top of page

ವಚನ ಸಾಹಿತ್ಯ ಮತ್ತು ಜಾನಪದ

ಈ ಪ್ರಪಂಚದಲ್ಲಿನ ಸಕಲ ಜೀವರಾಶಿಗಳಲ್ಲಿ ಮನುಷ್ಯ ಮಾತ್ರ ವಿಶಿಷ್ಟ ಮತ್ತು ಅನನ್ಯ ಜೀವಿ. ಮಾತು, ನಗು, ವಿವೇಚನಾ ಶಕ್ತಿಯಿಂದಾಗಿ ಮನುಷ್ಯ ಎಲ್ಲ ಪ್ರಾಣಿಗಳಿಗಿಂತ ಭಿನ್ನನಾಗಿದ್ದಾನೆ. ತನ್ನ ಅಂತರಂಗದ ನೋವು, ನಲಿವು, ನಿರಾಶೆ, ಹತಾಶೆ, ಹಳವಂಡಗಳನ್ನು ಹೊರಹಾಕಲು ಮಾನವ ಕಂಡುಕೊಂಡ ಮಾರ್ಗಗಳು ಹಲವು. ಈ ಮಾನವಜೀವಿಯ ಹಲವು ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯನ ಅನುಭವಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವುದೇ ಸಾಹಿತ್ಯ. ಕನ್ನಡ ಸಾಹಿತ್ಯವು ಅನೇಕ ಪ್ರಕಾರಗಳಲ್ಲಿ ಕವಲೊಡೆದು ಸ್ವರೂಪ ಭಿನ್ನತೆಯ ನಡುವೆಯೂ ಅಸ್ತಿತ್ವದಲ್ಲಿದೆ. ಯಾವುದೇ ಪ್ರಕಾರದ ಶಿಷ್ಟ ಸಾಹಿತ್ಯಸೃಜನೆಗೆ ಮೂಲ ಹೇತು ಜಾನಪದವೇ ಆಗಿದೆ. ಆದ್ದರಿಂದ ಶಿಷ್ಟ ಸಾಹಿತ್ಯದಲ್ಲಿ ಜಾನಪದದ ಅಂಶಗಳನ್ನು ಹುಡುಕುವ, ಈ ಸಂಬಂಧ ಅಧ್ಯಯನ, ಸಂಶೋಧನೆಗಳು ಸಾಕಷ್ಟು ಪ್ರಮಾಣದಲ್ಲಿ ನಡೆದಿರುವುದು ವೇದ್ಯ ಸಂಗತಿ. ಕನ್ನಡದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಜಾನಪದದ ಅಂಶಗಳನ್ನು ಶೋಧಿಸುವ ಕಾರ್ಯ ನಡೆಯುತ್ತಲೇ ಬಂದಿರುವುದನ್ನು ಅಧ್ಯಯನ ಪರಂಪರೆಯಲ್ಲಿ ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪಂಡಿತರು, ಪ್ರಾಜ್ಞರು, ಲೇಖಕರು, ವಿದ್ವಾಂಸರು ಶಿವಶರಣರ ವಚನಗಳಲ್ಲಿ, ದಾಸರ ಕೀರ್ತನೆಗಳಲ್ಲಿ, ಕವಿಗಳ ಕಾವ್ಯಗಳಲ್ಲಿ ಜಾನಪದೀಯ ಅಂಶಗಳನ್ನು ಹುಡುಕುವ ಪಯತ್ನಗಳನ್ನು ಗುರುತಿಸಬೇಕಾಗುತ್ತದೆ. ಇದು ಮುಖ್ಯವೂ ಉಚಿತವೂ ಆಗಿದೆ. ಈ ಹಿನ್ನೆಲೆಯಲ್ಲಿ ಶಿಷ್ಟ ಮತ್ತು ಮೌಖಿಕ ಸಾಹಿತ್ಯ ಪರಂಪರೆಯನ್ನು ಅವಲೋಕಿಸಲಾಗಿ, ಅವು ಒಂದಕ್ಕೊಂದು ಪ್ರೇರಕ ಮತ್ತು ಪೂರಕವಾದವುಗಳಾಗಿವೆ. ಒಂದನ್ನು ಪ್ರಭಾವಿಸುತ್ತಲೇ ಇನ್ನೊಂದು ಬೆಳೆಯುತ್ತಿರುವ ಈ ಪ್ರಕ್ರಿಯೆಯನ್ನು ಸೈದ್ಧಾಂತಿಕ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಅಗತ್ಯದೆ ಇದೆ. ಒಂದು ನಿರ್ದಿಷ್ಠ ಸಾಹಿತ್ಯಿಕ ಪ್ರಕಾರವೊಂದನ್ನು ಇನ್ನೊಂದು ಜ್ಞಾನ ಶಿಸ್ತಿನ ಮೂಲಕ ಅರಿಯುವುದು, ಅವುಗಳ ನಡುವಿನ ಪರಸ್ಪರ ಸಾಮ್ಯತೆ, ವೈರುಧ್ಯಗಳನ್ನು ತಿಳಿಯುವುದು ಇತ್ಯಾದಿ ಸಂಗತಿಗಳಿಂದ ಸಾಹಿತ್ಯ ಅಧ್ಯಯನಕ್ಕೆ ಇನ್ನಷ್ಟು ಉಪಯುಕ್ತ ಬೌದ್ಧಿಕ ಆಕೃತಿಗಳು ದಕ್ಕುತ್ತವೆ.

ಜನಪದರು ಮತ್ತು ವಚನಕಾರರ ಮುಖ್ಯ ಉದ್ದೇಶ ಸಾಹಿತ್ಯ ರಚನೆಯಲ್ಲ. ಜನಪದರು ತಮ್ಮ ಶ್ರಮದ ಆಯಾಸವನ್ನು ಮರೆಯಲು ಆತುಕೊಂಡ ಮಾರ್ಗದ ಫಲವಾಗಿ ಹಾಡುಗಳು ಹುಟ್ಟಿಕೊಂಡವು. ಇದೇ ಮಾತು ವಚನಕಾರರಿಗೂ ಅನ್ವಯವಾಗುತ್ತದೆ; ವಚನಕಾರರು ತಮ್ಮ ಅಂತರಂಗ ವಿಕಾಸ ಮತ್ತು ಆತ್ಮೋದ್ಧಾರಕ್ಕಾಗಿ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡರು. ಅದುವೇ ಮುಂದೆ ವಚನಸಾಹಿತ್ಯವಾಗಿ ಓದಿಗೆ ಆಕರವಾಗಿದೆ. ವಚನ ಮತ್ತು ಜನಪದ ಸಾಹಿತ್ಯ ಪ್ರಕಾರಗಳ ಅಭಿವ್ಯಕ್ತಿ ಸ್ವರೂಪ ಬೇರೆಬೇರೆಯಾಗಿದ್ದರೂ ಆಳದಲ್ಲಿ ಸ್ವಾಸ್ಥ್ಯ ಸಮಾಜವನ್ನೇ ಕನಸಿದವು. ಈ ಹಿನ್ನೆಲೆಯಲ್ಲಿ ಅವರೆಡರ ಮಧ್ಯೆ ಸಾಮ್ಯತೆ ಇರುವುದನ್ನು ಗುರುತಿಸಬಹುದು.

ವಿಶ್ವ ಸಾಹಿತ್ಯಕ್ಕೆ ಮಣಿಮುಕುಟವಾಗಿರುವ ವಚನಸಾಹಿತ್ಯವು ಕನ್ನಡದ ಕೊಡುಗೆ ಎಂಬುದು ನಿರ್ವಿವಿವಾದ. ಕನ್ನಡತಾಯಿ ಭುವನೇಶ್ವರಿಯ ಕಿರೀಟಕ್ಕೆ ಹೆಮ್ಮೆಯ ಗರಿ ಸಿಕ್ಕಿಸಿಕೊಂಡ ಸಾರ್ಥಕತೆ ವಚನ ಸಾಹಿತ್ಯದ್ದು. ಜಾಗತಿಕ ಸಾಹಿತ್ಯಕ್ಕೆ ವಿಶಿಷ್ಟ, ವಿನೂತನ, ಅಪರೂಪದ, ಅನನ್ಯ ಚಿಂತನಾಧಾರೆಗಳನ್ನು ಸೇರ್ಪಡೆಗೊಳಿಸಿದ ಅಗ್ಗಳಿಕೆ ಈ ವಚನಗಳಿಗೆ ಸಲ್ಲುತ್ತದೆ. ವಚನಗಳ ಮೂಲ ಸಂಸ್ಕøತದಲ್ಲಿದೆ. ವಚನ ಎಂಬ ನಾಮಪದವು ಸಂಸ್ಕøತದ ವಚ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ವಚ್ ಎಂಬುದು ನುಡಿ, ಮಾತು, ಹೇಳು, ವ್ಯಕ್ತಪಡಿಸು ಮೊದಲಾದ ಅರ್ಥಗಳನ್ನು ಸ್ಪುರಿಸುತ್ತದೆ. ಅಲ್ಲದೇ, ವಚನವು ಪ್ರಮಾಣ, ಕೊಟ್ಟಭಾಷೆ, ಆಣೆ ಎಂಬರ್ಥಗಳನ್ನೂ ಒಳಗೊಂಡಿದೆ. ಹೀಗಾಗಿ ವಚನಗಳು ಶಿವಶರಣರು ಈ ಸಮಾಜಕ್ಕೆ ಮಾಡಿದ ಅಂತರಂಗದ, ಆತ್ಮಸಾಕ್ಷಿಯ ನುಡಿಪ್ರಮಾಣಗಳೇ ಆಗಿವೆ. ಆದ್ಯ ವಚನಕಾರ ದೇವರ ದಾಸಿಮಯ್ಯನಿಂದ ಹಿಡಿದು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಡೋಹಾರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆಯ ಮಾರಯ್ಯ, ಸೂಳೆಸಂಕವ್ವೆ. ಸತ್ಯಕ್ಕ ಮೊದಲಾದ ಶಿವಶರಣರು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಚನಗಳು ಮಾನವ ಬದುಕಿನ ಘನತೆಯನ್ನು ಹೆಚ್ಚಿಸುವ ಮೌಲ್ಯಮಣಿಗಳು. ಅವು ಮನುಷ್ಯನನ್ನು ಮೃಗೀಯತನದಿಂದ ಬಿಡುಗಡೆಗೊಳಿಸಿ, ಮಾನವೀಯಗೊಳಿಸುವ ಉದ್ದೇಶವನ್ನು ಗರ್ಭೀಕರಿಸಿಕೊಂಡಿವೆ. ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ ಎಂಬ ಮಾತು ಮಾನವನಲ್ಲಿನ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದೀವಿಗೆಯನ್ನು ಹೊತ್ತಿಸುತ್ತದೆ. ಅಂತರಂಗ-ಬಹಿರಂಗ ಶುದ್ಧಿಗೆ ಗಮನವೀಯುವ ವಚನಕಾರರು ನಡೆ-ನುಡಿ ಸಿದ್ಧಾಂತವನ್ನು ಏಕತ್ರಗೊಳಿಸಿದರು. ಅಲ್ಲದೇ, ಸಮಾಜದಲ್ಲಿ ಬೇರೂರಿದ್ದ ಜಾತೀಯತೆ, ವರ್ಗ-ವರ್ಣ ಸಂಘರ್ಷ, ಮೇಲು-ಕೀಳು, ಬಡವ-ಬಲ್ಲಿದ, ಮೂಢನಂಬಿಕೆ, ಅಂಧಶ್ರದ್ಧೆ, ಲಿಂಗತಾರತಮ್ಯ ಮುಂತಾದ ಸಾಮಾಜಿಕ ರೋಗಗಳಿಗೆ ಮದ್ದು ನೀಡುವ ವೈದ್ಯರಾದರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಜೀವನ ಸಂವಿಧಾನ ರೂಪಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾನತೆಯ ಸಮಪಾತಳಿಯ ಮೇಲೆ ಸಮಾಜವನ್ನು ಕಟ್ಟಬೇಕೆಂಬುದು ವಚನಕಾರರ ಮೂಲ ಆಶಯವಾಗಿದೆ.

ಸಂಖ್ಯೆ ಮತ್ತು ಸತ್ವದ ದೃಷ್ಟಿಯಿಂದ ಸಮೃದ್ಧವಾಗಿರುವ ವಚನ ಸಾಹಿತ್ಯವು ಜಾನಪದ ಪ್ರಜ್ಞೆಯಿಂದಲೇ ಒಡಮೂಡಿದೆ. ಯಾವುದೇ ಪ್ರಕಾರದ ಸಾಹಿತ್ಯಸೃಷ್ಟಿಗೆ ಜಾನಪದವೇ ಮೂಲ ಎಂಬುದು ನಿಸ್ಸಂಶಯ. ‘ಜನವಾಣಿ ಬೇರು ಕವಿವಾಣಿ ಹೂ’ ಎಂಬ ಬಿಎಂಶ್ರೀ ಅವರ ಮಾತು ಅಕ್ಷರಶಃ ನಿಜ. ಮೇಲಿನ ಮಾತಿಗೆ ಪುಷ್ಠಿಯೂ ಆಗಿದೆ. ಹಾಗಾದರೆ, ಜಾನಪದ ಎಂದರೇನು ಎಂಬುದನ್ನು ತಿಳಿಯುವುದು ಉಚಿತ. ಸಾಮಾನ್ಯವಾಗಿ ಜನಪದ ಮತ್ತು ಜಾನಪದ ಎರಡೂ ಅಭಿನ್ನ ಎಂದೇ ಬಗೆಯಲಾಗಿದೆ. ಇವುಗಳ ಮಧ್ಯದ ವ್ಯತ್ಯಾಸಗಳನ್ನು ಅರಿತು ಸ್ಪಷ್ಟಪಡಿಸಿಕೊಳ್ಳಬೇಕಿರುವುದು ಅವಶ್ಯ.

ಜನಪದ ಎಂದರೆ ಜನಾಂಗ, ದೇಶ ಎಂಬರ್ಥವಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಜನಾಂಗದ ಸಮಸ್ತ ಬದುಕಿನ ಇತಿಹಾಸವನ್ನು ಮೌಖಿಕವಾಗಿ ಅಭ್ಯಾಸ ಮಾಡುವುದೇ ಜಾನಪದ ಆಗಿದೆ. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಎಲ್ಲ ವಚನಕಾರರು ಜನಪದರೇ ಆಗಿದ್ದಾರೆ. ಅವರು ಬರೆದ ಸಮಸ್ತ ವಚನಗಳು ಸಹ ಜಾನಪದದ ಪ್ರಭಾವ-ಪ್ರೇರಣೆಯಿಂದಲೇ ಹುಟ್ಟುಪಡೆದಿವೆ. ಶಿಷ್ಟ-ಜಾನಪದ ಎಂಬುವು ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಂಡ ಯಾಂತ್ರಿಕ ಕ್ರಮಗಳು ಅಷ್ಟೇ. ಆದರೆ ಅವರೆಡರ ನಡುವಿನ ಸಂಬಂಧ ಮಾತ್ರ ಪರಸ್ಪರ ಪೂರಕ ಮತ್ತು ಪ್ರೇರಕವಾಗಿವೆ. ಒಂದನ್ನೊಂದು ಬಿಟ್ಟು ಇರಲು ಸಾಧ್ಯವೂ ಇಲ್ಲ, ಅಸ್ತಿತ್ವವೂ ಇಲ್ಲ. ಅವರೆಡನ್ನೂ ಸಮನ್ವಯಗೊಳಿಸಿ ಅಧ್ಯಯನ ಮಾಡುವ ಅಂತರಶಿಸ್ತೀಯ ಕ್ರಮ ಭಾಷೆ, ಸಾಹಿತ್ಯ, ಮೌಲ್ಯಗಳ ದೃಷ್ಟಿಯಿಂದ ಮಹತ್ವದ್ದಾಗಿದೆ. ಶಿಷ್ಟ ಸಾಹಿತ್ಯದಲ್ಲಿರುವ ಹಾಗೇ ಜಾನಪದದಲ್ಲೂ ಅನೇಕ ಪ್ರಕಾರಗಳಿವೆ; ಜನಪದ ಸಾಹಿತ್ಯವೂ ಕತೆ, ಹಾಡು, ಗಾದೆ. ಒಗಟು ಇತ್ಯಾದಿ ಪ್ರಕಾರಗಳಲ್ಲಿ ಹಬ್ಬಿ ಹರಡಿಕೊಂಡಿರುವುದು ಗಮನಾರ್ಹ. ವಚನ ಸಾಹಿತ್ಯದಲ್ಲಿ ಜನಪದೀಯ ಅಂಶಗಳನ್ನು ಗುರುತಿಸುವ ಮುಖ್ಯ ಉದ್ದೇಶವನ್ನು ಕೆಲವೊಂದು ತಾತ್ವಿಕ ಸಂಗತಿಗಳಿಗೆ ಸೀಮಿತಗೊಳಿಸಿ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಜನಪದ ಮತ್ತು ವಚನಗಳ ನಡುವೆ ಕೊಡು-ಕೊಳು ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಬದುಕಿನ ಪ್ರತಿಯೊಂದು ಅನುಭವಗಳು ವಚನಗಳಲ್ಲಿ ಮತ್ತು ಜನಪದರ ಅಭಿವ್ಯಕ್ತಿಯಲ್ಲಿ ಅಕ್ಷರರೂಪ ತಾಳಿ ಸಾಹಿತ್ಯಸುಗಂಧ ಎಲ್ಲೆಡೆ ಪಸರಿಸಿದೆ. ಯಾವುದೇ ಸಾಹಿತ್ಯ ಪರಂಪರೆಯನ್ನು ಅವಲೋಕಿಸಿದರೂ ಮುಖ್ಯವಾಗಿ ಗಮನಕ್ಕೆ ಬರುವ ಸಂಗತಿಯೆಂದರೆ, ಪುರುಷ ಪ್ರಕೃತಿಯೊಂದಿಗೆ ಸಾವಯವ ಸಂಬಂಧವನ್ನು ಸಾಧ್ಯವಾಗಿಸಿಕೊಳ್ಳಬೇಕು ಎಂಬ ಅಂಶ. ಈ ಹಿನ್ನೆಲೆಯಲ್ಲಿ ಜನಪದರು ;

“ಬೆಳಗಾಗಿ ನಾನೆದ್ದು ಯಾರ್ಯಾರ್ನ ನೆನೆಯಲಿ

ಎಳ್ಳು ಜೀರಿಗಿ ಬೆಳೆಯೊಳ/

ಭೂಮತಾಯ ಎದ್ದೊಂದು ಗಳಿಗೆ ನೆನದೇನ” ಎಂದಿದ್ದಾರೆ. ನೆಲದವ್ವನ ಪರೋಪಕಾರವನ್ನು ಸ್ಮರಿಸಿಕೊಳ್ಳುವ ಜನಪದರ ಪ್ರಜ್ಞೆಯು ಇಲ್ಲಿ ಗಮನಾರ್ಹ. ಮನುಷ್ಯ ತನ್ನ ದೈನಂದಿಕ ಕೆಲಸ-ಕಾರ್ಯಗಳನ್ನು ಪ್ರಕೃತಿಮಾತೆಯನ್ನು ನೆನೆದೇ ಪ್ರಾರಂಭಿಸಬೇಕು ಎಂಬ ಜನಪದರ ನಂಬಿಕೆ ಮತ್ತು ನಿಲುವು ಮುಖ್ಯವಾದುದು. ಪ್ರಕೃತಿಯನ್ನು ದೈವೀಶಕ್ತಿಯ ಮೂರ್ತರೂಪ ಎಂದು ತಿಳಿದುಕೊಂಡ ಜನಪದರು ನಿಜವಾದ ಅರ್ಥದಲ್ಲಿ ಮಣ್ಣಮಕ್ಕಳು. ಜನಪದರು ಭೂಮಿತಾಯಿಯ ಬಗೆಗಿನ ಶ್ರದ್ಧೆ, ಭಕ್ತಿ, ಪೂಜ್ಯಭಾವನೆ ಪ್ರತಿಯೊಬ್ಬ ಮಾನವನಿಗೂ ಇರಬೇಕಾದುದು ಅಗತ್ಯವೇ ಆಗಿದೆ. ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಭೇದ-ಭಾವವಿಲ್ಲದೇ ಸಕಲ ಜೀವರಾಶಿಯನ್ನೇ ಪೊರೆವ ಈ ಭೂಮಿತಾಯಿಯನ್ನು ನೆನೆಯೋದು ಮನುಷ್ಯನ ಆದ್ಯ ಕರ್ತವ್ಯ. ಅಂತಲೇ ಆದ್ಯ ವಚನಕಾರ ದೇವರ ದಾಸಿಮಯ್ಯನವರು ತಮ್ಮದೊಂದು ವಚನದಲ್ಲಿ;

“ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ

ಸುಳಿದು ಬೀಸುವ ಗಾಳಿ ನಿಮ್ಮ ದಾನ

ನಿಮ್ಮ ದಾನವನುಂಡು ಅನ್ಯರನು ಹೊಗಳುವ

ಕುನ್ನಿಗಳನೇನೆಂಬೆ ಕಾಣಾ ರಾಮನಾಥ” ಎಂದು ಪ್ರಕೃತಿ ಆರಾಧನೆಯ ಜೊತೆಗೆ ಈ ಭೂಮಿ ನನ್ನದು ಎನ್ನುವ

ಸ್ವಾರ್ಥಪೂರಿತ ಮನುಷ್ಯನ ಅಹಂಕಾರವನ್ನು ಕುರಿತು ತಿವಿಯುವುದಲ್ಲದೇ, ಅನಂತ ಸೃಷ್ಟಿಚೈತನ್ಯವನ್ನು ಕುರಿತು ವಿನೀತ ಭಾವವನ್ನು ತಾಳುವ ಅಗತ್ಯವನ್ನೂ ತಿಳಿಸುತ್ತಾರೆ.

“ಹತ್ತು ಸಾವಿರ ಪದವ ಎತ್ತಿನ ಮೇಲೆ ಹೇರ್ಕೊಂಡು

ಮತ್ತೆ ಸಾವಿರ ಪದವ ಹಿಡಕೊಂಡು ಕೋಲೆ...

ಎಂಟುಸಾವಿರ ಪದವ ಒಂಟಿ ಮ್ಯಾಲೆ ಹೇರ್ಕೊಂಡು

ಬಸವಣ್ಣನ ಸಭೆಗೆ ಬಂದೇವು ಕೋಲೆ

ಕೋಲಿನ ಮೇಲೊಬ್ಬ ಬಸವಣ್ಣ ಕೂತ್ಕೊಂಡು

ಲಾಲಿಸಿ ಪದವ ಬರಕೊಂಡು ಕೋಲೆ...” ಎಂಬ ಜನಪದ ಕೋಲಾಟದ ಪದವು ಬಸವಣ್ಣನವರನ್ನು ತುಂಬಾ ಪ್ರಭಾವಿಸಿದಂತಿದೆ. ಬಸವಣ್ಣ ಜನಪದರ ಜೀವನಕ್ರಮದಿಂದ ತೀವ್ರ ಪ್ರಭಾವಕ್ಕೊಳಗಾಗಿದ್ದರು. ಸಮಾಜವನ್ನು ನೋಡುವ ದೃಷ್ಟಿಕೋನದಿಂದ ಹಿಡಿದು ಸಮಾಜದಲ್ಲಿ ಆಗಬೇಕಾದ ಪರಿವರ್ತನೆಯನ್ನು ಅಂತರಂಗಶುದ್ಧಿಯ ಮೂಲಕವೇ ಸಾಧ್ಯವಾಗಿಸುವ ಹಂಬಲ ಹೊಂದಿದ್ದ ಬಸವಣ್ಣ ಸಾತ್ವಿಕ, ಸಮೃದ್ಧ ಜೀವನಪ್ರೀತಿಯಿಂದ ಕೂಡಿದ ಜನಪದರ ಜೀವನದಿಂದ ಬಹಳಷ್ಟು ಪ್ರಭಾವಿತಗೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ.

‘ಆಚಾರಕ್ಕರಸಾಗು ನೀತಿಗೆ ಪ್ರಭುವಾಗು

ಮಾತಿನಲಿ ಚೂಡಾಮಣಿಯಾಗು / ನನಕಂದ

ಜ್ಯೋತಿಯೇ ಆಗು ಜಗಕೆಲ್ಲ” ಎನ್ನುವ ಗರತಿಯ ಮಾತು “ಆಚಾರವೇ ಸ್ವರ್ಗ ಅನಾಚಾರವೇ ನರಕ” ಎಂಬ ಬಸವಣ್ಣನವರ ಮಾತನ್ನೇ ಧ್ವನಿಸುತ್ತದೆ.

ವಚನಕಾರರ ಕಾಯಕ ಮತ್ತು ದಾಸೋಹ ತತ್ವದ ಪರಿಕಲ್ಪನೆಗಳು ವಿಶಿಷ್ಟವಾಗಿವೆ. ಜನಪದರಲ್ಲೂ ಕಾಯಕನಿಷ್ಠೆಯನ್ನು ಕಾಣಬಹುದು. ಜನಪದರು;

“ಕಸವ ಹೊಡೆದ ಕೈ ಕಸ್ತೂರಿನಾತವ

ಬಸವಣ್ಣ ನಿನ್ನ ಸೆಗಣೀಯ ಬಳೆದ ಕೈ

ಎಸಳ ಯಾಲಕ್ಕಿಗೊನಿ ನಾತ” ಎಂದು ಹಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದಕೂಡಲೇ ಸೆಗಣಿ ಬಳಿದು, ಅಂಗಳದ ಕಸ ಗೂಡಿಸಿ ದಿನವನ್ನು ಪ್ರಾರಂಭಿಸುವ ಜನಪದರಲ್ಲಿ ಯಾವ ಕೆಲಸವೂ ಕೀಳಲ್ಲ, ಮೇಲಲ್ಲ. ಮನೆಯಲ್ಲಿರುವ ಎತ್ತುಗಳನ್ನು ಬಸವಣ್ಣ ಎಂದು ಬಗೆದು ಅದರ ‘ಸೆಗಣಿಯನ್ನು ಬಳಿದ ಕೈಯು ಕಸ್ತೂರಿನಾತ’ ಎನ್ನುವಲ್ಲಿ ಅವರ ಕಾಯಕಪ್ರೇಮವನ್ನು ಮನಗಾಣಬಹುದು. ‘ಕಾಯಕದೊಳು ನಿರತನಾದೊಡೆ ಶಿವಪೂಜೆಯನಾದರೂ ಮರೆಯಬೇಕು, ಜಂಗಮ ಬಂದು ನಿಂದರೂ ನಿರಾಕರಿಸಬೇಕು’ ಎನ್ನುವ ಶರಣರ ಉದ್ದೇಶವೂ ಕಾಯಕಮೌಲ್ಯದ ಪ್ರತಿಪಾದನೆಯಾಗಿದೆ. ಶಿವಭಕ್ತರೆನಿಸಿದರೂ ತಾನು ಮಾಡುವ ಸತ್ಯಶುದ್ಧ ಕಾಯಕದಲ್ಲಿ ಸ್ವತಃ ಶಿವನೇ ನೆಲೆಯಾಗಿರುತ್ತಾನೆ ಎಂಬ ಅವರ ನಂಬಿಕೆ ಮಹತ್ವದ್ದಾಗಿದೆ. ಕಾಯವನ್ನು ಕಾಯಕದಲ್ಲಿ ತೊಡಗಿಸುವ ನಿಷ್ಠೆ ಶರಣರದು.

ಇನ್ನು ಜನಪದರು ಬಳಸುವ ‘ದಾನ’ ಗುಣವು ಶಿವಶರಣರಲ್ಲಿ ‘ದಾಸೋಹ’ ತತ್ತ್ವವಾಗಿ ಪ್ರಸ್ತಾಪವಾಗಿದೆ. ‘ದಾಸೋಹ’ ಎಂದರೆ ತಾನು ಮಾಡುವ ದುಡಿಮೆಯಿಂದ ತನಗೆಷ್ಟು ಅವಶ್ಯವೋ ಅದನ್ನು ಬಳಸಿಕೊಂಡು ಉಳಿದುದೆನ್ನೆಲ್ಲ ಜಂಗಮರೂಪಿ ಸಮಾಜಕ್ಕೆ ದಾನವಾಗಿ ನೀಡುವುದು. ಮನುಷ್ಯ ಮೂಲದಲ್ಲಿ ಸ್ವಾರ್ಥಿಯೇ. ಆದರೂ ತಾನು, ತನ್ನದು ಎಂಬ ಸ್ವಾರ್ಥವನ್ನು ಬದಿಗಿಟ್ಟು ನಿಸ್ವಾರ್ಥವಾಗಿ ಬದುಕುವುದರಲ್ಲಿಯೇ ನಿಜವಾದ ಸಾರ್ಥಕತೆ ಇದೆ ಎಂಬದನ್ನು ಶರಣರು ತಮ್ಮ ನಡೆ ನುಡಿಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ತಾನು ಬದುಕಬೇಕು ತನ್ನ ಸುತ್ತಣ ಸಮಾಜವೂ ಬದುಕಬೇಕು ಎಂಬ ಮೂಲ ಕಾಳಜಿಯೇ ದಾಸೋಹ ತತ್ವದ ಮೂಲ ಧ್ಯೇಯವಾಗಿದೆ. ಈ ದಾಸೋಹ ತತ್ವವನ್ನು ಬರೀ ಬೋಧಿಸದೇ ಸ್ವತಃ ಜೀವನದಲ್ಲಿ ಅಳವಡಿಸಿಕೊಂಡ ಜನಪದರ ಜೀವನಕ್ರಮವೇ ಮಾದರಿಯಾಗಿದೆ.

“ಛಂದಕ ನಮ್ಮವರು ಮಾವೀನ ಬನಹಚ್ಚಿ

ಗಿಡಕೊಂದು ಗಿಣಿಯ ಸಲುವ್ಯಾರೊ| ಬ್ಯಾಡಯ್ಯ

ಗಿಣಿ ಬೆದರ್ಯಾವಣ್ಣ ಬರಬ್ಯಾಡೊ” ಎಂಬ ತ್ರಿಪದಿಯು ಜನಪದರ ದಾಸೋಹ ತತ್ವವನ್ನು ದರ್ಶಿಸುತ್ತದೆ. ಜನಪದ ಗರತಿಯೊಬ್ಬಳು ಹಾಡಿಕೊಂಡ ತ್ರಿಪದಿಯೊಂದು ಹೀಗಿದೆ;

“ಜೋಗಿ ಜಂಗಮರೇ ಹೋಗಿ ನನ ತೌರಿಗೆ

ಸಣ್ಣಕ್ಕಿ ದಾನ ಕೊಡುತಾರೆ ಅಣ್ಣಯ್ಯ|

ಹೊನ್ನಿನ ದಾನ ಕೊಡುತಾರೆ|| ಇಲ್ಲಿ ಹೆಣ್ಣುಮಗಳು ತನ್ನ ಮನೆಗೆ ಬಂದಿದ್ದ ಜಂಗಮರಿಗೆ ದಾನವನ್ನು ಕೊಡುವುದಲ್ಲದೇ, ‘ನೀವು ನನ್ನ ತವರು ಮನೆಗೆ ಹೋದರೆ ಅಲ್ಲಿಯೂ ನನ್ನ ಅಣ್ಣನು ನಿಮಗೆ ಹೊನ್ನಿನ ದಾನವನ್ನು ನೀಡುತ್ತಾನೆ’ ಎಂದು ಹೇಳುವ ಅವಳ ಮಾತು ನಮ್ಮ ಹೆಣ್ಣುಮಕ್ಕಳ ಉದಾರತೆ ಮತ್ತು ನಮ್ಮ ನೆಲದ ದಾನಗುಣದ ಮಹಿಮೆ ಮನವರಿಕೆಯಾಗುತ್ತದೆ. ಇದೇ ನೆಲೆಯಲ್ಲಿ ಬಸವಣ್ಣನವರ “ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ತನ್ನ ಕುಲವನೆಲ್ಲವ” ಎಂದಿರುವುದನ್ನು ಗಮನಿಸಬೇಕಾಗುತ್ತದೆ.

ಮಾತಿನ ಮಹತ್ವ ಮತ್ತು ಮೌಲ್ಯವನ್ನು ಕುರಿತು ‘ಮಾತು ಮನಿ ಕೆಡಸ್ತು, ತೂತು ಒಲಿ ಕೆಡಸ್ತು’, ‘ಮಾತೇ ಮುತ್ತು ಮಾತೇ ಮೃತ್ಯು’ ಇತ್ಯಾದಿ ಗಾದೆಗಳು ವಚನಕಾರರಲ್ಲಿ ಉಲ್ಲೇಖಗೊಂಡಿವೆ. ಅಲ್ಲಮಪ್ರಭುಗಳು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದರೆ, ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗವೂ ಮೆಚ್ಚಬೇಕು’ ಎನ್ನುತ್ತಾರೆ ಬಸವಣ್ಣನವರು. ಅಷ್ಟೇ ಅಲ್ಲದೇ ಅಕ್ಕಮಹಾದೇವಿಯ ವಚನಗಳಲ್ಲಿ; ಊರ ಸಿರಿಗೆ ಅಗಸ ತಡಬಡಗೊಂಡಂತೆ, ಬಂಜೆ ಬೇನೆಯರಿಯಳೇ; ಮಲತಾಯಿ ಮುದ್ದಬಲ್ಲಳೇ? ಇತ್ಯಾದಿ ಗಾದೆಗಳು ಪ್ರಸ್ತಾಪಗೊಂಡಿವೆ. ಅಕ್ಕಮ್ಮ ‘ಹೋತಿನ ಗಡ್ಡದಂತೆ ಹಿರಿಯರು ನೋಡಾ’ ಎಂದರೆ, ‘ಕತ್ತೆಯ ಮರಿಗೆ ಸುಪ್ಪತ್ತಿಗೆ ಹಾಸುವರೇ?, ಬೀಜವಿಲ್ಲದೆ ವೃಕ್ಷ ಬೆಳೆಯಬಲ್ಲುದೆ ಹೂವಿಲ್ಲದೆ ಹಣ್ಣಾಗಬಲ್ಲುದೆ? ಎಂಬ ನಾಣ್ಣುಡಿಗಳನ್ನು ವಚನಕಾರ್ತಿ ರಾಯಮ್ಮ ಉಲ್ಲೇಖಿಸುತ್ತಾಳೆ.

“ಸತ್ಯವೇ ನಮ್ಮ ತಾಯಿ ತಂದೆ

ಸತ್ಯವೇ ನಮ್ಮ ಬಂಧು-ಬಳಗ” ಎನ್ನುವ ಜನಪದ ಪುಣ್ಯಕೋಟಿಯ ಹಾಡು ಸತ್ಯದ ಮಹತ್ವವನ್ನು ಅರುಹುತ್ತದೆ. “ನುಡಿದಂತೆ ನಡೆದರೆ ಇದೇ ಜನ್ಮ ಕಡೆ’, ‘ನಡಿಯೊಳಗಾಡಿ ನಡೆಯದಿರ್ದೊಡೆ ಹಿಡಿದಿರ್ಪಲಿಂಗ ಘಟಸರ್ಪ ಕಾಣಾ’ ಎಂಬ ವಚನದ ಸಾಲುಗಳು ಸತ್ಯವನ್ನೇ ಪ್ರತಿಪಾದಿಸುತ್ತವೆ. ‘ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೇ ಅಸತ್ಯದ ಮನೆಯಲ್ಲಿ ಶಿವನಿರ್ಪನೇ’ ಎಂಬ ಶರಣರ ದೃಷ್ಟಿಯಲ್ಲಿ ಸತ್ಯ ಮತ್ತು ಶಿವ ಬೇರೆ ಬೇರೆ ಅಲ್ಲ ಎಂಬದು ಸುಸ್ಪಷ್ಟ.

ಜನಪದ ಸಾಹಿತ್ಯವು ಶ್ರಮಸಂಸ್ಕøತಿಯ ಉತ್ಪನ್ನ. ಬಹುತೇಕ ವಚನಕಾರರು ಜನಪದದ ಹೊಕ್ಕುಳಿನಿಂದಲೇ ಹುಟ್ಟಿ, ಬೆಳೆದು ಬಂದವರು. ನೇಯ್ಗೆ ಕಾಯಕದ ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ, ನುಲಿಯ ಚೆಂದಯ್ಯ, ಕದಿರು ಕಾಯಕದ ರೆಮ್ಮೆವ್ವೆ, ಆಯ್ದಕ್ಕಿ ಮಾರಯ್ಯ, ಸಿಂಪಿಗ ಶಂಕರ ದಾಸಿಮಯ್ಯ, ಮಡಿವಾಳ ಮಾಚಿದೇವ, ತಳವಾರ ಕಾಮಿದೇವ, ಮೇದಾರ ಕೇತಯ್ಯ, ಡೋಹರ ಕಕ್ಕಯ್ಯ ಮೊದಲಾದ ಶಿವಶರಣರು ತಂತಮ್ಮ ವೃತ್ತಿಗಳಲ್ಲಿ ತೊಡಗಿಕೊಂಡು ಶಿವಭಕ್ತಿಯನ್ನು ಮೆರೆದರು. ವೃತ್ತಿಧರ್ಮದ ಜೊತೆಗೆ ಅವರವರ ವೃತ್ತಿಗಳ ಸೂಕ್ಷ್ಮತೆಯನ್ನು ಕಲಾತ್ಮಕವಾಗಿ ಅಭಿವ್ಯಕ್ತಿಯಲ್ಲೂ ಕಾಣಿಸುತ್ತ ಬಂದ ವಚನಕಾರರು ಜಾನಪದಕ್ಕೆ ವಿಶಿಷ್ಟ ಕೊಡುಗೆಯನ್ನೇ ಕೊಟ್ಟಿದ್ದಾರೆ. ಜನಪದ ಸಂಸ್ಕತಿಯನ್ನೇ ಉಸಿರಾಡಿ ಬದುಕಿ, ಬರೆದ ವಚನಕಾರರನ್ನು ಶಿಷ್ಟ ಸಾಹಿತಿಗಳು ಎಂದು ದಾಖಲಿಸಿದರೆ ಸರಳೀಕರಿಸಿದಂತಾಗುತ್ತದೆ. ಶಿಷ್ಟ ಮತ್ತು ಜಾನಪದದ ಹಿನ್ನೆಲೆಯಿಂದಲೇ ಅವರ ಬದುಕು ಮತ್ತು ಬರೆಹಗಳನ್ನು ಸಮಗ್ರವಾಗಿ ಅವಲೋಕಿಸಿದರೆ ಅದು ಹೆಚ್ಚು ಪ್ರಯೋಜನಕಾರಿ.

ಕಾಯಕ, ದಾಸೋಹ, ಲಿಂಗಾಂಗ ಸಾಮರಸ್ಯ ಹೀಗೇ ಅನೇಕ ಬಗೆಯ ಪರಿಕಲ್ಪನೆಗಳೊಂದಿಗೆ ವಿಶಿಷ್ಟವಾಗಿರುವ ವಚನಗಳಲ್ಲಿ ಜಾನಪದೀಯ ಅಂಶಗಳು ಹೇರಳವಾಗಿರುವುದು ಸರ್ವವಿದಿತ. ಜನಪದ ಸಾಹಿತ್ಯ ಜನಜೀವನದ ಸಂಹಿತೆ. ಜನರ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಆಹಾರ-ಉಟೋಪಚಾರ, ನಂಬಿಕೆ, ವಿಧಿ-ನಿಷೇದ; ಹಬ್ಬ-ಹರಿದಿನ, ಜಾತ್ರೆ-ಉತ್ಸವ, ದೈವಭಕ್ತಿ, ಮುಕ್ತಿಮಾರ್ಗ, ಪ್ರಕೃತಿ ಆರಾಧನೆ, ಪ್ರೇಮ, ಕಾಮ, ಸಂಬಂಧಗಳ ಸರಸ-ವಿರಸ, ಕನಸು-ಕನವರಿಕೆ ಎಲ್ಲವನ್ನೂ ಒಳಗೊಂಡಿರುವ ಜನಪದ ಸಂಗತಿಗಳು ಜನಪದರಲ್ಲಿ ಹೇಗೆ ಸ್ವಾಭಾವಿಕವೊ ಹಾಗೆಯೇ ವಚನಕಾರರಿಗೂ ವಿಶಿಷ್ಟ ಸಂಗತಿಗಳಾಗಿರುವುದು ಮನನೀಯ. ಈವರೆಗೂ ವಚನಗಳಲ್ಲಿ ಜಾನಪದವನ್ನು ಕುರಿತು ನಡೆದ ಅಧ್ಯಯನಗಳನ್ನು ಗಮನಿಸಿದಾಗ ಅವು ಮುಖ್ಯವಾಗಿ ಜನಜೀವನದ ಆಂಶಿಕ ಸಂಗತಿಗಳನ್ನು ಮಾತ್ರ ಕೇಂದ್ರೀಕರಿಸಿಕೊಂಡಿವೆ. ಇಷ್ಟು ಮಾತ್ರ ಸಾಕೇ? ಜನಪದ ಎಂಬುದು ಜೀವನವಿಧಾನ ಎಂದಾದಾಗ ಅಲ್ಲಿ ಮನುಷ್ಯ ಜೀವನದ ಸಮಗ್ರ ಅಂಶಗಳು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಚನ ಸಾಹಿತ್ಯವನ್ನು ಕುರಿತು ಸಮಾಜೋ-ರಾಜಕೀಯ, ಧರ್ಮ, ಆಧ್ಯಾತ್ಮ, ಸೇರಿದಂತೆ ಸಾಂಸ್ಕøತಿಕ ಅಂಶಗಳೂ ಸೇರಿ ಅಧ್ಯಯನ ಮಾಡುವುದು ಅವಶ್ಯವಾಗಿರುತ್ತದೆ.

ಒಟ್ಟಾರೆ, “ಜನಪದ ಸಾಹಿತ್ಯ ವಚನ ಸಾಹಿತ್ಯದಂತೆಯೇ ಮೂಲಭೂತವಾಗಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವಂಥ ಸಾಹಿತ್ಯ” ಎಂಬುದು ಸುಸ್ಪಷ್ಟ. ವಚನಗಳಲ್ಲಿ ಜಾನಪದದ್ದು ಹಾಸುಹೊಕ್ಕಿನ ಹೊಕ್ಕಳುಬಳ್ಳಿಯ ಸಂಬಂಧವಾಗಿದೆ. ಹೀಗಾಗಿ ವಚನ ಸಾಹಿತ್ಯ ಮತ್ತು ಜಾನಪದಗಳ ಸಮನ್ವಯದ ನೆಲೆಯ ಅಧ್ಯಯನದಿಂದಾಗಿ ಎರಡೂ ಕ್ಷೇತ್ರಗಳ ಬಗ್ಗೆ ವಿಸ್ತøತವಾಗಿ ಅರಿವು ವಿಸ್ತಾರಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಕನ್ನಡ ವಾಙ್ಮಯಲೋಕಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದು ನಿಸ್ಸಂಶಯ.

ಡಾ. ಸಂಗಮೇಶ ಎಸ್. ಗಣಿ

ಕನ್ನಡ ಪ್ರಾಧ್ಯಾಪಕರು,

ಸೂಳೇಬಾವಿ -587124

ತಾ : ಹುನಗುಂದ

ಜಿ : ಬಾಗಲಕೋಟೆ

ಮೊ : 9743171324


1,144 views1 comment

1 Comment


ಜನಪದ ಹಾಗೂ ಜಾನಪದ ವಿಷಯಗಳ ಬಗ್ಗೆ ತುಂಬಾ ಸುಂದರವಾಗಿ ಎಳೆ ಎಳೆಯಾಗಿ ಬಿಡಿಸಿ ಸುಂದರವಾದ ಹೂವಿನ ಮಾಲೆಯ ರೀತಿಯಲ್ಲಿ ಪೋಣಿಸಿ ವಚನಗಾರರು, ಕವಿಗಳು, ಲೇಖಕರ ಮನಸ್ಸಿನಲ್ಲಿ ಉದ್ಭವಿಸುವ ಕಲ್ಪನೆಗಳು ಬರಹಗಳ ರೂಪದಲ್ಲಿ ನದಿಯಾಗಿ ಹರಿಯುವ ಬಗ್ಗೆಯೂ ತಿಳಿಸಿ ಅವರ ವಿಚಾರಗಳ ಬಗ್ಗೆ ಮನಸ್ಸಿನಲ್ಲಿ ಒಡಮೂಡುವ ತೊಳಲಾಟಗಳು ಆತ್ಮ ವಿಮರ್ಶೆಗಳ ಬಗ್ಗೆ ಸುಂದರವಾಗಿ ಮನಮುಟ್ಟುವ ಹಾಗೆ ಬರೆದು ಓದುವವರ ಮನಸೂರೆಗೊಳ್ಳುವ ಹಾಗೆ ಮಾಡಿರುವಿರಿ.


ತಮ್ಮ ಈ ಲೇಖನವನ್ನು ಓದಿ ತುಂಬಾ ಖುಷಿ ಅನಿಸುತ್ತದೆ.

ಇದೇ ರೀತಿ ಇನ್ನೂ ಹೆಚ್ಚು ಬರವಣಿಗೆಗಳು ತಮ್ಮಿಂದ ಮೂಡಿಬರಲಿ ಎಂದು ಆಶಿಸುತ್ತೇನೆ.


ಸದಾ ತಮ್ಮ ಹಿತೈಷಿ

Like
bottom of page