ಆರೋಗ್ಯವೆಂದರೇನು ಎಂದು ತಿಳಿದುಕೊಂಡ ಮೇಲೆ ವೈಯಕ್ತಿಕ ನೈರ್ಮಲ್ಯತೆಯ ಬಗ್ಗೆ ತಿಳಿದುಕೊಳ್ಳೋಣ.
ಅಂದರೆ ದೇಹವನ್ನು ಸ್ವಚ್ಛಗೊಳಿಸುವುದರಿಂದ ದೇಹದ ಕೊಳೆ ಮತ್ತು ಬೆವರು ಇತ್ಯಾದಿ ಹೋಗುತ್ತದೆ.
ದಿವಸಕ್ಕೆ ಕನಿಷ್ಠ ಪಕ್ಷ 1 ಸಾರಿಯಾದರೂ ಸ್ನಾನ ಮಾಡಬೇಕು. ಅವಶ್ಯಕತೆ ಇದ್ದರೆ 2 ಸಾರಿಯೂ ಮಾಡಬಹುದು. ಸ್ನಾನಕ್ಕೆ ಸ್ವಚ್ಛ ನೀರು, ಸೋಪ್ ಮತ್ತು ಮೈತಿಕ್ಕಲು ಮೃದುವಾದ ಬ್ರಷ್ ಇದ್ದರೆ ಉತ್ತಮ.
ಸ್ನಾನ ಮಾಡಿದ ನಂತರ ಮೈ ಹಗುರವಾಗಿ ಮನಸ್ಸು ಉಲ್ಲಾಸವಾಗುತ್ತದೆ. (ಸ್ಥಳಾವಕಾಶದ ಅಭಾವದಿಂದ
ಕಿವಿ, ಮೂಗು, ಕಣ್ಣು ಇತ್ಯಾದಿ ಅಂಗಗಳ ಸ್ವಚ್ಛತೆಯ ಬಗ್ಗೆ ಇಲ್ಲಿ ವಿವರಿಸಲಾಗುತ್ತಿಲ್ಲ.)
ಬಾಯಿಯ ನೈರ್ಮಲ್ಯತೆ (Oral Hygiene)
ವೈಯಕ್ತಿಕ ನೈರ್ಮಲ್ಯತೆಯು ಬಹು ಮುಖ್ಯ ಅಂಗ.
ಬಾಯಿಯ ನೈರ್ಮಲ್ಯತೆ ಎಂದರೆ, ದಂತಗಳ, ವಸಡುಗಳ ಮತ್ತು ನಾಲಿಗೆಯ ನೈರ್ಮಲ್ಯತೆ. 1 ಲಕ್ಷ ಭಾರತೀಯರಲ್ಲಿ ಸರಿಸುಮಾರು 65% ಜನರಲ್ಲಿ ಹುಳುಕು ಹಲ್ಲು ಇರುವುದು ಕಂಡು ಬಂದಿದೆ.
ದಂತಗಳ ನೈರ್ಮಲ್ಯತೆ :
ದಂತಗಳ ಸ್ವಚ್ಛತೆಗೆ ಮೊದಲು ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಿ ಉಗಿಯಬೇಕು.
ದಂತಗಳನ್ನು ಹೇಗೆ ಬ್ರಷ್ ಮಾಡಬೇಕು?
ಟೂತ್ ಬ್ರಷ್‍ನ್ನು ಸ್ವಚ್ಛ ನೀರಿನಿಂದ ತೊಳೆದು, ಬ್ರಷ್ ಮೇಲೆ ಟೂತ್ ಪೇಸ್ಟ್‍ನ್ನು ಹಾಕಿ ಬೆರಳಿನಿಂದ ತಟ್ಟಬೇಕು, ನಂತರ ಎರಡು ಸಾಲಿನ ಹಲ್ಲುಗಳ ಹೊರಗೆ, ಒಳಗೆ ಬ್ರಷ್‍ನಿಂದ ಪೇಸ್ಟ್ ಅನ್ನು ಹಚ್ಚಬೇಕು.
ಬ್ರಷ್‍ನಿಂದ ಮೇಲಿನ ಸಾಲಿನ ಹಲ್ಲುಗಳನ್ನು ಕೆಳಮುಖವಾಗಿಯೂ, ಕೆಳಗಿನ ಸಾಲಿನ ಹಲ್ಲುಗಳನ್ನು ಮೇಲ್ ಮುಖವಾಗಿಯೂ ಉಜ್ಜಬೇಕು. ಅದೇ ರೀತಿ ದವಡೆ ಹಲ್ಲುಗಳ ಒಳಭಾಗವನ್ನೂ ವೃತ್ತಾಕಾರವಾಗಿ ಬ್ರಷ್‍ನಿಂದ ಉಜ್ಜು ಸ್ವಚ್ಛಮಾಡಬೇಕು.
ಮೇಲ್ ಸಾಲಿನ ಹಲ್ಲುಗಳನ್ನು ಬ್ರಷ್ ಮಾಡುವಾಗ ಕೆಳಸಾಲಿನ ಹಲ್ಲುಗಳಿಗೂ, ಕೆಳಗಿನ ಸಾಲು ಬ್ರಷ್ ಮಾಡುವಾಗ ಮೇಲಿನ ಸಾಲಿನ ಹಲ್ಲುಗಳಿಗೂ ಬ್ರಷ್ ತಾಗಬಾರದು. ತಾಗಿದರೆ ಹಲ್ಲುಗಳಿಗೆ ಹೊಡೆತ ಬೀಳುತ್ತದೆ. ಅದರ ಬದಲು ದವಡೆ ಹಲ್ಲುಗಳ ಒಳಭಾಗಗಳನ್ನು (Opposing Surfaces) ಬ್ಯಾಟರಿ ಚಾಲಿತ ಟೂತ್ ಬ್ರಷ್ ನಿಂದ ಸ್ವಚ್ಛ ಮಾಡಬಹುದು. ಬ್ರಷ್ ಮಾಡಿದ ನಂತರ ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಿ(Gargle) ಉಗಳಬೇಕು.
ಮಕ್ಕಳು ಬ್ರಷ್ ಮಾಡಿದ ನಂತರ ಪೇಸ್ಟ್ ಅನ್ನು ನುಂಗದಂತೆ ಅಭ್ಯಾಸ ಮಾಡಿಸಬೇಕು.
ನಾಲಿಗೆಯನ್ನ ಹೇಗೆ ಸ್ವಚ್ಛ ಮಾಡಬೇಕು?
ಟೂತ್ ಬ್ರಷ್‍ನ ಮೂಂದಿನ ಭಾಗದ ಹಿಂದಿನಿಂದ ಸ್ವಚ್ಛ ಮಾಡಬಹುದು ಅಥವ ಟೂತ್ ಬ್ರಷ್ ನಿಂದಲೇ ಮೃದುವಾಗಿ ತಿಕ್ಕಿ ಸ್ವಚ್ಛ ಮಾಡಬಹುದು.
ಯಾವ ಟೂತ್ ಪೇಸ್ಟ್ ಉಪಯೋಗಿಸಬೇಕು
ಫ್ಲೋರೈಡ್‍ಯುಕ್ತ ಟೂತ್ ಪೇಸ್ಟ್ ಒಳ್ಳೆಯದು.
ಹತ್ತು ವರ್ಷದ ಒಳಗಿನ ಮಕ್ಕಳು ಜೆಲ್ ಮಾದರಿ ಟೂತ್ ಪೇಸ್ಟ್ ಉಪಯೋಗಿಸಬಾರದು.
ಮಕ್ಕಳ ಟೂತ್ ಬ್ರಷ್ ಮೇಲೆ 1 ಬಟಾಣಿ ಗಾತ್ರದಷ್ಟು ಟೂತ್ ಪೇಸ್ಟ್ ಸಾಕು. ಮಕ್ಕಳಿಗೆ ಪ್ರಾರಂಭದಿಂದಲೇ ಸರಿಯಾಗಿ ಹಲ್ಲುಗಳನ್ನು ಹೇಗೆ ಬ್ರಷ್ ಮಾಡಬೇಕೆಂದು ಕಲಿಸಬೇಕು.
ಯಾವ ಮಾದರಿ ಟೂತ್ ಬ್ರಷ್ ಯಪಯೋಗಿಸಬೇಕು ?
ಮಕ್ಕಳು ಕಿಡ್ ಬ್ರಷ್ (Kid Brush-Junior) ಉಪಯೋಗಿಸಿಬೇಕು.
ದೊಡ್ಡವರು ಮೃದುವಾದ (Soft) ಅಥವ ಸಾಧಾರಣ (Medium) ಬ್ರಷ್ ಅನ್ನು ಉಪಯೋಸಬೇಕು.
ಯಾವುದೇ ಕಾರಣಕ್ಕೂ ಗಡಸು (Hard) ಬ್ರಷ್ ಅನ್ನು ಉಪಯೋಗಿಸಬಾರದು. ಅದರಿಂದ ವಸಡುಗಳಿಗೆ ಮತ್ತು ದಂತಗಳಿಗೆ (Enamel) ಗೆ ಅಪಾಯ.
ಟೂತ್ ಬ್ರಷ್ ಅನ್ನು ಯಾವ ರೀತಿ ಸ್ವಚ್ಛ ಮಾಡಬೇಕು?
ಬ್ರಷ್ ಮಾಡುವ ಮೊದಲು ಹರಿಯುವ ನೀರಿನಿಂದ (ನಲ್ಲಿ ನೀರಿನಿಂದ) ಅಥವ ಮಗ್ (Mug) ನಿಂದ ನೀರು ಸುರಿದು ಸ್ವಚ್ಛ ಮಾಡಬೇಕು. ಬ್ರಷ್ ಮಾಡಿದ ನಂತರವೂ ಬ್ರಷ್‍ನ ಸ್ವಚ್ಛತೆ ಬಹಳ ಮುಖ್ಯ. ಏಕೆಂದರೆ ಬ್ರಷ್ ನಲ್ಲಿ ಟೂತ್ ಪೇಸ್ಟ್‍ನ ತುಣುಕುಗಳು ಉಳಿದರೆ ಬಾತ್‍ರೂಂನಲ್ಲಿ ಹಲ್ಲಿಗಳು ಅಥವ ಜಿರಲೆಗಳು ಬಂದು ತಿನ್ನುವ ಸಾಧ್ಯತೆ ಇರುತ್ತದೆ. (ಗ್ರಾಮೀಣ ವಿಭಾಗದಲ್ಲಿ ಇದರ ಸಾಧ್ಯತೆ ಹೆಚ್ಚು).
ಟೂತ್ ಬ್ರಷ್ ಅನ್ನು ಯಾವಾಗಲೂ ತಣ್ಣೀರಿನಿಂದ ತೊಳೆಯಬೇಕು. ಬಿಸಿನೀರಿನಿಂದ ತೊಳೆದರೆ, ಟೂತ್
ಬ್ರಷ್ ಬಹು ಬೇಗ ಮೃದುವಾಗಿ ಚಪ್ಪಟೆಯಾಗುತ್ತದೆ (ಅದೇ ರೀತಿ ಗಂಡಸರು ಶೇವಿಂಗ್ ಬ್ರಷ್ ಅನ್ನು ಬಿಸಿನೀರಿನಿಂದ ತೊಳಯರಬಾರದು. ಅದೂ ಬೇಗನೆ ಚಪ್ಪಟೆಯಾಗುತ್ತದೆ.)
ದಿನಕ್ಕೆ ಎಷ್ಟು ಸಾರಿ ಬ್ರಷ್ ಮಾಡಬೇಕು?
ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಊಟವಾದ ನಂತರ (ಒಟ್ಟು 2ಸಾರಿ) ಬ್ರಷ್ ಮಾಡಬೇಕು. ನಿಜವಾಗಿ ಹೇಳುವುದಾದರೆ, ಈ 2 ಸಾರಿ ಅಲ್ಲದೆ ಮಧ್ಯೆ ಯಾವ ಯಾವಾಗ ತಿಂದರೂ ಬ್ರಷ್ ಮಾಡಬೇಕು , ಇದು ಸಾಧ್ಯವಾಗದಿದ್ದರೆ, ಕನಿಷ್ಠ ಪ್ರತಿ ಬಾರಿಯೂ ಬಾಯಿಯನ್ನು ಮುಕ್ಕಳಿಸಬೇಕು (Gargle). ರಾತ್ರಿ ಊಟ ಮಾಡಿ ಬ್ರಷ್ ಮಾಡಿದ ನಂತರ ಮತ್ತೇನನ್ನು ತಿನ್ನುವದಾಗಲಿ, ಕುಡುಯುವುದಾಗಲಿ (ನೀರನ್ನು ಹೊರತುಪಡಿಸಿ) ಮಾಡಬಾರದು.
ಎಷ್ಟು ಸಮಯದ ವರೆಗೆ ಬ್ರಷ್ ಮಾಡಬೇಕು?
ಸುಮಾರು ಒಂದು ಸಾರಿಗೆ 2-3 ನಿಮಿಷಗಳವರೆಗೆ ಮಾಡಬೇಕು.
ಒಂದು ಬ್ರಷ್ ಅನ್ನು ಯಾವಾಗ ಬದಲಿಸಬೇಕು?
3 ತಿಂಗಳಿಗೊಮ್ಮೆ ಬದಲಿಸಬೇಕು.
(ಚಪ್ಪಟೆಯಾದ ಬ್ರಷ್ ಅನ್ನು ಉಪಯೋಗಿಸಬಾರದು. ಒಬ್ಬರು ಉಪಯೋಗಿಸುವ ಬ್ರಷ್ ಅನ್ನು ಇನ್ನೊಬ್ಬರು ಉಪಯೋಗಿಸಬಾರದು. ಇದು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.)
ವಸಡುಗಳ ಸ್ವಚ್ಛತೆ ಹೇಗೆ?
ಹಲ್ಲುಗಳನ್ನು ಬ್ರಷ್ ಮಾಡಿದ ನಂತರ ವಸಡುಗಳ ಮೇಲೆ ತೋರ್ ಬೆರಳಿನಿಂದ (Fore Finger) ನಿಂದ ಮೃದುವಾಗಿ ಉಜ್ಜಬೇಕು. ಯಾವುದೇ ಕಾರಣಕ್ಕೂ ವಸಡುಗಳ ಮೇಲೆ ಟೂತ್ ಬ್ರಷ್ ಅನ್ನು ಆಡಿಸಬಾರದು. ವಸಡುಗಳು ಬೇಗನೆ ಸವೆದು ಹಲ್ಲುಗಳು ಬೇಗನೆ ಬೇರು ಬಿಟ್ಟುಕೊಳ್ಳುತ್ತದೆ. ಬೆರಳಿನಿಂದ ಉಜ್ಜುವುದರಿಂದ ವಸಡುಗಳ ಸ್ವಚ್ಛತೆ ಆಗುತ್ತದೆ ಮತ್ತು ವಸಡುಗಳಿಗೆ ಸರಿಯಾದ ರಕ್ತ ಪರಿಚಲನೆ ಆಗಿ, ವಸಡುಗಳು ಸದೃಢವಾಗುತ್ತದೆ. ಬಾಯಿ ವಾಸನೆಯನ್ನು ತಡೆಯುತ್ತದೆ.
ಫ್ಲಾಸಿಂಗ್ (Flossing) ಎಂದರೇನು?
ಬ್ರಷ್ ಮಾಡಿದ ನಂತರವೂ ಹಲ್ಲುಗಳ ಸಂದುಗಳು ಸಂಪೂರ್ಣ ಸ್ವಚ್ಛವಾಗುವುದಿಲ್ಲ. ಆದರಿಂದ Flos, (ವಿಶೇಷವಾದ ದಾರ, ಮೆಡಿಕಲ್ ಸ್ಟೋರ್‍ಗಳಲ್ಲಿ ದೊರೆಯುತ್ತದೆ) ನಿಂದ ಹಲ್ಲುಗಳ ಸಂದುಗಳನ್ನು, ಹಲ್ಲುಗಳ ಹೊರಭಾಗವನ್ನು ಸ್ವಚ್ಛ ಮಾಡಬೇಕು. Flossing ಮಾಡದಿದ್ದರೆ 40% ಸ್ವಚ್ಛತೆಯನ್ನು ಮಾಡಿದ ಹಾಗೆ ಆಗುವುದಿಲ್ಲ.
ದಂತಗಳ ಸ್ವಚ್ಛತೆ ಹೇಗೆ ಹಾಳಾಗುತ್ತದೆ?
1. ಮೇಲೆ ತಿಳಿಸಿದಂತೆ ಕ್ರಮಬದ್ದವಾಗಿ ಬ್ರಷ್ ಮಾಡದಿರುವುದು.
2. ಸಿಗರೇಟ್ ಸೇವನೆ ಮತ್ತು ದಿವಸಕ್ಕೆ 3-4 ಗ್ಲಾಸ್ ಸೋಡ ಸೇವಿಸುವುದರಿಂದ, ಹಲ್ಲಿನ ಗಟ್ಟಯಾದ ಹೊರಭಾಗ (Enamel) ಹಾಳಾಗುತ್ತದೆ.
ದಂತಗಳ ಅನಾರೋಗ್ಯದಿಂದ ಯಾವ ತೊಂದರೆಯಾಗುತ್ತದೆ?
ದಂತಗಳ ಅನಾರೋಗ್ಯದಿಂದ ನ್ಯುಮೋನಿಯಾ (Pneumonia- ಶ್ವಾಸಕೋಶದ ಕಾಯಿಲೆ)
ಹೃದಯದ ಕಾಯಿಲೆ ಮತ್ತು ದಿನ ತುಂಬುವ ಮೊದಲೇ ಮಗು ಹುಟ್ಟುವುದು (Premature Delivery) ಮತ್ತು ಕಡಿಮೆ ತೂಕವಿರುವ ಮಗು ಹುಟ್ಟುವುದು (Low Birth Weight)
ಸಾಧ್ಯತೆ ಇರುತ್ತದೆ.
ಟೇಕ್ ಹೋಮ್ ಮೆಸೇಜ್
ಬ್ರೇಕ್ ತೆಗೆದುಕೊಂಡು ಅನುಸರಿಸಬೇಕಾದ ಕ್ರಮಗಳು :
(ಅಂತಿಮವಾಗಿ ಕೆಲವು ಮುಖ್ಯ ಸಲಹೆಗಳು – ಮನಸ್ಸಿಗೆ ತೆಗೆದುಕೊಂಡು ಅನುಸರಿಸಬೇಕಾದ ಸಲಹೆಗಳು)
ಮೇಲೆ ತಿಳಿಸಿದಂತೆ ಬಾಯಿಯ ಆರೋಗ್ಯವು ಸಂಪೂರ್ಣ ಆರೋಗ್ಯಕ್ಕೆ ಒಂದು ಕಿಂಡಿ ಇದ್ದಂತೆ.
ಪ್ರತಿನಿತ್ಯ ತಪ್ಪದೇ 2 ಸಾರಿ ಬ್ರಷ್ ಮಾಡಿ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು.
40-45 ವರ್ಷದ ವಯಸ್ಸಿನವರು ಪ್ರತಿ 6 ರಿಂದ 12 ತಿಂಗಳಿಗೊಮ್ಮೆ ದಂತ ವೈದ್ಯರಿಂದ ಪರೀಕ್ಷೆ ಅವಶ್ಯಕ. ( ಅಲ್ಲದೇ ಅವಶ್ಯಕತೆ ಇದ್ದಾಗಲೆಲ್ಲಾ ದಂತ ವೈದ್ಯರ ಸಲಹೆ ಪಡೆಯಬೇಕು.)
ನಮ್ಮ ಬಾಯಿಯಿಂದ ದುರ್ವಾಸನೆ ಬರಬಾರದು ಮತ್ತು ಬಾಯಿ ಬಿಟ್ಟಾಗ ಹಲ್ಲುಗಳು ಹೊಳೆಯುತ್ತಿರಬೇಕು.
ಯಾವುದೇ ಸಾಮಾಜಿಕ ಕಾರ್ಯಕ್ರಮ ಇದ್ದರೆ, ಯಾರನ್ನೇ ಭೇಟಿಯಾಗಬೇಕಿದ್ದರೆ, ವೈದ್ಯರ ಜೊತೆ ಸಮಾಲೋಚನೆ (Consultancy) ಇದ್ದರೆ, ಬಾಯಿಯನ್ನು ಸ್ವಚ್ಛಗೊಳಿಸಿಕೊಂಡು ಹಲ್ಲನ್ನು ಬ್ರಷ್ ಮಾಡಿಕೊಂಡು ಹೋಗುವುದು ಉತ್ತಮ.
ಡಾ.ಕೆ.ಪಿ.ದಾಮೋದರ

ಡಾ.ಕೆ.ಪಿ.ದಾಮೋದರ ಎಂ.ಬಿ.ಬಿ.ಎಸ್.,ಎಂ.ಡಿ.,ಡಿ.ಜಿ.ಒ.,ಎಂ.ಎಸ್.ಸಿ(ಯೋಗ)
ಅವರು ನಮ್ಮ ನಡುವಿನ ಪ್ರಜ್ಞಾವಂತ ಮತ್ತು ಮಾನವೀಯತೆಯ ಸಾಕಾರವೆ ಆಗಿದ್ದಾರೆ.ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿ,ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ನಮ್ಮ ಆಲೋಚನಾ ವೇದಿಕೆಯ ಗೌರವ ಸಲಹಗಾರರು.ಬೆಂಗಳೂರು ಬ್ಲಡ್ ಬ್ಯಾಂಕ ಮಲ್ಲೇಶ್ವರಂ ಇದರ ವೈದ್ಯಾಧಿಕಾರಿಗಳಾಗಿ,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿವೃತ್ತಿಯ ನಂತರ ಆರೋಗ್ಯ ಶಿಕ್ಷಣ ನೀಡುವಲ್ಲಿ,ಸಮಾಜ ಸೇವಾಕಾರ್ಯದಲ್ಲಿ ಆಸಕ್ತರಾಗಿರುವ ಅವರು ಯೋಗ ವಿಜ್ಞಾನದಲ್ಲಿ ಎಂ.ಎಸ್.ಸಿ. ಪದವಿಯನ್ನು ಪಡೆದು ಕಲಿಕೆಗೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಅನನ್ಯ ಸಾಧಕರು.
Comments