top of page

ವಿಮರ್ಶಕ ಜಿ.ಎಸ್.ಆಮೂರ

ಅಮೂರರು ಜನಿಸಿದ್ದು ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿ ಯಲ್ಲಿ ೧೯೨೫ ರ ಮೇ ೮ ರಂದು. ಪದವಿ ಪಡೆದು ಗದಗ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಸ್ನಾತಕೋತ್ತರ ಪದವಿ , ಪಿ. ಎಚ್.ಡಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ , ಆ ಮೇಲೆ ಔರಂಗಾಬಾದ ಮರಾಠವಾಡಾ ವಿ.ವಿ. ಪ್ರೊಫೆಸರ್ ಆಗಿ ೧೯೮೮ ರಲ್ಲಿ ನಿವೃತ್ತರಾದರು. ಅಮೆರಿಕ ಇಂಗ್ಂಡ್ ಫೆಲೋಶಿಪ್ ಪ್ರವಾಸವನ್ನೂ ಅವರು ಮಾಡಿದ್ದರು.

ಅಮೆರಿಕೆಯ ವಿದ್ವಾಂಸ ಪೀಟರ್ ನಜರತ್ ಅವರು ಅಮೂರರನ್ನು "ಭಾರತದ ಪ್ರಥಮ ದರ್ಜೆಯ ವಿಮರ್ಶಕ"ರೆಂದು ಪ್ರಶಂಸಿಸಿದ್ದಾರೆ. ಆದರ್ಶ ಪ್ರಾಧ್ಯಾಪಕರೆನಿಸಿಕೊಂಡ ಅವರು ತಮ್ಮ ವೃತ್ತಿಯ ಜೊತೆಗೇ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ವ್ಯಾಪಕ ಅಧ್ಯಯನ ನಡೆಸುತ್ತ ಐವತ್ತಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ರಚಿಸಿದರು. ಅವರ ಮುಖ್ಯ ಒಲವು ವಿಮರ್ಶೆಯ ಕಡೆಗೇ ಇತ್ತು. ಅವರ ಪಿಎಚ್ಡಿ ಪ್ರಬಂಧದ ವಿಷಯ " The Concept Of Comedy". ಡಾ. ದ. ರಾ. ಬೇಂದ್ರೆಯವರ ಕುರಿತು ಅವರು ಬರೆದ " ಭುವನದ ಭಾಗ್ಯ" ಕೃತಿಗೆ ೧೯೯೭ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಕನ್ನಡ ಕಾದಂಬರಿಯ ಬೆಳವಣಿಗೆ , ಕನ್ನಡ

ಕಥನ ಸಾಹಿತ್ಯ: ಕಾದಂಬರಿಗಳು, ಕಾದಂಬರಿಯ ಸ್ವರೂಪ : ಹೊಸ ಚಿಂತನೆ, ಅರ್ಥಲೋಕ, ಸಮಕಾಲೀನ ಕಥೆ ಕಾದಂಬರಿ: ಹೊಸ ಪ್ರಯೋಗಗಳು, ಸಾತ್ವಿಕ ಪಥ, ಕೃತಿ ಪರೀಕ್ಷೆ, ಬೇಂದ್ರೆ ಕಾವ್ಯದ ಪ್ರತಿಮಾ ಲೋಕ ಮೊದಲಾದ ಅವರ ಗ್ರಂಥಗಳು ಕನ್ನಡ ವಿಮರ್ಶಾ ಕ್ಷೇತ್ರದ ಉಚ್ಚ ಮಾದರಿಯ ಕೃತಿಗಳೆನಿಸಿವೆ. ನವೋದಯ ಮತ್ತು ನವ್ಯ ಕಾಲದ ಹೆಚ್ಚಿನ ಎಲ್ಲ ಮಹತ್ವದ ಕೃತಿಗಳನ್ನು ಅವರು ಅವಲೋಕಿಸಿ ಅವುಗಳ ಬಗ್ಗೆ ಬರೆದಿದ್ದಾರೆ. ಕುವೆಂಪು, ಗೋಕಾಕ, ಭೂಸನೂರಮಠರ ಮಹಾಕಾವ್ಯಗಳ ಕುರಿತು ದೀರ್ಘ ಲೇಖನ ಬರೆದಿದ್ದಾರೆ. ಮಿಲ್ಟನ್, ಬೇಂದ್ರೆ, ಶ್ರೀರಂಗ, ಅನಕೃ ಮೊದಲಾದವರ ಜೀವನ ಚರಿತ್ತೆ ರಚಿಸಿದ್ದಾರೆ. ಸಂಗಡ ಅವರು ಕೆಲವು ಸಣ್ಣ ಕಥೆಗಳನ್ನೂ ಬರೆದಿದ್ದುಂಟು. ಹದಿನೈದಕ್ಕೂ ಹೆಚ್ಚು ಇಂಗ್ಲಿಷ್ ಕೃತಿಗಳು ಅವರಿಂದ ಬರೆಯಲ್ಪಟ್ಟಿವೆ. ಸೈದ್ಧಾಂತಿಕ ವಿಮರ್ಶೆಗೊಂದು ಘನತೆ ತಂದುಕೊಟ್ಟ ಅವರು ವಿಮರ್ಶೆ ಹೇಗಿರಬೇಕು ಎನ್ನುವದಕ್ಕೆ ಅನುಕರಣೀಯ ಉಚ್ಚ ಮಾದರಿಯೆನಿಸಿದ್ದರು. ಆದ್ದರಿಂದಲೇ ಸಾಹಿತ್ಯ ವಲಯದಲ್ಲಿ ಅವರು ವಿವಾದಾತೀತರೂ, ಗೌರವಾನ್ವಿತರೂ ಆಗಿದ್ದರು.

ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದ ಜಿ. ಎಸ್. ಅಮೂರ ಅವರು ಇದೇ ವರ್ಷ ೨೦೨೦ ಸೆಪ್ಟೆಂಬರ್ ೨೮ ರಂದು ನಿಧನ ಹೊಂದಿದರು.

- ಎಲ್. ಎಸ್. ಶಾಸ್ತ್ರಿ

7 views0 comments

Comments


bottom of page