ಕೈಕಾಲು ಮೂಗು ಬಾಯಿ ಕಟ್ಟಿ ಕತ್ತಲೆಯ
ಕಾವಳದಲ್ಲಿ ಕೊಳೆಹಾಕಿದ ಎರಡುಸಾಸಿರದ ಇಪ್ಪತ್ತು
ಕರಗಿ ಹೋಯಿತು ನಗೆ ನಲಿವು ನಲಿದಾಟ
ಇದ್ದದ್ದು ಇದ್ದಲ್ಲೆ ಇಂಗಿ ಉತ್ಸಹವು ಕುಂದಿ
ಸಾವಿನ ಮನೆಯಲ್ಲಿ ಸ್ಕೋರುಗಳ ಭರಾಟೆ
ಶಂಕಿತರು ಸೋಂಕಿತರು ಕೋವಿಡ್ ಪೀಡಿತರು
ಭಯದ ಮುಸುಕಿನೊಳಗೆ ಚಿಗುರದ ಬದುಕು
ಘಟ್ಟ ಹತ್ತಿದರು ಮುತ್ತುಗನಿಗೆ ಮೂರೇ ಎಲೆ
ಜೀವ ಕೈಯೊಳು ಹಿಡಿದು ಅವಿತು ಕುಳಿತವಗೆ
ಹಾವು ಲಿಂಬೆಯ ಹಣ್ಣಾಗಿ ಬಂದು ಸಾವನು ತಂದ
ಪರಿಕ್ಷಿತನ ಕತೆ ವ್ಯಥೆಯ ಒಡಲಲ್ಲಿ ಕಮರಿದ ಬಾಳು
ಮನೆ ಮಾರು ತೋಟ ಪಟ್ಟಿ ಕ್ರಷಿ ಕೂಲಿ ಹಾಳು
ಹೊಟ್ಟೆಗಾಗಿ ದಂದೆ ಮಾಡಿ ಕೂಳುಂಬವರ ಗೋಳು
ರಾಜ ರಂಕ ಬಡವ ಬಲ್ಲಿದರೆಲ್ಲರು ಭಯಗ್ರಸ್ತರು
ಮೀನು ಹಿಡಿಯದೆ ಅನ್ನವಿಲ್ಲದ ಬಡ ಬೆಸ್ತರು
ಆಸ್ಪತ್ರೆಗಳಲ್ಲಿ ಸಾವಿನ ಮೇಜವಾನಿ
ದಿನದಿಂದ ದಿನಕ್ಕೆ ಏರುವ ಸಾವಿನ ಜೋರು
ಹಿರಿಯರು ಕಿರಿಯರು ಗಂಡಸರು ಹೆಂಗಸರು
ಭೇದ ಭಾವ ಮಾಡದೆ ಕೊಂಡೊಯ್ದ ಕೊರೊನಾ
ಜವರಾಯ ಬಂದರೆ ಬರಿ ಕೈಲಿ ಬರಲಿಲ್ಲ
ಕುಡುಗೋಲು ಕಂಬಳಿಯ ಹೆಗಲೇರಿ
ಒಳ್ಳೊಳ್ಳೆ ಮರನ ಕಡಿ ಬಂದ
ಫಲ ಬಿಟ್ಟ ಮರನ ಕಡಿ ಬಂದ
ಕಡಿದದ್ದು ಬಡಿದದ್ದು ಹೀರಿದ್ದು ಹಿರಿದದ್ದು ಉಂಡಿದ್ದು
ಕಾರಿದ್ದು ಲೆಕ್ಕವಿಡುವ ಯಮ ಯಾತನೆ
ಎಷ್ಟೆಲ್ಲ ಕಳೆದು ದು:ಖ ದುಗುಡುಗಳೆ ಉಳಿದು
ಚಿಂತೆ ನೋವಿನ ಗಂಟು ಮೂಟೆಯ ಕಟ್ಟಿಟ್ಟು
ಹೊರಟು ಬಿಟ್ಟಿ ನೀನು ಉಳಿಸಿ ಕಣ್ಣೀರನು
ಸಂಭ್ರಮಾಚರಣೆಯ ಆಸೆ ಕಮರಿ ಬೆಂಕಿ ಬಿದ್ದಿದೆ
ಒಡಲಿಗೆ ಹೆತ್ತ ತಾಯಿಯ ಮಡಿಲಿಗೆ
ಎಲ್ಲೆಲ್ಲು ನಿನ್ನದೆ ಸುದ್ದಿ ಹದ್ದು ಮೀರಿದೆ
ಹದ್ದು ಹಾರಿದೆ ಭಾವ ಬರಿದಾಗಿದೆ
ಹೊಸ ವರುಷವ ಕರೆವ ಖುಷಿ ಬತ್ತಿ ಹೋಗಿ
ಸಾವಿನ ಬೀಜವ ಬಿತ್ತಿ ಸಾವನೆ ಬೆಳೆದ
ಕೊರೋನಾ ಹಾವು ಕತ್ತಿಗೆ ತೆಕ್ಕೆ ಬಿದ್ದು ಉಸಿರುಗಟ್ಟಿ
ಸಾವ ಬಿಡಿಸಿಕೊಂಡು ಬಂದವನು ನಾನು
ಎರಡು ಸಾವಿರದ ಇಪ್ಪತ್ತೊಂದು ಬಂದು
ಹಸನಾಗಲಿ ಹಸಿರಾಗಲಿ ಜನ ಮನದ ಜೀವನ
ಇಂತಹ ಬೇಗುದಿಯಲ್ಲಿ ಹುಟ್ಟುವುದೆ ಕವನ!
ಮುಗಿಸಿ ಹೊರಟೆ ನೀನು ಕೈಗೆ ಗೆರಟೆ ಕೊಟ್ಟು
ಹೋಗು ಮತ್ತೆ ಮರಳದಿರಲಿ ಇಂಥ ವರುಷ
ಕಸಿದು ಕೊಂಡಿತು ಜೀವಜಾತದ ಹರುಷವ
ಬರಲಿ ಇನ್ನಾದರು ನೆಮ್ಮದಿಯ ದಿನ
ಸ್ವಾಸ್ಥ್ಯದಿಂದ ಬದುಕಲಿ ನಮ್ಮ ಜನ.
ಶ್ರೀಪಾದ ಶೆಟ್ಟಿ
Comments