸತ್ತು ಹೋದ ರಾಮ ಹೆಗಡೆಯ ಅಂತ್ಯಕ್ರಿಯೆ ಮುಗಿಸಿ ಬರುವಾಗ ವಾಂತಿ ಮಾಡಿಕೊಳ್ಳುವುದು ಒಂದಿಷ್ಟು ಗೊಂದಲ ಹುಟ್ಟಿಸುತ್ತದೆ. ಯಾರೂ ಇಲ್ಲದೇ ರಾಮ ಹೆಗ್ಡೆಯ ಮನೆಯ ಸಮೀಪವೇ ಗುಡಿಸಲು ಕಟ್ಟಿಕೊಂಡಿದ್ದ ಸುಶೀಲಾ ರಾಮ ಹೆಗ್ಡೆಯನ್ನು ಸ್ನಾನ ಮಾಡಿಸಲು ತೊಡಗಿದ ನಂತರವೇ ಆತ್ಮೀಯಳಾದಳೇ ಎಂಬುದು ಇಲ್ಲಿ ಪ್ರಶ್ನಾರ್ಹವಾದರೂ ಅಸಾಧ್ಯವಾದ ನೋವಿನಲ್ಲೂ ಸುಶೀಲಾ ಲೇಪಿಸಿದ ಮುಲಾಮು ಆತನಿಗೆ ಒಂದಿಷ್ಟು ನಿರಾಳತೆಯನ್ನು ಒದಗಿಸುವ, ಆ ನಿರಾಳತೆಯಲ್ಲೆ ಸುಶೀಲಾಳ ಕಾಲ ಮೇಲೆಯೇ ನಿದ್ದೆ ಹೋಗುವ ಚಿತ್ರಣಗಳು ಕಾಮಕ್ಕೆ ಕಣ್ಣಿಲ್ಲ ಎಂಬುದನ್ನು ಮತ್ತೆ ಮತ್ತೆ ಒಪ್ಪಿಕೊಳ್ಳುವಂತೆ ಮಾಡುತ್ತದೆ. ತಡೆಯಲಾಗದ ವಾಸನೆ ಬೀರುವ, ವೃಣದಿಂದ ಸತತ ಕೀವು ಸುರಿಸುವ ರಾಮ ಹೆಗ್ಡೆ ಹಾಗೂ ಸುಶೀಲಾಳ  ಸಂಬಂಧವನ್ನು ಹೊಟ್ಟೆಯಲ್ಲಿ ಮಿಸುಕುವ ಜೀವ ತೋರಿಸಿಕೊಡುತ್ತಿದೆಯೇ?


    ಸಂಕಲನದ ಮತ್ತೊಂದು ಗಮನ ಸೆಳೆಯುವ ಕಥೆ ಶುದ್ಧಿ. ಪೂರ್ತಿಯಾಗಿ ಇಂದಿನ ಸಮಾಜದ ವಿಡಂಬನೆಯಂತೆ ಕಾಣುವ ಈ ಕಥೆ ನಮ್ಮೊಳಗಿನ ಹುಳುಕನ್ನು ಎತ್ತಿ ತೋರಿಸುತ್ತದೆ. ಹೂವಿನ ಹಳ್ಳಿಯ ನರಸಿಂಗ ದೇವರ ಪೂಜಾರಿ ರಾಮ ಹೆಗ್ಡೇರಿಗೆ ಶುದ್ಧಿಯೇ ಬಹುಮುಖ್ಯ. ಇತರ ಜನಾಂಗ, ಸಮಾಜದಲ್ಲಿ ಕೀಳು ಅನ್ನಿಸಿಕೊಂಡವರು, ಸಾಬರು ದೇಗುಲದ ಸುತ್ತಮುತ್ತ ಎಲ್ಲೂ ಸುಳಿಯಬಾರದು ಎನ್ನುವವರು. ಹಾಗೆ ದೇಗುಲದ ಹತ್ತಿರ ಬಂದರೆ ಉಗ್ರ ನರಸಿಂಹ ಮುಟ್ಟುಚಿಟ್ಟಾಗಿ ಊರಿಗೆ ಕೇಡು ಬಗೆದ ಹತ್ತಾರು ಕಥೆಗಳನ್ನು ಇವರು ಹೇಳಿಯಾರು. ಹೀಗಾಗಿ ಊರಿನ ಅದೆಷ್ಟೋ ಸಾಬರು, ಹಸಲರು ಊರಿಮದ ಬಹಿಷ್ಕಾರ ಹಾಕಿಸಿಕೊಂಡ ಅದೆಷ್ಟೋ ನೋವಿನ ಕಥೆಗಳು ಊರಿನ ರುಕ್ಮಿಣಕ್ಕನಂಥವರ ಮನದಲ್ಲಿ ಹಸಿಯಾಗಿದ್ದು ಮಾನಸಿಕ ಅಸ್ವಸ್ಥ್ಯಕ್ಕೆ ಮಾರಣವಾಗಿದೆ. ಆದರೆ ಉತ್ತರ ಭಾರತದಿಂದ ಬರುವ ಶ್ರೀ ಮೂಲಮಾಹಾದೇವ ಸ್ವಾಮಿಗಳು ಉತ್ತರ ಭಾರತದ ಎಲ್ಲಾ ಶುದ್ಧಿ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಅಲ್ಲಿನ ಮೂರ್ತಿಯನ್ನು ಪೂಜಿಸಿದ ಗರಿಮೆಯುಳ್ಳವರು. ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂದ್ರವನ್ನೂ ಮುಗಿಸಿ ಕರ್ನಾಟಕಕ್ಕೆ ಬಂದ ಮೂಲಮಹಾದೇವಸ್ವಾಮಿಗಳು ಆ ದಿನ ಹೂವಿನ ಹಳ್ಳಿಯ ಶುದ್ಧಿ ಉಗ್ರ ನರಸಿಂಹ ದೇವಾಲಯಕ್ಕೆ ಬಂದು ತಮ್ಮ ಸಂಚಾರವನ್ನು ಪೂರ್ಣಗೊಳಿಸುವವರಿದ್ದರು. ಹೀಗಾಗಿ ದೇಶದ ಎಲ್ಲಾ ಪ್ರಮುಖ ಮಾಧ್ಯಮ ವಕ್ತಾರರು, ಚಾನೆಲ್‌ಗಳು ಹೂವಿನಹಳ್ಳಿಯನ್ನು ತಮ್ಮ ಸುದ್ದಿಯ ಕೇಂದ್ರವಾಗಿರಿಸಿಕೊಂಡಿದ್ದವು. ಹೂವಿನ ಹಳ್ಳಿ ದೇಗುಲದ ಗರ್ಭಗುಡಿ ಪ್ರವೇಶಿಸಿದ ಸ್ವಾಮಿಗಳು ಎಲ್ಲಾ ಪೂಜಾ ಕೈಂಕರ್‍ಯ ಮುಗಿಸಿ ಮಾಧ್ಯಮದ ಎದುರಿಗೆ ನಿಂತು, ತಾನು ಇದೇ ಊರಿ, ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ಊರಿಂದ ಬಹಿಷ್ಕಾರ ಹಾಕಿಸಿಕೊಂಡಿದ್ದ ರುಕ್ಮಿಣಕ್ಕನ ಮಗ ಮಾದೇವ ಎಂದಾಗ ಇಡೀ ಭಾರತದ ಜಾತಿರಾಜಕಾರಣದ ಸ್ಥಿತಿ ಏನಾಗಬೇಡ? ಶುದ್ಧತೆ ಎನ್ನುವುದು, ಸಂಸ್ಕೃತದ ಮಂತ್ರೋಚ್ಛಾರಣೆ ಎಂಬುದು ಯಾವುದೋ ಒಂದು ಜಾತಿ, ಜನಾಂಗದ ಸ್ವತ್ತಲ್ಲ ಎಂದು ತೋರಿಸಿಕೊಟ್ಟ ಮಾದೇವ ನಂತರ ತನ್ನ ಮುರುಕಲು ಗುಡಿಸಿಲಿನಲ್ಲಿ ಕುಳಿತು ತನ್ನ ತಾಯಿ ರುಕ್ಮಿಣಕ್ಕ ಮಾಡುವ ಮಟನ್ ಊಟಕ್ಕಾಗಿ ಕಾಯುವ ಸನ್ನಿವೇಶ ನಮ್ಮ ಇಡೀ ದೇಶದ ಪ್ರಸ್ತುತ ಸನ್ನಿವೇಶವನ್ನೇ ವಿಡಂಬನೆಗೆ ಒಡ್ಡಿದಂತಿದೆ.  ಕಥೆಯಲ್ಲಿ ಬರುವ ಹಲವು ಪಾತ್ರಗಳು ಓದುಗರ ತುಟಿಯಲ್ಲಿ ಕಂಡೂ ಕಾಣದಂತಹ ನಗು ಹೊಮ್ಮಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ.


  ಮಾಯಾ ಎನ್ನುವ ಕಥೆಯೂ ಹೂವಿನ ಹಳ್ಳಿಯಲ್ಲೇ ನಡೆಯುತ್ತದೆ. ಹೂವಿನ ಹಳ್ಳಿಯ ಹೆಣ್ಣು ಮಕ್ಕಳಿಗೆಲ್ಲ ನಾಟಕ ಮಾಡುವ ಉಮೇದು ಹುಟ್ಟಿ, ನಾಟಕ ಕಲಿಸುವ ಮಾಸ್ತರನಾಗಿ ಬರುವ ಚಂದ್ರಶೇಖರನಿಗೆ ಬಸ್ಸಿನಲ್ಲಿ ಪಕ್ಕ ಕುಳಿತ ಒಬ್ಬ ಅರೆಹುಚ್ಚಿ ಕೇಳುವ ಪ್ರಶ್ನೆಯಿಂದಾಗಿ ಇಡೀ ಕಥೆ ಒಂದು ವಿಶಿಷ್ಟತೆಯನ್ನು ಪಡೆಯುವಂತಾಗುತ್ತದೆ. ವೆಂಕಟ್ರಮಣ ಭಟ್ಟರ ಮಗಳು ಮಾಯಾಳನ್ನು ನೋಡಲು ಬಂದ ಮಾಣಿಯಾ ಎಂದು ಕೇಳಿದ ಆಕೆ ನಾಟಕದ ಮಾಸ್ತರ್ ಚಂದ್ರಶೇಖರ ಮಾಯಾಳಿಗಾಗಿ ಪರಿತಪಿಸುವಂತೆ ಮಾಡುತ್ತದೆ. ಕತ್ತಲೆಯ ಮನೆಯಲ್ಲಿ ಕೇಳುವ ಗೆಜ್ಜೆ ನಾದ ಹಾಗೂ ತನ್ನ ಕೋಳಿ ಹಾರೋಯ್ತು ಎನ್ನುವ ಹುಚ್ಚಿಮ ಎರಡೂ ನಮಗೆ ಕುತೂಹಲ ಹೆಚ್ಚಿಸುತ್ತಲೇ ಗೆಜ್ಜೆ ಕಟ್ಟಿದ ಬೆಕ್ಕು ಮತ್ತು, ಹುಚ್ಚು ಏರಿದವಳನ್ನು ಆಸ್ಪತ್ರೆಗೆ ಸಾಗಿಸುವ ವೆಂಕಟ್ರಮಣ ಭಟ್ಟರ ವರ್ತನೆಗೆ ಸಂಬಂಧವಿದೆಯೇ? ನೀವೇ ಓದಿ ಹೇಳಬೇಕು.


    ಅಮ್ಮ ಎಲ್ಲಿದ್ದಾಳೆ ಎನ್ನುವ ಕಥೆಯ ವಸ್ತುವೇ ತಲ್ಲಣ ಹುಟ್ಟಿಸುವಂಥಹದ್ದು. ಬೆಳಿಗ್ಗೆ ಬಂದು ದೇವಸ್ಥಾನಕ್ಕೆ ಕರೆದೊಯ್ದು ಹಣೆತುಂಬ ಕುಂಕುಮ ಹಚ್ಚುವ ಅಪ್ಪ ಒಂದೆಡೆ, ಮಧ್ಯಾಹ್ನದ ನಂತರ ಬಂದು ಮಸೀದಿಗೆ ಕರೆದೊಯ್ದು ನಮಾಜು ಮಾಡಿಸುವ ಮತ್ತೊಬ್ಬ ಅಪ್ಪ ಇನ್ನೊಂದೆಡೆ. ದೇವಸ್ಥಾನ, ಮಸೀದಿಗಳನ್ನು ಸಮನಾಗಿ ಇಷ್ಟಪಡುವ ಮಗುವಿಗೆ ಹಿಂದೂ ಮುಸ್ಲಿಂ ಗಲಾಟೆಯೇ ಕಾರಣವಾಗಿ, ಬೆಳಿಗ್ಗೆ ಬರುವ ಅಪ್ಪನನ್ನು ಎದುರುಗೊಳ್ಳಲು ಕುಂಕುಮ ಧರಿಸಿ ಹೂ ಮುಡಿದು ಸಿದ್ಧಳಾದ ಅಮ್ಮನಿಗೆ ಕುಂಕುಮ ಬೇಡದ, ಬುರಕಾ ಧರಿಸಲು ಹೇಳುವ ಅಪ್ಪ ಎದುರು ನಿಂತಾಗ ಏನಾಗಬಹುದೋ ಅದೇ ಆಗುತ್ತದೆ. ಇವೆಲ್ಲದರ ನಡುವೆ ಇಬ್ಬರೂ ಅಪ್ಪಂದಿರೂ ಹೇಳುವ 'ಆಡ್ಕೋ ಹೋಗ್' ಎನ್ನುವ ಮಾತು ಕೊನೆಯವರೆಗೂ ನಮ್ಮ ಮನಸ್ಸನ್ನು ಕದಡುವ ಶಬ್ಧವಾಗಿ ಅಮ್ಮನೆಂದರೆ ಹೇಸಿಗೆ ಎಂಬ ಮಗನ ಮಾತಿಗೆ ತಲ್ಲಣಿಸುವಂತೆ ಮಾಡುತ್ತದೆ.


    ಇನ್ನು ವಿಪಶ್ಯನ ಎನ್ನುವ ಮೌನ ವೃತದ ಕತೆ ನಮ್ಮೊಳಗೆ ಅದೆಷ್ಟು ತಾಕಲಾಟಗಳನ್ನು ಹುಟ್ಟಿಸುತ್ತದೆಯೋ ಅದರ ದುಪ್ಪಟ್ಟು ವೇದನೆಯನ್ನು ಶೂನ್ಯ ಎಂಬ ಕತೆ ಹುಟ್ಟಿಸುತ್ತದೆ. ಕತೆ ಕಟ್ಟುವ ತಾಂತ್ರಿಕ ದೃಷ್ಟಿಯಿಂದ ನೋಡಿದರೆ ಇವೆರಡೂ ಒಂದೇ ಚಪ್ಪರದ ಕೆಳಗೆ ನಿಂತ ಹೆಣ್ಣು ಗಂಡುಗಳಂತೆ ಗೋಚರಿಸುತ್ತದೆ. ಮಾತೇ ಆಡಬಾರದ ಸ್ಥಿತಿಯ ವಿಪಶ್ಯನ ಹಾಗೂ ಆತ ಹಾಗೂ ಆಕೆಯ ಸ್ವಗತದ ನಡುವೆ ಕತೆ ಹೇಳುವ ಕಥೆಗಾರ ನಮ್ಮನ್ನು ಸೆಳೆಯುತ್ತಾನೆ.


    ಕೊನೆಯ ಕಥೆ ಪ್ರದ್ಯುಮ್ನನ ಕಥೆಗಳು ಕಥೆಯ ನಿರೂಪಣೆಯ ದೃಷ್ಟಿಯಿಂದಾಗಲಿ ಅಥವಾ ಕಟ್ಟುವಿಕೆಯ ದೃಷ್ಟಿಯಿಂದಾಗಲಿ ಹೊಚ್ಚಹೊಸದು. ಇದೆಲ್ಲಕ್ಕಿಂತ ಮಿಗಿಲಾಗಿ ಈ ಕಥೆ, ನಾನು ಆಗಲೇ ಹೆಳಿದಂತೆ ಹಳೆಯ ಜಿಡ್ಡುಗಟ್ಟಿದ ಸಾಹಿತ್ಯಿಕ ಚಲನೆಯನ್ನು ಹೊಸ ಹರಿವಿನತ್ತ ಸೆಳೆಯುವ ಗಟ್ಟಿತನವನ್ನೂ ಹೊಂದಿದೆ. ಬರೆದ ಪತ್ರಗಳನ್ನು ಹಾಗೇ ಇರಿಸಲಾಗಿದೆ ಎಂಬ ಭಾವ ಹುಟ್ಟಿಸುತ್ತಲೇ ಉತ್ತರ ಕನ್ನಡದ ಮಲೆನಾಡಿನ ಕಾಡುಗಳಲ್ಲಿ ಇದ್ದೂ ಇಲ್ಲದಂತಿರುವ ನಕ್ಸಲ್ ಸಮಸ್ಯೆಯ ಮೂಲವನ್ನು ತಿಳಿಸುತ್ತದೆ. ಈ ಕಥೆ ಎಲ್ಲಾ ದೃಷ್ಟಿಯಿಂದ, ಅದು ನೀವು ವಿಮರ್ಶೆಯ ಯಾವ ಮಾನದಂಡವನ್ನು ಇಟ್ಟುಕೊಂಡು ನೋಡಿದರೂ ಸರಿ, ಆ ಯಾವ ಮಾನದಂಡಗಳಿಗೂ ದಕ್ಕದ ಶೈಲಿಯಾಗಿ ಕಾಣುತ್ತದೆ.


ಇಡೀ ಸಂಕಲನದಲ್ಲಿ ಬರುವ ಹೂವಿನ ಹಳ್ಳಿ ಕುತೂಹಲ ಹುಟ್ಟಿಸುತ್ತದೆ. ಬೇರೆ ಬೇರೆ ಕತೆಯಾಗಿ ಓದಿದಾಗ ಗೊಂದಲವೆನಿಸದ ಇಲ್ಲಿನ ಪಾತ್ರಗಳಾದ ರಾಮ ಹೆಗ್ಡೆ, ನಾಣಿ ಹೆಗ್ಡೆ, ಸುಶೀಲಾ ಎಲ್ಲರೂ ಸಂಕಲನವಾಗಿ ಓದುವಾಗ ಹೂವಿನ ಹಳ್ಳಿಯ ಹೆಸರಿನಿಂದಲೂ ಹಿಡಿದು ತಡಬಡಾಯಿಸುವಂತಾಗುತ್ತದೆ. ಕೆಲವು ಗೊಂದಲದ ಹೇಳಿಕೆಗಳು ಮತ್ತು ಅದೇ ಕಥೆಯಲ್ಲಿಯೇ ಆ ಹೇಳಿಕೆಗೆ ತದ್ವಿರುದ್ಧವಾದ ಅಭಿಪ್ರಾಯವೂ ವ್ಯಕ್ತವಾಗುತ್ತದೆ. ತುಸು ಭಾಷಾ ಹಿಡಿತ ಹಾಗೂ ನಿರ್ದಿಷ್ಟತೆಯಿದ್ದರೆ ಕಥೆಯ ಸೊಬಗು ಇನ್ನಷ್ಟು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.


    ಇಡೀ ಸಂಕಲನ ಎಲ್ಲಿಯೂ ಒಣ ಡಂಭಾಚಾರವಿಲ್ಲ. ಜಾತಿ ವ್ಯವಸ್ಥೆಯನ್ನು ಕುಟುಕುತ್ತಲೇ ಸಮಸಮಾಜದ ನಿರ್ಮಾಣ ತನ್ನ ಗುರಿ ಎಂಬುದನ್ನು ಕಥೆಗಳಲ್ಲಿಯೇ ಹೇಳುತ್ತ ಹೋಗುವ ಕಥೆಗಾರ ಮಾನವನ ಮೂಲಭೂತ ಅವಶ್ಯಕತೆಗಳು ಎಲ್ಲಕ್ಕಿಂತ ಹೆಚ್ಚು ಎನ್ನುವುದನ್ನು ಹೇಳುತ್ತಾರೆ.'ಗರ್ಭ ಧರಿಸುವ ಹೆಣ್ನು  ಹುಟ್ಟನ್ನು ಅನುಭವಿಸುತ್ತಾಳೆ. ಗಂಡು ಎನ್ನಿಸಿಕೊಂಡವನು ಮಿಲನದ ದಾರಿ ಹುಡುಕಿಕೊಳ್ಳುತ್ತಾನೆ. ಹೆಣ್ಣಿನ ದೇಹದ ಮೂಲೆ ಮೂಲೆಯನ್ನು ತಡಕಾಡುತ್ತಾನೆ. ತನ್ನ ಹುಟ್ಟಿನ ಮೂಲವೆಲ್ಲಿದೆ  ಹುಡುಕಾಡುತ್ತಾನೆ. ಅದಕ್ಕೇ ಮಿಲನ ಗಂಡಿನಲ್ಲಿ ಪದೇ ಪದೇ ಕುತೂಹಲ ಮೂಡಿಸುತ್ತೆ. ಹೆಣ್ಣಿನ ದೇಹದ ಮೂಲೆ ಮೂಲೆ ಏನೋ ಇದೆ ಎಂಬ ತಹತಹ ಮೂಡಿಸುತ್ತೆ' ಎನ್ನುವ ಕಥೆಗಾರ ಹೆಣ್ನಿನ ಸಾಂಗತ್ಯದಲ್ಲಿರುವುದು ಕಾಮವಲ್ಲ. ಅದು ಹುಟ್ಟಿನ ಮೂಲವನ್ನು ಹುಡುಕುವ ತವಕ ಎನ್ನುತ್ತಲೆ ಪ್ರತಿ ಕಥೆಯಲ್ಲೂ ಕಾಮದ  ಹುಟುಕಾಟ ನಡೆಸುತ್ತ ವಿವಿಧ ಸಾಧ್ಯತೆಗಳನ್ನು ತೋರಿಸುತ್ತಾರೆ. ಸೂರಯ್ಯಾ ಜೊತೆಗೆ ಹೋದ ರಾಮ ಹೆಗ್ಗಡೆ, ಸುಶೀಲಾಳ ಬಸಿರು ಎಲ್ಲವೂ ಇಲ್ಲಿ ಇದಕ್ಕೊಂದು ನಿದರ್ಶನವಾಗಿ ನಿಲ್ಲುತ್ತದೆ. ಈಗ ನಾನು ಏನೂ ಅಲ್ಲದ ಶೂನ್ಯ ಎಂದು ಪಾತ್ರಗಳ ಮುಖಾಂತರ ಹೇಳುವ ದಿನೇಶ ಆ ಶೂನ್ಯದಿಂದಲೇ ಮಹತ್ತರವನ್ನು ಸೃಷ್ಟಿಸುವುದಕ್ಕೆ ಸಾಧ್ಯ ಎಂದು ನಂಬಿಕೊಂಡಿರುವವರು. ಮತ್ತಿಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ದಿನೇಶ ಪ್ರಯತ್ನಿಸಿದರೆ ಇನ್ನಷ್ಟು ಚಂದವಾಗಿ ಬರೆದು ಮೊದಲ ಸಾಲಿನಲ್ಲಿ ನಿಲ್ಲಬಲ್ಲರು.
ಶ್ರೀದೇವಿ ಕೆರೆಮನೆ

231 views0 comments
bottom of page