top of page

ವಚನ - ಚಿಂತನ-ಅಳಿಯಾಸೆ. [ಚಿಂತನ]ಹರ ಹರಾ ಎನ್ನ ಬಡಮನದ ಅಳಿಯಾಸೆಯ ನೋಡಾ!

ಸುರಧೇನುವಿದ್ದು  ಬರಡಾಕಳಿಗೆ ಆಸೆ ಮಾಡುವಂತೆ

ಕಲ್ಪ ವೃಕ್ಷವಿದ್ದು ಕಾಡ ಮರಕ್ಕೆ ಕೈಯಾನುವಂತೆ

ಚಿಂತಾಮಣಿಯಿದ್ದು ಗಾಜಿನ ಮಣಿಯ ಬಯಸುವಂತೆ

ಎನ್ನ ಕರಮನ ಭಾವದಲ್ಲಿ ನೀವು ಭರಿತರಾಗಿರ್ದುದ ಮರೆತು

ನರರಿಗಾಸೆಯ ಮಾಡಿ ಕೆಟ್ಟೆನಯ್ಯ ಅಖಂಡೇಶ್ವರಾ.


ಶಿವ ಶರಣ ಷಣ್ಮುಖ ಸ್ವಾಮಿಯ ಈ ವಚನವನ್ನು ಮತ್ತೆ ಮತ್ತೆ ವಿವೇಚನೆ ನಡೆಸುವಂತಿದೆ. ಶಿವನೆ ನನ್ನ ಬಡ ಮನಸ್ಸಿನ ಅಳಿಯಾಸೆಯನ್ನು ನೋಡು. ಇಲ್ಲಿ ಅಳಿಯಾಸೆ ಎಂದರೆ ದುಂಬಿಯಂತೆ ಚಂಚಲ ಮನಸ್ಸಿನ ಆಸೆ. ಅಲ್ಲಿ ಸ್ಥಿರತೆಯಿಲ್ಲ. ಎಲ್ಲ ಸಮೃದ್ಧಿಯಿದ್ದರೂ ಅದನ್ನು ಬಿಟ್ಟು ಅಲ್ಪಕ್ಕೆ ಹಾತೊರೆಯುವ ಪರಿ. ಎಲ್ಲ ಇಚ್ಛೆಯನ್ನು ಪೂರ್ತಿ ಮಾಡುವ ಕಾಮಧೇನುವೆ ಇದ್ದರು ಬರಡಾದ ಆಕಳಿಗೆ ಆಸೆ ಪಡುವ ಹಾಗೆ. ಇಂತಹ ಪರಿಸ್ಥಿತಿಯಿಂದ ಬಹಳ ಜನ ಬಿಡುಗಡೆಗೊಳ್ಳುವುದಿಲ್ಲ‌. ಸುಖ, ಸಮೃದ್ಧಿ ಅವರಿಗೆ ಮಗ್ಗುಲು ಮುಳ್ಳಾಗುತ್ತದೆ. ಸರಳ ವಾಗಿರುವುದನ್ನು ಅವರು ಸಂಕೀರ್ಣ ಮಾಡಿಕೊಂಡು ಅಲ್ಲಿ ವಿಲವಿಲನೆ ಒದ್ದಾಡುತ್ತ ಅದೆ ವಾಸ್ತವ ಎಂದು ಭ್ರಮಿಸುತ್ತಾರೆ.ಎಷ್ಟೊ ವರ್ಷದಿಂದ ಅಂಗುಷ್ಠ ಹರಿದು ಹೋದ ಪಾದರಕ್ಷೆಯನ್ನು ಅದರ ಮೂಲ ಬೆಲೆಗಿಂತ ಹೆಚ್ಚು ಮಜೂರಿ ಕೊಟ್ಟು ಅದನ್ನು ದುರಸ್ತಿ ಮಾಡುವುದರಲ್ಲಿಯೆ ಸಮಾಧಾನ ಪಡುತ್ತಾರೆ. ಕಾಮಧೇನುವಿನ ಎದುರು ಬರಡಾಕಳಿಗೆ  ಬೆಲೆಯಿಲ್ಲ. ಆದರೆ ಇವರಿಗೆ ಬರಡಾಕಳೆಂದರೆ ಇನ್ನಿಲ್ಲದ ಮಮತೆ.ಕಾಮಧೇನು ಇಚ್ಛಿಸಿದ್ದನ್ನು ಕೊಡುತ್ತದೆ.ಕಲ್ಪ ವೃಕ್ಷ ಕಲ್ಪನೆ ಮಾಡಿದ್ದನ್ನು ಕೊಡುತ್ತದೆ.ಆದರೆ ಅದಕ್ಕಿಂತ ಕಾಡಿನ ಮರದ ಮೇಲೆ ಪ್ರೀತಿ. ಚಿಂತಾಮಣಿ ನಾವು ಏನನ್ನು ಚಿಂತಿಸುತ್ತೇವೆಯೊ ಅದನ್ನು ಈಡೇರಿಸುತ್ತದೆ. ಆದರೆ ಚಿಂತಾಮಣಿ ಇದ್ದರೂ ಗಾಜಿನ ಮಣಿಯನ್ನು ಮಹತ್ತೆಂದು ಪ್ರೀತಿಸುವ ಪ್ರಾರಬ್ಧ ಕರ್ಮಕ್ಕೆ ಏನೆಂದು ಕರೆಯುವುದು!!. ಶಿವನೆ ನೀನು ನನ್ಮ ಕರ ಸ್ಥಲ, ಮನಸ್ಥಲದಲ್ಲಿ ತುಂಬಿಕೊಂಡಿದ್ದರೂ ನಮ್ಮ ಸುತ್ತು ಮುತ್ತಲು ನೀನೆ ತುಂಬಿಕೊಂಡಿದ್ದರು ಅದನ್ನು ಮರೆತು ಸಾಮಾನ್ಯ ಜನ ಅಥವಾ ನರ ಮನುಷ್ಯರ ಬಗ್ಗೆ ಆಸೆ ಪಟ್ಟು ನಾನು ಕೆಟ್ಟು ಹೋದೆ ಎಂದು ಷಣ್ಮುಖ ಸ್ವಾಮಿ ಈ ವಚನದಲ್ಲಿ ನಿರೂಪಿಸುತ್ತಾನೆ. ಇರುವುದೆಲ್ಲವನ್ನು ಬಿಟ್ಟು ತೃಪ್ತಿ ಇಲ್ಲದೆ ಇರುವುದಕ್ಕೆ ತುಡಿಯುವುದು ಮನುಷ್ಯನ ಸ್ವಭಾವ.


"ಯೋ ತೌ ಭೂಮಾ ನಾಲ್ಪೆ ಸುಖಮಸ್ತಿ"


ಎಂಬ ಸಂಸ್ಕೃತದ ಸೂಕ್ತಿಯನ್ನು ನಾವು ಮರೆಯ ಬಾರದು. ಉದಾತ್ತವಾದುದನ್ನು ಹಂಬಲಿಸ ಬೇಕು.ಅಲ್ಪ ತೃಪ್ತಿ ಎಂಬುದು ಒಂದು ಸಾವೇ ಸರಿ. ನಮ್ಮ ಬದುಕನ್ನು ನಮ್ಮ ಸುತ್ತು ಮುತ್ತಲಿನ ಜನರೊಂದಿಗೆ ಹೋಲಿಸಿಕೊಳ್ಳುತ್ತಾ,ಕೂಡಿ ಕಳೆಯುತ್ತಾ, ಹುಸಿಯನ್ನೆ ನಿಜವೆಂದು ಪರಿಭಾವಿಸುತ್ತ

ಸಮಯ ಹರಣ ಮಾಡುತ್ತೇವೆ‌. ನಿಜಕ್ಕಿಂತ ಭ್ರಮೆಯನ್ನೆ ನಂಬುತ್ತಾ, ಮಹತ್ತಿಗಿಂತ ಅಲ್ಪವನ್ನೆ ಬಯಸುತ್ತಾ ಅದೆ ಸುಖ ಎಂದು ಭಾವಿಸುತ್ತೇವೆ. ಪ್ರಾಣಿಯ ಎಲುಬನ್ನು ಜಗಿದು ತಿನ್ನುವ ನಾಯಿಗೆ ಅದು ಬಲು ಇಷ್ಟವಾಗುವುದಂತೆ. ನಾಯಿಯ ದವಡೆ ಒಡೆದು ಸೋರುವ ರಕ್ತ, ಅದರೊಂದಿಗೆ ಜಗಿಯುವ ಕ್ರಿಯೆಯಿಂದ ಉತ್ಪನ್ನವಾಗುವ ಲಾಲಾರಸದಿಂದ ಎಲುಬು ನಾಯಿಗೆ ಬಹಳ ಸ್ವಾದಿಷ್ಟವಾಗುತ್ತದೆ. ಯಂತೆ. ಹಾಗೆ ಹುಲು ಮಾನವರ ಪರಿ‌.ಇದನ್ನು ವಚನಕಾರ ಷಣ್ಮುಖ ಸ್ವಾಮಿ ನಿರ್ವಚಿಸಿದ ಪರಿ ಅದ್ಭುತವಾದುದು. ಎಲ್ಲರಿಗು ಇದರ ಅರಿವಿದೆ. ಆದರೆ ಇದರಿಂದ ಹೊರ ಬರಲು ಆಗದ ಇಬ್ಬಂದಿತನ ಅವರದು. ಬದ್ಧರಾದವರಿಗೆ ಇದು ಸಹಜ.ಆದರೆ ಮುಕ್ತರಾದವರು ಇದರಿಂದ ಹೊರ ಬಂದು ಬದುಕನ್ನು ಆಸ್ವಾದಿಸುತ್ತಾರೆ‌.ಆಗ ಬದುಕಿಗೆ ಅರ್ಥ ಮತ್ತು ವ್ಯಾಪ್ತಿ ಒದಗಿ ಬರುತ್ತದೆ.


  ‌‌‌                     00==00

  ಡಾ.ಶ್ರೀಪಾದ ಶೆಟ್ಟಿ. 

37 views0 comments
bottom of page