ಗಾಳಿಗೆ ಗಿಡ
ಅಲ್ಲಾಡಿದಾಗ
ಹೂವಿನ ಮೇಲಿದ್ದ
ಚಿಟ್ಟೆ ಎಚ್ಚತ್ತು
ಭಾರವಾಯಿತೇ
ನೋವಾಯಿತೇ
ಎನ್ನುತ್ತ ಹಾರಿ ಹೋದಂತೆ
ಹೊರಟು ಬಿಟ್ಟೆ ನೀನು...
ಯಾವಾಗಲೂ ಹಾಗೆಯೇ
ಬಿಟ್ಟು ಹೋದವರಿಗಿಂತ
ಉಳಿದು ಹೋದವರಿಗೆ
ನೋವು ಹೆಚ್ಚಂತೆ.
ಸುಮ್ಮನೆ ಹೊರಳಿದರೆ
ಮಗುವಿನ ಕೈ
ಅಮ್ಮನಿಗೆ ತಾಕಿದಹಾಗೆ
ಏನು ಮಾಡಿದರೂ
ನಿನ್ನದೇ ನೆನಪು,
ಏನನ್ನೂ
ಮಾಡದಿದ್ದರೂ ಸಹ.
ಆದರೂ
ಒಂದು ಮಾತಿತ್ತು
ನನ್ನೆದೆಯೊಳಗೆ
ಅದನ್ನು ಹೇಳದಾದೆ
ಕಣ್ಣಂಚಿನಲ್ಲೊಂದು ಹನಿಯಿತ್ತು
ಅದನ್ನು ನೀನು
ನೋಡದೇ ಹೋದೆ.
- ಶಿವಾನಂದ ಪಾಟೀಲ, ವಿಜಾಪುರ
ಸಾಹಿತ್ಯದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿರುವ ಶಿವಾನಂದ ಪಾಟೀಲರು ವಿಜಾಪುರ ಮೂಲದವರು. ವೃತ್ತಿಯಲ್ಲಿ ನ್ಯಾಯವಾದಿಗಳು. ಹಲವು ವರ್ಷಗಳ ಕಾಲ ಬೀದರ್ ಜಿಲ್ಹಾ ನ್ಯಾಯಾಲಯದಲ್ಲಿ ಪ್ರ್ಯಾಕ್ಟೀಸು ಮಾಡಿರುವ ಅವರು ಸಧ್ಯಕ್ಕೆ ವಿಜಾಪುರದಲ್ಲೇ ವೃತ್ತಿ ನಿರತರಾಗಿದ್ದಾರೆ. ಜೊತೆಗೆ ಸಣ್ಣ ಉದ್ಯಮವೊಂದನ್ನು ನಡೆಸುತ್ತಿದ್ದಾರೆ.ಅವರ ಕವಿತೆ ನಿಮ್ಮ ಓದಿಗಾಗಿ
ಸಂಪಾದಕ.
Comments