ಶಬ್ದಸಾಮ್ರಾಜ್ಯ

ಅಬ್ಬ! ಎಂಥ ಗದ್ದಲ ಇಲ್ಲಿ

ಮಾತಿಗೆ ಅರ್ಥವೇ ಇಲ್ಲ

ಮಾತಿಗೆ ಮಾತು ಪ್ರತಿಮಾತು

ಮಥಿಸಿ ಕೈ ಕೈ

ಮಿಲಾಯಿಸಿ

ಸಮುದ್ರವನ್ನೇ ಕಡೆಯುತ್ತಿದ್ದಾರೆ ಇಲ್ಲಿ!


ಅವ್ವದಿರೇ ಎನ್ನನುಳಿಸಿ

ಅಕ್ಕಂದಿರೇ ಎನ್ನನುಳಿಸಿ

ಸಮುದ್ರದ ತಡಿಯಲೊಂದು

ಮನೆಯ ಮಾಡಿದ್ದೇನೆ

ಬೆಟ್ಟದ ಮೃಗಪಕ್ಷಿಗಳಿಂದ ಎನ್ನನುಳಿಸಿ!


ಭೋರ್ಗರೆವ ಮಳೆಗಾಳಿಯ ಸುಯ್ಲು

ಕೇಳದಾಗಿದೆ ಇಲ್ಲಿ

ಭೂಮಿಯೇ ಕಂಪಿಸುವ ಸದ್ದು


ಅಯ್ಯಾ ಎನ್ನ ಕಿವುಡನ ಮಾಡಯ್ಯ

ಅಯ್ಯಾ ಎನ್ನ ಕುರುಡನ ಮಾಡಯ್ಯ..


ಮಾತಿನಲ್ಲೇ ಬೆಳಗು ಬೈಗಾಗಿದೆ

ಇಳಿಯುತ್ತಿದೆ ಸಮುದ್ರ ಪಾತಾಳಕ್ಕೆ

ಸಿಡಿಯುತ್ತಿದೆ ಭೂಮಂಡಲ ನಭಕ್ಕೆ!


ನನ್ನ ಪುಟ್ಟ ಮನೆಯ ಕೆಡವಿದ ತಂದೆ

ಇನ್ನೆಲ್ಲಿ ಕಟ್ಟಲಿ ಗೂಡು

ಈ ಮರಳ ದಂಡೆಯಲ್ಲಿ!


-ಡಾ. ವಸಂತಕುಮಾರ ಪೆರ್ಲ

19 views0 comments