top of page

ವೃದ್ಧಾಶ್ರಮದ ಹಣತೆಗಳು

ಬೆಳಕು ನೀಡಿ

ಖಾಲಿಯಾದ ಹಣತೆಗಳು

ವೃದ್ಧಾಶ್ರಮ ಸೇರಿವೆ


ಅಂಚು ಕಿತ್ತು ಹೋದ

ಹಣತೆಯೊಳಗೆ

ಮಕ್ಕಳಿಗಾಗಿ ಗೇಯ್ದ

ಬೆವರಿನ ಪಸೆಯಿದೆ


ಸುಟ್ಟುಹೋದ ಬತ್ತಿಯೊಳಗೆ

ಕುಡಿಗಳಿಗೆ ಬೆಳಕು ನೀಡಿ

ದಹಿಸಿಕೊಂಡ ಕನಸುಗಳ

ಕನವರಿಕೆಯಿದೆ


ಆವಿಯಾದ ಎಣ್ಣೆಯೊಂದಿಗೆ

ಕರುಳಿನ ಸಂಬಂಧಗಳೂ

ಮರೆಯಾದ

ನೋವಿದೆ


ಈಗ ಯಾರದೋ ಬತ್ತಿ

ಯಾರೋ ಹಾಕಿದ ಎಣ್ಣೆಗೆ

ಉರಿವ

ಬೆಳಕಿನ ಕಣ್ಣೊಳಗೆ

ಕಾಂತಿಯಿಲ್ಲ


ವೃದ್ಧಾಶ್ರಮದ ಹಣತೆಗಳಿಗೆ

ದೀಪಾವಳಿಯಿಲ್ಲ.


- ಶ್ರೀಧರ್ ಶೇಟ್ ಶಿರಾಲಿ

22 views0 comments

Comments


bottom of page