ಮಲಯಾಳಂ ಮೂಲ: ಪಿ.ಕೆ. ಗೋಪಿ
ಆರ್ತನಾದಗಳ
ಸ್ತಬ್ಧಗೊಳಿಸಲು
ಕೋವಿಗಳಿಂದ
ಸಾಧ್ಯವಾಗದು.
ಕಾನೂನುಗಳ ಕಾರಂಜಿಗಳಿಂದ
ಅನಾಯಾಸ
ಸಾಧ್ಯವಾದೀತು.
ಕಸಾಯಿ ಖಾನೆಯ
ಆಶ್ರಮವಾಗಿಸಲು
ಕಟುಕನಿಂದಾಗದು
ಬಿರುಮಳೆ ಪ್ರಳಯಗಳಿಗತೀತನಾದ
ದಾರ್ಶನಿಕನಿಂದಾದೀತು.
ಬಲಿಪೀಠವ
ವಿಗ್ರಹವಾಗಿಸಲು
ವೀರಮಾತೆಯರಿಂದಾಗದು.
ಭಕ್ತರ ನೆತ್ತರ ಹೀರುವ
ಅರ್ಚಕನಿಂದಾದೀತು.
ಹೃದಯಗಳು ಕಲ್ಲುಗಳಾಗಿ
ಕಲ್ಲುಗಳು ದೈವಗಳಾಗಿ
ಬದಲಾಗುತ್ತಿರುವ ಕಾಲದಲ್ಲಿ
ಮನುಷ್ಯನಾಗುವುದು
ತಂತಿಯ ಮೇಲಿನ ನಡಿಗೆಯೆಂದು ಗೊತ್ತು.
ಆದರೂ ಉಸಿರು ಬಿಗಿಹಿಡಿದು ಮುಂದೆ ಅಡಿ ಇಡುವಾಗ
ಎಡವಿ ಮುಗ್ಗರಿಸದಿರಲೆಂದು
ಜಪಿಸಿದ್ದು ಕವಿತೆ.
ಕೊಲೆಗಡುಕರ ಮಾತುಗಳಿಗೆ
ಕಿವಿಗಳಲ್ಲೆಡೆಯಿಲ್ಲ
ಮಾನಗೆಟ್ಟವನ ಭಾರಹೊರಲು
ತೋಳಲ್ಲಿ ಬಲವಿಲ್ಲ.
ಭ್ರೂಣಗಳ ಹಿಚುಕಿ ಕೊಂದವನ
ಧೀರ-ಶೂರನೆಂದು ಸ್ತುತಿಗೈಯದಿದ್ದುದಕೆ
ದಬ್ಬಿದರು ಹೊರಗೆನ್ನ ಬಾಗಿಲಾಚೆ
ಹಾದಿಯಲ್ಲಿ ಹಾಡು ಕೇಳಲು ಅಂದಿನಿಂದ
ದಾರಿ ದೀಪಗಳ ಜತೆ ನಾನು ಸಾಗಿದೆ.
ಕನ್ನಡಕ್ಕೆ: ಡಾ. ಪಾರ್ವತಿ ಜಿ. ಐತಾಳ್
‘ಸುರಗಂಗಾ’, ಬಸ್ರೂರು ಕ್ರಾಸ್ ರಸ್ತೆ,
ಕುಂದಾಪುರ – 576 201
ಮೊ: 9242253642
Comments