top of page

ಶಿಕ್ಷಣಕ್ಷೇತ್ರದ ಹಾದಿ

ನಮ್ಮ ಶಿಕ್ಷಣಕ್ಷೇತ್ರಕ್ಕೆ ಒದಗಿರುವ ಸ್ಥಿತಿ ನೋಡಿದರೆ ದಿಗಿಲಾಗುತ್ತದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎಂಬ ಎರಡು ಕ್ಷೇತ್ರ ಬಿಟ್ಟರೆ ಬೇರೆ ಶಿಕ್ಷಣವೇ ಇಲ್ಲ ಎಂಬ ವ್ಯಾಪಾರೀ ವಾತಾವರಣವನ್ನು ನಮ್ಮ ’ಶಿಕ್ಷಣ ಉದ್ಯಮಿಗಳು’ ನಿರ್ಧರಿಸಿಬಿಟ್ಟಂತಿದೆ. ಸಮಾಜವೂ ಅದೇ ಚಿಂತನೆಯ ಹಾದಿಯಲ್ಲಿದೆ. ಶೇ. ೯೫ಕ್ಕಿಂತ ಹೆಚ್ಚು ಅಂಕ ಗಳಿಸಬೇಕು ಮತ್ತು ವೈದ್ಯಕೀಯ/ಎಂಜಿನಿಯರಿಂಗ್ ಶಿಕ್ಷಣವೇ ಜೀವನದ ಪರಮ ಗಂತವ್ಯ ಎಂಬ ಭಾವನೆ ನಮ್ಮ ವಿದ್ಯಾರ್ಥಿ ಮತ್ತು ಪೋಷಕ ಸಮೂಹದ ತಲೆಗೆ ಅಡರಿ ಬಿಟ್ಟಿದೆ. ಪಾಪ, ವಿದ್ಯಾರ್ಥಿಗಳು ಏನು ಮಾಡಬೇಕು? ತಾವು ಈ ವ್ಯೂಹದಲ್ಲಿ ಬಲಿಪಶುಗಳಾಗಿದ್ದೇವೆ ಎಂಬ ಅರಿವು ಬರುವಷ್ಟರಲ್ಲಿ ಅವರ ಶಿಕ್ಷಣವೇ ಮುಗಿದು ಹೋಗಿರುತ್ತದೆ! ಆಮೇಲೆ ಪಶ್ಚಾತ್ತಾಪ ಪಟ್ಟು ಏನು ಪ್ರಯೋಜನ!


ಯಂತ್ರದಂತೆ ೯೫% ನಿಂದ ೧೦೦% ವರೆಗೆ ಅಂಕ ಗಳಿಸಬೇಕೆಂಬ ಹಪಾಹಪಿಗೂ ಈ ಎರಡು ಪದವಿಗಳಿಗೂ ನೇರ ಸಂಬಂಧ ಇದೆ. ಶೇ. ೯೫ ರಿಂದ ೧೦೦ ರ ವರೆಗೆ ಅಂಕ ಗಳಿಸಬೇಕು ಮತ್ತು ವೈದ್ಯಕೀಯ ಹಾಗೂ ಎಂಜಿನೀರಿಂಗ್ ಶಿಕ್ಷಣ ಪಡೆಯಬೇಕು, ಇದೊಂದೇ ಆಲೋಚನೆ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ. ಆದರೆ ಇತರ ವಿಷಯಗಳಿಗೂ ಅಷ್ಟೇ ಪ್ರಾಧಾನ್ಯ ಇದೆ, ಅವಕಾಶಗಳಿವೆ ಎಂದು ಗೊತ್ತಾದರೆ ಈ ಅವಾಂತರ ಖಂಡಿತ ಆಗುವುದಿಲ್ಲ ಮತ್ತು ಇತರ ಹಲವಾರು ಪದವಿಗಳ ಅವಕಾಶದ ಹಾದಿ ತೆರೆದುಕೊಂಡರೆ ಈ ಅಂಕದ ಹಪಹಪಿಕೆ ತನ್ನಿಂದ ತಾನೇ ಮಾಯವಾಗುವುದು. ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವೂ ಕಡಿಮೆಯಾಗುವುದು.


ಕೇವಲ ಅಂಕಗಳಿಕೆ ಮಾತ್ರವೇ ಶಿಕ್ಷಣವೇ? ಬೇಕಾದಷ್ಟು ಅಂಕ ಬಂದಾಕ್ಷಣ ಅವರು ಆ ವಿಭಾಗದಲ್ಲಿ ಆಳ ತಿಳಿವಳಿಕೆ ಹೊಂದಿದ್ದಾರೆ ಎಂದು ಅರ್ಥವೇ? ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನ ಮತ್ತು ಲೋಕದ ಬಗೆಗಿನ ತಿಳಿವಳಿಕೆ ಹಾಗೂ ಇತರ ಕೌಶಲ್ಯಗಳು ಇಲ್ಲದಿದ್ದರೆ ಈ ಅಂಕದ ಬದನೇಕಾಯಿಯಿಂದ ಪ್ರಯೋಜನವೇನು?


ಪಿ.ಯು.ಸಿ. ನಂತರ ಹತ್ತಾರು ಕಲಿಕಾ ವಿಭಾಗಗಳಿವೆ. ಅವೆಲ್ಲವೂ ಉತ್ತಮವಾದವೇ. ಅವುಗಳಲ್ಲೆಲ್ಲ ಉದ್ಯೋಗಾವಕಾಶಗಳೂ ಇವೆ ಮತ್ತು ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನೂ ಕೊಡಬಹುದಾಗಿದೆ ಎಂಬುದನ್ನು ವಿದ್ಯಾರ್ಥಿ/ಪೋಷಕರ ಸಮುದಾಯಕ್ಕೆ ಯಾರು ತಿಳಿ ಹೇಳಬೇಕು? ಅಂತಹ ಅರಿವು ಹುಟ್ಟಿಸಬೇಕಾದವರೇ ವೈದ್ಯಕೀಯ/ಎಂಜಿನಿಯರಿಂಗ್ ಶಿಕ್ಷಣವನ್ನು ವೈಭವೀಕರಿಸುತ್ತಿರುವುದು ದುರಂತವೇ ಸರಿ!


ಇವತ್ತು ಎಂಜಿನಿಯರಿಂಗ್ ಓದಿದವರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಕೆಲಸ ಸಿಕ್ಕಿದರೂ ಸಂಬಳ ಮಾತ್ರ ದೇವರಿಗೇ ಪ್ರೀತಿ. ಯಾವ ಪುರುಷಾರ್ಥಕ್ಕಾಗಿ ಎಂಜಿನಿಯರಿಂಗ್ ಓದಬೇಕಾಗಿತ್ತು? ಅತ್ತ ಎಂಜಿನಿಯರಿಂಗ್ ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದೆ ಕಾಲೇಜುಗಳು ಮುಚ್ಚುವ ಹಂತಕ್ಕೆ ಬಂದಿವೆ. ಇದು ನಮ್ಮ ರಾಜ್ಯದ ವಿದ್ಯಮಾನವೊಂದೇ ಅಲ್ಲ. ಇಡೀ ದೇಶದಲ್ಲಿ ಇಂತಹ ಪರಿಸ್ಥಿತಿ ಇದೆ. ನಾಲ್ಕು ವರ್ಷಗಳ ಹಿಂದೆ ಕಾರ್ಯಾರ್ಥ ನಾನು ಕಟಕ್ ಗೆ (ಒಡಿಶಾ) ಹೋಗಿದ್ದಾಗ ಅಲ್ಲಿನ ಶಾಸಕರೊಬ್ಬರು ಮಾತಿಗೆ ಸಿಕ್ಕಿದ್ದರು. ಅವರು ಹೇಳಿದಂತೆ, ಆ ವರ್ಷ ಒಡಿಶಾದಲ್ಲಿ ಸುಮಾರು ನೂರು ಎಂಜಿನಿಯರಿಂಗ್ ಕಾಲೇಜುಗಳು ಸಾಕಷ್ಟು ವಿದ್ಯಾರ್ಥಿಗಳ ಸಂಖ್ಯೆ ಇಲ್ಲದೆ ಮುಚ್ಚಿದ್ದವಂತೆ. ಇನ್ನು ಲಕ್ಷ ಲಕ್ಷ ಸುರಿದು ಮೆಡಿಕಲ್ ಶಿಕ್ಷಣ ಪಡೆದವರು ಆ ಕ್ಷೇತ್ರದಲ್ಲಿನ ತೀವ್ರ ಪೈಪೋಟಿಯಿಂದಾಗಿ ಇವತ್ತು ಒದ್ದಾಡುವಂತಾಗಿದೆ.


ಕರ್ನಾಟಕವೊಂದರಲ್ಲೇ ಮಾನ್ಯತೆ ಪಡೆದ ಸುಮಾರು ಇನ್ನೂರೈವತ್ತು ಎಂಜಿನಿಯರಿಂಗ್ ಕಾಲೇಜುಗಳಿವೆ, ಇವುಗಳಿಗೆ ವಿದ್ಯಾರ್ಥಿಗಳನ್ನು ತರುವುದೆಲ್ಲಿಂದ? ಇನ್ನು ದೇಶಾದ್ಯಂತ ಇರುವ ಕಾಲೇಜುಗಳನ್ನು ಲೆಕ್ಕ ಹಾಕಿದರೆ ದಿಗಿಲಾಗುತ್ತದೆ. ಎಲ್ಲರೂ ಎಂಜಿನಿಯರ್ ಗಳಾದರೆ ಮಾಡುವುದೇನನ್ನು? ಹೀಗೆ ಓದಿ ಹೊರಬರುವ ವಿದ್ಯಾರ್ಥಿಗಳಿಂದ ಗುಣಮಟ್ಟದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಹಾಗಾದರೆ ಉಳಿದ ಜ್ಞಾನಶಿಸ್ತುಗಳನ್ನು ಓದುವವರು ಯಾರು?


ಉನ್ನತ ಶಿಕ್ಷಣ ಎಂಬುದು ಆಸಕ್ತಿಯನ್ನು ಆಧರಿಸಿರುವಂಥದು. ಅವರವರ ಆಸಕ್ತಿಯ ವಿಷಯವನ್ನು ಉನ್ನತ ಹಂತದಲ್ಲಿ ಕಲಿತು ಅದರಲ್ಲಿ ತಜ್ಞತೆಯನ್ನೂ ಅನಂತರ ಸಂಶೋಧನೆಯನ್ನೂ ಅವರು ಕೈಗೊಳ್ಳಬೇಕು. ಆ ಕ್ಷೇತ್ರಕ್ಕೆ ಉಪಯುಕ್ತವಾದ ಕೊಡುಗೆ ಕೊಡಬೇಕು. ಬಲವಂತ ಮಾಘಸ್ನಾನಕ್ಕೆ ಒಳಗಾಗಿ ಎಂಜಿನಿಯರಿಂಗ್/ವೈದ್ಯಕೀಯ ಓದಿದವರಿಂದ ಯಾವ ಕೊಡುಗೆ ನಿರೀಕ್ಷಿಸಲು ಸಾಧ್ಯ? ಎಂಜಿನಿಯರಿಂಗ್ ಓದಿದವರು ಈಗಾಗಲೇ ಎಂಬಿಎ ಮತ್ತು ಬೇರೆ ಇನ್ನೇನೋ ಓದಿಕೊಂಡು ಕೊನೆಗೆ ಇನ್ನಾವುದೋ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ತೊಡಗಿದವರು ಬಹಳ ಮಂದಿ.


ಪಿ.ಯು.ಸಿ. ಆದ ಬಳಿಕ ವಿದ್ಯಾರ್ಥಿಗಳು ಎಲ್ಲ ಬಗೆಯ ಶಿಕ್ಷಣದ ಆಯ್ಕೆಗೆ ತೆರೆದುಕೊಳ್ಳುವ ಒಂದು ವ್ಯವಸ್ಥೆ ಬರಬೇಕು. ಆಯ್ಕೆಯನ್ನು ಅವರಿಗೇ ಬಿಡಬೇಕು. ಗೊಂದಲ ಬಂದಾಗ ತಜ್ಞರು ನೆರವು ಕೊಡಬಹುದು. ನನಗನಿಸುತ್ತದೆ: ಪಿ.ಯು.ಸಿ. ಆದ ಕೂಡಲೇ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಅಥವಾ ಎರಡು ತಿಂಗಳ ವಿಶಿಷ್ಟ ಕೋರ್ಸ್ ಒಂದನ್ನು ಕಡ್ಡಾಯ ಮಾಡಬೇಕು ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳೂ ಈ ಕೋರ್ಸ್ ಅನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಅದರಲ್ಲಿ ಎಲ್ಲ ಬಗೆಯ ಶಿಕ್ಷಣ – ವಿಜ್ಞಾನ, ಮೂಲವಿಜ್ಞಾನ, ತಂತ್ರಜ್ಞಾನ, ಮಾನವಿಕ, ಕಾನೂನು, ವಾಣಿಜ್ಯ, ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಅರಣ್ಯ, ಸಾಗರಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ಏನೇನೆಲ್ಲ ಇವೆಯೋ ಅವೆಲ್ಲವನ್ನೂ ಪರಿಚಯ ಮಾಡಿಸಬೇಕು ಮತ್ತು ಅಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ/ತಿಳಿವಳಿಕೆ ಕೊಡಬೇಕು. ಸುಮ್ಮನೇ ಮಂದೆಗಳ ಹಾಗೆ ಪ್ರವೇಶ ಪರೀಕ್ಷೆ ಬರೆದು, ಮೆಡಿಕಲ್/ಎಂಜಿನಿಯರಿಂಗ್ ಶಿಕ್ಷಣವನ್ನು ಆಯ್ದುಕೊಳ್ಳುವ ಬದಲು ಆಯ್ಕೆಯ ಅವಕಾಶ ಕೊಡುವುದು ಉತ್ತಮ. ಶಿಕ್ಷಣ ಗಳಿಕೆಯ ಅಮೂಲ್ಯ ಸಮಯ ಕಳೆದ ಮೇಲೆ ಛೇ! ತಪ್ಪಾಯಿತು, ಬೇರೆ ಪದವಿ ಮಾಡಬಹುದಾಗಿತ್ತು ಎಂದು ಹಳಹಳಿಸುವ ಎಷ್ಟೋ ಯುವಕ ಯುವತಿಯರನ್ನು ನಾನು ನೋಡಿದ್ದೇನೆ.


ಆ ವಿಶಿಷ್ಟ ಕೋರ್ಸ್ ಪಡೆದುಕೊಂಡಿರುವುದಕ್ಕೆ ಪ್ರತ್ಯೇಕ ಪ್ರಮಾಣಪತ್ರ ಕೊಡಬೇಕು ಮತ್ತು ಅದನ್ನು ಲಗತ್ತಿಸಿ ಉನ್ನತ ಶಿಕ್ಷಣದ ಕೋರ್ಸ್ ಗೆ ಅರ್ಜಿ ಹಾಕುವಂತಾಗಬೇಕು. ಆಗ ಕೊನೇ ಪಕ್ಷ ಆ ವಿದ್ಯಾರ್ಥಿಗೆ ತನ್ನ ಮುಂದೆ ಯಾವ ಯಾವ ಕೋರ್ಸ್ ಗಳಿವೆ, ತನ್ನ ಊಟದ ಬಟ್ಟಲು ಯಾವುದಿರಬೇಕು ಎಂಬ ಕನಿಷ್ಠ ಆಯ್ಕೆಯ ಅವಕಾಶ ಸಿಕ್ಕಿದಂತಾಗುತ್ತದೆ.


ಇವತ್ತು ಉತ್ತಮ ಶಿಕ್ಷಕರು ನಮಗೆ ಲಭ್ಯವಾಗುತ್ತಿಲ್ಲ. ಕರ್ನಾಟಕ ಆಡಳಿತ ಸೇವೆ, ಭಾರತೀಯ ಆಡಳಿತ ಸೇವೆ, ಬ್ಯಾಂಕ್, ಭಾರತೀಯ ಸೇನೆ, ಅಧ್ಯಾಪಕ ವೃತ್ತಿ, ಮೀನುಗಾರಿಕೆ, ಕಾನೂನು, ಮೂಲವಿಜ್ಞಾನದ ವಿವಿಧ ವಿಭಾಗಗಳಿಗೆ ಹಾಗೂ ಇನ್ನಿತರ ಹತ್ತಾರು ಉದ್ಯೋಗಗಳಿಗೆ ಅರ್ಹ/ಯೋಗ್ಯ ಅಭ್ಯರ್ಥಿಗಳು ಸಿಗುತ್ತಿಲ್ಲ. ಹೀಗಾದರೆ ಗುಣಾತ್ಮಕವಾಗಿ ದೇಶವನ್ನು ಮುನ್ನಡೆಸುವುದು ಹೇಗೆ?


ವೈದ್ಯಕೀಯ ಮತ್ತು ಎಂಜಿನೀರಿಂಗ್ ಎಂಬ ಎರಡೇ ವಿಷಯಗಳು ತುಂಬಿಕೊಂಡು, ಬೇರೆ ಶಿಕ್ಷಣ ವಿಭಾಗಗಳು (ಜ್ಞಾನಕ್ಷೇತ್ರಗಳು) ಬಡವಾಗಿ ಹೋದರೆ – ಮುಂದಿನ ತಲೆಮಾರಿನ ಹೊತ್ತಿಗೆ ಅನ್ಯ ಜ್ಞಾನಕ್ಷೇತ್ರಗಳಲ್ಲಿ ಅರ್ಹತೆ/ಪಾಂಡಿತ್ಯವಿರುವ ಸಮುದಾಯವೇ ಇಲ್ಲವಾಗಿ ದೇಶ ದುರ್ಬಲವಾಗುವುದು ಖಂಡಿತ. ಅದರ ಝಳ ಈಗಾಗಲೇ ಬಡಿಯಲಾರಂಭಿಸಿದೆ.


-ಡಾ. ವಸಂತಕುಮಾರ ಪೆರ್ಲ

22 views2 comments

2 commentaires


ಸಧ್ಯದ ಶಿಕ್ಷಣ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಲೇಖನ. ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವೆ ಉನ್ನತ ವಾದು ಅದನ್ನು ಮಕ್ಕಳು ದಕ್ಕಿಸಿಕೊಳ್ಳಬೇಕು,ಇಲ್ಲವೇ ಪಾಲಕರು ದಕ್ಕಿಸಬೇಕು. ಎನ್ನುವ ಸಮೂಹ ಸನ್ನಿಗೆ ಪಾಲಕರ ಮನಸ್ಥಿತಿ ಒಳಗಾಗಿದೆ. ಮಕ್ಕಳ ಮೇಲೂ ಒತ್ತಡ ಹೆಚ್ಚಿದೆ.

J'aime

ತುಂಬಾ ಉತ್ತಮ ಬರೆಹ. ಕೇಂದ್ರದ ಹೊಸ ಶಿಕ್ಷಣ ನೀತಿ ಬಹುಷಃ ಈ ದಿಶೆಯಲ್ಲಿ ಚಿಂತನೆ ನಡೆಸುತ್ತಿದೆ ಎಂಬುದಾಗಿ ಕೇಳಿದ್ದೇನೆ. ಶಿಕ್ಷಣ ನೀತಿಯ ಬದಲಾವಣೆಯಿಲ್ಲದೆ ದೇಶಕ್ಕೆ ಭವಿಷ್ಯವಿಲ್ಲ.

J'aime
bottom of page