ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ಮಕ್ಕಳ ಮನೆ ಭೇಟಿ ನೀಡಿ ಪಾಠ ಮಾಡುವ ಯೋಜನೆ ಶುರುವಾದದ್ದೆ ಅಣಶಿಯ ಸರ್ಕಾರಿ ಶಾಲೆಯಲ್ಲಿ. ಮಕ್ಕಳು ಯಾವ ಯಾವ ಊರಿನಿಂದ ಶಾಲೆಗೆ ಬರುತ್ತಾರೆ ಎಂಬ ಪಟ್ಟಿ ಮಾಡುವ ಕೆಲಸ ಮೊದಲು ಶುರುವಾಯಿತು. ಜೋಯಿಡಾ ಸದಾ ತನ್ನತನವನ್ನು ಉಳಿಸಿಕೊಂಡ ತಾಲೂಕು. ಉತ್ತರಕನ್ನಡ ಜಿಲ್ಲೆಯಲ್ಲಿ ಬೇರಾವ ತಾಲೂಕಿನಲ್ಲಿಯೂ ಕಾಣಲಾಗದ ಭೌಗೋಳಿಕ ಭಿನ್ನತೆಯನ್ನು ಹೊಂದಿರುವ ತಾಲೂಕು ಜೋಯಿಡಾ. ಇಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಜೋಯಿಡಾವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಮಳೆಗಾಲವಂತೂ ಜೋಯಿಡಾ ಕತ್ತಲಲ್ಲೇ ಹೆಚ್ಚು ಕಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಆಗಾಗ ಪ್ರವಾಹಕ್ಕೂ ಸಿಲುಕಿ ನರಳಿದೆ. ಕಾಳಿ ಕೆರಳಿದರೆ ಪ್ರವಾಹ. ನಕ್ಕರೆ ಹಸಿರು ಎಂಬ ರೀತಿ ಜನ ಎಲ್ಲವನ್ನು ಎದುರಿಸಿ ಬದುಕುತ್ತಿದ್ದಾರೆ. ಇದರ ಜೊತೆ ಅಧಿಕಾರಿ ವೃಂದದವರು ಕೂಡ.
ಬರೆಯುತ್ತ ಹೋದರೆ ದೊಡ್ಡದಾದ ಕಥೆಯನ್ನು ಹೊಂದಿರುವ ಕಾಳಿ ತೀರದ ಸುಮಾರು ಹದಿನೈದು ಹಳ್ಳಿಗಳಿಂದ ಶಾಲೆಗೆ ಮಕ್ಕಳು ಬರುತ್ತಾರೆ. ಜೋಯಿಡಾದಲ್ಲಿ ಹಳ್ಳಿ ಎಂದರೆ ಕಾಡು ಎಂದರ್ಥ. ಹತ್ತು ಹದಿನೈದು ಮನೆಗಳು ಸೇರಿ ದಟ್ಟ ಕಾನನದಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ, ಸರಿಯಾಗಿ ನಾಲ್ಕು ಚಕ್ರದ ಗಾಡಿ ಹೋಗಲು ಜಾಗವಿಲ್ಲದ ಕಿರುದಾರಿಯನ್ನು ಹೊಂದಿರುವ, ಫೋನ್ ಸಿಗ್ನಲ್ ಇಲ್ಲದ, ಕಾಡು ಪ್ರಾಣಿಗಳು ಯಾವಾಗ ಬೇಕಾದರೂ ದರ್ಶನ ಕೊಡಬಹುದಾದ ಊರು. ಇಂತಹುದ್ದೆ ಒಂದು ಊರಿಗೆ ನಾನು ಹಾಗೂ ಸುವರ್ಣ ಟೀಚರು ಹೊರಡುವ ನಿರ್ಧಾರ ಮಾಡಿಕೊಂಡೆವು. ನನ್ನ ಶಾಲೆ ಹಾಗೂ ನನಗೆ ಸಮೀಪವಿರುವ ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳು ಈ ಹಳ್ಳಿಯಲ್ಲಿದ್ದಾರೆ. ಹೀಗಾಗಿ ಪ್ರೌಢಶಾಲೆಯ ಮಾಸ್ತರರು ಆ ಊರಿಗೆ ಹೋಗುವುದು ಗೊತ್ತಾದ ತಕ್ಷಣ ನಾವು ಅವರೊಟ್ಟಿಗೆ ಹೋಗುವುದೆಂದು ಅಂದುಕೊಂಡು ಹೊರಟಿದ್ದು ಆಯಿತು. ಮೂರ್ತಿ ಸರ್ ಕಾರು ನಮ್ಮನ್ನು ಹೊತ್ತೊಯ್ದ ಆರಂಭದ ಕುಂಭಗಾಳ ಊರಿನ ನಮ್ಮ ಪ್ರಯಾಣ ನಿಜಕ್ಕೂ ಖುಷಿ ತಂದಿತ್ತು. ಮುಖ್ಯ ರಸ್ತೆ ಮುಗಿದು ಕಾರು ಕಿರುದಾರಿ ಆರಂಭಿಸಿ ಒಂದು ಮೈಲಿ ಹೋಗುವಷ್ಟರಲ್ಲಿ ನವೀನ ಸರ್ ಅವರಿಗೆ ಕಾರು ಹತ್ತುವ ಇಳಿಯುವ ಕೆಲಸ ನಿರ್ವಹಿಸಬೇಕಾಯಿತು. ಇದ್ದ ಚೂರು ಪಾರು ಕಾಂಕ್ರೀಟ ರಸ್ತೆಯ ಎಡಬಲ ಬದಿಗೆ ನೀರು ಬಂದು ಮಣ್ಣು ಕೊಚ್ಚಿಕೊಂಡು ಹೋಗಿ ಇಕ್ಕಟ್ಟಾದ ದಾರಿ ನಿರ್ಮಾಣವಾಗಿತ್ತು. ಹೀಗಾಗಿ ಕಾರು ನೇರವಾಗಿ ಚಲಿಸಬೇಕಾಗುತ್ತಿತ್ತು ಚೂರು ಡೊಂಕಾದರೂ ಕಾರಿನ ಚಕ್ರಗಳು ಹುಗಿದು ಹೋಗುವ ಸಾಧ್ಯತೆ ಬಹಳ ಇತ್ತು. ಇದರ ಜೊತೆ ಜೊತೆಗೆ ಆ ದಾರಿಯಲ್ಲಿ ಬೇರಾವ ಗಾಡಿಗಳು ಚಲಿಸದ ಕಾರಣ ರಸ್ತೆಯುದ್ದಕ್ಕೂ ಬಿದ್ದ ಮರದ ಗೆಲ್ಲುಗಳನ್ನು ಎತ್ತಿ ಬದಿಗೆ ಸರಿಸುವ ಕೆಲಸ ನವೀನ ಸರ್ ಮಾಡಬೇಕಾಗಿತ್ತು. ಮರದ ದೊಡ್ಡ ಟೊಂಗೆಗಳು ಎಲೆಯನ್ನು ಹೇರಿಕೊಂಡು ಭಾರವಾಗಿಯೂ ಇರುತ್ತಿದ್ದವು. ಜೋರು ಮಳೆಯಲ್ಲಿ ಕಾರಿನಿಂದ ಪದೆ ಪದೆ ಇಳಿಯುವ ಹತ್ತುವ ಅವರ ಸರ್ಕಸ್ ಆಯಾಸದ ಕೊಡುಗೆ ನೀಡಿತ್ತು. ಅಂತೂ ಎಲ್ಲ ದಾಟುತ್ತ ಸ್ವಲ್ಪ ಮುಂದೆ ಹೋದಂತೆಲ್ಲ ಸಿಕ್ಕಿದು ಸಣ್ಣ ಹಳ್ಳ. ನೀರು ಜೋರಾಗಿ ಹರಿಯುತ್ತಿತ್ತು. ಹೀಗಾಗಿ ನವೀನ ಸರ್ ಇಳಿದು ನೀರಿನ ರಭಸ ಪರಿಶೀಲಿಸಿ ಕಾರು ದಾಟಿಸಬಹುದು ಎಂದರಾದರೂ ನಮಗೆ ಒಂಥರಾ ಭಯ. ಹೀಗಾಗಿ ನಾನು ಸುವರ್ಣ ಟೀಚರು ಕಾರು ಇಳಿದುಕೊಂಡು ಆ ಹೊಳೆಯನ್ನು ದಾಟಲು ಮುಂದಾದೆವು. ಉಟ್ಟ ಸೀರೆಯನ್ನು ಮೊಣಕಾಲಿನವರೆಗೂ ಎತ್ತಿ ಆ ಹಳ್ಳ ದಾಟುವಾಗ ಒಂದೆಡೆ ಆತಂಕ. ಮಳೆಯ ರಭಸದಲ್ಲಿ ಹರಿಯುವ ನೀರಿನಲ್ಲಿ ಹಾವು ಕಂಡರೆ, ನೀರಿನ ಹರಿವು ಜೋರಾಗಿ ನಮ್ಮನ್ನು ಬೀಳಿಸಿಬಿಟ್ಟರೆ ಎಂದೆಲ್ಲ ಯೋಚಿಸಿ ಕೈ ಹಿಡಿದು ನದಿಯನ್ನು ದಾಟಿ ಆಗಿತ್ತು. ಕಳೆದ ಮಳೆಗಾಲದಲ್ಲಿ ಕುಂಭಗಾಳ ದ್ವೀಪವಾಗಿ ವಾರಗಟ್ಟಲೆ ನೀರು ತುಂಬಿದ್ದ ಕಥೆಯನ್ನು ಶಶಿಕಾಂತ ಹುಲಿ ಸರ್ ಹೇಳಿದ್ದು ತಟ್ಟನೆ ನೆನಪಾದರೂ, ಮಕ್ಕಳನ್ನು ಭೇಟಿ ಮಾಡಿ ಅವರಿಗೆ ಅಭ್ಯಾಸದ ಹಾಳೆಗಳನ್ನು ತಲುಪಿಸಬೇಕೆಂಬ ಹಂಬಲ ಕುಂಭಗಾಳದ ಹಳ್ಳವನ್ನು ದಾಟಿಸಿತ್ತು. ಕುಂಭಗಾಳದ ಕುಣಬಿಗಳ ಫಾಯ್ಕ ದೇವರ ಸಣ್ಣ ಗುಡಿ ಅಷ್ಟೇನು ಎತ್ತರದ ತಳಪಾಯ ಹೊಂದಿಲ್ಲದಿದ್ದರೂ ಆರಾಮವಾಗಿ ಎಲ್ಲರನ್ನು ಕೈ ಬೀಸಿ ಕರೆಯುತ್ತಿತ್ತು. ಹಳ್ಳದ ಸಮೀಪ ಈ ಗುಡಿ ಇದ್ದರೂ ಗುಡಿಯ ಬಳಸಿ ಹರಿವ ನೀರು ಚೂರು ಒಳಗೆ ಹೋಗದೆ ತನ್ನ ಪಾಡಿಗೆ ಬದಿಯಲ್ಲಿ ಹರಿದು ಹೋಗುವ ನೋಟ ಮನದಲ್ಲಿ ಮಕ್ಕಳಂತೆ ಹಾಗೆ ಉಳಿದು ಬಿಟ್ಟಿತ್ತು. ಇನ್ನು ಸಾಕಷ್ಟು ದೂರವಿದೆ ಎಂದು ನಮಗಂತು ಅಲ್ಲಿವರೆಗೆ ಅನಿಸಿರಲಿಲ್ಲ. ಚೂರು ಮುಂದೆ ಹೋದರೆ ಸಾಕು ಇಲ್ಲೆ ಇಲ್ಲೆ ಎಂದು ಸರ್ ಗಳು ಹೇಳಿ ಹೇಳಿ ಸುಮಾರು ಮೂರು ಕಿ. ಮೀ ನಡೆದದ್ದು ಊರು ತಲುಪಿದ ನಂತರ ತಿಳಿದ ವಿಷಯ. ಮಕ್ಕಳನ್ನು ನೋಡುವ ಉಮೇದಿ ಒಂದು ಕಡೆಯಾದರೆ ಇನ್ನೊಂದೆಡೆ ಕಾಡಿನ ಅವ್ಯಕ್ತ ಮೌನ ಮನಸ್ಸನ್ನು ಅಲುಗಿಸಿತ್ತು. ನಡೆಯಲು ಆರಂಭಿಸಿದ ಮೇಲೆಯೆ ನಮಗೆ ಕಾಂಟಿ(ಉಂಬಳ)ಯ ನಿಜ ಅವತಾರ ನೋಡಲು ಸಿಕ್ಕಿದ್ದು.
ಇಲ್ಲಿಯವರೆಗೆ ಒಂದಿಷ್ಟು ಕಾಂಟಿಗಳು ಹಿಂದೆಲ್ಲ ನಮ್ಮ ಮಾತಾಡಿಸಿದ್ದು ಉಂಟು. ಶಾಲೆಯ ಬಳಿ ಗಿಡ ನೆಡಲು ಹೋದಾಗ, ಸ್ವಚ್ಛತಾ ಆಂಧೋಲನಕ್ಕೆ ಹೋದಾಗ, ಇಕೋ ಕ್ಲಭ ಪರಿಸರ ಸ್ವಚ್ಛತೆ ಜಾಗೃತಿ ಜಾಥಾ ಹಮ್ಮಿಕೊಂಡಾಗ, ಅಣಶಿಯಲ್ಲಿ ತಾಲೂಕಾ ಮಟ್ಟದ ಪ್ರೌಢಶಾಲೆ ಕ್ರೀಡಾ ಕೂಟವಾದಾಗ ನಮಗೆ ಕಾಂಟಿ ಮಾತಾಡಿಸಿದ್ದು ನಿಜ. ಅವು ನಮ್ಮ ಕಾಲು ಅರಸಿ ಹತ್ತುವಷ್ಟರಲ್ಲಿ ಎಚ್ಚರಗೊಂಡು ಕಾಲು ಕೊಡವಿ ಆರಾಮವಾಗುತ್ತಿದ್ದೆವು. ಇನ್ನು ವಿನೋದ ಸರು ಸಕಲ್ ಮಾಟಗಾಂವ ಶಾಲೆಗೆ ಹೋದರೆ ದೊಡ್ಡದಾದ ಅಗಲವಾದ ಕಾಂಟಿ ಹತ್ತಿಸಿಕೊಂಡು ಬರುತ್ತಿದ್ದರು. ಅವರ ಎರಡು ಚಕ್ರದ ಗಾಡಿಯ ಸಂಧಿಯಲ್ಲಿಯೇ ಅವು ಹೊಕ್ಕಿ ಮನುಷ್ಯರ ವಾಸನೆ ಅರಸಿ ದಾಳಿ ಮಾಡುತ್ತಿದ್ದವು. ಇಷ್ಟೆ ನಮಗೆ ಅವುಗಳ ಬಗ್ಗೆ ಗೊತ್ತಿತ್ತು ಬಿಡಿ. ಉಳಿದ ಕಥೆಗಳನ್ನು ದೂರದೂರಿನಿಂದ ನಡೆದು ಬರುವ ಮಕ್ಕಳು ಹೇಳುತ್ತಿದ್ದುದ್ದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆವು. ಮಕ್ಕಳ ಕಥೆಗಳು ಕುಂಭಗಾಳದ ದಾರಿಯಲ್ಲಿ ಹೆಜ್ಜೆ ಹಾಕಿದಾಗ ನೆನಪಾಗಿ, `ಬೇಗ ಬೇಗ ಹೆಜ್ಜೆ ಹಾಕಿದರೆ ಕಾಂಟಿ ಹತ್ತುವುದಿಲ್ಲ' ಎಂದು ಸುವರ್ಣ ಟೀಚರು ಎಚ್ಚರಿಸಿ ಬೇಗ ಹೆಜ್ಜೆ ಹಾಕಿದ್ದು ನಿಜ. ನಮ್ಮ ನಡಿಗೆಯ ವೇಗ ಹೆಚ್ಚಿದರೆ ಕಾಂಟಿ ಹತ್ತುವುದಿಲ್ಲ ಎಂಬ ವಿಶ್ವಾಸ. ಒಂದಷ್ಟು ಮುಂದೆ ಹೋದೆವು. `ನೀರಿನಲ್ಲಿ ಹೋದರೆ ಕಾಂಟಿ ಹತ್ತುವುದಿಲ್ಲ' ಎಂದು ಮಕ್ಕಳು ಹಿಂದೆ ಹೇಳಿದ್ದು ನೆನಪಿಸಿಕೊಂಡು ಸುವರ್ಣ ಟೀಚರ್‍ಗೆ ನಾನು ಒಂದು ಸಲಹೆ ಕೊಟ್ಟೆ. ಅಂತೂ ಇಂತು ಆದಷ್ಟು ಲಕ್ಷ್ಯ ವಹಿಸಿ ಮುಂದೆ ಸಾಗುತ್ತಿದ್ದಂತೆ ಮೂರ್ತಿ ಸರ್ ಸೆನಿಟೈಜರ್ ಹಿಡಿದು ಓಡಿಯೇ ಬಂದರು. `ನವೀನ ಸರ್ ಕಾಲಿಗೆ ಹತ್ತಿಪ್ಪತ್ತು ಕಾಂಟಿ ಹತ್ತಿ ಎಲ್ಲ ತೆಗೆದು ತೆಗೆದು ಹಾಕುತ್ತಿದ್ದಾರೆ. ನಿಮ್ಮ ಕಾಲು ನೋಡಿ' ಎಂದದ್ದೆ ಗಡಿಬಿಡಿಗೊಂಡು ಜೋರು ಹುಡುಕಾಡಿದೆವು. ಅದಾಗಲೆ ಸುವರ್ಣ ಟೀಚರ್ ಕಾಲಿನ ಗೆಜ್ಜೆಯ ಒಳಗೆ ಕಾಂಟಿ ಹೊಕ್ಕಿ ರಕ್ತದ ರುಚಿ ನೋಡುತ್ತಿತ್ತು. ಅವರಂತೂ ಅಸಹ್ಯದಿಂದ ಕಾಲು ಕೊಡವಿದರೂ ಅದು ಬೀಳಲಿಲ್ಲ. ಕೋಲಿನಲ್ಲಿ ತೆಗೆಯಲು ಹೋದೆ. ಅಷ್ಟರಲ್ಲಿ ನವೀನ ಸರು ತಡೆದು ಕೋಲಿನಿಂದ ತೆಗೆದರೆ ನಂಜು ಹೆಚ್ಚಾಗುತ್ತದೆ. ಅದಾಗಿಯೆ ಬಿಡುವಂತೆ ಮಾಡಬೇಕು. ಎಳೆದು ತೆಗೆಯಲೂ ಬಾರದು ಎಂದು ಕಾಂಟಿ ಕಚ್ಚಿದ ನಂತರದ ಪರಿಸ್ಥಿತಿ ಹೇಳಿದಾಗ ಮತ್ತಷ್ಟು ಸಂಕಟವಾಯಿತು. ಕೊನೆಗೆ ಮೂರ್ತಿ ಸರು ಸೆನಿಟೈಜರ್ ಹಾಕಿದರೆ ಬೀಳುತ್ತದೆ ಎಂದು ಹಾಕಿದಾಗ ಪಟಕ್ಕನೆ ಕಾಂಟಿ ಉದುರಿ ಬಿತ್ತು. ಅಬ್ಬಾ! ನಿರಾಳ ಎನ್ನುವಷ್ಟರಲ್ಲಿ ಮತ್ತೊಂದು ಕಾಂಟಿ ಹತ್ತಬೇಕೆ... ಅರೆ ಮತ್ತೊಂದು... ಇನ್ನೊಂದು... ಸುಮಾರು ಐದದು ಕಾಂಟಿಗಳು ಹತ್ತಿ ನಾನು ಸುವರ್ಣ ಟೀಚರು ಅದನ್ನು ನೋಡಿಯೇ ಸುಸ್ತಾಗಿ ಹೋದೆವು. `ಇಲ್ಲಿಯೆ ನಿಂತರೆ ಮತ್ತೆ ಹತ್ತುತ್ತವೆ. ನಡೆಯುತ್ತಾ ಕಾಂಟಿ ತೆಗೆದುಕೊಳ್ಳುತ್ತಾ ಹೋಗಿ' ಎಂಬ ಮೂರ್ತಿ ಸರ್ ಸಲಹೆ ಪಾಲಿಸಲು ಹರಸಾಹಸ ಪಡಬೇಕಾಯಿತು. ಒಂದೆಡೆ ಜೋರು ಮಳೆ ಗಾಳಿ. ಎತ್ತರೆತ್ತರ ಮರಗಳು ಮೈಮೇಲೆ ಎರಗಿದಂತೆ ಓಲಾಡುತ್ತಿವೆ. ಇನ್ನೊಂದೆಡೆ ಕೈಯಲ್ಲಿ ಕಲಿಕಾ ಸಾಮಗ್ರಿ, ಅಭ್ಯಾಸದ ಹಾಳೆಗಳ ಚೀಲ. ಉಟ್ಟ ಸೀರೆಯ ನೆರಿಗೆಗಳ ಜೊತೆ ನಮ್ಮ ಇಡೀ ದೇಹವೇ ಕಂಪಿಸುತ್ತಿರುವಂತೆ ಅನ್ನಿಸುವಾಗ ಕಾಂಟಿ ಎಲ್ಲಿ ಹತ್ತುತ್ತದೆ ಎಲ್ಲಿ ಏಳುತ್ತದೆ ಎಂದೇ ತಿಳಿಯುತ್ತಿರಲಿಲ್ಲ. ಮನುಷ್ಯನ ವಾಸನೆ ತಟ್ಟನೆ ಗ್ರಹಿಸುವ ಅವು ಹಾವಿನ ಹೆಡೆಯಂತೆ ತಲೆ ಎತ್ತಿ ಎದ್ದು ಹತ್ತಿಕೊಂಡು ಬಿಡುತ್ತವೆ.
ನನ್ನ ಕಾಲಿಗೆ ತೆಗೆಯಲಾರದಷ್ಟು ಹತ್ತಿ ಏನು ಮಾಡುವುದೆಂದೇ ತಿಳಿಯದೆ, ಮಳೆಯನ್ನು ಲೆಕ್ಕಿಸದೆ ಅಲ್ಲೆ ಇದ್ದ ಗಿಡಕ್ಕೆ ಬ್ಯಾಗು ಚೀಲ ಎಲ್ಲ ತೂಗಿ ಕಾಲನ್ನು ಕೊಡವಿ ಏನೇನೋ ಸರ್ಕಸ್ ಮಾಡಿ ಮುಗಿಸಿದೆ. ಬೀಳಲಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸೆನಿಟೈಜರ್ ಬಾಟಲಿ ತಂದದ್ದು ಒಳ್ಳೆಯದೇ ಆಯಿತು ಎನಿಸಿತು. ಕಾಲಿಗೆ ಹಾಕಿದಾಗ ಅವು ಪಟಪಟನೆ ಉದುರಿ ಬೀಳುತ್ತಿದ್ದವು. ಸತ್ತಂತೆ ಅನಿಸಿದರು ಕ್ಷಣ ಮಾತ್ರದಲ್ಲಿ ಮತ್ತೆ ಎದ್ದು ಕಚ್ಚಲು ರೆಡಿ ಆಗಿ ಬರುತ್ತಿದ್ದವು. ಹೀಗಾಗಿ ಒಂದೆಡೆ ಸ್ವಲ್ಪ ಆರಾಮ ಪಡೆಯುವ ಎಂದು ನಾವು ಎಣಿಸಿದರೆ ಸಾಧ್ಯವೇ ಆಗುತ್ತಿರಲಿಲ್ಲ. ಅಂತೂ ಇಂತೂ ಕುಂಭಗಾಳದ ಸೇತುವೆ ಬಳಿ ನಿಂತಾಗ ಚೂರು ಸಮಾಧಾನ ಆಯಿತು. ಸುತ್ತ ನೀರಿನ ಸದ್ದು ಬಿಟ್ಟರೆ ಬೇರಾವ ಸದ್ದು ಇರಲಿಲ್ಲ. ಬೀಸುವ ಗಾಳಿಗೆ ನನ್ನ ಛತ್ರಿಯೂ ಬಲಿಯಾಗಿತ್ತು. ಆ ಮಳೆಯಲ್ಲೆ ಒಂದಿಷ್ಟು ಫೋಟೋಗಳು ಕ್ಲಿಕ್ಕಾಗಿ ನಮ್ಮ ಪ್ರಯಾಣ ಮತ್ತೆ ಮುಂದುವರೆಯಿತು.
ಒಂದು ಗುಡ್ಡ ಹತ್ತಿ ಇಳಿದ ನಂತರ ಕುಂಭಗಾಳದ ಜನ ಗದ್ದೆಯಲ್ಲಿ ಕೆಲಸ ಮಾಡುತ್ತಿರುವುದು ದೂರದಿಂದ ಕಂಡಿತು. ಆಗ ಜೀವ ಬಂದ ಹಾಗಾಯಿತು. ಇದುವರೆಗೆ ಕಾಡು ಪ್ರಾಣಿಗಳ ಭಯ ನೆರಳಂತೆ ನಮ್ಮ ಬೆನ್ನಿಗಂಟಿರುವಾಗ ನಿರಾಯಾಸವಾಗಿ ಉಸಿರು ತೆಗೆಯುವುದಾದರೂ ಹೇಗೆ? ಹೀಗಾಗಿ ಜನ ಕಂಡೊಡನೆ ಮತ್ತೆ ಹೆಜ್ಜೆಗಳು ಜೋರಾಗಿ ಚಲಿಸತೊಡಗಿದವು. ನವೀನ ಸರ್ ಕಾಲಿಗೆ ಮತ್ತೆ ಹತ್ತು ಉಂಬಳ ಕಚ್ಚಿದರೂ ಅವರು ತೆಗೆಯುವ ಗೋಜಿಗೆ ಹೋಗಲೇ ಇಲ್ಲ. ಅವರ ಕಾಲಿಗಂತೂ ಸದಾ ತೆಗೆದಷ್ಟು ದುಪ್ಪಟ್ಟು ಕಾಂಟಿ ಹತ್ತುವ ವಿಷಯ ಎಲ್ಲ ಅಕ್ಕೋರಿಗೆ ಮಾಸ್ತರಿಗೆ ಗೊತ್ತಿತ್ತು. ಇಂದು ಕೂಡ ಬೇರೆಲ್ಲರಿಗಿಂತ ಅವರಿಗೆ ಕಾಂಟಿ ಹೆಚ್ಚು ಹತ್ತಿದ್ದು. ಹೀಗಾಗಿ `ಕಾಂಟಿ ಶತಕ ವೀರ' ಎಂದು ನಡೆದು ಬಂದ ಕಷ್ಟದಲ್ಲೂ ಹೇಳಿಕೊಂಡು ಒಂದಿಷ್ಟು ನಕ್ಕದ್ದು ಆಯಿತು.
ಗದ್ದೆ ದಾಟಿದ ನಂತರ ಎದುರಾದದ್ದೆ ಅಲ್ಲಿನ ಈಶ್ವರ ದೇವಸ್ಥಾನ. ಸುಮಾರು ಹನ್ನೆರಡು ಮನೆಗಳಿರುವ ಊರು ಅದು. ಒಂದು ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬಿಟ್ಟರೆ ಅಲ್ಲಿ ಬೇರಾವ ಸರಕಾರಿ ಕಟ್ಟಡ ಇರಲಿಲ್ಲ. ಊರಿನ ಜನ ಹಸಿರ ನಡುವೆ ಕಟ್ಟಿದ ದೇಗುಲಕ್ಕೆ ಚಂದವಾಗಿ ಬಣ್ಣ ಬಳಿದು ಎದ್ದು ಕಾಣುವಂತೆ ಮಾಡಿದ್ದರು. ಸುವರ್ಣ ಟೀಚರು ಹಾಗು ನಾನು ಶಾಲೆ ಮುಟ್ಟುವಷ್ಟರಲ್ಲಿ ನನ್ನ ಕಾಲಿನಲ್ಲಿ ರಕ್ತ ಒಸರಿ ಸೀರೆಗೂ ತಾಗಿತ್ತು. ಕಾಂಟಿಯೊಂದು ಗೊತ್ತಿಲ್ಲದೆ ಹತ್ತಿ ತನ್ನ ಹೊಟ್ಟೆ ತುಂಬಿಸಿಕೊಂಡಿತ್ತು. ಅಲ್ಲೆ ಹರಿಯುತ್ತಿದ್ದ ತೊರೆಯ ಬಳಿ ಸೀರೆ, ಕಾಲಿಗೆ ಅಂಟಿದ ರಕ್ತ ತೊಳೆದುಕೊಂಡು ಒಂದಿಷ್ಟು ಸುಧಾರಿಸಿಕೊಂಡೆವು. ಅಷ್ಟರಲ್ಲಿ ಹುರುಪಿನಿಂದ ತಮ್ಮ ಶಿಕ್ಷಕರು ಇಲ್ಲಿಯವರೆಗು ಬಂದಿದ್ದಾರೆಂಬ ಸುದ್ದಿ ಗದ್ದೆ ಕೆಲಸ ಮಾಡುತ್ತಿದ್ದ ಅವರ ಪಾಲಕರ ಮೂಲಕವಾಗಿ ಅವರಿಗೂ ತಲುಪಿ ದೇಗುಲದ ಕಡೆ ಅವರೆಲ್ಲ ಓಡಿಯೇ ಬಂದಿದ್ದರು. ಖುಷಿಯಿಂದ ಹೊಳೆಯುತ್ತಿದ್ದ ಮಕ್ಕಳ ಕಣ್ಣು ನೋಡಿ ಕಾಂಟಿಯ ಅವತಾರಗಳೆಲ್ಲ ಮರೆತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವತ್ತ ಮನಸ್ಸು ಜಾರಿತ್ತು. ಸಮಯ ಮೆಲ್ಲನೆ ಸರಿದು ನೆಂದ ನಮ್ಮ ಸೀರೆಗಳ ಮೇಲೆಲ್ಲ ಚಳಿ ಬಹು ಬೇಗ ಬಂದು ಕುಳಿತಿತ್ತು.
ಅಕ್ಷತಾ ಕೃಷ್ಣಮೂರ್ತಿ
Comments