top of page

ವೈದ್ಯ ಜಾನಪದ
ಡಾ. ಪೆರ್ಲರ ಅಂಕಣ:ವಸಂತೋಕ್ತಿ -21


ಡಾ. ವಸಂತಕುಮಾರ ಪೆರ್ಲ

ಮನೆಮದ್ದು ಹಾಗೂ ಮಂತ್ರಿಸಿದ ಯಂತ್ರ-ತಾಯಿತಗಳನ್ನು ಕಟ್ಟಿಕೊಳ್ಳುವುದನ್ನು ವೈದ್ಯ ಜಾನಪದ ಎಂಬ ಅಧ್ಯಯನ ವ್ಯಾಪ್ತಿಯಲ್ಲಿ ತರಬಹುದು. ಕಳೆದ ಸುಮಾರು ನೂರಐವತ್ತು ವರ್ಷಗಳಿಂದ ಈಚೆಗೆ ನಿಧಾನವಾಗಿ ಆಧುನಿಕ ವೈದ್ಯಪದ್ಧತಿ ಬೆಳೆದು ಬಂದಿದೆ ಎಂಬುದು ನಿಜ. ಆದರೆ ಅದಕ್ಕೂ ಹಿಂದೆ ಸಾವಿರಾರು ವರ್ಷಗಳ ಕಾಲ ಜನಪದ ಔಷಧ ಪದ್ಧತಿ (ಅಥವಾ ನಾಟಿ ಔಷಧಕ್ರಮ) ಆಗಿನ ಜನಸಮುದಾಯವನ್ನು ಆ ಕಾಲಕ್ಕೆ ಬೇಕಾದಂತೆ ರೋಗರುಜಿನಗಳಿಂದ ಕಾಪಾಡಿದ್ದು ಸುಳ್ಳಲ್ಲ. ಇದನ್ನು ನಾಟಿ ಔಷಧ ಅಥವಾ ಗಿಡಮೂಲಿಕೆಗಳ ಪದ್ಧತಿ ಎಂದು ಕರೆಯಲಾಗಿದೆ. ನಾಡು ಎಂಬುದರಿಂದ ನಾಟಿ ಶಬ್ದ ಬಂದಿದೆ. ದೇಸೀಯಔಷಧ ಅಥವಾ ಹಳ್ಳಿಔಷಧ ಎಂದು ಕೂಡ ಕರೆಯಬಹುದು. ಇದು ಆಯುರ್ವೇದವಲ್ಲ; ಅದಕ್ಕೂ ಪೂರ್ವದ ಪದ್ಧತಿ ಎಂದು ತಿಳಿದುಕೊಳ್ಳಬೇಕು. ವಂಶಪಾರಂಪರ್ಯವಾಗಿ ಬಂದ ತಿಳಿವಳಿಕೆ ಎಂದು ಸ್ಥೂಲವಾಗಿ ಹೇಳಬಹುದು.

ಇದರಲ್ಲಿ ಮನುಷ್ಯರಿಗೆ ಮಾಡಲಾಗುತ್ತಿದ್ದ ವೈದ್ಯಪದ್ಧತಿ ಮತ್ತು ಜಾನುವಾರುಗಳಿಗೆ ಮಾಡುತ್ತಿದ್ದ ವೈದ್ಯಪದ್ಧತಿ ಎಂದು ಒಳ ವಿಭಾಗ ಮಾಡಬಹುದು. ಅದೇ ರೀತಿ ಹಾವು ಇತ್ಯಾದಿ ವಿಷಜಂತುಗಳು ಕಡಿದಾಗ ಮಾಡುತ್ತಿದ್ದ ವಿಷವೈದ್ಯ ಎಂಬ ಇನ್ನೊಂದು ಶಾಖೆಯೂ ಇದೆ.

ಸಾವಿರಾರು ವರ್ಷಗಳಿಂದಲೂ ಆಯುರ್ವೇದ ವೈದ್ಯಪದ್ಧತಿ ಮನುಷ್ಯನ ಆರೋಗ್ಯ-ಅನುಪಾನಗಳ ಕಡೆಗೆ ಲಕ್ಷ್ಯ ಹರಿಸಿತ್ತು ಎಂಬುದು ಸತ್ಯವೇ. ಆದರೆ ಆಯುರ್ವೇದ ವೈದ್ಯಕ್ಕೆ ಪರ್ಯಾಯವಾಗಿ ಹಳ್ಳಿಯ ಅವಿದ್ಯಾವಂತ ಜನರಲ್ಲಿ ದೈಹಿಕ ಆರೋಗ್ಯದ ಸಲುವಾಗಿ ಗಿಡಮೂಲಿಕೆಗಳ ಔಷಧ ಮತ್ತು ಮಾನಸಿಕ ಆರೋಗ್ಯದ ಸಲುವಾಗಿ ಮಂತ್ರಿಸಿದ ಯಂತ್ರ-ತಾಯಿತಗಳನ್ನು ಕಟ್ಟಿಕೊಳ್ಳುವ ಪದ್ಧತಿ ರೂಢಿಯಲ್ಲಿತ್ತು ಎಂಬುದನ್ನು ಗಮನಿಸಬೇಕು.

ಇವೆಲ್ಲ ತೀರ ಅಪರೂಪದ ಔಷಧಗಳು. ನಿಸರ್ಗದತ್ತ ವಿಧಾನದಿಂದ ಗುಣವಾಗುತ್ತಿದ್ದ ಹಲವು ಔಷಧಗಳನ್ನು ಆಧುನಿಕತೆಯ ಭರಾಟೆಯಿಂದಾಗಿ ನಾವು ಕಳೆದುಕೊಂಡಿದ್ದೇವೆ. ವಯಸ್ಸಾದ ಕೆಲವು ನಾಟಿ ವಿಷವೈದ್ಯರನ್ನು ಈಗ್ಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಪುತ್ತೂರು-ಸುಳ್ಯ ಭಾಗದ ಹಳ್ಳಿಯ ಒಳಪ್ರದೇಶಗಳಲ್ಲಿ ನಾನು ಕಂಡಿದ್ದೇನೆ. ಒಂದಿಬ್ಬರನ್ನು ಆಕಾಶವಾಣಿಗಾಗಿ ಸಂದರ್ಶನ ನಡೆಸಿದ್ದೆ. ಅವರೆಲ್ಲ ನೂರಾರು ಜನರನ್ನು ವಿಷಜಂತು ಕಡಿತದಿಂದ ರಕ್ಷಿಸಿದ್ದರು ಮತ್ತು ಹಣವನ್ನು ಕೂಡ ತೆಗೆದುಕೊಳ್ಳುತ್ತಿರಲಿಲ್ಲ! ಈಗ ಅವರೆಲ್ಲ ತೀರಿಕೊಂಡಿರಬೇಕು ಮತ್ತು ಹೊಸ ತಲೆಮಾರು ಆ ವಿದ್ಯೆಯನ್ನು ಕಲಿತಂತೆ ಕಾಣುವುದಿಲ್ಲ. ಅಂತಹ ಒಬ್ಬ ಸಾಧಕ ವಿಷಚಿಕಿತ್ಸಕನಿಗೆ ಸುಮಾರು ಮೂವತ್ತು ವರ್ಷಗಳ ಹಿಂದೆ ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ತನ್ನ ತಾಲೂಕು ಸಮ್ಮೇಳನದಲ್ಲಿ ಸನ್ಮಾನ ಮಾಡಿದಂತೆ ನೆನಪು.

ಹಿಂದಿನ ಕಾಲದಲ್ಲಿ ಮನುಷ್ಯನಿಗೆ ಕಾಯಿಲೆ ಕಸಾಲೆ ಬಂದಾಗ ನಾಟಿ ವೈದ್ಯರು ಪ್ರಕೃತಿಯಲ್ಲಿ ಲಭ್ಯವಿದ್ದ ನೂರಾರು ಗಿಡಮೂಲಿಕೆಗಳನ್ನು ಔಷಧಿಯಾಗಿ ನೀಡುತ್ತಿದ್ದರು. ವಾತ ಪಿತ್ಥ ಕಫ ದೋಷದಿಂದಾಗಿ ಬರುತ್ತಿದ್ದ ಬಹುತೇಕ ಕಾಯಿಲೆಗಳು ವಾಸಿಯಾಗುತ್ತಿದ್ದವು. ಇವರಲ್ಲಿ ಕೆಲವರು ಹೆರಿಗೆ ಪರಿಣಿತರು ಇರುತ್ತಿದ್ದರು. ಈಗ್ಗೆ ಕೆಲವು ವರ್ಷಗಳ ಹಿಂದೆ ಮೈಸೂರಿನ ಬಿಳಿಗಿರಿರಂಗನಬೆಟ್ಟ ಪ್ರದೇಶದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಹೆರಿಗೆ ಮಾಡಿಸಿದ ಬುಡಕಟ್ಟಿನ ಓರ್ವ ಮಹಿಳೆ ಇದ್ದಳು. ಆಕೆಗೆ ಕರ್ನಾಟಕ ಸರಕಾರ ಪ್ರಶಸ್ತಿ ನೀಡಿತ್ತು. ಆ ಹೆಂಗಸನ್ನು ಮೈಸೂರು ಆಕಾಶವಾಣಿಗಾಗಿ ನಾನು ಸಂದರ್ಶನ ನಡೆಸಿದ್ದೆ. ಸರ್ಪಸುತ್ತಿಗೆ ಪರಿಣಾಮಕಾರಿ ಔಷಧ ನೀಡುತ್ತಿದ್ದ ನಾಟಿ ವೈದ್ಯರಿದ್ದರು. ಕಳೆದ ಎಪ್ಪತ್ತರ ದಶಕದಲ್ಲಿ (1975 ರ ಸುಮಾರಿಗೆ) ಕರ್ನಾಟಕದ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಸರ್ಪಸುತ್ತು ಕಾಯಿಲೆಗೆ ತುತ್ತಾದಾಗ ಪುತ್ತೂರು ಸಮೀಪದ ಓರ್ವ ನಾಟಿ ವೈದ್ಯೆಯ ಚಿಕಿತ್ಸೆಯಿಂದ ಗುಣಮುಖರಾದದ್ದು ಆ ಕಾಲಕ್ಕೆ ಬಹಳ ದೊಡ್ಡ ಸುದ್ದಿಯಾಗಿತ್ತು.

ಮಕ್ಕಳ ಲಾಲನೆ ಪಾಲನೆ ತುಂಬಾ ಸೂಕ್ಷ್ಮ ಮತ್ತು ಕಷ್ಟಕರವಾದದ್ದು. ಹಸುಳೆಗಳ ಮೈಗೆ ಮತ್ತು ತಲೆಗೆ ಹಚ್ಚುವ ಗಿಡಮೂಲಿಕೆಗಳು, ಕಾಲಕಾಲಕ್ಕೆ ಹೊಟ್ಟೆಗೆ ನೀಡುವ ಔಷಧಿಗಳು ನಾಟಿವೈದ್ಯದಲ್ಲಿ ಪ್ರಸಿದ್ಧವಾಗಿದೆ. ಅದೇ ರೀತಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ನೀಡುವ ಆಹಾರ, ಔಷಧ ಮತ್ತು ಶುಶ್ರೂಷೆಗಳು ವೈಶಿಷ್ಟ್ಯಪೂರ್ಣವಾಗಿವೆ. ಎಲುಬು ಮತ್ತು ಕೀಲು ಸಮಸ್ಯೆಗಳಿಗೆ ನಾಟಿ ಪದ್ಧತಿಯಲ್ಲಿ ಪರಿಣಾಮಕಾರಿ ಔಷಧಿಗಳಿವೆ. ಬಹುತೇಕ ಔಷಧಿಗಳು ಆಯುರ್ವೇದದ ವ್ಯಾಪ್ತಿಗೂ ಬಂದಿವೆ.

ಜಾನುವಾರುಗಳ ಚಿಕಿತ್ಸೆಗೆ ಸಂಬಂಧಿಸಿ ಅಮೂಲ್ಯ ಸಂಗತಿಗಳು ಜನಪದರಲ್ಲಿ ಇದ್ದವು. ಜಾನುವಾರುಗಳು ಬಿದ್ದು ಕೈಕಾಲು ಮುರಿದುಕೊಂಡಾಗ ಮಾಡುತ್ತಿದ್ದ ಎಲುಬು ಮರುಜೋಡಣೆಯ ಚಿಕಿತ್ಸೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಕಾಡಿಗೆ ಮೇಯಲು ಬಿಟ್ಟಿದ್ದ ನಮ್ಮ ಒಂದು ಹಸು ಎರಡು ಮೂರು ದಿನಗಳು ಕಳೆದರೂ ಹಟ್ಟಿಗೆ ಬರಲಿಲ್ಲ. ಕಾಡುಮೇಡುಗಳಲ್ಲಿ ಎರಡು ದಿನ ಹುಡುಕಿದೆವು. ಹೆಸರು ಹಿಡಿದು ಕೂಗಿದಾಗ ಒಂದು ಕಿಬ್ಬದಿಯ ಸಮೀಪದಿಂದ ಕ್ಷೀಣಸ್ವರದ ಕೂಗು ಕೇಳಿ ಅತ್ತ ಹೋಗಿ ನೋಡಲಾಗಿ ಹಸು ಎತ್ತರದಿಂದ ಕೆಳಗೆ ಜಾರಿಬಿದ್ದು ಕಾಲು ಮುರಿದುಕೊಂಡು ಕಂಗಾಲಾಗಿ ಬಿದ್ದಿತ್ತು. ನಾಲ್ಕಾರು ಮಂದಿ ಅದನ್ನು ತಟ್ಟಿಯಲ್ಲಿ ಕಟ್ಟಿ ಹೊತ್ತು ಮನೆಗೆ ತಂದರು. ಹತ್ತಿರದಲ್ಲೇ ಇದ್ದ ಜನಪದ ಪಶುವೈದ್ಯರು ಕಾಲು ಮುರಿದ ಭಾಗಕ್ಕೆ ಗಿಡಮೂಲಿಕೆ ಹಾಗೂ ಕೋಳಿಮೊಟ್ಟೆಯನ್ನು ಅರೆದು ಹಚ್ಚಿ ಬಿದಿರಿನಿಂದ ಕಟ್ಟಿದರು. ಎರಡು ದಿನಗಳಿಗೊಮ್ಮೆ ಬದಲಿಸುತ್ತಿದ್ದರು. ಒಂದು ತಿಂಗಳು ಕಳೆದಾಗ ಹಸು ಆರೋಗ್ಯವಂತವಾಗಿ ಓಡಾಡುವಂತಾಯಿತು.

ನಾಟಿವೈದ್ಯಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಸಂಶೋಧಕ ಮತ್ತು ವಿದ್ವಾಂಸ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯರು ಸುಮಾರು ಐವತ್ತು ವರ್ಷಗಳ ಹಿಂದೆ ಕೆಲವು ಪ್ರಸಿದ್ಧ ನಾಟಿವೈದ್ಯರನ್ನು ಸಂದರ್ಶಿಸಿ ಒಂದು ಹಸ್ತಪ್ರತಿ ಸಂಪಾದಿಸಿದ್ದರು (ಅವರು ನನ್ನ ನೆರೆಕರೆಯವರಾಗಿದ್ದು ನನಗೆ ತುಂಬಾ ಆಪ್ತರಾಗಿದ್ದರು). ಕಾರಣಾಂತರಗಳಿಂದ ಅವರಿಗೆ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಲಿಲ್ಲ. ನನ್ನ ಬಳಿ ಆ ಸಂಗ್ರಹದ ವಿಚಾರ ಆಗಾಗ ಹೇಳುತ್ತಿದ್ದರು ಮತ್ತು ಅವರು ಆ ಕೆಲಸಕ್ಕಾಗಿ ಪರಿಶ್ರಮ ಪಡುತ್ತಿದ್ದುದನ್ನು ನಾನು ನೋಡಿದ್ದೆ. ಅವರು ತೀರಿಕೊಂಡು ಇಪ್ಪತ್ತು ವರ್ಷದ ಮೇಲಾಯಿತು. ಆ ಹಸ್ತಪ್ರತಿ ಏನಾಯಿತೋ ಗೊತ್ತಿಲ್ಲ. ಅದು ಎಷ್ಟು ಅಮೂಲ್ಯವಾದ ಸಂಗ್ರಹ ಆಗಿತ್ತು ಎಂಬುದು ಈಗ ಅರ್ಥವಾಗುತ್ತಿದೆ.

ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಹಳ್ಳಿಗಳಲ್ಲಿ ಹಿಂದೆ ಮಂತ್ರಿಸಿದ ಯಂತ್ರ-ತಾಯಿತಗಳನ್ನು ವೈದ್ಯರು ಕೊಡುತ್ತಿದ್ದರು. ಕಪ್ಪು ಅಥವಾ ಕೆಂಪು ದಾರಕ್ಕೆ ಅಲ್ಲಲ್ಲಿ ಗಂಟು ಹಾಕಿ ತಾಯಿತ ಅಥವಾ ಉರ್ಕು ಕಟ್ಟಿ ಮಂತ್ರಿಸಿ ಕೊಡುತ್ತಿದ್ದರು. ಅದನ್ನು ಕುತ್ತಿಗೆಗೆ ಅಥವಾ ತೋಳಿಗೆ ಕಟ್ಟಿಕೊಳ್ಳಬೇಕಾಗಿತ್ತು. ಗಾಳಿಸೋಂಕು, ಭಯ ಅಥವಾ ಅಂಜಿಕೆಗೆ ತುತ್ತಾದವರು ಗುಣಮುಖರಾಗುತ್ತಿದ್ದರು. ವೀಳ್ಯದಎಲೆ ಇತ್ಯಾದಿಗಳನ್ನು ಮಂತ್ರಿಸಿ ಕೊಡುವ ಕ್ರಮವೂ ಇತ್ತು. ಹಸುಳೆಗಳು ಮತ್ತು ಪುಟಾಣಿ ಮಕ್ಕಳು ನಿದ್ರಿಸದೆ ರಚ್ಚೆ ಹಿಡಿದು ಅಳುತ್ತಿದ್ದುದಕ್ಕೆ ಕಾರಣ ಗೊತ್ತಾಗದೆ ಇದ್ದಾಗ ಬಾಲಬಾಧೆ ಎಂದು ಪರಿಗಣಿಸಿ ಮಂತ್ರಿಸಿದ ಕರಿನೂಲನ್ನು ಸೊಂಟ ಅಥವಾ ಕುತ್ತಿಗೆಗೆ ಕಟ್ಟುತ್ತಿದ್ದರು.

ಎಲ್ಲ ರೋಗಗಳಿಗೂ ಒಂದೇ ವೈದ್ಯಪದ್ಧತಿ ಎಂಬ ಶಾಸನವಿಲ್ಲ. ಮನುಷ್ಯನ ಸರ್ವಾಂಗೀಣ ಆರೋಗ್ಯ ಮತ್ತು ಒಳಿತಿನ ಜೀವನ ಬಹಳ ಮುಖ್ಯ. ಎಲ್ಲ ಪದ್ಧತಿಗಳ ಆಶಯವೂ ಅಷ್ಟೇ. ಒಂದೊಂದು ವಿಧಾನದಲ್ಲಿಯೂ ಒಳಿತಿನ ಅಂಶಗಳಿವೆ. ಹಾಗಾಗಿಯೇ ಆಯುರ್ವೇದ, ಇಂಗ್ಲೀಷ್ ವೈದ್ಯಪದ್ಧತಿ, ಆಕ್ಯುಪಂಕ್ಚರ್, ಆಕ್ಯುಪ್ರೆಶರ್, ಸಿದ್ಧ, ಯೂನಾನಿ, ನಾಟಿ ಮುಂತಾದ ಹಲವಾರು ಪದ್ಧತಿಗಳಿವೆ. ಇನ್ನು ಆಹಾರವೇ ವೈದ್ಯ ಎಂಬ ಇನ್ನೊಂದು ಶಾಖೆಯೂ ಇದೆ. ಆಯುರ್ವೇದವು ಬೌದ್ಧರ ಮೂಲಕ ನೇಪಾಳ, ಟಿಬೆಟ್, ಮಲೇಶ್ಯಾ, ಇಂಡೋನೇಷ್ಯಾ ಮುಂತಾದೆಡೆ ತೆರಳಿ ರೂಪಾಂತರಗೊಂಡು ಬೇರೆಯೇ ವಿಧಾನವಾಗಿ ಬೆಳೆದು ಈಗಿನ ಟಿಬೆಟ್ ವೈದ್ಯಪದ್ಧತಿಯಾಗಿ ಬೆಳೆದ ಒಂದು ವಿಶೇಷ ಶಾಖೆ ಇದೆ. ಅದು ಬೇರೆಯೇ ಲೇಖನದ ವಿಷಯ ಮತ್ತು ಅದನ್ನು ಇನ್ನೊಮ್ಮೆ ಬರೆಯುವೆ. ನಾವು ಒಂದೇ ಪದ್ಧತಿಗೆ ಜೋತುಬೀಳದೆ ಪರ್ಯಾಯ ವ್ಯವಸ್ಥೆಗಳನ್ನು ಬೆಳೆಯಗೊಡಬೇಕು. ಆಧುನಿಕತೆಯ ಸುನಾಮಿಯಲ್ಲಿ ಇತರ ಪದ್ಧತಿಗಳು ಮುಳುಗಿ ಹೋಗುವಂತೆ ಆಗಬಾರದು.


ಡಾ.ವಸಂತಕುಮಾರ ಪೆರ್ಲ


ನಮ್ಮ ನಡುವಿನ ಚಲನಶೀಲ ಬರಹಗಾರ, ಚಿಂತಕ, ಸಂಶೋಧಕ ಡಾ.ವಸಂತಕುಮಾರ ಪೆರ್ಲ ಅವರು ಜಾನಪದದ ವಿವಿಧ ಆಯಾಮಗಳನ್ನು ಹುಡುಕುತ್ತಾ ವೈದ್ಯ ಜಾನಪದದ ಬಗೆಗೆ ಬರೆದಿರುವ ವಸಂತೋಕ್ತಿ‌ ಎಂಬ ಅವರ ಇಪ್ಪತ್ತೊಂದನೆ ಅಂಕಣ ನಿಮ್ಮ ಓದು ಮತ್ತು ಸಹಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ
78 views0 comments

Comments


bottom of page