top of page

ವಿಟಮಿನ್ ‘ಡಿ’ ಜೀವಸತ್ವ

Updated: Aug 14, 2020

ಜೀವಸತ್ವಗಳಾದ (Vitamins) A, B-Complex,( B- ಜೀವಸತ್ವ ಸಂಕೀರ್ಣ, B1, B2, B6, B12 ಇತರೆ) C, E, ಇತರೆ ಜೀವಸತ್ವಗಳಂತೆ ವಿಟಮಿನ್ ‘ಡಿ’ ಕೂಡ ಒಂದು ಪ್ರಮುಖ ಜೀವಸತ್ವ. ವಿವಿಧ ಜೀವಸತ್ವಗಳಿದ್ದರೇನೆ ನಾವು ತಿನ್ನುವ ಆಹಾರ ಸಮತೋಲನ ಎಂದು ಕರೆಯಬಹುದು.

ಯಾವುದೇ ಜೀವಸತ್ವದ ಕೊರತೆ ಅಥವ ಹೆಚ್ಚಿಗೆ ಆದರೆ ಆಯಾ ಜೀವಸತ್ವಗಳಿಗೆ ಸಂಬಂಧಿಸಿದಂತೆ ಆರೋಗ್ಯದಲ್ಲಿ ಏರುಪೇರುಗಳುಂಟಾಗುತ್ತವೆ. ‘ಡಿ’ ಜೀವಸತ್ವವು ರಕ್ತದಲ್ಲಿರುತ್ತದೆ.

‘ಡಿ’ ಜೀವಸತ್ವದ ಪ್ರಾಮುಖ್ಯತೆ ಮತ್ತು ಅದರ ಕೊರತೆಯ ಬಗ್ಗೆ ಸಾಮಾನ್ಯ ಜನರು ಹೆಚ್ಚು ತಲೆಕೆಡಿಸಿಕೊಂಡಿರುವುದಿಲ್ಲ.

‘ಡಿ’ ಜೀವಸತ್ವದ ಕಾರ್ಯಗಳೇನು?

1. ‘ಡಿ’ ಜೀವಸತ್ವವು ಸತ್ವಯುತವಾದ ಮೂಳೆಗಳಿಗೆ ಮತ್ತು ದಂತಗಳಿಗೆ ಬಹಳ ಮುಖ್ಯ.

2. ಅದೇ ರೀತಿ ಮೆದುಳು ಮತ್ತು ನರಮಂಡಲಗಳ ಉತ್ತಮ ಕ್ರಿಯೆಗೆ ಅತ್ಯವಶ್ಯಕ.

3. ಡಯಾಬಿಟೀಸ್ (ಸಕ್ಕರೆ ಕಾಯಿಲೆ) ರೋಗಿಗಳಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸರಿದೂಗಿಸಲು ಅವಶ್ಯಕ.

4. ಹೃದಯದ ಕಾಯಿಲೆಗಳು ಬರದಂತೆ ತೆಡೆದು ಹೃದಯಕ್ಕ್ಕೆ ರಕ್ಷಣೆ ಕೊಡುತ್ತದೆ.

5. ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಸರಿದೂಗಿಸುತ್ತದೆ.

ಅಂದರೆ ವಿಟಮಿನ್ ‘ಡಿ’ ಜೀವಸತ್ವದ ಕೊರತೆಯಾದರೆ, ಅದು ಮೇಲೆ ತಿಳಿಸಿದ ಕ್ರಿಯೆಗಳಲ್ಲಿ ವ್ಯತ್ಯಯ ಉಂಟಾಗಿ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಕೊರತೆಯಿಂದಾಗುವ ನಾನಾ ಕಾಯಿಲೆಗಳನ್ನು ಪ್ರತ್ಯೇಕವಾಗಿ ವಿಮರ್ಶೆ ಮಾಡಲು ಸ್ಥಳದ ಅಭಾವ ಇದೆ. ಆದರೂ ‘ಡಿ’ ಅನ್ನಾಂಗದ ಕೊರತೆಯಿಂದ ಕೆಲವು ಹೆಚ್ಚು ಗಂಭೀರ ದುಷ್ಪರಿಣಾಮಗಳ ಬಗ್ಗೆ ಇಲ್ಲಿ ತಿಳಿಸುವುದು ಸೂಕ್ತವೆನಿಸುತ್ತದೆ.

1. ಧೀರ್ಘಕಾಲದ ‘ಡಿ’ ಜೀವಸತ್ವದ ಕೊರತೆಯಿಂದಾಗಿ ಮಕ್ಕಳಲ್ಲಿ ರಿಕೆಟ್ಸ್ ಮತ್ತು ದೊಡ್ಡವರಲ್ಲಿ ಆಸ್ಟಿಯೋಮಲೇಶಿಯಾ ಎಂಬ ಅಸ್ತಿ ಮೃದುತ್ವದ ಕಾಯಿಲೆ ಬರುತ್ತದೆ. ಅದು ಮೂಳೆಗಳ ಮೇಲೆ ಪ್ರಭಾವಬೀರಿ ಮೇಲಿನ ಎರಡೂ ಸ್ಥಿತಿಯಲ್ಲಿಯೂ ಮೂಳೆಗಳ ನೋವು ಮಕ್ಕಳಲ್ಲಿ ಎದೆಯ ಮೂಳೆಗಳು (Ribs) ಉಬ್ಬಿದಂತಾಗುತ್ತದೆ. ಮೂಳೆಗಳಲ್ಲಿ ನೋವುಂಟಾಗಿ ಬೆಳವಣಿಗೆ ಕುಂಟಿತವಾಗಿ ಎರಡೂ ಕಾಲುಗಳ ಮೂಳೆಗಳು ಒಳಬಾಗುತ್ತವೆ. (Bow-leg) ಬೆನ್ನುಮೂಳೆಕೂಡ ಬಾಗುತ್ತದೆ. ಮೂಳೆಗಳ ಮುರಿತವೂ ಕೂಡ ಆಗಬಹುದು.

ಚಿಕಿತ್ಸೆ : ಈ ರಿಕೆಟ್ಸ್ ಮತ್ತು ಆಸ್ಟಿಯೋಮಲೇಶಿಯಾ ಕಾಯಿಲೆಯು ಕುಗ್ಗಿದ ಕ್ಯಾಲ್ಸಿಯಂ ಮತ್ತು ರಂಜಕದ ಕೊರತೆಯುಂಟಾಗಿ ಆಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ‘ಡಿ’ ಜೀವಸತ್ವದ ಕೊರತೆ. ಈ ಕೊರತೆಗಾಗಿ ಡಿ ಜೀವಸತ್ವದ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.

ಬಿಸಿಲಿಗೆ ಮೈಯೊಡ್ಡುವುದು, ಪೌಷ್ಟಿಕಾಂಶದ ಆಹಾರಗಳಜೊತೆಗೆ ಔಷದಿ. ಅವಶ್ಯಕತೆ ಇದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.

2. ಧೀರ್ಘಕಾಲದ ‘ಡಿ’ ಜೀವಸತ್ವದ ಕೊರತೆಯಿಂದ ಹೆಂಗಸರಲ್ಲಿ ಸ್ತನದ ಕ್ಯಾನ್ಸರ್, ಗಂಡಸರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಮತ್ತು ಇಬ್ಬರಲ್ಲೂ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಮೇಲಿನ ಕ್ಯಾನ್ಸರ್ ಕಾಯಿಲೆಗಳು ಬರಲು ಇತರ ಕಾರಣಗಳೂ ಇರಬಹುದು.

3. ಇದಕ್ಕಿಂಥ ಮುಖ್ಯವಾಗಿ ವಿನಾಕಾರಣ ಸುಸ್ತಾಗುವುದು, ಬಳಲಿಕೆ ಇದ್ದರೆ ‘ಡಿ’ ಜೀವಸತ್ವದ ಕೊರತೆ ಕಾರಣ ಇರಬಹುದೆಂದು ಧೃಡಪಟ್ಟಿದೆ. ಆದ್ದರಿಂದ ಕರೋನಾ ಸೋಂಕಿನ ಈ ಕಾಲಘಟ್ಟದಲ್ಲಿ ‘ಡಿ’ ಜೀವಸತ್ವದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬೇರೆ ಬೇರೆ ತರಹದ ನಂಜಾಗುವುದು, ಕೆಮ್ಮು, ಜ್ವರ, ಶ್ವಾಸಕೋಶದ ನಂಜು ಇತ್ಯಾದಿ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದರ ಸಬೂತಾಗಿ ಇತ್ತೀಚಿನ ಕೆಲವು ಕೊರೋನ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿರುವುದು ‘ಡಿ’ ಜೀವಸತ್ವದ ಕೊರತೆಯಿಂದ ಆಗಿರುವುದೆಂದು ದೃಢಪಟ್ಟಿದೆ. ವೈದ್ಯರು ಇದನ್ನು ಗಮನ ಇರಿಸಿಕೊಳ್ಳದಿದ್ದರೆ ಸುಸ್ತು ಮತ್ತು ಬಳಲಿಕೆಗೆ ನಾನಾ ತರಹದ ಚಿಕಿತ್ಸೆಗಳನ್ನು ಮಾಡುತ್ತಿರುತ್ತಾರೆ - ಯಾವ ಪರಿಣಾಮವು ಇಲ್ಲದೆ.

4. ಈ ವಿಷಯವನ್ನು ವೈದ್ಯರು ಗಮನದಲ್ಲಿ ಇಟ್ಟುಕೊಂಡಿರಬೇಕು. ಏಕೆಂದರೆ ಕೆಲವೊಂದು ವರ್ಗದ ಜನರು ಸದಾ ಮನೆಯಲ್ಲಿ ಇರುವವರು, ಪೂರ್ಣ ಸೂರ್ಯೋದಯದ ಮೊದಲು ಮನೆಯಿಂದ ಹೊರಟು ಸೂರ್ಯಾಸ್ತದ ನಂತರ ಕಛೇರಿಯಿಂದ ಮನೆಗೆ ಬರುವವರು. (ಕೆಲವು ಸಾಫ್ಟ್‍ವೇರ್ ಇಂಜಿನಿಯರ್‍ಗಳು). ಇವರಲ್ಲಿ ‘ಡಿ’ ಜೀವಸತ್ವದ ಕೊರತೆ ಕಾಣುತ್ತದೆ.

5. ಭಾರತೀಯ ಮಹಿಳೆಯರು ಪೂರ್ಣವಾಗಿ ಸೀರೆ ಉಟ್ಟು, ಸೆಲ್‍ವಾರ್‍ಕಮೀಜ್ ಹಾಕಿ ಬಿಸಿಲಿನಲ್ಲಿ ನಿಂತರೆ ಸಾಲದು, ಎಷ್ಟು ಸಾಧ್ಯವೋ ಅಷ್ಟು ನಮ್ಮ ಮೈಗೆ ಬಿಸಿಲು ತಾಗಬೇಕು. (ಅನುಕೂಲವಿದ್ದರೆ ಮನೆಯ ಟೆರೇಸ್ ಮೇಲೆ ನಿಂತುಕೊಳ್ಳಬಹುದು.)

6. ‘ಡಿ’ ಜೀವಸತ್ವದ ಕೊರತೆ ಇರುವ ಅನುಮಾನವಿದ್ದರೆ, ರಕ್ತ ಪರೀಕ್ಷೆಯಿಂದಲೇ ತಿಳಿಯಬೇಕಾಗುತ್ತದೆ. ರಕ್ತ ಪರಿಕ್ಷೆಗೆ ಸರಿ ಸುಮಾರು ರೂ 800 ರಿಂದ 1200 ರೂಗಳವರೆಗೆ ಛಾರ್ಜ್ ಮಾಡುತ್ತಾರೆ. (ವಿವಿಧ ಟೆಸ್ಟಿಂಗ್ ಲ್ಯಾಬೋರೇಟರಿ ಅವಲಂಬಿಸಿ).

ವಿಟಮಿನ್ ‘ಡಿ’ ಯ ಮೂಲ ಯಾವುದು ಮತ್ತು ಹೇಗೆ ದೊರೆಯುತ್ತದೆ?

7. ಬಹಳ ಸಂತೋಷದ ವಿಷಯವೇನೆಂದರೆ ವಿಟಮಿನ್ ‘ಡಿ’ ಜೀವಸತ್ವವು ಯಥೇಚ್ಛವಾಗಿ ಸೂರ್ಯನ ಕಿರಣದಿಂದ (ಬಿಸಿಲಿನಿಂದ) ದೊರೆಯುತ್ತದೆ. ಬಿಸಿಲಿಗೆ ನಮ್ಮ ಮೈ ಒಡ್ಡಿದರೆ ನಮ್ಮ ಚರ್ಮದಲ್ಲೇ ‘ಡಿ’ ಜೀವಸತ್ವವು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

8. ಅದಲ್ಲದೆ ಕೆಲವು ಆಹಾರ ಪದಾರ್ಥಗಳಲ್ಲಿಯೂ ದೊರೆಯುತ್ತದೆ.

ಹಾಗಾದರೆ ಯಾವ ಯಾವ ಆಹಾರ ಪದಾರ್ಥಗಳಲ್ಲಿ ದೊರೆಯುತ್ತದೆ?

1. ಬಂಗುಡೆ (ಬಾಂಗ್ಡ) ಮೀನು, ಟ್ಯೂನ ಜಾತಿಯ ಮೀನು.

2. ಮೊಟ್ಟೆಯ ಹಳದಿ ಭಾಗ. ದೊಡ್ಡವರು ಮೊಟ್ಟಿ ತಿನ್ನುವಾಗ ಹಳದಿ ಭಾಗವನ್ನು ತಿಂದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ ಎಂಬ ಭಾವನೆ (ಭಯ) ಇತ್ತು. ಆದರೆ ಈಗ ಇಡೀ ಮೊಟ್ಟೆಯನ್ನು ತಿನ್ನಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

3. ಪಿತ್ತಜನಕಾಂಗ (ಲಿವರ್)

4. ಅಣಬೆ (Mushrum) ಮತ್ತು ಪುಷ್ಟೀಕರಿಸಿದ ಹಾಲು ಮತ್ತು ಆಹಾರ.

ಈ ಕೆಳಗಿನ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಂಡು ಅದರಂತೆ ನಡೆದುಕೊಳ್ಳುವುದು

1. ಇಷ್ಟೊಂದು ಪ್ರಮುಖವಾದ ‘ಡಿ’ ಜೀವಸತ್ವದ ಕೊರತೆಯಿಂದ ಉಂಟಾಗಬಹುದಾದ ಕಾಯಿಲೆಗಳನ್ನು ಸುಲಭವಾಗಿ, ಸ್ವಾಭಾವಿಕವಾಗಿ ಮತ್ತು ಉಚಿತವಾಗಿ ತಡೆಗಟ್ಟಲು ದಿವಸಕ್ಕೆ 15-20 ನಿಮಿಷಗಳ ಕಾಲ ಆದಷ್ಟು ನಮ್ಮಮೈಯನ್ನುಬಿಸಿಲಿಗೆ (ಬೆಳಗಿನ) ಒಡ್ಡುವುದು ಸಾಕು.

2. ಪ್ರಪಂಚದ ಕೆಲವು ಭಾಗಗಳಲ್ಲಿ ವರ್ಷದ ಹೆಚ್ಚಿನ ಕಾಲ ಬಿಸಿಲಿನ ಕೊರತೆ ಇರುತ್ತದೆ. ಅಂಥಹ ಸ್ಥಳಗಳಲ್ಲಿ ಸೂರ್ಯನಿಗಾಗಿ ಕಾಯುತ್ತಿರುತ್ತಾರೆ - ಸೂರ್ಯಸ್ನಾನಕ್ಕಾಗಿ.

3. ಈ ಮೇಲೆ ತಿಳಿಸಿದಂತೆ ‘ಡಿ’ ಜೀವಸತ್ವಯುಕ್ತ ಆಹಾರಗಳನ್ನು ಸೇವಿಸಬೇಕು.

0=0



-ಡಾ.ದಾಮೋದರ ಕೆ.ಪಿ

28 views0 comments

Comments


©Alochane.com 

bottom of page