top of page

ಶಾಂತಿಯ ಬದುಕಿನಲ್ಲಿ ಬಂದ ಐವರು ಗಂಡಸರು : ಕತೆಗಾರ್ತಿ‌ ವೀಣಾ ಶಾಂತೇಶ್ವರ ಅವರ ಕಿರು‌ಕಾದಂಬರಿಯತ್ತ ಒಂದು ನೋಟ


`ಗಂಡಸರು' ೧೯೯೪ರಲ್ಲಿ ಬಂದ ಕಿರು ಕಾದಂಬರಿ. ಇದನ್ನು ಸ್ತಿವಾದಿ ನೋಟದ ಕಾದಂಬರಿ ಎನ್ನಬಹುದು. ೯೦ ದಶಕದಲ್ಲಿ ಭಾರತೀಯ ಸಮಾಜದ ಚಿತ್ರಣ ನಮಗಿಲ್ಲಿ ಸಿಗುತ್ತದೆ. ಮನುಷ್ಯ ಸ್ವಾಭಾವಗಳ ದೃಷ್ಟಿಯಿಂದ ನೋಡುವುದಾದರೆ ಭಾರತೀಯ ಸಮಾಜ ಹೇಗೆ ಪುರುಷ ಪ್ರಧಾನವಾಗಿದೆ. ಸುಶಿಕ್ಷಿತ ವರ್ಗದಲ್ಲಿ ಸಹ ಸಮಾಜ ಹಾಗೂ ಅದರಲ್ಲಿ ಗಂಡಸರ ಮನೋಭಾವವನ್ನು ನಿರ್ಭಿಡೆಯಿಂದ ಕತೆಗಾರ್ತಿಗೆ, ಲೇಖಕಿಗೆ ಹಿಡಿದಿಡಬೇಕಾಗಿದೆ. ಅದನ್ನು ಅವರು ಯಾವ ಪಕ್ಷಪಾತವಿಲ್ಲದೇ, ಮನೋವಿಜ್ಞಾನಿಯಾಗಿ ಸೆರೆಹಿಡಿದಿದ್ದಾರೆ. ನಿಜಕ್ಕೂ ಕತೆಗಾರ್ತಿ ಇಲ್ಲಿ ಅನೇಕ ಆಯಾಮಗಳಿಂದ ಸಮಾಜವನ್ನು ಶೋಧಿಸುವುದು ಕಾಣುತ್ತದೆ. ಗಂಡಸರು ಕಿರು ಕಾದಂಬರಿಯಲ್ಲಿ ಗಂಡಸರು ನಾಯಕರಲ್ಲ. ಈ ಕಥಾ ಹಂದರದಲ್ಲಿ ಪ್ರಧಾನವಾಗಿ ಬರುವ ಶಾಂತಿ ಕಾಮತ್ ಗಂಡಸರು ಕಾದಂಬರಿಯ ನಾಯಕಿ. ಶಾಂತಿ ಕಾಲೇಜು ಕಲಿಯುವ ಹಂತದಲ್ಲಿ ತನ್ನ ಅಪ್ಪನ ಗೆಳೆಯನ ಮಗ ಶಂಕರನ ಪರಿಚಯವಾಗುತ್ತದೆ. ಶಂಕರ ಮೊದಲ ಪ್ರೀತಿಯ ಪ್ರಸ್ತಾಪವನ್ನು ಶಾಂತಿಗೆ ನಿವೇದಿಸುವ ಹಂತದಿಂದ ಕಾದಂಬರಿ ಚಲನೆ ಪಡೆದುಕೊಳ್ಳುತ್ತದೆ. ಪ್ರೀತಿಸಿದ್ದ ಶಂಕರ ಮದುವೆಯಾಗುವ ಮಾತುಕೊಟ್ಟು, ಪತ್ರ ಬರೆದವನು ಶಾಂತಿಯಿಂದ ದೂರ ಸರಿಯುತ್ತಾನೆ. ಶಂಕರನ ತಂದೆಯೇ ಹುಡುಗಿ ಬೋಲ್ಡ್ ಇದ್ದಳಂತ, ನಮಗೆ ಹೆಚ್ಚು ಕಲಿತ ಹುಡುಗಿ ಬೇಡ ಎಂದು ಸಂಬಂಧ ನಿರಾಕರಿಸುತ್ತಾರೆ. ಈ ಸುದ್ದಿ ತಿಳಿದ ಶಾಂತಿ ಶಂಕರ ಬರೆದ ಪತ್ರಗಳನ್ನು ಸುಟ್ಟು ದಿಟ್ಟ ನಿಲುವು ತೆಗೆದುಕೊಳ್ಳುತ್ತಾಳೆ. ಡಿಗ್ರಿ ಕಲಿಯುವಾಗ ಪ್ರೊ.ಮಠದ ಆಕೆಯ ಬಾಳಿನಲ್ಲಿ ಪ್ರವೇಶಿಸಲು ಯತ್ನಿಸುತ್ತಾನೆ. ಶಾಂತಿ ಪ್ರೊ.ಮಠದಗೆ ಅರ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಪ್ರೊ,ಮಠದ ಶಾಂತಿ ಗೆಳತಿ ಜಯಶ್ರೀ ಜೊತೆ ಅಫೇರ್ ಇರುವುದು ಗೊತ್ತಾಗುತ್ತದೆ. ಸ್ತಿ ಸಮಾನತೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಕಾದಂಬರಿ,ಕತೆ ಬರೆಯುತ್ತಿದ್ದ ಪ್ರೊ.ಮಠದ ವಿವಾಹಿತ. ಆದರೂ ಮತ್ತಿಬ್ಬರು ಶಿಷ್ಯಯರ ಜೊತೆ ಅಫೇರ್ ಇರುವುದು ತಿಳಿಯುತ್ತಿದ್ದಂತೆ, ಮಠದಗೆ ಬರೆದ ಒಂದು ಸಾಲನ ಪತ್ರ ಹರಿದು ಹಾಕಿ, ಸತಾರವನ್ನೇ ಬಿಟ್ಟು ಮುಂಬಯಿಗೆ ಶಿಫ್ಟ ಆಗುತ್ತಾಳೆ. ಇದು ಶಾಂತಿ ಬದುಕಿನ ಮಹತ್ವದ ತಿರುವು. ಇಲ್ಲಿ ಲೇಖಕಿಗೆ ಪುರುಷ ಲೇಖಕನ ಮುಖವಾಡವನ್ನು ಸಹ ಗಂಡಸರು ಕಾದಂಬರಿಯಲ್ಲಿ ಬಯಲು ಮಾಡಿದ್ದಾರೆ. ನಂತರ ಶಾಂತಿ `ಶಾ ಮಾಣಿಕ್ ಚೆಂದ್ ಅಂಡ್ ಸನ್ಸ ' ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುವಾಗ ಅಲ್ಲಿನ ರಮಾಕಾಂತ ಶಿಂಧೆಯ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಬೇಕು ಅನ್ನುವ ಹಂತದಲ್ಲಿ ಅವರ ರಾತ್ರೋರಾತ್ರಿ ಶಾಂತಿಯನ್ನು ಬಿಟ್ಟು, ಪತ್ರ ಬರೆದಿಟ್ಟು ತೆರಳುವುದು ಸಹ ಮಹತ್ತರ ತಿರುವು. ಶಾಂತಿ ಬದುಕಿನಲ್ಲಿ ಬಂದ ಮೂರನೇ ಗಂಡಸು ದಕ್ಕುವುದಿಲ್ಲ. ನಾಲ್ಕನೆಯವನು ಸ್ವತಂತ್ರ ಪಕ್ಷದ ಲೀಡರ್, ಕ್ರಾಂತಿ ಪತ್ರಿಕೆಯ ಸಂಪಾದಕ ಜಾನ್ ಅಶೋಕ್‌ಕುಮಾರ್. ಅಶೋಕ್ ಕುಮಾರ್ ಮತ್ತು ಶಾಂತಿ ಪ್ರೀತಿಸಿ, ದೈಹಿಕ ಸುಖಪಡೆದು, ಮದುವೆಯಾಗಬೇಕು ಅನ್ನುವಷ್ಟರಲ್ಲಿ ಮತಾಂತರ ಆಗಬೇಕೆಂದು ಹಠ ಹಿಡಿವ ಜಾನ್ ಅಶೋಕ್ ಕುಮಾರ್ ಹೇರಿಕೆ ಸ್ವತಃ ಶಾಂತಿಗೆ ಹಿಡಿಸದೇ ಆಕೆಯೆ ಆತನನ್ನು ಬಿಟ್ಟು ಕಲ್ಕತ್ತಾ ನಗರದಲ್ಲಿ ವುಮೆನ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಲು ವಿಮಾನ ಏರುವುದು. ವುಮೆನ್ ಪತ್ರಿಕೆಯ ಆಹ್ವಾನ ಸ್ವೀಕರಿಸಿ ಹೊರಡುವುದು. ಇದು ಸಹ ಶಾಂತಿ ಬದುಕಿನ ಮಹತ್ವದ ನಿರ್ಧಾರ. ಇಲ್ಲಿ ಗಂಡಸರೇ ಸಂಪ್ರದಾಯಸ್ಥ ಮನಸು ಬಿಡದೇ ಹೆಣ್ಣಿಗೆ ನಾನಾ ಬಗೆಯಲ್ಲಿ ವಂಚಿಸುವ ಸೂಕ್ಷ್ಮ ಎಳೆ ಗಂಡಸರು ಕಾದಂಬರಿಯಲ್ಲಿ ಸಿಕ್ಕುತ್ತದೆ. ವಿಮಾನದಲ್ಲಿ ಪರಿಚಯವಾಗುವ ಐರೀಶ್ ಪ್ರಜೆ, ಯುವಕ ವಿಮಾನದ ಸೀಟ್‌ನಲ್ಲಿ ಕುಳಿತು ಕಿಸ್ ಮಾಡುವುದು ಹಾಗೂ ತನ್ನ ಜೊತೆ ಕಳೆಯಲು ನೀಡುವ ಆಹ್ವಾನವನ್ನು ಶಾಂತಿ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾಳೆ. ನಾನು ನಿನ್ನ ಪ್ರೀತಿಸುತ್ತೇನೆ ಎಂಬ ವಿದೇಶಿಗ ಐರೀಶ್ ಯುವಕನ ಮಾತಿಗೆ ಶಾಂತಿ ನೀಡುವ ದಿಟ್ಟ ಉತ್ತರ ಹೀಗಿದೆ:


ಐರೀಶ್ ಯುವಕ : ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನನ್ನನ್ನು ಪ್ರೀತಿಸುತ್ತೀಯಾ?

ಶಾಂತಿ : ಬಲವಾಗಿ ತಲೆ ಕೊಡವಿ ಆಕೆ ಉತ್ತರಿಸಿದಳು.`` ಇಲ್ಲ''

ಐರೀಶ್ ಯುವಕ: ` ಆದರೆ ಏಕೆ ?' -ಆತನಿಗೆ ಆಶ್ವರ್ಯ.

ಶಾಂತಿ: `` ಏಕೆಂದರೆ ಹಾಗೆಂದರೇನೆ0ದು ನನಗೆ ಗೊತ್ತಿಲ್ಲ''


ಹೀಗೆ ಕಾದಂಬರಿ ಮುಕ್ತಾಯವಾಗುತ್ತದೆ. ಗಂಡಸರ ಗುಣ ಸ್ವಭಾವವನ್ನು ೫೪ ಪುಟುಗಳ ಈ ಕಿರುಕಾದಂಬರಿ ಧ್ವನಿಸುತ್ತದೆ. ಸ್ತಿಪರ ಧೋರಣೆಯುಳ್ಳ ಪ್ರೊ,ಮಠದ ಮುಖವಾಡದ ವ್ಯಕ್ತಿಯಾಗಿದ್ದರೆ, ರಮಾಕಾಂತ ಶಿಂಧೆ ಇಷ್ಟವಿಲ್ಲದ ಹುಡುಗಿಯನ್ನು ತಾಯಿ ಮದುವೆ ಮಾಡಿದರೆಂದು ಮದುವೆಯಾದ ಮರುದಿನವೇ ಮುಂಬಯಿಗೆ ಓಡಿ ಬಂದು ಮರಳಿ ಮನೆಗೆ ಹೋಗದವ. ಜೊತೆಗೆ ಕಾಲೇಜಿನಲ್ಲಿ ಪ್ರೀತಿಸಿದವಳು ಕೈಕೊಟ್ಟು ಬೇರೆಯವನ ಜೊತೆ ಮದುವೆಯಾಗಿ ವಿದೇಶಕ್ಕೆ ಹಾರಿದಳೆಂದು ಕೊರಗುತ್ತಲೇ ಇರುವವ. ಬದುಕಿನ ಮಧ್ಯ ಭಾಗದಲ್ಲಿ ಬಂದ ಶಾಂತಿ ಕಾಮತಳ ಬಗ್ಗೆ ಪ್ರೋಟೆಕ್ಟಿವ್ ಧೋರಣೆ ಹೊಂದಿ ಅವಳಿಂದ ಬಂದ ಪ್ರೀತಿಯ ಆಹ್ವಾನ ಸ್ವೀಕರಿಸಿ ಅವಳ ಜೊತೆ ಬರೆತವ ಪ್ರೋ. ಮಠದ ಜೊತೆ ಇದ್ದ ಸಂಬಂಧವನ್ನು ಸ್ವಂತ ಶಾಂತಿ ಹೇಳಿದಾಗ, ಅದನ್ನು ಸಹಿಸದೇ ರಾತ್ರಿ ಪತ್ರ ಬರೆದಿಟ್ಟು, ಕಂಪನಿಗೆ ೩ ತಿಂಗಳ ಸಿಕ್ ಲೀವ್ ಹಾಕಿ, ಶಾಂತಿಯಿಂದ ದೂರ ನಡೆಯುತ್ತಾನೆ. ಜವಾಬ್ದಾರಿ ಬಂಧನ ಅವನಿಗೂ ಬೇಡವಾಗಿತ್ತು. ಮುಂದೆ ಲೂಸಿ ಫರ್ನಾಂಡೀಸ್ ಮೂಲಕ ಪರಿಚಯವಾದ ಜಾನ್ ಅಶೋಕ್ ಕುಮಾರ್, ಶಾಂತಿ ಕಾಮತ್ ಜೊತೆ ಖಂಡಾಲದಲ್ಲಿ ಕೆಲ ದಿನಕಳೆದು, ಅವಳ ಜೊತೆ ಮದುವೆಗೆ ನಿರ್ಧಾರಕ್ಕೆ ಬಂದರೂ, ಸ್ವಾತಂತ್ರ್ಯ ಕಸಿಯುವ ಸುಳಿವು ನೀಡುತ್ತಾನೆ. ವಿಚಿತ್ರ ಹೇರಿಕೆಗಳ ಮೂಲಕ.ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರದ ಬೇಡಿಕೆಯಿಟ್ಟು, ಸ್ವಂತ ಶಾಂತಿ ತನ್ನಿಂದ ದೂರವಾಗುವಂತೆ ಮಾಡುವ ಸೂಕ್ಷ್ಮ ಮುಖವಾಡ ಈ ಕಥನದಲ್ಲಿದೆ. ಎಂದೂ ಗುಡಿಗೆ ಹೋಗದ, ದೇವರನ್ನು ಅಷ್ಟಾಗಿ ನಂಬದ ಶಾಂತಿ ಕಾಮತ್ ತನಗೆ ಅರಿವಿಲ್ಲದೇ ಹಿಂದೂ ಎಂದು ಯೋಚಿಸುವ ಸನ್ನಿವೇಶ ಸಹ ಧರ್ಮದ ಸುಳಿ ಹೇಗೆ ಹೆಣ್ಣನ್ನು ಆಲೋಚನಕ್ರಮದಲ್ಲಿ ಬಂಧಿಸಿದೆ ಎಂಬ ಅರಿವನ್ನು ಕಾದಂಬರಿಕಾರ್ತಿ ವೀಣಾ ಶಾಂತೇಶ್ವರ ನೀಡುತ್ತಾರೆ ಓದುಗರಿಗೆ. ಇನ್ನು ಗಂಡಸರು ಎಷ್ಟೇ ಪ್ರಗತಿಪರ ಮುಖವಾಡ ಹಾಕಿದ್ದರೂ, ಹೆಣ್ಣನ ಸ್ವಾತಂತ್ರ್ಯ ಸಮಾನತೆ ಒಪ್ಪಲಾರರು ಎಂಬ ಧ್ವನಿಯೂ `ಗಂಡಸರು' ಕಿರು ಕಾದಂಬರಿಯಲ್ಲಿದೆ.


- ನಾಗರಾಜ್ ಹರಪನಹಳ್ಳಿ


ಜೀವನಪ್ರೀತಿಯನ್ನೇ ತಮ್ಮ ಉಸಿರಾಗಿಸಿಕೊಂಡ ನಾಗರಾಜ್ ಹರಪನಹಳ್ಳಿ ಅವರು ತಮ್ಮ ಕವಿತೆ , ಕಥೆ , ವಿಮರ್ಶೆ , ವಚನ ಸಾಹಿತ್ಯದ ಕುರಿತಾದ ಚಿಂತನೆಯ ಮೂಲಕ ನಾಡಿನಾದ್ಯಂತ ಪರಿಚಿತರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ 'ವಿರಹಿದಂಡೆ' ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

1,005 views1 comment

1 Kommentar


sunandakadame
sunandakadame
30. Juni 2020

ಹಲವು ಒಳ ಸುಳಿಗಳನ್ನು ಒಡಲಲ್ಲಿರಿಸಿಕೊಂಡ ವೀಣಾ ಅವರ ’ಗಂಡಸರು’ ಕಾದಂಬರಿಯು ಈ ಹಿಂದೆ ಒಂದು ನೀಳ್ಗತೆಯಂತೆ ಓದಿಸಿಕೊಂಡಿತ್ತು.. ಓದಿ ಮುಗಿದಾಗ ಕಥನಕ್ಕೆ ಇನ್ನೂ ಕೊಂಚ ಲಂಭಿಸುವ ಅವಕಾಶವಿತ್ತು ಅನಿಸಿತ್ತು, ಏನಿವೇ ಹೆಣ್ಣು-ಗಂಡಿನ ಭಾವನಾತ್ಮಕ ಸ್ಪಂದನೆಯ ಅಂಶಗಳನ್ನು ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ ನಾಗರಾಜ್, ನಿಮ್ಮದು ಹರಿತ ಓದು.

Gefällt mir
bottom of page