top of page

ವೀರತಪಸ್ವಿ ಪರಶುರಾಮ- ಡಿ.ಎಸ್. ಶ್ರೀಧರ( ಕಾದಂಬರಿ)




ಕನ್ನಡದಲ್ಲಿ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳ ಫಸಲು ಸಮೃದ್ಧವಾಗಿಯೇ ಇದ್ದರೂ ಪೌರಾಣಿಕ ಕಾದಂಬರಿಗಳಿಗೆ ಮಹತ್ವ ಬಂದಿದ್ದು ದೇವುಡು ನರಸಿಂಹ ಶಾಸ್ತ್ರಿಗಳಿಂದ. ಅವರ ಮಹಾಬ್ರಾಹ್ಮಣ, ಮಹಾಕ್ಷತ್ರಿಯ ಮತ್ತು ಮಹಾ ಮಾನವ ಈ ಮೂರು ಕಾದಂಬರಿಗಳು ಇಂದಿಗೂ ಓದುಗರ ಕೈಯಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಪೌರಾಣಿಕ ಕಾದಂಬರಿಗಳ ರಚನೆ ಸುಲಭವಾದದ್ದೇನೂ ಅಲ್ಲ. ಆಳವಾದ ಅಧ್ಯಯನವನ್ನು ಅದು ಅಪೇಕ್ಷಿಸುತ್ತದೆ. ಸಂಗಡ ಅದಕ್ಕೆ ಬೇಕಾದ ಪ್ರತ್ಯೇಕ ಶೈಲಿಯನ್ನೂ ಲೇಖಕ ಹೊಂದಿರಬೇಕಾಗುತ್ತದೆ. ಒಂದು ಕಥಾಭಾಗವಿದ್ದರೆ ಸಾಲದು, ಅದಕ್ಕೆ ಪೂರಕವಾದ ಸಾಹಿತ್ಯದ ವ್ಯಾಪಕವಾದ ಓದು ಬಹಳ ಮುಖ್ಯ.

ನಮ್ಮ ಪುರಾಣ ಪ್ರಪಂಚದಲ್ಲಿ ಪರಶುರಾಮ ಮತ್ತು ವಿಶ್ವಾಮಿತ್ರ ಇವರಿಬ್ಬರದೂ ವಿಶಿಷ್ಟ ವ್ಯಕ್ತಿತ್ವ. ಅವರಲ್ಲಿ ಕೆಲವು ಹೋಲಿಕೆಗಳೂ ಇವೆ. ಪರಶುರಾಮ ಬ್ರಾಹ್ಮಣನಾಗಿದ್ದವ ಪರಶುಗೊಡಲಿ/ ಶಸ್ತ್ರಾಸ್ತ್ರ ಹಿಡಿದು ಕ್ಷತ್ರಿಯರ ರೂಪ ತಾಳಿದರೆ , ವಿಶ್ವಾಮಿತ್ರ ಕ್ಷತ್ರಿಯನಾಗಿದ್ದವನು ಮಹಾಬ್ರಾಹ್ಮಣನಾಗಲು ಹೊರಟವನು. ಒಂದು ಬಗೆಯ ದ್ವಂದ್ವ ವ್ಯಕ್ತಿತ್ವ. ಪರಶುರಾಮನಂತೂ ನಾಲ್ಕೂ ಯುಗಗಳಿಗೆ ವ್ಯಾಪಿಸಿಕೊಂಡವನು.

ಸಾಮಾನ್ಯವಾಗಿ ಅವನು ತಂದೆ ಜಮದಗ್ನಿಯ ಮಾತಿಗೆ ಬದ್ಧನಾಗಿ ತಾಯಿಯ ತಲೆ ಕಡಿದನೆಂಬಷ್ಟು ಕತೆಯನ್ನು ಅರಿಯದವರಿಲ್ಲ. ಅದರಾಚೆಗಿರುವ ಕತೆ ಇನ್ನಷ್ಟು ರೋಚಕವಾದದ್ದು.

ಅಂತಹ ರೋಚಕ ಕತೆಯನ್ನು ತೆಗೆದುಕೊಂಡು ಡಿ. ಎಸ್. ಶ್ರೀಧರ ಅವರು ಈ ೩೦೦ ಪುಟಗಳ ಕಾದಂಬರಿ ಬರೆದಿದ್ದಾರೆ. ಇಂತಹ ಕೃತಿಗಳನ್ನು ಬರೆಯುವ ಎಲ್ಲ ಮೂಲಭೂತ ಅರ್ಹತೆಗಳೂ ಶ್ರೀಧರರಲ್ಲಿವೆ. ಅವರು ಯಕ್ಷಗಾನ ತಾಳಮದ್ದಳೆ ಅರ್ಥಧಾರಿ. ಪ್ರಸಂಗ ರಚಯಿತರು. ಕಲಾ ವಿಮರ್ಶಕರು. ಬಹುಶ್ರುತ ವಿದ್ವಾಂಸರು, ಪ್ರಾಧ್ಯಾಪಕರು, ಕವಿ/ಕತೆಗಾರ/ ಕಾದಂಬರಿಕಾರರು. ಪಾರ್ತಿ ಸುಬ್ಬ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾದವರು. ಇಂತಹ ಒಂದು ಸಶಕ್ತ ಕೃತಿರಚನೆಯ ಹಿಂದೆ ಬರೆಹಗಾರನ ಶ್ರಮ ಸಾಕಷ್ಟಿರುತ್ತದೆ. ಇರಬೇಕು ಕೂಡ. ಅಧ್ಯಯನವೊಂದೇ ಸಾಲದು. ಅದರಿಂದ ಹೊರಹೊಮ್ಮುವ ವಿಚಾರಗಳನ್ನೆಲ್ಲ ಕ್ರೋಡೀಕರಿಸಿ , ಅವಾಸ್ತವ ಅಂಶಗಳನ್ನೆಲ್ಲ ಸಾಧ್ಯವಾದಷ್ಟರ ಮಟ್ಟಿಗೆ ಬೇರ್ಪಡಿಸಿ, ಸುಸಂಬದ್ಧತೆಯನ್ನೂ ತಂದುಕೊಂಡು, ಕಥೆಯನ್ನು ಕಲಾತ್ಮಕವಾಗಿ ಹೇಳುವ ಕೆಲಸವನ್ನು ಮಾಡಬೇಕಾಗುತ್ತದೆ - ಅದೂ ಪೌರಾಣಿಕ ವಾತಾವರಣವನ್ನು ಕೆಡಿಸದಂತೆ. ಶ್ರೀಧರರಲ್ಲಿ ಅದಕ್ಕೆ ಬೇಕಾದ ಎಲ್ಲ ಸಾಮರ್ಥ್ಯವೂ ಇರುವುದರಿಂದ ಮತ್ತು ಈ ಕೃತಿ ರಚನೆಗಾಗಿ ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವುದರಿಂದ ಕಾದಂಬರಿಯನ್ನು ಓದುತ್ತಿದ್ದರೆ ವೀರತಪಸ್ವಿ ಪರಶುರಾಮ ಜೀವಂತ ನಮ್ಮೆದುರಿಗೆ ನಿಂತ ಅನುಭವವುಂಟಾಗುತ್ತದೆ. ಅಷ್ಟೊಂದು ತನ್ಮಯರಾಗಿ ನಾವು ಓದುವಂತೆ ಮಾಡುವುದು ಈ ಕೃತಿಯ ಹೆಚ್ಚುಗಾರಿಕೆ.

ಮಹಾವಿಷ್ಣುವಿನ ಆರನೆಯ ಅವತಾರವಾಗಿ ಜನ್ಮವೆತ್ತಿ ಬರುವ ರಾಮ ಮುಂದೆ ಪರಶುಧಾರಿಯಾಗಿ, ತಂದೆ ಜಮದಗ್ನಿಯ ಹತ್ಯೆಗೆ ಪ್ರತೀಕಾರ ರೂಪವಾಗಿ ಕ್ಷತ್ರಿಯ ಕುಲವನ್ನೇ ನಾಶ ಪಡಿಸುವ ಕಾರ್ಯಕ್ಕೆ ತೊಡಗುವುದು, ಸ್ವಸಾಮರ್ಥ್ಯದಿಂದ ಹೊಸ ಭೂಪ್ರದೇಶಗಳನ್ನೇ ಸೃಷ್ಟಿಸುವುದು, ಕೃತದಿಂದ ತ್ರೇತಾಯುಗಕ್ಕೆ ದಾಟಿ, ದಶರಥಪುತ್ರ ರಾಮನಿಗೆ ತನ್ನ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಏಳನೆಯ ಅವತಾರಕ್ಕೆ ತನ್ನ ಹೊಣೆಯನ್ನು ಒಪ್ಪಿಸಿ, ದ್ವಾಪರಾಯುಗದಲ್ಲಿ ಭೀಷ್ಮ, ದ್ರೋಣ, ಕರ್ಣರಿಗೆ ಗುರುವಾಗಿ, ದ್ರೋಣರ ಮೂಲಕ ದಿವ್ಯ ಶಸ್ತ್ರಾಸ್ತ್ರಗಳನ್ನೆಲ್ಲ ಅರ್ಜುನನ ಕೈಗೆ ತಲುಪುವಂತೆ ಮಾಡಿ ದುಷ್ಟ ಕೌರವರ ನಾಶಕ್ಕೆ ಪರೋಕ್ಷವಾಗಿ ನೆರವಾಗುವ ಪರಶುರಾಮನ ಸಾಹಸ ಮತ್ತು ಅವನ ಬದುಕಿನಲ್ಲಿ ಒಂದಾದ ಮೇಲೆ ಒಂದರಂತೆ ನಡೆಯುತ್ತ ಹೋಗುವ ಘಟನಾವಳಿಗಳು ಕಲ್ಪನಾತೀತ. ಅಷ್ಟೇ ಅಲ್ಲ, ರೋಮಾಂಚನಕಾರಿ. ಓದುಗರಾಗಿ ನಾವೂ ಅಷ್ಟೇ ವೇಗವಾಗಿ ಕತೆಯೊಂದಿಗೆ ಸಾಗುವುದಕ್ಕೆ ಕಾರಣ ನಿರೂಪಣೆಯ ಶೈಲಿ. ಕೊನೆಯ ಭಾಗದಲ್ಲಿ ಬರುವ ಪರಶುರಾಮ ಸೃಷ್ಟಿಯ ಭಾಗವಂತೂ ನಮ್ಮನ್ನು ಮೈಮರೆಸಿಬಿಡುತ್ತದೆ.

ಇಲ್ಲಿ ನಾನು ಕಥಾಭಾಗವನ್ನು ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ ಅದು ಓದಿಯೇ ಅನುಭವಿಸಬೇಕಾದ್ದು. ಆ ಓದಿನತ್ತ ಓದುವ ಆಸಕ್ತರನ್ನು ಕರೆದುಕೊಂಡೊಯ್ದು ಬಿಡುವ ಕೆಲಸವಷ್ಟೇ ನನ್ನದು. ತಪ್ಪದೇ ಪುಸ್ತಕ ತರಿಸಿಕೊಂಡು ಓದಿ ಎಂದು ಸಾಹಿತ್ಯಾಸಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇಂತಹ ಅಪೂರ್ವ ಕೃತಿಯನ್ನು ಕೊಟ್ಟ ಡಿ. ಎಸ್. ಶ್ರೀಧರ ಅವರನ್ನು ಮನಸಾ ಅಭಿನಂದಿಸುತ್ತಿದ್ದೇನೆ.

- ಎಲ್. ಎಸ್. ಶಾಸ್ತ್ರಿ


ಕೃತಿ ವಿವರ: ಸಾಹಿತ್ಯ ಭಂಡಾರ ಪ್ರಕಾಶನ, ಬೆಂಗಳೂರು . ಮೊ. ನಂ. 9481604435

ಪುಟಗಳು: ೩೦೪

ಬೆಲೆ: ೩೭೫/-ರೂ.

ಕೃತಿಕಾರರು : ಶ್ರೀಧರ್ ಡಿ. ಎಸ್.

ಮೊ. ನಂ. 7760647383



ನಮ್ಮ ನಡುವಿನ ದಣಿವರಿಯದ ಹಿರಿಯ ಬರಹಗಾರ ಶ್ರೀ ಎಲ್.ಎಸ್.ಶಾಸ್ತ್ರಿ ಅವರು ಬುಕ್ ಫೇಸ್ ಎಂಬ ಹೆಸರಿನಲ್ಲಿ ಪುಸ್ತಕಗಳ ಪರಿಚಯವನ್ನು ಅತ್ಯಂತ ಶೃದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಡಿ.ಎಸ್.ಶ್ರೀಧರ ಅವರ "ವೀರತಪಸ್ವಿ ಪರಶುರಾಮ" ಎಂಬ ಪೌರಾಣಿಕ ಕಾದಂಬರಿಯ ಪರಿಚಯ ನಿಮ್ಮ ಓದು ಮತ್ತು ಸಹ ಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

18 views0 comments

Comments


bottom of page